ADVERTISEMENT

ದಿಕ್ಕುಗಳ ಅಳತೆಗಾರ ಎಸ್‌. ದಿವಾಕರ್ @ 70

ಎಂ.ಎಸ್.ಶ್ರೀರಾಮ್
Published 22 ನವೆಂಬರ್ 2014, 19:30 IST
Last Updated 22 ನವೆಂಬರ್ 2014, 19:30 IST

ನನಗೆ ತಿಳಿದ ಮಟ್ಟಿಗೆ ಎಸ್‌. ದಿವಾಕರ್ (ಜ: ನ.28, 1944) ಎಂದೂ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡವರಲ್ಲ. ಸಂಭ್ರಮಿಸಲು ಅವರ ಇತರೆ ಸಾಧನೆಗಳು ಅನೇಕ ಇವೆ. ಆದರೆ ಹುಟ್ಟುಹಬ್ಬದ ಸಂದರ್ಭವನ್ನಿಟ್ಟುಕೊಂಡು ದಿವಾಕರ್ ಅವರು ನಮಗೆ ನೀಡಿದ ಸಾಹಿತ್ಯ ಮತ್ತು ಜೀವನಾನುಭವದ ಬಗ್ಗೆ ಸಂಭ್ರಮಿಸಿ ಆಚರಿಸುವುದು ಸಹಜವೇ. ಹುಟ್ಟುಹಬ್ಬ ಅದಕ್ಕೊಂದು ಕಾರಣವಷ್ಟೇ.

‘ಸುಧಾ’ ಪತ್ರಿಕೆಯಲ್ಲಿ ಅವರು ಕೆಲಸ ಮಾಡುತ್ತಿದ್ದಾಗ, ನಾನು ಅವರನ್ನು ಅರಸಿ ಭೇಟಿಮಾಡಿದ್ದೆ, ಹಾಗೂ ಅಲ್ಲಿಂದ ನಮ್ಮ ಪರಿಚಯವು ಸ್ನೇಹವಾಗಿ ಬೆಳೆಯುತ್ತಲೇ ಹೋಯಿತು. ಹೊಸದಾಗಿ ಬರೆಯುವಾಗ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು, ಅಚ್ಚಿನಲ್ಲಿ ಹೆಸರು ಕಾಣಬೇಕೆಂಬ ಉತ್ಕಟ ಬಯಕೆ ನನಗಿತ್ತು. ಕಾದು, ಕುದ್ದು, ನಿಧಾನವಾಗಿ ಉತ್ತಮವಾದದ್ದನ್ನು ಬರೆಯುವುದು ಒಂದು ಪರಿ. ಆದರೆ ಅದರಲ್ಲಿ ಒಂದು ಅಪಾಯವಿತ್ತು –ಅಷ್ಟೆಲ್ಲಾ ಕಷ್ಟಪಟ್ಟು ಬರೆದು– ಆ ಬರಹ ಸ್ವೀಕೃತವಾಗದಿದ್ದರೆ? ಹೀಗಾಗಿ ಅದಕ್ಕೊಂದು ರಿಸ್ಕಿಲ್ಲದ ಪರಿಹಾರವನ್ನೂ ನಾನು ಕಂಡುಕೊಂಡಿದ್ದೆ– ಅಧಿಕ ಸಂಖ್ಯೆಯಲ್ಲಿ ಬರೆದು ಪತ್ರಿಕೆಗಳಿಗೆ ಬರಹಗಳನ್ನು ರವಾನಿಸಿದರೆ, ಯಾವುದೋ ಒಂದು ಲಾಟರಿಯಲ್ಲಿ ನನ್ನದೂ ಪ್ರಕಟವಾಗಬಹುದು ಎನ್ನುವ ದುಷ್ಟ ಆಲೋಚನೆ. ಈ ರೀತಿಯ ಬರಹಗಳನ್ನು ಸಂಪಾದಕ ವರ್ಗ ಕಣ್ಣಾಡಿಸಿ, ಬಹುಶಃ ಒಂದೆರಡು ಪ್ಯಾರಾಗಳನ್ನು ಓದಿ ತಕ್ಷಣಕ್ಕೇ ನಿರಾಕರಿಸುತ್ತಿದ್ದರೇನೋ. ಆದರೆ ದಿವಾಕರರನ್ನು ಭೇಟಿಯಾದಾಗ ಮಾತ್ರ ನನಗೆ ಆಘಾತ ಕಾದಿತ್ತು. ಅವರು ನನ್ನ ಅನೇಕ ಬಾಲಿಶ ಬರಹಗಳನ್ನು ಸರಿಯಾಗಿ ಓದಿದ್ದರಲ್ಲದೇ – ಅದರಿಂದ ನಾನು ಬೆಳೆದ ರೀತಿಯನ್ನೂ ಗುರುತಿಸಿದ್ದರು. ಹೀಗಾಗಿ ನಾನೇನಾದರೂ ದಿವಾಕರರ ಮರವೆಯಿಂದ ಮುಕ್ತಿ ಪಡೆಯುವ ಹುನ್ನಾರದಲ್ಲಿದ್ದರೆ ಅದನ್ನು ಸುಳ್ಳಾಗಿಸಲು ಕಾಫಿ ಹೌಸ್‌ನಲ್ಲಿ ಅವರ ಜೊತೆಗೊಂದು ಕಾಫಿಯೇ ಸಾಕಾಗಿತ್ತು.

ಸಂಪಾದಕ ದಿವಾಕರ್
ನಮ್ಮ ಸ್ನೇಹದಲ್ಲಿ ನಾನು ಬಹುಬೇಗ ದಿವಾಕರರ ಬಗ್ಗೆ ಕಂಡುಕೊಂಡ ವಿಚಾರವೆಂದರೆ ಇದು– ಅವರು ತಮ್ಮ ಮಾತುಕತೆಯಲ್ಲಿ ಆಗಾಗ ಕಟುವಾಗಿ, ಜನರ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಲೇವಡಿ ಮಾಡುತ್ತಾ ಇದ್ದರಾದರೂ, ಆ ವ್ಯಕ್ತಿಯ ಬಗೆಗೆ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯವೇ ಆ ವ್ಯಕ್ತಿಯ ಬರವಣಿಗೆಗೂ ಸಲ್ಲುತ್ತದೆಂದು ನಾವು ಭಾವಿಸಿದ್ದರೆ, ಅದು ತಪ್ಪೇ ಆಗುತ್ತಿತ್ತು. ಅವರ ಜೊತೆಗಿನ ವ್ಯವಹಾರದಿಂದಾಗಿ ಯಾವುದೇ ಪೂರ್ವಗ್ರಹಗಳನ್ನು ಅವರು ಬೆಳೆಸಿಕೊಂಡಿದ್ದರೂ, ಓದಿನ ವಿಷಯಕ್ಕೆ ಬಂದಾಗ ಅವರು ಅದನ್ನೆಲ್ಲ ಬದಿಗಿಟ್ಟು ಒಂದು ಪಠ್ಯಕ್ಕೆ ಕೊಡಬೇಕಾದ ಗಮನವನ್ನೂ, ಮರ್ಯಾದೆಯನ್ನೂ ಕೊಡುತ್ತಲೇ ಬಂದಿದ್ದಾರೆ. ಒಬ್ಬ ಪತ್ರಿಕಾ ಸಂಪಾದಕನಿಗಿರಬೇಕಾದ ಮೂಲಭೂತ ಗುಣವೇ ಇದು. ಹೀಗಾಗಿಯೇ ದಿವಾಕರ್ ಉತ್ತಮ ಸಂಪಾದಕರಲ್ಲಿ ಒಬ್ಬರಾಗಿ, ಮುಖ್ಯವಾಗಿ ಒಂದು ಸಾಹಿತ್ಯಕ ಉತ್ತಮಿಕೆಯನ್ನು ಎತ್ತಿಹಿಡಿಯುವ ಸಂಪಾದಕರಾಗಿ ಎದ್ದು ನಿಲ್ಲುತ್ತಾರೆ. ಅವರು ‘ಮಲ್ಲಿಗೆ’ಯಂತಹ ಪತ್ರಿಕೆಯಲ್ಲಿ ಯಶವಂತ ಚಿತ್ತಾಲರ ಕೈಯಲ್ಲಿ ಬರೆಸಿದ್ದ ‘ಸಾಹಿತ್ಯ, ಸೃಜನಶೀಲತೆ ಮತ್ತು ನಾನು’ ಸರಣಿಯ ಬರಹಗಳು, ಗಿರಡ್ಡಿ ಗೋವಿಂದರಾಜರ ಕೈಯಲಿ ರೂಪಿಸಿದ್ದ ‘ಮರೆಯಬಾರದ ಹಳೆಯ ಕಥೆಗಳು’ ಸರಣಿ ಇದಕ್ಕೆ ಸಾಕ್ಷಿ.

ಸುಮಾರು 1988ರ ವೇಳೆಗೆ ಒಂದಿಷ್ಟು ಗೆಳೆಯರು ಸೇರಿ ಒಂದು ಸಾಹಿತ್ಯಿಕ ಪತ್ರಿಕೆಯನ್ನು ತರಬೇಕೆಂದು ಹೊರಟಿದ್ದೆವು. ಅದರ ಹಿಂದಿದ್ದ ದೊಡ್ಡ ಆಲೋಚನಾ ಶಕ್ತಿ ದಿವಾಕರರದ್ದೇ ಆಗಿತ್ತು. ಎಂದೂ ಅವರ ಮಸ್ತಕದಲ್ಲಿ ಹೊಸ ಆಲೋಚನೆಗಳಿಗೆ ಬರವೇ ಇರಲಿಲ್ಲ. ಪತ್ರಿಕೆ ಬರಲಿಲ್ಲವಾದರೂ– ಆಗ ನಡೆದ ವಿಚಾರವಿನಿಮಯದ ಫಲವಾಗಿ, ಹಾಗೂ ಪತ್ರಿಕೆಯ ಪ್ರಥಮ ಸಂಚಿಕೆಗೆ ನಾವು ಕೋರಿ ಬರೆಯಿಸಿದ ಲೇಖನಗಳ ಫಲವಾಗಿ ಅನೇಕ ಬರವಣಿಗೆಯ ಸರಣಿಗಳು ಕನ್ನಡದಲ್ಲಿ ಹುಟ್ಟಿದುವು– ಯಶವಂತ ಚಿತ್ತಾಲರನ್ನು ಒತ್ತಾಯ ಮಾಡಿ ಕವಿತೆ ಬರೆಯಿಸಿದ್ದು ಒಂದು– ಅದನ್ನು ಅವರು ‘ಲಬಸಾ’ (ಲಯ-ಬದ್ಧ ಸಾಲುಗಳು) ಎಂದು ಕರೆದು ಆ ಬರವಣಿಗೆಯನ್ನು ಮುಂದುವರೆಸಿದರು. ಜಯಂತ ಕಾಯ್ಕಿಣಿಯ ಬಳಿ ‘ಧೂಳು’ ಎನ್ನುವ ಪ್ರಬಂಧರೂಪದ ಕಾವ್ಯವನ್ನು ಬರೆಯಿಸಿದ್ದೂ ಆ ಕಾಲ್ಪನಿಕ ಪತ್ರಿಕೆಗಾಗಿಯೇ. ಕವಿತೆ ಮತ್ತು ಕಥೆಗಳನ್ನು ಮಾತ್ರ ಬರೆಯುತ್ತಿದ್ದ ಜಯಂತ ಕಾಯ್ಕಿಣಿಯ ಕೈಯಲ್ಲಿ ಆ ನಂತರ ಅದೇ ರೀತಿಯ ‘ಹೆದ್ದಾರಿಯ ಹೆರಳುಗಳು’ ಎನ್ನುವ ಪ್ರಬಂಧದಾದಿಯಾಗಿ ಅನೇಕ ಲೇಖನಗಳು– ಕಡೆಗೆ ‘ಬೊಗಸೆಯಲ್ಲಿ ಮಳೆ’ ಎನ್ನುವ ಲೇಖನಮಾಲೆಯೂ ಮೂಡಿಬಂತು. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಆಗ್ಗೆ ನಡೆಸುತ್ತಿದ್ದ ತಮ್ಮ ಮಹಾಪ್ರಬಂಧದ ಸಿದ್ಧತೆಯ ಬದಿಯಲ್ಲಿಯೇ ಕವಿ ಕೆ.ಎಸ್‌. ನರಸಿಂಹಸ್ವಾಮಿಯವರ ಪುಸ್ತಕ ಗಾತ್ರದ ಸಂದರ್ಶನದ ಮೂಲಭೂತ ಆಲೋಚನೆಯೂ ದಿವಾಕರರದ್ದೇ.

ಓದುಗ ದಿವಾಕರ್
ಸಾಮಾನ್ಯವಾಗಿ ನಮ್ಮ ಓದಿನ ರೀತಿಗೆ ಒಂದು ವಾರಗೆತನವಿರುತ್ತದೆ. ಅದೆಂದರೆ– ನಮ್ಮ ತಲೆಮಾರಿನ ಆಸುಪಾಸಿನ ಲೇಖಕರು, ಅವರ ಹೊಸ ಬರವಣಿಗೆಗಳೂ ನಮಗೆ ತಕ್ಷಣಕ್ಕೆ ಸಿಗುತ್ತವೆ– ದಕ್ಕುತ್ತವೆ. ಅದಕ್ಕೆ ನಾವು ಒಡನಾಡುವ ಜನ, ಅವರ ಓದಿನ ದೇಣಿಗೆಯೂ ಕಾರಣ. ಹೀಗಾಗಿ ಹೊಸ ತಲೆಮಾರಿನ ಲೇಖಕರ ಬಗ್ಗೆ ತಿಳಿಯಬೇಕಾದರೆ, ಓದಲು ಆಸಕ್ತಿ ಹುಟ್ಟಬೇಕಾದರೆ ಯಾವುದೋ ಸ್ಪರ್ಧೆಯ ಕಥೆಯೋ, ಅಥವಾ ಯಾರಾದರೂ ಹೇಳಿದ್ದರಿಂದಲೋ ನಾವು ಅದನ್ನು ಓದುತ್ತೇವೆ. ಆದರೆ ದಿವಾಕರರು ಹಿರಿಯರನ್ನು ಓದಿದಷ್ಟೇ ಮುತುವರ್ಜಿಯಿಂದ, ಕಾಳಜಿಯಿಂದ ಯಾವುದೋ ತಿಳಿಯದ ಬರಹಗಾರನನ್ನೂ ಓದುತ್ತಾರೆ. ದೇವನೂರರ ‘ಕುಸುಮಬಾಲೆ’ ಪ್ರಕಟಗೊಂಡಾಗ ಅದನ್ನು ಅವರು ಸಂಭ್ರಮಿಸಿ ಓದಿದ್ದು, ಅದರಲ್ಲಿದ್ದ ಭಾಷೆಯನ್ನೂ ಹಾಗೂ ದೇವನೂರರು ಉಪಯೋಗಿಸಿದ್ದ ಪ್ರತೀಕಗಳನ್ನು ಅವರು ಅರ್ಥೈಸಿದ್ದೇ ಭಿನ್ನ ರೀತಿಯಲ್ಲಿ. ಕೆ.ಬಿ. ಸಿದ್ಧಯ್ಯನವರ ‘ಬಕಾಲ’ ಎನ್ನುವ ದೀರ್ಘ ಕವಿತೆ ಬಂದಾಗಲೂ ದಿವಾಕರ್ ಸಂಭ್ರಮಿಸಿ ನಮ್ಮೆದುರು ಅದರ ಸಾಲುಗಳನ್ನು ಓದಿದ್ದರು. ಆಗ್ಗೆ ನಾವು ಯಾರೂ ಸಿದ್ಧಯ್ಯನವರ ಹೆಸರನ್ನೂ ಕೇಳಿರಲಿಲ್ಲ, ಬರಹಗಳನ್ನೂ ಓದಿಯೂ ಇರಲಿಲ್ಲ. ವಿ.ಎಂ. ಮಂಜುನಾಥ್, ವಿ.ಆರ್. ಕಾರ್ಪೆಂಟರ್, ಹೀಗೆ ಅನೇಕ ಮುಂದಿನ ತಲೆಮಾರಿನ ಲೇಖಕರ ಬರಹಗಳ ಬಗ್ಗೆ ಆ ತಲೆಮಾರಿನ ವಾರಗೆಯವರು ಮಾತಾಡುವುದಕ್ಕೆ ಮುನ್ನವೇ ದಿವಾಕರ್ ಮಾತನಾಡಿರುವುದನ್ನು ನಾನು ಕಂಡಿದ್ದೇನೆ. ಅವರ ಓದಿನ ವಿಸ್ತಾರ ಮತ್ತು ಆಳ ಅವರೊಂದಿಗೆ ಮಾತಿಗಿಳಿದಾಗಲೇ ತಿಳಿಯುವುದು. ಕನ್ನಡದ ಪುಸ್ತಕಗಳನ್ನು ಓದಿದಷ್ಟೇ ಸಂಭ್ರಮದಿಂದ ವಿಶ್ವದ ಪುಸ್ತಕಗಳನ್ನೂ, ಕವಿತೆಯನ್ನೋದಿದಷ್ಟೇ ಸಂಭ್ರಮದಿಂದ ಪತ್ತೇದಾರಿ ಸಾಹಿತ್ಯವನ್ನೂ ದಿವಾಕರ್ ಓದುತ್ತಾರೆ. ಓದಿ ಅಂತರ್ಗತ ಮಾಡಿಕೊಳ್ಳುತ್ತಾರೆ ಹಾಗೂ ಅದನ್ನು ಸದಾಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ವಿಶ್ವಸಾಹಿತ್ಯದ ಬಗ್ಗೆ ನನಗೆ ಮೊದಲಿನಿಂದಲೂ ಆಸಕ್ತಿಯಿತ್ತು ಹಾಗೂ ನಾನು ನನ್ನದೇ ರೀತಿಯಲ್ಲಿ ಪುಸ್ತಕಗಳನ್ನರಸಿ ಓದುತ್ತಿದ್ದೆ. ಆದರೆ ನನ್ನ ಆಸಕ್ತಿಯನ್ನು ವಿಸ್ತರಿಸಿದವರು ದಿವಾಕರ್. ಈ ಓದಿನ, ಪುಸ್ತಕಗಳ ದಾಹವೇ ದಿವಾಕರರನ್ನು ಪುಸ್ತಕದಂಗಡಿಗಳಿಗೆ ಕರೆದೊಯ್ದವು. ಹೀಗಾಗಿಯೇ ಅವರ ಆಪ್ತವಲಯದಲ್ಲಿ ಬಹುಶಃ ಲೇಖಕರಿಗಿಂತ ಅಗ್ರಸ್ಥಾನ ಪಡೆಯುವವರು ‘ಸೆಲೆಕ್ಟ್’ ಬುಕ್ ಷಾಪಿನ ಮೂರ್ತಿಯಂತಹವರು!

ಕಥೆಗಾರ ದಿವಾಕರ್
ನಾವು ದಿವಾಕರ್ ಅವರ ಕಥೆಗಳನ್ನು ಓದಿದಾಗ ತಕ್ಷಣಕ್ಕೆ ಮನಸ್ಸಿಗೆ ಬರುವ ಮಾತು– ಪ್ರಯೋಗ ಎನ್ನುವ ಪದವೇ. ದಿವಾಕರ್ ಕಥಾವಸ್ತು ಮತ್ತು ಕಥನ ತಂತ್ರದಲ್ಲಿ ಸದಾ ಪ್ರಯೋಗಗಳನ್ನು ನಡೆಸುತ್ತಲೇ ಇರುತ್ತಾರೆ. ಹೀಗಾಗಿಯೇ ಅವರಿಗೆ ಒಂದಿಡೀ ಭೌಗೋಳಿಕ ಪ್ರದೇಶವನ್ನೇ ಸೃಷ್ಟಿಸಿಟ್ಟಿರುವ ವಿಲಿಯಂ ಫಾಕ್ನರ್, ಮಾಂತ್ರಿಕ ವಾಸ್ತವ ಅಥವಾ ಅವರು ಕರೆಯುವ ಅದ್ಭುತ ರಮ್ಯ ಪರಂಪರೆಯಲ್ಲಿ ತಲೆಮಾರುಗಳ ಕಥೆಗಳನ್ನು ಹೆಣೆಯುವ ಮಾರ್-ಕೆಸ್, ತನ್ನ ಕಥೆಗಳಿಗೇ ಕಾದಂಬರಿಯ ಹರವಿದೆ ಎಂದು ಹೇಳುತ್ತಿದ್ದ ಬೊರ್ಹೆಸ್– ಹೀಗೆ ಅನೇಕ ಲೇಖಕರ ಕಥನ ತಂತ್ರವನ್ನು ಅವರು ಅಂತರ್ಗತ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಕನ್ನಡಕ್ಕೆ ಒದಗಿಸಿರುವ ನಿರೂಪಣಾ ತಂತ್ರದ ನಾವೀನ್ಯ ಮತ್ತು ಪ್ರಯೋಗಶೀಲತೆಯು ಮಹತ್ವದ್ದು. ಅವರು ಕಥಾವಸ್ತುವಿಗೆ ಎಷ್ಟು ಮಹತ್ವ ಕೊಡುತ್ತಾರೋ ಅಷ್ಟೇ ಮಹತ್ವವನ್ನು ನಿರೂಪಣಾ ತಂತ್ರಕ್ಕೂ ನೀಡುತ್ತಾರೆ. ಸಾಮಾನ್ಯವಾಗಿ ಕಥೆಗಾರರ ಜೊತೆಗಿನ ಮಾತುಕತೆಯಲ್ಲಿ ಲೇಖಕರು ತಮ್ಮ ಈಚಿನ ಕೃತಿಗಳ ಬಗ್ಗೆ ಮಾತನಾಡುವುದನ್ನು ಕಂಡಿದ್ದೇನೆ. ಆದರೆ ದಿವಾಕರ್ ಸಾಮಾನ್ಯವಾಗಿ ತಾವು ಬರೆಯಲಿರುವ ಮುಂದಿನ ನಾಲ್ಕೈದು ಕಥೆಗಳ ಬಗ್ಗೆ, ಅದರ ನಿರೂಪಣಾ ತಂತ್ರದ ಬಗ್ಗೆ ಎಷ್ಟು ಅದ್ಭುತವಾಗಿ ವಿವರಿಸುತ್ತಾರೆಂದರೆ, ಅಲ್ಲಿಗೇ (ಅಂದರೆ ಬರೆಯುವುದಕ್ಕೆ ಮುನ್ನವೇ) ಕಥೆಗೊಂದು ಪೂರ್ಣತೆ ಬಂದುಬಿಟ್ಟಿರುತ್ತದೆ. ಬಹುಶಃ ದಿವಾಕರ್ ನಿರೂಪಿಸಿರುವ ಕಥೆಗಳಲ್ಲಿ ಕೇವಲ ಅರ್ಧದಷ್ಟು ಮಾತ್ರ ಬರವಣಿಗೆಗೆ ಇಳಿಸಿದ್ದಾರೆನ್ನಿಸುತ್ತದೆ.

‘ಕ್ರೌರ್ಯ’ ಅವರ ಬಹುಚರ್ಚಿತ ಕಥೆಗಳಲ್ಲೊಂದು. ಆದರೆ ನಿಜಕ್ಕೂ ದಿವಾಕರ್ ಅವರಿಗೇ ಆ ಕಥೆ ಹೆಚ್ಚೇನೂ ಪ್ರಿಯವಲ್ಲದ್ದು ಅನ್ನಿಸುತ್ತದೆ. ಮಾಸ್ತಿಯವರು ಆ ಕಥೆಯಲ್ಲಿರುವ ಕ್ರೌರ್ಯದ ಬಗ್ಗೆ ಒಮ್ಮೆ ಟಿಪ್ಪಣಿ ಮಾಡಿದ್ದನ್ನು ಕೇಳಿದ ನಂತರ ಆ ರೀತಿಯ ಕಥೆಗಳನ್ನು ಬರೆಯುವುದನ್ನೇ ಬಿಟ್ಟೆನೆಂದು ಒಮ್ಮೆ ದಿವಾಕರ್ ಹೇಳಿದ ನೆನಪು.

ಕಥನ ತಂತ್ರದ ಬಗ್ಗೆ ಅಷ್ಟೊಂದು ಆಸಕ್ತಿಯಿರುವ ದಿವಾಕರ್ ಅವರಿಗೆ ‘ಅತೀ ಸಣ್ಣ ಕಥೆ’ಗಳ ಸಾಧ್ಯತೆಗಳನ್ನು ಪರಿಶೀಲಿಸುವುದು ತುಂಬಾ ಇಷ್ಟವಾದ್ದು ಎಂದು ನನಗನ್ನಿಸುತ್ತದೆ. ಹೀಗಾಗಿಯೇ ಅವರು ಸಂಪಾದಿಸಿರುವ ಅನೇಕ ಪುಸ್ತಕಗಳಲ್ಲಿ ಎರಡು ಮಹತ್ವದ ಕೃತಿಗಳೆಂದರೆ, ಪ್ರಪಂಚದ ಅತೀ ಸಣ್ಣ ಕಥೆಗಳ ಸಂಕಲನ ಮತ್ತು ಕನ್ನಡದ ಅತೀ ಸಣ್ಣ ಕಥೆಗಳ ಸಂಕಲನ. ಆ ಕಥೆಗಳ ಬಗ್ಗೆ ಅವರು ದೀರ್ಘವಾದ ಟಿಪ್ಪಣಿಯೊಂದನ್ನು ಬರೆದಿದ್ದಾರಾದರೂ, ತಾವೇ ಸ್ವತಃ ಅತೀ ಸಣ್ಣ ಕಥೆಗಳನ್ನು ಬರೆದಿಲ್ಲ.

ಅನುವಾದಕ ದಿವಾಕರ್
ಈ ಎಲ್ಲಕ್ಕೂ ಮಿಗಿಲಾಗಿ ದಿವಾಕರ್ ಮಾಡಿರುವ ಮಹತ್ವದ ಕಾರ್ಯವೆಂದರೆ ವಿಶ್ವಸಾಹಿತ್ಯವನ್ನು ಕನ್ನಡೀಕರಿಸಿರುವ ಕೆಲಸ. ಇದು ಸುಲಭದ ಮಾತೇನೂ ಅಲ್ಲ. ಮೊದಲಿಗೆ ಅವರು ಸಂಪಾದಿಸಿ ಅನುವಾದಿಸಿದ ‘ಕಥಾಜಗತ್ತು’ ಅನ್ನುವ ಮಹತ್ವದ ಗ್ರಂಥದಲ್ಲಿ 50 ಮಂದಿ ನೊಬೆಲ್ ಪ್ರಶಸ್ತಿ ವಿಜೇತರ ಕಥೆಗಳನ್ನು ಆಯ್ದು, ಪ್ರೀತಿಯಿಂದ ಅನುವಾದಿಸಿ, ಲೇಖಕರ ಬಗ್ಗೆ ಒಂದು ಸಣ್ಣ ಟಿಪ್ಪಣಿಯನ್ನೂ ಹಾಕಿ ಪ್ರಕಟಿಸಿದ್ದರು. ಇದಕ್ಕೆ ವರ್ಷಗಳ ಕೃಷಿಯೇ ಬೇಕಾಗುತ್ತದೆ. ಹಾಗೆಯೇ ಅವರು ಕೆಲವು ಉತ್ತಮ ಕಾದಂಬರಿಗಳನ್ನೂ ಅನುವಾದಿಸಿದ್ದಾರೆ.
ಅನುವಾದದ ಬಗ್ಗೆ ದಿವಾಕರ್ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ವಿದೇಶೀ ಹೆಸರುಗಳ ಉಚ್ಚಾರದಿಂದ ಹಿಡಿದು, ಲೇಖಕನ ಬರವಣಿಗೆಯ ಶೈಲಿಯ ಜಾಯಮಾನವನ್ನು ತಮ್ಮದಾಗಿಸಿಕೊಂಡು ಅನುವಾದಿಸುವುದು ಸರಳವಾದ ಮಾತೇನೂ ಅಲ್ಲ. ಒಬ್ಬ ಲೇಖಕನ ಒಂದು ಕೃತಿಯನ್ನು ಅನುವಾದಿಸಬೇಕಾದರೆ, ಅದೇ ಲೇಖಕನ ಅನೇಕ ಕೃತಿಗಳನ್ನು ಓದಿ– ಅಂತರ್ಗತ ಮಾಡಿಕೊಂಡು ಆನಂತರ ಅನುವಾದಕ್ಕೆ ದಿವಾಕರ್‌ ಕೈ ಹಾಕುತ್ತಾರೆ. ಹೀಗಾಗಿ ನಮಗೆ ಆ ಲೇಖಕ ಕನ್ನಡದಲ್ಲಿ ಆದಷ್ಟೂ ಪೂರ್ಣವಾಗಿ ದಕ್ಕುತ್ತಾನೆ. ಅವನ ಸಂದರ್ಭ, ಭಾಷಾಪ್ರಯೋಗ, ಒಟ್ಟಾರೆ ಸಾಹಿತ್ಯದ ಜಾಯಮಾನ ಈ ಎಲ್ಲದರ ಬಗ್ಗೆ ದಿವಾಕರ್ ಎಚ್ಚರ ವಹಿಸುತ್ತಾರೆ. ಲ್ಯಾಟಿನ್ ಅಮೆರಿಕನ್ ಸಾಹಿತ್ಯದ ಬಗ್ಗೆ ದಿವಾಕರ್ ಅವರಿಗೆ ಇದ್ದ ಪ್ರೀತಿಯಿಂದಾಗಿ ಅವರು ಸ್ಪಾನಿಷ್ ಭಾಷೆಯನ್ನೂ ಕಲಿಯಹೊರಟಿದ್ದರಲ್ಲದೇ, ಬೇರೆ ಭಾಷೆಯಿಂದ ಇಂಗ್ಲಿಷಿಗೆ ಬೇರೆಬೇರೆಯವರಿಂದ ಅನುವಾದವಾಗಿರುವ ಪಠ್ಯಗಳನ್ನೂ ಅಧ್ಯಯನ ಮಾಡಿದ್ದಾರೆ. ಹೀಗಾಗಿಯೇ ಅವರ ಅನುವಾದ ಮೂಲದ ಜಾಯಮಾನಕ್ಕೆ ಅತೀ ಹತ್ತಿರವಾದ ಅನುವಾದ ಎಂದು ನಾವು ಹೇಳಬಹುದು.

ವ್ಯಕ್ತಿ ದಿವಾಕರ್
ಒಂದು ಸಾಹಿತ್ಯಿಕ ವಿಶ್ವಕೋಶದಂತಿರುವ ದಿವಾಕರ ಸುಲಭದ ಗೆಳೆಯರೇನೂ ಅಲ್ಲ. ಜಗತ್ತಿನ ಉತ್ತಮಿಕೆಯನ್ನು ಅರೆದು ಕುಡಿದಿರುವ ಅವರನ್ನು ಮೆಚ್ಚಿಸುವುದು ಸರಳವೂ ಅಲ್ಲ. ಅವರೊಂದಿಗೆ ವಾದಕ್ಕಿಳಿಯುವುದರಿಂದ ಪ್ರಯೋಜನವೂ ಇಲ್ಲ. ಅವರ ಓದಿನ ಹಾಗೂ ನೆನಪಿನ ಪ್ರಖರತೆಯಲ್ಲಿ ಎಲ್ಲವೂ ಕರಗಿಹೋಗುತ್ತದೆ. ಒಂದು ಉತ್ತಮ ಪದ್ಯ, ಒಂದು ಅದ್ಭುತ ಕತೆ, ಒಂದು ಪ್ರಯೋಗಶೀಲ ತಂತ್ರ ದಿವಾಕರರಿಗೆ ಹುಕ್ಕಿ ತರಿಸುತ್ತದೆ. ಬೇಂದ್ರೆಯನ್ನು ಸಾಹಿತ್ಯಿಕವಾಗಿಯೂ ಸಂಗೀತದ ಮೂಲಕವೂ ದಿವಾಕರ್ ನಿಮ್ಮ ಮುಂದಿಡಬಲ್ಲರು. ಈ ಸಂಕೀರ್ಣ ವ್ಯಕ್ತಿಯಲ್ಲಿ ನಮಗೆ ತಿಳಿದಂತೆಯೇ ಇನ್ನೂ ಮೂರು ಆಯಾಮಗಳಿವೆ. ದಿವಾಕರ್ ತಮ್ಮ ಯೌವನದ ದಿನಗಳಲ್ಲಿ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದರು, ಪುಸ್ತಕಗಳಿಗೆ ಮುಖಪುಟ ರೂಪಿಸುತ್ತಿದ್ದರು; ಅವರಿಗೆ ಸಂಗೀತದ ಬಗ್ಗೆ ಅಪರಿಮಿತ ಜ್ಞಾನವೂ ಅಭಿರುಚಿಯೂ ಇದೆ; ದಿವಾಕರ್ ಸಿನಿಮಾ ಮಾಧ್ಯಮದ ಕಷ್ಟ ಸುಖಗಳನ್ನು ಅನುಭವಿಸಿ ಬಲ್ಲರು. ಆದರೆ ಆ ಆಯಾಮಗಳ ಬಗೆಗೆ ಬರೆಯುವ ಸಾಮರ್ಥ್ಯವೂ ಬೇಕಲ್ಲ. ಅದು ನನಗಿಲ್ಲ.

ಯುವಕರಾಗಿಯೇ ಕಾಣುವ ಎಪ್ಪತ್ತರ ದಿವಾಕರ್ ನೂರ್ಕಾಲ ನಮ್ಮೊಡನಿದ್ದು, ತಮ್ಮ ಉತ್ಸಾಹದ ಚಿಲುಮೆಯನ್ನು ಕಳೆದುಕೊಳ್ಳದೇ ನಮ್ಮನ್ನೂ ಬದುಕಿಸಿ, ಬೆಳೆಸಲಿ ಎಂಬುದೇ ನನ್ನ ಹಾರೈಕೆ. ಅವರು ಇದ್ದಷ್ಟೂ ಕಾಲ ನಾವು ಬೆಳೆಯುತ್ತೇವೆ, ಪ್ರಬುದ್ಧರಾಗುತ್ತೇವೆ, ಜ್ಞಾನಿಗಳಾಗುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT