ADVERTISEMENT

ನೀಲಿಮಳೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 19:30 IST
Last Updated 8 ಏಪ್ರಿಲ್ 2017, 19:30 IST
ನೀಲಿಮಳೆ
ನೀಲಿಮಳೆ   
ಕಗ್ಗತ್ತಲ ಹಾದಿಯಲ್ಲಿ 
ಬೆಳಕಿನೆಡೆಗೆ ಬೆರಳ ದೊಂದಿ 
ತೋರಿಸುತ್ತಾ ನಿಂತೇ 
ಇರುವ ಸಂತ 
ಸಮಾನತೆಗಾಗಿ 
ವ್ಯವಸ್ಥೆಯೊಡನೆ ಹೋರಾಡುತ್ತಲೇ 
ಇರುವ ಸಂವಿಧಾನ 
ಹುಟ್ಟಿಗೇ ಹುಣ್ಣು ಅಂಟಿ 
ಮಾಯದ ಗಾಯವಾಗಿ  
ನರಳುತ್ತಿದ್ದ ಜೀವಗಳಿಗೆ ಮದ್ದು
ತೋರಿದ ಸಂಜೀವಿನಿ 
 
ಯುಗಾಂತರ ದಮನಿತ ಆದಿಮ
ಕಣ್ಣುಗಳಲ್ಲಿ ಉರಿಯುತ್ತಲೇ 
ಇರುವ ಉಲ್ಕೆ
 
ದಿಕ್ಕೆಟ್ಟ ಸಾವಿರಾರು ನದಿಗಳಿಗೆ 
ನೆಲೆಯಾದ ಸ್ವಾಭಿಮಾನದ 
ಅನಂತ ಕಡಲು
 
ನೆಲದಮರೆಯ ಬೇರುಗಳಿಗೂ
ಬೆಳಕ ಕಾಣಿಸಿದ 
ಕಪ್ಪು ಸೂರ್ಯ 
 
ಶತ ಶತಮಾನ ಹೆಪ್ಪುಗಟ್ಟಿದ ದುಃಖ
ಊರು ಕೆರೆ ಗುಡಿಗಡಿಯಾಚೆ ಉಳಿದವರ
ಹಟ್ಟಿಮೊಹಲ್ಲಾಗಳ ಮೇಲೆ
ಕಡಲಹನಿ ಹೊತ್ತುತಂದು ಸುರಿದ
ನೀಲಿಮಳೆ
 
ಸನಾತನ ಸ್ಥಾವರಗಳ ಬಿರುಕಿನಲ್ಲಿ 
ಚಿಗುರಿದ ಬೋಧಿವೃಕ್ಷ 
 
ಬೇಲಿಸಾಲಿನ ಹೂಗಳ ತಂದು
ಬುದ್ಧನಿಗೆ ಅರ್ಪಿಸಿದ ಮಹಾಯಾನಿ
   –ಹಂದಲಗೆರೆ ಗಿರೀಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.