ADVERTISEMENT

ಬಟ್ಟೆ ಮೆತ್ತಿಕೊಂಡ ಊರಿನಲ್ಲಿ

ಡಾ.ಮಿರ್ಜಾ ಬಶೀರ್
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST
ಚಿತ್ರ: ಎಸ್.ವಿ. ಹೂಗಾರ್
ಚಿತ್ರ: ಎಸ್.ವಿ. ಹೂಗಾರ್   

ಯಾರಿಗೂ ಏನಾಗುತ್ತಿದೆಯೆಂದೇ ತಿಳಿಯಲಿಲ್ಲ. ಆ ನಗರದ ಬೆಳಗಿನ ಒಂಬತ್ತು ಗಂಟೆಗೇ ಪ್ರಖರವಾಗಿದ್ದ ಸೂರ್ಯನ ಬೆಳಕು ಗ್ರಹಣ ಹಿಡಿದಂತೆ ಇದ್ದಕ್ಕಿದ್ದಂತೆ ಕಡಿಮೆಯಾಯಿತು. ಜನರಾಗಲೇ ಕೆಲಸದ ಮೇಲೆ ಹೊರಟಿದ್ದರು. ಆಫೀಸು, ಮನೆಯೊಳಗಿದ್ದವರು ಆಗಸದೆಡೆ ನೋಡಿದರು. ರಸ್ತೆ, ವಾಹನಗಳಲ್ಲಿದ್ದವರು ತಲೆಯೆತ್ತಿ ನೋಡಿದರು. ಆಗಸದಗಲಕ್ಕೂ ವಿವಿಧಾಕಾರ, ಬಣ್ಣದ ಬಟ್ಟೆಗಳು, ಉಡುಪುಗಳು ಸುಂಯ್ಯನೆ ಕೆಳಗಿಳಿದು ಬರತೊಡಗಿದವು. ಅವು ಎಷ್ಟಿದ್ದವೆಂದರೆ ಸೂರ್ಯನೇ ಮರೆಯಾಗಿದ್ದ. ನೋಡನೋಡುತ್ತಿದ್ದಂತೆ ಆ ಬಟ್ಟೆಗಳು ಜನರಿಗೆ ಒಂದರ ಮೇಲೊಂದರಂತೆ ಮೆತ್ತಿಕೊಂಡವು. ಪ್ಯಾಂಟು, ಶರ್ಟು, ಬನಿಯನ್, ಬರ್ಮುಡಾ, ಸೀರೆ, ಜಾಕೀಟು, ಲಂಗ, ಬ್ರಾ, ಕಾಲು ಚೀಲ, ಕೈಗವಸು ಇತ್ಯಾದಿಗಳು ಒಬ್ಬೊಬ್ಬರ ಮೇಲೆ ಹತ್ತು , ಇಪ್ಪತ್ತು ಜೊತೆಯಂತೆ ಮೆತ್ತಿಕೊಂಡವು. ಕತ್ತಿನ ಸುತ್ತ ಹತ್ತಿಪ್ಪತ್ತು ಟೈಗಳು ಜೋತುಬಿದ್ದವು.

ಮಕ್ಕಳು–ಮರಿ, ಗಂಡಸರು, ಹೆಂಗಸರು, ವಯಸ್ಸಾದವರು, ರೋಗಿಗಳು ಎಂಬ ಭೇದಭಾವವಿಲ್ಲದೆ ಬಟ್ಟೆಗಳು ಪದರ ಪದರವಾಗಿ ಮೆತ್ತಿಕೊಂಡವು. ಈ ಅನಿರೀಕ್ಷಿತ ಘಟನೆಗೆ ಬೆದರಿ, ಬಟ್ಟೆಯ ಭಾರಕ್ಕೆ ಅತ್ತಿತ್ತ ವಾಲಾಡತೊಡಗಿದರು. ಬೆವರುತ್ತ ಎಲ್ಲರೂ ಕೂಗಾಡತೊಡಗಿದರು. ಯಾರಾದರೂ ಬಟ್ಟೆ ಕಳಚಿದರೆ ಒಂದಕ್ಕೆರಡರಂತೆ ಬಟ್ಟೆಗಳು ಮೆತ್ತಿಕೊಂಡು ಸಂಕಷ್ಟ ದ್ವಿಗುಣಗೊಳ್ಳತೊಡಗಿತು. ಓಡಾಡುತ್ತಿದ್ದ ತೆಳ್ಳನೆಯ ಜನ ಬಟ್ಟೆಯ ಕಾರಣವಾಗಿ ದಪ್ಪಗಾದರು, ದಪ್ಪಗಿದ್ದವರು ದುಂಡಗೆ ಚೆಂಡಿನಂತಾದರು. ಕೈಗಳನ್ನು ಆಡಿಸಲಾಗದೆ, ಕಾಲನ್ನು ಎತ್ತಿಡಲಾಗದೆ, ಕತ್ತನ್ನು ಹೊರಳಿಸಲಾಗದೆ ನಿಂತ ಕಡೆಯೇ ಉರುಳಿಬಿದ್ದರು. ಬಟ್ಟೆ ಮೆತ್ತಿಕೊಳ್ಳುವುದರಲ್ಲಿ ಯಾವುದೇ ಶಿಸ್ತಿಲ್ಲದೆ ಪ್ಯಾಂಟಿನ ಮೇಲೆ ನಿಕ್ಕರ್, ಅದರ ಮೇಲೆ ಲಂಗ, ಲಂಗದ ಮೇಲೆ ಚೂಡಿದಾರ್, ಅದರ ಮೇಲೆ ಬುರ್ಖಾ, ಅದರ ಮೇಲೆ ಕೋಟು. ಹೀಗೆ ಯಾವ್ಯಾವೋ ಬಟ್ಟೆಗಳು ಸುತ್ತಿಕೊಂಡು ಗಂಡಸರೋ ಹೆಂಗಸರೋ ಎಂಬುದು ಗೊತ್ತಾಗದೆ ಜನರ ಅಸ್ಮಿತೆಯೇ ಅಳಿಸಿಹೋಯಿತು.

ರಸ್ತೆಯ ಮೇಲೆ ಓಡುತ್ತಿದ್ದ ವಾಹನಗಳು ಅಲ್ಲಲ್ಲಿಯೇ ನಿಂತವು. ವಾಹನ ಚಾಲಕರಿಗೆ ಆಕ್ಸಲರೇಟರ್ ಒತ್ತಲಾಗಲಿಲ್ಲ, ಸ್ಟಿಯರಿಂಗ್ ತಿರುಗಿಸಲಾಗಲಿಲ್ಲ, ಬ್ರೇಕು ಹಾಕಲಾಗಲಿಲ್ಲ. ಪ್ರಯಾಣಿಕರು ಇದ್ದ ಕಡೆಯೇ ಊದಿಕೊಂಡು ಬಾಗಿಲು, ಕಿಟಕಿಗಳಲ್ಲಿ ಸಿಕ್ಕಿಹಾಕಿಕೊಂಡು ಮುಕ್ಕುರಿಯತೊಡಗಿದರು. ಕೆಲವೇ ಕ್ಷಣಗಳಲ್ಲಿ ನಗರದ ರಸ್ತೆಗಳೆಲ್ಲ ವಾಹನಗಳಿಂದ ತುಂಬಿ ಹೋದವು. ಜನರೂ ರಸ್ತೆಗಳ ಮೇಲೆ, ಫುಟ್‌ಪಾತಿನ ಮೇಲೆ, ಚರಂಡಿ, ಆಫೀಸು, ಮೆಟ್ಟಿಲುಗಳ ಮೇಲೆಲ್ಲ ಬಟ್ಟೆಯ ಮೂಟೆಗಳಂತೆ ಉರುಳಿಬಿದ್ದಿದ್ದರು.

ADVERTISEMENT

ಎಲ್ಲ ಲಿಫ್ಟ್‌ಗಳಲ್ಲಿ ದಪ್ಪಗಾದ ಜನ ಹೊರಬರಲಾರದೆ ಕಿರುಚತೊಡಗಿದರು. ಶೌಚಾಲಯದಲ್ಲಿದ್ದವರು ಹೊರಬರದಂತಾದರು. ಆ ದಿನ ಒಬ್ಬನನ್ನು ಗಲ್ಲಿಗಾಕುವುದಿತ್ತು. ಇನ್ನೇನು ಗಲ್ಲಿಗೇರಿಸಬೇಕು ಎನ್ನುವಷ್ಟರಲ್ಲಿ ಹಲವಾರು ಜೊತೆ ಬಟ್ಟೆಗಳು ಮತ್ತು ಕತ್ತಿನ ಸುತ್ತ ಟೈ ಮಫ್ಲರ್‌ಗಳು ಮೆತ್ತಿಕೊಂಡವು. ಇತ್ತ ಪೊಲೀಸರು, ಗಲ್ಲಿಗೇರಿಸುವವನು ಎಲೆಕೋಸಿನಂತೆ ಪದರ ಪದರವಾಗಿ ಊದಿಕೊಂಡು ದಬ್ಬೆಂದು ಉರುಳಿಬಿದ್ದರು. ಗಲ್ಲಿಗೇರಲಿದ್ದವನು ಉರುಳುರುಳಿ ನೇಣುಕಟ್ಟೆಯಿಂದ ಕೆಳಗೆ ಬಿದ್ದು ತೆರೆದ ಬಾಗಿಲ ಕಡೆ ತೆವಳತೊಡಗಿದ. ನೇಣಿಗಾಕುವುದನ್ನು ಒಪ್ಪದ ದೇವರೇ ಏನೋ ಶಿಕ್ಷೆ ಕೊಟ್ಟಿದ್ದಾನೆಂದು ತಿಳಿದು ಯಾರೂ ಅವನ ತಂಟೆಗೇ ಹೋಗಲಿಲ್ಲ. ನೀನು ತಪ್ಪಿಸಿಕೊಂಡು ಹೋಗು ಎಂದು ಪೊಲೀಸರೇ ಅವನನ್ನು ಉತ್ತೇಜಿಸಿದರು.

ಕ್ಯಾಬರೆ ಮಂದಿರದಲ್ಲೊಂದು ತಮಾಷೆಯಾಯಿತು. ಬೆಳಗಿನ ಆಟಕ್ಕೆ ಬಹಳ ಜನ ರಸಿಕರು ಜಮಾಯಿಸಿದ್ದರು. ಏಳು ಜನ ನರ್ತಕಿಯರು ಬಂದು ನರ್ತಿಸತೊಡಗಿದರು. ಮತ್ತೇರುವ ಬೆಳಕಿನಲ್ಲಿ ಸಂಗೀತದ ಲಯಕ್ಕೆ ಬಳುಕುತ್ತ, ಕುಲುಕುತ್ತ, ಕಾಮೋದ್ದೀಪಿಸುತ್ತ ಒಂದೊಂದೇ ಬಟ್ಟೆಯನ್ನು ಕಳಚಿ ಅಂತಿಮ ಘಟ್ಟಕ್ಕೆ ಬಂದಿದ್ದರು. ಇನ್ನೇನು ನರ್ತಕಿಯರು ತಮ್ಮ ಕೊನೆಯ ಬಟ್ಟೆಗೆ ಕೈ ಹಾಕಿದ ಕೂಡಲೇ ಅವರಿಗೆ ಬಟ್ಟೆ ಮೇಲೆ ಬಟ್ಟೆ ಮೆತ್ತಿಕೊಂಡು ಬಳ್ಳಿಗಳಂತೆ ಬಳುಕುತ್ತಿದ್ದವರು ನೂರು ವರ್ಷದ ಅರಳಿಮರದಂತೆ ದಪ್ಪಗಾಗಿ ವೇದಿಕೆಯ ಮೇಲೆ ಜಾಗ ಸಾಕಾಗದೆ ದಬ್ಬೆಂದು ಉರುಳಿ ಬಿದ್ದರು. ತಥ್ ದರಿದ್ರ, ಏನಾಯ್ತೋ ಎಂದು ದೊಂಬಿ ಎಬ್ಬಿಸಲು ರಸಿಕರು ಮೇಲೇಳಲು ಹೋದರೆ ಅದಾಗಲಿಲ್ಲ. ಅವರು ಸಹ ದಪ್ಪಗಾಗಿ ತಾವು ಕುಳಿತಿದ್ದ ಕುರ್ಚಿಯ ಮೇಲಿಂದ ಉರುಳಿಬಿದ್ದರು. ವೇಶ್ಯಾವಾಟಿಕೆಯಲ್ಲಿಯೂ ಇದೇ ತರಹದ ಪ್ರಸಂಗ ನಡೆಯಿತು.

ಆಸ್ಪತ್ರೆಯಲ್ಲಿ ರೋಗಿಯನ್ನು ಬಟ್ಟೆ ಬಿಚ್ಚಿ ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಿದ್ದು, ವೈದ್ಯರೆಲ್ಲ ಚಾಕು, ಕತ್ತರಿ, ಇಕ್ಕಳ ಹಿಡಿದು ರೆಡಿಯಾಗಿದ್ದವರು ಇದ್ದಕ್ಕಿದ್ದಂತೇ ಬಟ್ಟೆಗಳು ಮೆತ್ತಿಕೊಂಡು ರೋಗಿಯು ಕಾಣದಂತಾದ.
ರಸ್ತೆಯಲ್ಲಿ ಬಟ್ಟೆ ಮೂಟೆಗಳಂತೆ ಉರುಳುರುಳಿ ಹೋಗುತ್ತಿದ್ದ ಗುಂಪಿನಲ್ಲೊಂದು ಮಗು ಕೂಗಿತು. “ಡ್ಯಾಡಿ ನಾನು ಉಚ್ಚೆ ಒಯ್ಯಬೇಕು. ನನ್ನ ಪ್ಯಾಂಟಿನ ಜಿಪ್ಪು ತೆಗೆ’. ಆ ಡ್ಯಾಡಿ ಎಂಬ ಹೊಟ್ಟೆಯ ಮೂಟೆ ಕಷ್ಟಪಟ್ಟು ಬಾಗಲು ಹೋಗಿ ಅದೂ ಆಗದೆ ದಬ್ಬೆಂದು ಉರುಳಿಬಿದ್ದು ಮಲಗಿಕೊಂಡೇ ಬಹಳ ಕಷ್ಟಪಟ್ಟು ಮಗುವಿನ ಜಿಪ್ಪು ತೆಗೆಯಲು ಪ್ರಯತ್ನಿಸಿದ. ಆದರೆ ಪ್ಯಾಂಟಿನೊಳಗೊಂದು ಪ್ಯಾಂಟುಗಳಿದ್ದುದರಿಂದ ಒಂದೊಂದೇ ಜಿಪ್ಪನ್ನು ತೆಗೆಯುತ್ತಿದ್ದ ತಂದೆಗೆ ಮಗು ಅವಸರಿಸಿತು. ತಂದೆ ಎಷ್ಟು ಜಿಪ್ಪು ತೆರೆದರೂ ಮಗುವಿನ ‘ಅದು’ ಸಿಗಲೇ ಇಲ್ಲ. ಅದು ಹತ್ತಾರು ಪ್ಯಾಂಟುಗಳೊಳಗಡೆ ಎಲ್ಲೋ ಮಿಣ್ಣಗಿತ್ತೆಂದು ಕಾಣುತ್ತದೆ. ಬಹಳ ಹೊತ್ತು ತಡೆದಿದ್ದರಿಂದ ಅವನ ಎಲ್ಲ ಪ್ಯಾಂಟು ಮತ್ತು ಡ್ಯಾಡಿಯ ಕೈಗಳನ್ನೂ ನೆನೆಸಿಬಿಟ್ಟಿತು. ಥೂ ಎಂದು ಕೈಗಳನ್ನು ಹೊರಗೆಳೆದುಕೊಂಡ ತಂದೆ ಒಮ್ಮೆಲೇ ಬೆವರತೊಡಗಿದ. ತನಗೂ ಇದೇ ಫಜೀತಿಯೇ? ಎಂದು ತನ್ನ ದೇಹಕ್ಕೆ ಪೋಣಿಸಿಕೊಂಡಿದ್ದ ಪ್ಯಾಂಟುಗಳನ್ನು ಗಾಬರಿಯಿಂದ ನೋಡಿಕೊಂಡ. ಅವನಿಗೆ ಹತ್ತಾರು ಜೀನ್ಸ್ ಪ್ಯಾಂಟುಗಳು ಮೆತ್ತಿಕೊಂಡು ಒಂದು ದೊಡ್ಡ ಫುಟ್‌ಬಾಲ್‌ನಂತಾಗಿದ್ದ. ಅನೇಕ ತುಂಬು ತೋಳಿನ ಶರ್ಟುಗಳು ಮೆತ್ತಿಕೊಂಡು ಅವನ ಕೈಗಳು ಪ್ಯಾಂಟ್ ಜಿಪ್ಪಿನ ಬಳಿಯೇ ಹೋಗಲಿಲ್ಲ. ಆ ಪ್ರಸಂಗ ಬಂದರೆ ಏನು ಮಾಡಬೇಕು ಎಂದು ಯಾವ ಮಟ್ಟಿಗೆ ಹೆದರಿದನೆಂದರೆ ಹೊಯ್ದುಕೊಂಡೇಬಿಟ್ಟ. ಅವನ ಪ್ಯಾಂಟುಗಳು ಒಳಗಿನಿಂದ ಒಂದೊಂದೇ ತೊಯ್ದುಹೋದವು. ಅವನ ಸುತ್ತ ಚಿಂಗು ವಾಸನೆ ಹೊಡೆಯತೊಡಗಿತು.

ಸುತ್ತ ಇದ್ದ ಎಲ್ಲರ ಪರಿಸ್ಥಿತಿ ಅದೇ ಆಗಿತ್ತು. ಎಲ್ಲರೂ ಗಬ್ಬು ನಾರುತ್ತಾ ಆನೆಕಾಲು ರೋಗ ಹತ್ತಿದವರಂತೆ ಕಾಲುಗಳನ್ನು ಕಷ್ಟಪಟ್ಟು ಎತ್ತೆತ್ತಿ ಹಾಕುತ್ತ ಸ್ವಲ್ಪ ದೂರ ನಡೆದು ಸುಸ್ತಾಗಿ ನೆಲಕ್ಕೆ ಬೀಳುತ್ತಿದ್ದರು. ಈ ವಿಲಕ್ಷಣ ಪ್ರಸಂಗ ಎರಗಿದ ಕ್ಷಣದಿಂದ ಕೆಲವರು ಹೆದರಿ ಅರಚುತ್ತಿದ್ದರು. ಕೆಲವರಂತೂ ಕಕ್ಕಸು ಕೂಡ ಮಾಡಿಕೊಂಡಿದ್ದರು. ಅದೆಲ್ಲ ಅವರ ಒಳಪ್ಯಾಂಟಿನಗುಂಟ ಕೆಳಗಿಳಿಯುತ್ತ ಅವರ ಕಾಲುಗಳಿಗೆಲ್ಲ ಗಿಲಾವು ಮಾಡಿದಂತಾಗಿ ಓಡಾಡಿದಾಗಲೆಲ್ಲ ಅಥವಾ ಉರುಳಿದಾಗಲೆಲ್ಲ ಪಿಚಪಿಚ ಎನ್ನತೊಡಗಿ ನರಕ ಅನುಭವಿಸತೊಡಗಿದರು. ಹೆಂಗಸರದೂ ಇದೇ ಕಥೆ.

ಅವರೆಲ್ಲರಿಗೂ ವಾಸನೆ ತಡೆಯಲಾಗದೇ ಹೋಯಿತು. ತಮ್ಮದಾದರೆ ಹೇಗಾದರೂ ತಡೆದುಕೊಳ್ಳಬಹುದು. ಆದರೆ ಇತರ ಅನೇಕರು ಅದೇ ಸ್ಥಿತಿಯಲ್ಲಿ ತಮ್ಮ ಸುತ್ತಲೇ ಗುಂಪು ಗುಂಪಾಗಿ ಇರುವುದು, ಕಾಲು ಮೆತ್ತಿಸಿಕೊಂಡು ಉರುಳುತ್ತಿರುವುದು ಕಂಡು ವಾಂತಿ ಮಾಡಿಕೊಂಡರು. ಸಾವಿರಾರು ಲಕ್ಷಾಂತರ ಜನ ಚಲಿಸುತ್ತಿದ್ದುದರಿಂದ ಒಬ್ಬರ ಮೇಲೊಬ್ಬರ ವಾಂತಿ ಸಿಡಿದು ಅವರ ಸ್ಥಿತಿ ಅಸಹನೀಯವಾಯಿತು. ಕೇವಲ ಕೆಲವೇ ಸಮಯದ ಹಿಂದೆ ಸ್ನಾನ ಮಾಡಿ ಪೌಡರ್ರು, ಕ್ರೀಮು, ಪರ್‌ಫ್ಯೂಮುಗಳನ್ನು ಹಾಕಿಕೊಂಡು ಹೊರಟವರು ಈಗ ಅದೇ ತಾನೇ ಕೊಚ್ಚೆಯಿಂದ ಎದ್ದು ಬಂದ ಹಂದಿಗಳಂತಾಗಿದ್ದರು.

ರಸ್ತೆಗುಂಟ ತೆವಳುತ್ತಿದ್ದ ಜನರ ಮನೆಗಳು ನಗರದ ಮೂಲೆಮೂಲೆಯಲ್ಲಿದ್ದವು. ಕೆಲವು ಹತ್ತಿರ, ಕೆಲವು ದೂರ, ಮತ್ತೆ ಕೆಲವು ಬಹುದೂರ. ಎಷ್ಟೇ ಹತ್ತಿರವಿದ್ದರೂ ತಲುಪಲು ಕಷ್ಟವಾಗಿದ್ದುದರಿಂದ ಹತ್ತಾರು ಬಟ್ಟೆಗಳ ಒಳಗೆ ಬೆವರಿ, ನಿರ್ಜಲೀಕರಣವಾಗಿ ಸುಸ್ತಾಗಿದ್ದರು. ಮನೆ ಸೇರಿದವರ ಯಾವ ತೊಂದರೆಗಳೂ ಬಗೆಹರಿಯಲಿಲ್ಲ. ಕೆಲವರಿಗೆ ಮೆಟ್ಟಿಲು ಹತ್ತಲಾಗದೆ, ಕೆಲವರಿಗೆ ಒಳಗೆ ಹೋಗಲು ಆಗದೆ, ಎಲ್ಲಿ ನೆರಳಿದೆಯೋ ಅಲ್ಲೇ ಉರುಳುರುಳುತ್ತ ಹೋದರು. ನಗರದ ತುಂಬ ಎಲ್ಲಿ ನೋಡಿದರೂ ಇವೇ ದೃಶ್ಯಗಳು. ಅಪ್ಪಳಿಸಿದ ಸ್ಥಿತಿಯು ಸಹಿಸಲಸಾಧ್ಯವಾಗಿ ಕೆಲವರು ಹಾಗೆಯೇ ಮೂರ್ಛೆ ಹೋದರು. ಮೂರ್ಛೆ ಹೋದವರಿಗೆ ಉಪಚರಿಸುವವರಾರಿದ್ದರು? ಕೆಲವರು ನಂತರ ಎಚ್ಚರಗೊಂಡರು. ಮಿಕ್ಕವರು ಕ್ರಿಮಿಕೀಟಗಳಂತೆ ಸತ್ತರು.

ಮಾಲ್‌ಗಳು, ಬಿಗ್ ಬಜಾರ್‌ಗಳು, ಮಲ್ಟಿಪ್ಲೆಕ್ಸ್‌ಗಳು, ದೊಡ್ಡಾಫೀಸು, ಆಸ್ಪತ್ರೆ, ಐಟಿ ಕಂಪನಿ, ಸ್ಟಾರ್ ಹೋಟೆಲ್ಲುಗಳು ಚಟುವಟಿಕೆಯಿಲ್ಲದೆ ರೋಗಗ್ರಸ್ತರಿಂದ ತುಂಬಿಹೋಗಿ ಗಬ್ಬು ನಾರತೊಡಗಿದವು. ಹೋಟೆಲ್, ಮನೆ, ಆಫೀಸುಗಳ ಕಿಟಕಿ, ಬಾಗಿಲುಗಳಲ್ಲಿ ಅನೇಕ ಪರದೆಗಳು ಗಾಳಿ ಬೆಳಕು ಆಡದಂತೆ ನೇತುಬಿದ್ದಿದ್ದವು.

ಹತ್ತಿರತ್ತಿರ ಒಂದು ಕೋಟಿ ಜನಸಂಖ್ಯೆಯಿದ್ದ ಆ ನಗರ ಅಪರಿಚಿತರಿಂದಲೇ ತುಂಬಿಹೋಗಿತ್ತು. ಅಲ್ಲಿಯ ಭಾಷೆಗಳೆಷ್ಟೋ, ವೃತ್ತಿಗಳೆಷ್ಟೋ, ವೇಷಗಳೆಷ್ಟೋ? ಶಂಕೆ, ಅವಿಶ್ವಾಸ, ಸ್ವಾರ್ಥಗಳೇ ತುಂಬಿ, ಅಂತಃಕರಣವನ್ನು ಹುಡುಕಬೇಕಿತ್ತು. ಮಕ್ಕಳು, ಹಿರಿಯರು, ವೃದ್ಧರೂ ಯಂತ್ರಗಳಂತಾಗಿದ್ದರು. ಹೃದಯ ತಟ್ಟದ ಭಾಷೆಯಲ್ಲಿ ಮಾತನಾಡುತ್ತ, ಶಿಕ್ಷಣ ಪಡೆಯುತ್ತ, ಕಾಸು ಗಿಟ್ಟಿಸುವ ಕಸುಬಿನಲ್ಲಿ ಮುಳುಗಿ, ಮುಟ್ಟಿದರೆ ಮುರಿದುಹೋಗುವಂತ ಕೃತಕ ಜೀವ ನ ಸಾಗಿಸುತ್ತಿದ್ದರು. ಹುಳುಬಿದ್ದ ಆಹಾರವನ್ನು ಅಮೃತವೆಂದು ಘೋಷಿಸುವ ವಿಜ್ಞಾನಿಗಳು, ವೈದ್ಯರು ಅಲ್ಲಿದ್ದರು. ಸುಖ ಮತ್ತು ಸುಖಪಡಲು ಹೇಗಾದರೂ ದುಡ್ಡು ಜೋಡಿಸುವುದು ಅವರ ವೇದಾಂತವಾಗಿತ್ತು. ಹೀಗೆ ಮೇಲ್ಮೈಯಲ್ಲಿ ಜೀವನ ಸಾಗಿಸುತ್ತಿದ್ದ ನಗರವಾಸಿಗಳು ಬೀದಿಗಳಲ್ಲಿ ಬೆನ್ನುಮೇಲಾಗಿರುವ ಜೀರುಂಡೆಯಂತೆ ಬಿದ್ದುಕೊಂಡಿದ್ದರು.

ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆಯೆಂದು ಬೂಸಿಬಿಟ್ಟು ಕಾಸು ಮಾಡಿಕೊಳ್ಳುತ್ತಿದ್ದ ರಾಜಕಾರಣಿಗಳು, ಅಧಿಕಾರಿಗಳು, ವಿಜ್ಞಾನಿಗಳು, ಧರ್ಮಗುರುಗಳು, ಜ್ಯೋತಿಷಿಗಳು ಎಲ್ಲ ಕೊಚ್ಚೆ ಪಾಲಾಗಿದ್ದರು. ರಾತ್ರಿಯಾಯಿತು. ಕೊಚ್ಚೆ ಸಂಪರ್ಕಕ್ಕೆ ಬಂದ ಚರ್ಮ ಮತ್ತು ಮೈ ಎಲ್ಲ ಉರಿಯತೊಡಗಿದವು. ಬಟ್ಟೆ ಬಿಚ್ಚುವಂತಿಲ್ಲ, ಕೆರೆದುಕೊಳ್ಳುವಂತಿಲ್ಲ, ತೊಳೆದುಕೊಳ್ಳುವಂತಿಲ್ಲ.

ತಮ್ಮ ಸ್ಥಿತಿಗೆ ತಾವೇ ಅಸಹ್ಯಪಟ್ಟುಕೊಂಡು ತಮ್ಮ ಗುರುತಾಗದೇ ಇರಲಿ ಎಂದು ಮುಖ ಮುಚ್ಚಿಕೊಂಡು ತಮ್ಮ ತಮ್ಮವರಿಂದಲೇ ದೂರ ದೂರಕ್ಕೆ ತೆವಳಿಹೋಗುತ್ತಿದ್ದ ನಗರವಾಸಿಗಳು ಈಗ ಸಾಯುವ ವೇಳೆಯಲ್ಲಾದರೂ ತಮ್ಮವರೊಟ್ಟಿಗೆ ಇರೋಣವೆಂದುಕೊಂಡು ಅಕ್ಕಪಕ್ಕದ ರಲ್ಲಿ ತಮ್ಮ ಪರಿಚಯ ಮಾಡಿಕೊಳ್ಳತೊಡಗಿದರು. ತಮ್ಮವರನ್ನು ಎಲ್ಲಿಯಾದರೂ ಕಂಡಿದ್ದೀರಾ ಎಂದು ಪ್ರಶ್ನಿಸ ತೊಡಗಿದರು. ತಮ್ಮವರ್‍ಯಾರೂ ಸಿಗದಿದ್ದಾಗ ಅಕ್ಕಪಕ್ಕದವರನ್ನೇ ಒಡಹುಟ್ಟಿದವರಂತೆ ಕಾಣತೊಡಗಿದರು. ಬೆಳಗಿನಿಂದಲೂ ಇದೇ ಸ್ಥಿತಿಯಲ್ಲಿದ್ದು ಶಕ್ತಿಹೀನರಾಗಿದ್ದರು.

ಈ ದರಿದ್ರ ಬಟ್ಟೆಗಳು ಎಲ್ಲಿಂದ ಹಾರಿ ಬರುತ್ತಿವೆ? ಇದರಿಂದ ತಪ್ಪಿಸಿಕೊಳ್ಳಲು ಮಾರ್ಗೋಪಾಯವೇನಿರಬಹುದೆಂದು ವ್ಯಸನಕ್ಕೆ ಬಿದ್ದ ಕೆಲವರು ಬುದ್ಧಿಭ್ರಮಣೆಗೊಳಗಾಗಿದ್ದರು.

ನೂರಾರು ಹಳ್ಳಿಗಳನ್ನು ನುಂಗಿ ನೊಣೆದು ಸಾವಿರಾರು ಚದರ ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿ ಹಬ್ಬಿ ನಿಂತಿತ್ತು ಆ ರಾಕ್ಷಸ ನಗರ. ಆ ಹಳ್ಳಿಗಳು ತಮ್ಮ ವೇಷ, ಭಾಷೆ, ಆಚಾರ, ವಿಚಾರದ ಎಲ್ಲ ಚಹರೆಗಳನ್ನು ಕಳೆದುಕೊಂಡು ನಗರದಂತೆಯೇ ಆಗಿದ್ದವು. ಸುಲಭಕ್ಕೆ ಮೋಸ ಮಾಡಬಹುದಾಗಿದ್ದ ಇಂತಹ ಹಳ್ಳಿಗಾಡಿನ ಮುಗ್ಧರ ಜಮೀನುಗಳನ್ನು ಕೋಟ್ಯಧಿಪತಿಗಳು ಖರೀದಿಸಿದ್ದರು. ಜಮೀನು ಕೊಡದವರನ್ನು ಹೆದರಿಸಿ ಅಥವಾ ಆಮಿಷವೊಡ್ಡಿಕೊಂಡು ಅಲ್ಲೊಂದು ಏಷ್ಯಾ ಖಂಡಕ್ಕೇ ದೊಡ್ಡದಾದ ಸಿದ್ಧ ಉಡುಪುಗಳ ಫ್ಯಾಕ್ಟರಿಯನ್ನು ಪ್ರಾರಂಭಿಸಿದ್ದರು. ಅಲ್ಲಿ ಉತ್ಪಾದಿಸುವ ವಸ್ತುಗಳನ್ನೇ ಖರೀದಿಸಿ ಉಪಯೋಗಿಸುವಂತೆ ಸುಳ್ಳುಗಳ ಪ್ರಚಾರ ಮಾಡಲು ಅನೇಕ ದೂರದರ್ಶನ ವಾಹಿನಿಗಳನ್ನು, ಪತ್ರಿಕೆಗಳನ್ನು ಹುಟ್ಟುಹಾಕಿದ್ದರು. ಈ ಸಮೂಹ ಮಾಧ್ಯಮದವರು ಬರೀ ಸುಳ್ಳುಗಳನ್ನೇ ಉಸಿರಾಡುತ್ತ, ಎಲ್ಲ ಕಡೆ ಸುಳ್ಳುಗಳನ್ನೇ ಬಿತ್ತಿ ಬೆಳೆದಿದ್ದರು. ಹೀಗಾಗಿ ನಗರದ ಬದುಕೇ ಸುಳ್ಳುಗಳ ಮೇಲೆ. ವಿದ್ಯೆ ವಿದ್ಯೆಯಾಗಿರಲಿಲ್ಲ. ಆಹಾರ ಆಹಾರವಾಗಿರಲಿಲ್ಲ. ಅವರು ಬಳಸುತ್ತಿದ್ದ ನೀರು ಗಾಳಿಗಳು ಸಹ ನೀರು ಗಾಳಿಗಳಾಗಿರಲಿಲ್ಲ.

ಅದೊಂದು ಮುಖ್ಯ ರಸ್ತೆ. ಅನೇಕ ಬಟ್ಟೆಮೂಟೆಗಳು ಅದರ ಮೇಲೆ ಗುರಿ ಉದ್ದೇಶವಿಲ್ಲದೆ ತೆವಳುತ್ತಿದ್ದವು. ಅವರ ಚಲನೆ ನಿಧಾನವಾಗಿತ್ತು. ಕೆಲವರು ಶೂನ್ಯದಲ್ಲಿ ದೃಷ್ಟಿ ನೆಟ್ಟು ಕಣ್ಣೀರು ಹಾಕುತ್ತಿದ್ದರು.
ಉರುಳುತ್ತಿದ್ದ ಅನೇಕ ಬಟ್ಟೆಮೂಟೆಗಳಲ್ಲಿ ಕೆಲವು ಮೂಟೆಗಳು ಒಂದು ಕಡೆ ಬಂದು ನಿಂತವು.

ಒಂದು ಮೂಟೆ : ಇದೇ ಬೋಟಿ ಸಿದ್ಧ ಉಡುಪುಗಳ ಕಂಪನಿ ನೋಡ್ಲ. ಇಲ್ಲಿ ಸಿಗ್ದೇ ಇರೋ ಬಟ್ಟೆ ಇಲ್ಲ, ಡ್ರೆಸ್ ಇಲ್ಲ. ಏಷ್ಯಾಕ್ಕೇ ದೊಡ್ದು.
ಇನ್ನೊಂದು ಮೂಟೆ : ಬ್ರ್ಯಾಂಡೆಡ್ ಏನ್ಲ?
ಒಂದು ಮೂಟೆ : ಊಂ ಮತ್ತೆ. ಬ್ರ್ಯಾಂಡೆಡ್ ಅಲ್ಲಾಂದ್ರೆ ಯಾರೂ ದುಡ್ಡು ಬಿಚ್ಚಾಕಿಲ್ಲ ನಮ್ಮ ಸಿಟಿಯೋರು.
ಮಗದೊಂದು ಮೂಟೆ : ಈಗೀಗ ಎಲ್ಲಾ ಬ್ರ್ಯಾಂಡೆಡ್. ಉಪ್ಪು, ಅರಿಶಿನಪುಡಿ, ಹುಣಸೇಹಣ್ಣು, ಪುಟಗೋಸಿ, ನಿರೋಧ್ ಪ್ರತಿಯೊಂದೂ. ಅವನಮ್ಮನ್.
ಒಂದು ಮೂಟೆ:  ಇವರ ದೇವ್ರೂ ಬ್ರ್ಯಾಂಡೆಡ್ಡೇ ಕಣ್ಲ.
ಮತ್ತಿನ್ನೊಂದು ಮೂಟೆ : ಊಂ ಕಣ್ಲ. ದೊಡ್‌ದೊಡ್ಡ ಸಿಟ್ಯಾಗೆಲ್ಲ ಕೋಟ್ಯಧೀಶ್ವರರು ಕಟ್ಟಿಸಿರ ಅಮೃತಶಿಲೆ ದೇವಸ್ಥಾನ ಇದಾವಲ್ಲ ಅವೇ ಬ್ರ್ಯಾಂಡೆಡ್ ದೇವಸ್ಥಾನ, ದೇವ್ರು. ಅಲ್ಲಿಗೆಲ್ಲ ಕೋಟಿಗಟ್ಲೆ ದಾನ ಧರ್ಮ ಕೊಡ್ತರೆ. ನಮ್ಮೂರಿನ ಮಾರಮ್ಮ ಮಂಚಮ್ಮರಿಗೆಲ್ಲ ಈ ಸೌಕಾರ್ರು ನಾಕಾಣಿ ಊದುಬತ್ತಿ ಹಚ್ಚಲ್ಲ, ನಾಕಾಣಿ ದಕ್ಷಿಣೆ ಕೊಡಲ್ಲ ಮಕ್ಳು.

ಕೇವಲ ಮೂರು ವರ್ಷದ ಹಿಂದೆ ಅಲ್ಲೊಂದು ಗ್ರಾಮವಿತ್ತು. ಈ ರೀತಿ ಮಾತನಾಡುತ್ತಾ ಸಾಗಿದವರು ಆ ಗ್ರಾಮಸ್ಥರೇ ಆಗಿದ್ದರು. ಅವರೆಲ್ಲರೂ ಆಸೆ, ಆಮಿಷ, ಹೆದರಿಕೆಗಳಿಗೆ ಈಡಾಗಿ ಹೊಲಗಳನ್ನು, ಮನೆ ಮಠಗಳನ್ನು ಫ್ಯಾಕ್ಟರಿಗೆ ಬರೆದುಕೊಟ್ಟಿದ್ದರು. ಗ್ರಾಮದ ಗಂಡು ಸಂತತಿ ನಗರದ ಆಕರ್ಷಣೆಗೆ ಈಡಾಗಿ ಹಾಳಾಯ್ತು, ಹೆಣ್ಣು ಸಂತತಿ ಬೀದಿ ವೇಶ್ಯೆಯರಾದರು. ಗ್ರಾಮ ದೇವತೆಯ ದೇವಸ್ಥಾನ ಇದ್ದ ಕಡೆ ಫ್ಯಾಕ್ಟರಿಯವರು ಸಾಲು ಶೌಚಾಲಯ ಕಟ್ಟಿಸಿದ್ದು ಊರವರಿಗೆ ಬೆಂಕಿ ಬಿದ್ದಂತಾಗಿತ್ತು.

ಗ್ರಾಮಸ್ಥರಿಗೆಲ್ಲ ನೌಕರಿ ಕೊಡುವ ಭರವಸೆ ನೀಡಿದ್ದ ಫ್ಯಾಕ್ಟರಿ ಅವರೆಲ್ಲರಿಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಟ್ಟಿತ್ತು. ತಮ್ಮೆದುರು ಓಡಾಡುವ ಎಲ್ಲರಿಗೂ ನೆಲ ಅದುರುವಂತೆ ಬೂಟುಗಾಲನ್ನು ನೆಲಕ್ಕೆ ಕುಕ್ಕಿ ಸಲ್ಯೂಟ್ ಹೊಡೆಯುವ ದೈನೇಸಿ ಕೆಲಸವಾಗಿತ್ತದು. ಅವರಿಗೆಲ್ಲರಿಗೂ ಒಂದೆರಡು ಇಂಗ್ಲಿಷ್ ಶಬ್ದಗಳನ್ನೂ ಕಲಿಸಿದ್ದರು. ಹಗಲು ರಾತ್ರಿ ಹಂಗಿಲ್ಲದೆ ಗಾರ್ಡ್‌ಗಳ ಬಾಯಿಂದ ಸದಾ ‘ಗುಡ್ ಮೌರ್ನಿಂಗ್ ಸರ್’.

ಈ ಮಾಜಿ ರೈತರು ಮತ್ತು ಹಾಲಿ ಗಾರ್ಡ್‌ಗಳ ಗುಂಪು ಇದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಒಂದು ಬಟ್ಟೆಯ ಬೆಟ್ಟ ಬಿದ್ದಿತ್ತು. ಆ ಬಟ್ಟೆಯೊಳಗಿದ್ದ ವ್ಯಕ್ತಿ ಸತ್ತಿದ್ದನೋ, ಮೂರ್ಛೆ ಹೋಗಿದ್ದನೋ ಗೊತ್ತಿಲ್ಲ. ಆ ಬೆಟ್ಟದಡಿಯ ವ್ಯಕ್ತಿ ಎರಡೂ ಕೈಗಳನ್ನೂರಿ ಎದ್ದು ಕೂತಿತು. ತೆವಳುತ್ತಾ ಮುಂದುವರಿಯುತ್ತಿದ್ದ ಗುಂಪನ್ನುದ್ದೇಶಿಸಿ ‘ಲೈ ಪಾಪ್ರುಗುಳ, ಎತ್ತೋದಿರೋ ಮುಂಡೇವ, ನಿಮ್ಮ ರಕ್ತ ಬೆವರು ಎಲ್ಲ ಬಸಿದು ಕುಡ್ದು ಫ್ಯಾಕ್ಟರಿ ಮಾಡ್ಕಂಡಿರೋ ಈ ಮಿಂಡ್ರಿಗಳ ಬಟ್ಟೆ ಮಿಲ್ಲು ಪೂರ್ತಿಯಾಗಿ ನಾಶವಾಗ್ದೆ ನಿಮ್ಮ ಕಷ್ಟಗಳು ಬಗೆಹರಿಯಾಕುಲ್ಲ. ಈ ಊರಿನಲ್ಲಿರೋ ಒಂದು ಕೋಟಿ ಜನಕ್ಕೆ ನೂರಾರು ಕೋಟಿ ಬಟ್ಟೆ ರೆಡಿ ಮಾಡಿ ಮಾರಕ್ಕೆ ಕೂತವ್ರಲ್ಲ ?ಬ್ರ್ಯಾಂಡೆಡ್ ಬಟ್ಟೆ, ಬ್ರ್ಯಾಂಡೆಡ್ ದೇವ್ರು ಅಂತ ಅಲ್ವೇನ್ಲ ನೀವೇಳಿದ್ದು? ಸಿಟೀಲಿರೋ ಈ ಖತರ್‌ನಾಕ್‌ಗಳು ಕಟ್ಟಿಸಿರೋ ಬ್ರ್ಯಾಂಡೆಡ್ ದೇವಸ್ಥಾನ, ದೇವ್ರು ನಮ್ಗೆ ಬ್ಯಾಡ. ನಮ್ಮ ಗ್ರಾಮದೇವತೇನೇ ಸಾಕು. ಪರಸ್ಥಳದ ಆನೆಗಿಂತ ನಮ್ಮೂರಿನ ಇರುವೆ ದೊಡ್ದು ಕಣ್ಲ. ಇಷ್ಟು ಹೇಳಿದ ಯಜಮಾನ ಜೀವಾಳಯ್ಯ. ಈ ಹಳ್ಳಿ ಸಿಟಿ ಹೊಟ್ಟೆ ಒಳಕ್ಕೆ ಸೇರಿ ಜೀರ್ಣ ಆಗೋಕ್ ಮುಂಚೆ ಜೀವಾಳಯ್ಯ ಸುತ್ತ ಹತ್ತು ಹಳ್ಳಿಗೆ ಬುದ್ಧಿವಾದ ಹೇಳ್ಕಂಡಿದ್ದ. ಜೀವಾಳಯ್ಯನ ಮಾತು ನಿಜ ಇರಬೇಕು ಅನ್ನುಸ್ತು ರೈತರಿಗೆ. ಜೀವಾಳಯ್ಯನಿಗೆ ಹಣ್ಣು ನೀರು ತಂದುಕೊಡೋಕೆ ಗುಂಪು ಅಸಮರ್ಥವಾಗಿತ್ತು. ಸರಳವಾಗಿ, ಘನವಾಗಿ ಬದುಕ್ರಲೇ ಎಂದು ಕೂಗಿ ನೆಲಕ್ಕೊರಗಿದ ಜೀವಾಳಯ್ಯ.

ರಾತ್ರಿ ಹತ್ತು ಗಂಟೆ. ಕಣ್ಣು ಹರಿದ ಕಡೆಯೆಲ್ಲ ಉರುಳಿಕೊಂಡಿದ್ದ ಜನ. ಊಳಿಡುತ್ತಿರುವವರೆಷ್ಟೋ, ನಿಶ್ಚಲವಾಗಿರುವವರಲ್ಲಿ ಮೂರ್ಛೆ ಹೋಗಿರುವವರೆಷ್ಟೋ, ಸತ್ತು ಹೋಗಿರುವವರೆಷ್ಟೋ? ಜೀವಾಳಯ್ಯ ಹೇಳಿದ್ದ ಫ್ಯಾಕ್ಟರಿ ದೂರದಲ್ಲಿ ಕಾಣುತ್ತಿತ್ತು. ಸಾವಿರಾರು ಎಕರೆ ಜಾಗದಲ್ಲಿ ಹಬ್ಬಿ ನಿಂತಿದ್ದ ಫ್ಯಾಕ್ಟರಿಯ ಸುತ್ತ ಕೋಟೆಯಂಥ ಗೋಡೆಯಿತ್ತು. ಅದು ಇಂಡಿಯಾದ ಎಲ್ಲ ನಗರಗಳಿಗಷ್ಟೇ ಅಲ್ಲ ಹೊರದೇಶಗಳಿಗೂ ಉಡುಪುಗಳ ರಫ್ತು ಮಾಡುತ್ತಿತ್ತು. ಸಾವಿರಾರು ಕೋಟಿ ವ್ಯವಹಾರವಿತ್ತು. ವಿಸ್ತಾರವಾಗಿದ್ದ ಆ ಆವರಣದಲ್ಲಿ ನೂರಾರು ಕಟ್ಟಡಗಳು ಇಂದು ಆದ ವಿಸ್ಮಯಕಾರಿ ಘಟನೆಯಿಂದ ಹೆದರಿ ಬಾಗಿಲುಗಳನ್ನು ಹಾಕದೆ ಅಥವಾ ಹಾಕಲಾಗದೆ ಜನ ಜಾಗ ಖಾಲಿ ಮಾಡಿದ್ದರು. ಬೆರಳೆಣಿಕೆಯಷ್ಟು ಕೆಲಸಗಾರರು ಮಾತ್ರ ಅಲ್ಲಲ್ಲಿ ಉರುಳಿಕೊಂಡಿದ್ದರು. ಬೆಳಿಗ್ಗೆಯಿಂದ ಉಪವಾಸವಿದ್ದ ಕಾರಣ ಅಲ್ಲಾಡದೆ ಬಿದ್ದಿದ್ದರು.

ಫ್ಯಾಕ್ಟರಿಯ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ವಾಹನಗಳಲ್ಲಿ ಹೋಗಬೇಕಿತ್ತು. ಕೋಟೆಯಂತಹ ಆವರಣದೊಳಗೆ ಆಮದು , ರಫ್ತು, ಕಾಜಾ , ಗುಂಡಿ ಹಾಕುವ, ಕಾಲರ್ ಹೊಲಿಯುವ ವಿಭಾಗ, ಜೇಬು ಹೊಲಿಯುವ, ತೋಳು ಹೊಲಿಯುವ, ಇಸ್ತ್ರಿ ಮಾಡುವ , ಪ್ಯಾಕಿಂಗ್ ವಿಭಾಗ, ಗೋಡೌನ್, ಆಡಳಿತ ವಿಭಾಗ, ರಾಸಾಯನಿಕ, ಬಣ್ಣ ಹಾಕುವ ವಿಭಾಗ, ಡಿಸೈನಿಂಗ್ ವಿಭಾಗ ಮುಂತಾಗಿ ನೂರಾರು ವಿಭಾಗಗಳಿದ್ದವು. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಜೀವನವಿಡೀ ಗುಂಡಿ ಹಾಕುತ್ತಲೋ, ಕಾಜಾ ಮಾಡುತ್ತಲೋ, ಕಾಲರು ಅಥವಾ ಜೇಬು ಅಥವಾ ಜಿಪ್ಪು ಹಾಕುವ ಯಂತ್ರಗಳಾಗಿದ್ದರು.

ಜೀವಾಳಯ್ಯನಿಂದ ಮಾತು ಹೊತ್ತು ತಂದಿದ್ದವರು ಗಡಿಬಿಡಿ ಮಾಡಿಕೊಳ್ಳದೆ ಸಾವಧಾನದಿಂದ ಮೌನವಾಗಿ ತಮ್ಮ ನೂರಾರು ಜೇಬುಗಳ ತಡಕಾಡಿ ಬೆಂಕಿಪೊಟ್ಟಣವನ್ನು ತಲಾಶ್ ಮಾಡಿ ಬೆಂಕಿ ಕೊಟ್ಟ ಕೂಡಲೇ ಅಲ್ಲಿದ್ದ ರಾಸಾಯನಿಕಗಳು, ಲಾರಿ, ಬಸ್ಸು, ಜೀಪು, ಕಾರುಗಳು, ಬಟ್ಟೆ, ಸಿದ್ಧ ಉಡುಪುಗಳು, ಪ್ಲಾಸ್ಟಿಕ್ ಪ್ಯಾಕಿಂಗ್ ಹೊತ್ತಿ ಉರಿಯತೊಡಗಿದವು. ಬೆಂಕಿಯೆಂಬುದು ತನ್ನ ವಿರಾಟ್ ಸ್ವರೂಪವನ್ನು ಪ್ರದರ್ಶಿಸುತ್ತ ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುತ್ತ ಪೆಟ್ರೋಲ್ ಬಂಕುಗಳನ್ನು, ನೂರಾರು ಗ್ಯಾಸ್ ಸಿಲಿಂಡರ್‌ಗಳನ್ನು ಆಸ್ಫೋಟಿಸುತ್ತ ಫ್ಯಾಕ್ಟರಿಯಿದ್ದ ನೂರಾರು ಕಿಲೋಮೀಟರ್ ಪ್ರದೇಶವನ್ನು ಅಗ್ನಿಗೋಲವನ್ನಾಗಿಸಿತು. ಬೀಸುತ್ತಿದ್ದ ಗಾಳಿಯು ತಿದಿಯೊತ್ತಿದಂತಾಗಿ ನೂರಾರು ಕಟ್ಟಡಗಳು ನೂರಾರು ಕುಲುಮೆಗಳಾದವು. ಫ್ಯಾಕ್ಟರಿಗೆ ಸಾಮಾನು ಹೊತ್ತು ತಂದಿದ್ದ ಗೂಡ್ಸ್ ರೈಲೊಂದರ ಡಬ್ಬಿಗಳು ಗುರುತು ಸಿಗದಂತೆ ಸುಟ್ಟವು. ಅವುಗಳ ಬೂದಿಯೇ ಹಲವಾರು ಬೆಟ್ಟಗಳಷ್ಟಿತ್ತು.

ನೂರಾರು ಅಡಿ ಎತ್ತರಕ್ಕೆಗರಿ ಗಿರಿಗಿರಿ ಸುತ್ತುತ್ತ ಆರ್ಭಟಿಸುತ್ತಿದ್ದ ಬೆಂಕಿಯ ಆರಿಸಲು ಯಾರಿದ್ದರಲ್ಲಿ-ಎಲ್ಲರೂ ಕೊಚ್ಚೆ ವಾಂತಿಗಳಲ್ಲಿ ಹೊರಳಾಡುತ್ತಿದ್ದಾಗ. ಇಷ್ಟೇ ಸಾಲದೆಂಬಂತೆ ನಗರದೊಳಗಿದ್ದ ಎಲ್ಲ ಮಾಲುಗಳ, ದೊಡ್ಡ ಬಜಾರುಗಳ ಬಟ್ಟೆ ಅಂಗಡಿಗಳ ಬಟ್ಟೆ ಮತ್ತು ಸಿದ್ಧ ಉಡುಪುಗಳು ಸಹ ಹಾರುತ್ತ ಬಂದು ಇದೇ ಬೆಂಕಿಗೆ ಆಹುತಿಯಾದವು.

ಬೆಳಗಿನ ಜಾವಕ್ಕೆ ನಿಧಾನಕ್ಕೆ ಹನಿಯತೊಡಗಿತು. ಬೀದಿಪಾಲಾಗಿದ್ದ ನಗರವಾಸಿಗಳಿಗೆಲ್ಲ ಬೆಳಗಿನ ಜಾವ ಶೌಚಕ್ಕೆ ಒತ್ತಡ ಪ್ರಾರಂಭವಾಯಿತು. ಹಿಂದಿನ ದಿನದ ನರಕದ ಅನುಭವವಾಗಿದ್ದ ಅವರಲ್ಲಿ ಕೆಲವರು ಮಳೆ ಶುರುವಾದ ಕೂಡಲೆ ಬಟ್ಟೆ ಬಿಚ್ಚಿದರು. ಆಶ್ಚರ್ಯ! ಹೊಸ ಬಟ್ಟೆಯೇನೂ ಸುತ್ತಿಕೊಳ್ಳಲಿಲ್ಲ. ಬಿಚ್ಚಿ ಬಿಸಾಕಿದ ಬಟ್ಟೆಗಳು ಫ್ಯಾಕ್ಟರಿಯ ಬೆಂಕಿ ಕಡೆಗೆ ಹಾರಿದವು. ಜನ ಬಟ್ಟೆಗಳನ್ನೊಂದೊಂದೆ ಕಿತ್ತೆಸೆದು ಬೆತ್ತಲಾದರು. ಮಳೆ ಜೋರಾಯಿತು. ಸುರಿವ ಮಳೆಯಲ್ಲಿ ನಗರವಾಸಿಗಳು ಹತ್ತಿದ್ದ ಗಲೀಜೆಲ್ಲ ಕಿತ್ತುಹೋಗುವಂತೆ ಕುಣಿಯತೊಡಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.