ADVERTISEMENT

ಬದುಕಿನ ಓಟದಲ್ಲಿ ನುಡಿ ಸಾಕ್ಷಾತ್ಕಾರ

ವಿಕ್ರಂ ಹತ್ವಾರ
Published 20 ಫೆಬ್ರುವರಿ 2016, 19:40 IST
Last Updated 20 ಫೆಬ್ರುವರಿ 2016, 19:40 IST
ಬೆಂಗಳೂರಿನ ವಯ್ಯಾಲಿಕಾವಲ್‌ನ ‘ಬಯಲು ಶಾಲೆ’ಯ ಈ ಚಿತ್ರ 1975ರದ್ದು. ಐದು ದಶಕಗಳ ನಂತರವೂ ಪ್ರಸ್ತುತ ಎನ್ನುವಂತಿರುವ ಈ ಚಿತ್ರ ಪ್ರಾಥಮಿಕ ಶಿಕ್ಷಣದ ದುರವಸ್ಥೆಯ ರೂಪಕದಂತಿದೆ.  -ಚಿತ್ರ: ಪ್ರಜಾವಾಣಿ ಆರ್ಕೈವ್ಸ್‌ / ಟಿ.ಎಲ್. ರಾಮಸ್ವಾಮಿ
ಬೆಂಗಳೂರಿನ ವಯ್ಯಾಲಿಕಾವಲ್‌ನ ‘ಬಯಲು ಶಾಲೆ’ಯ ಈ ಚಿತ್ರ 1975ರದ್ದು. ಐದು ದಶಕಗಳ ನಂತರವೂ ಪ್ರಸ್ತುತ ಎನ್ನುವಂತಿರುವ ಈ ಚಿತ್ರ ಪ್ರಾಥಮಿಕ ಶಿಕ್ಷಣದ ದುರವಸ್ಥೆಯ ರೂಪಕದಂತಿದೆ. -ಚಿತ್ರ: ಪ್ರಜಾವಾಣಿ ಆರ್ಕೈವ್ಸ್‌ / ಟಿ.ಎಲ್. ರಾಮಸ್ವಾಮಿ   

ಮನುಷ್ಯ ಭಾಷೆಯನ್ನು ಆಯ್ದುಕೊಳ್ಳುತ್ತಾನೋ ಅಥವಾ ಭಾಷೆಯೇ ಮನುಷ್ಯನನ್ನು ಆಯ್ದುಕೊಳ್ಳುತ್ತದೆಯೋ? ಒಂದಂತೂ ನಿಜ, ಬದುಕಿನ ಭಾಗವಾಗದ ಹೊರತು ಯಾವ ಭಾಷೆಯೂ ನಮ್ಮದಾಗುವುದಿಲ್ಲ. ನೀರು ಗಾಳಿ ಬಿಸಿಲಿಗೆ ತಕ್ಕಂತೆ ನಮಗೇ ಗೊತ್ತಿಲ್ಲದಂತೆ ನಮ್ಮ ದೇಹದ ಚರ್ಮದ ಬಣ್ಣ ಬದಲಾಗುವಂತೆ ಅಸ್ತಿತ್ವದ ಅನಿವಾರ್ಯತೆಗೆ ತಕ್ಕಂತೆ ಭಾಷೆಯ ಮಾತಿನ ಲಯಕ್ಕೆ ಮನುಷ್ಯ ಹೊಂದಿಕೊಳ್ಳುತ್ತಾನೆ.

ನುಡಿ ಯಾವತ್ತೂ ಲೋಕಕ್ಕೆ ತಾಗಿಕೊಂಡಿರೋದಿಲ್ಲ
ಬಾಗಿಕೊಂಡಿರುತ್ತದೆ

–ಕೆ.ವಿ. ತಿರುಮಲೇಶ್

ಭಾಷೆಯ ಅವತಾರಗಳು ಎರಡು: ಮಾತು ಮತ್ತು ನುಡಿ. ದಿನನಿತ್ಯದ ಸಂವಹನ, ಚರ್ಚೆ, ವಾಗ್ವಾದ, ಸಂವಾದ, ಚಿಂತನೆ, ಭಾಷಣಗಳು ಮಾತಿನ ಸ್ವರೂಪಗಳಲ್ಲಿ ಸೇರಿಕೊಂಡಿವೆ. ಕಾವ್ಯ ಮತ್ತು ಮಂತ್ರಗಳು ಅಥವಾ ಇವುಗಳ ಹಾಗೆ ತನಗೆ ತಾನೇ ಆಡಿಕೊಂಡಂತೆ ಇರುವ ಮಾತಿನ ಸ್ವರೂಪಗಳೂ ನುಡಿಯ ಚಾವಡಿಯಲ್ಲಿದೆ. ಮಾತಿಗೆ ವ್ಯಾವಹಾರಿಕ ಅನಿವಾರ್ಯತೆಯು ಪ್ರೇರಣೆಯಾದರೆ, ನುಡಿಗೆ ಸ್ಫುರಣೆ ಹಾಗೂ ದರ್ಶನದ ಉನ್ಮಾದ. ಮಾತಿಗೆ ಲೋಕವನ್ನು ಮಣಿಸುವ ಹುನ್ನಾರ ಹವಣಿಕೆಗಳಿರುತ್ತದೆ. ನುಡಿಗೆ ತಾನು ಮಣಿದಿರುವ ಭಾವ.

ಮಾತು ಮತ್ತು ನುಡಿಗಳರೆಡನ್ನೂ ಜೋಡಿಸಿ ಗ್ರಹಿಸುವ ಒಂದು ಪದ್ಧತಿ ದಕ್ಷಿಣ ಕನ್ನಡದಲ್ಲಿದೆ. ಅಲ್ಲಿನ ನಾಗ–ದೈವಗಳ ದರ್ಶನದಲ್ಲಿ ಪಾತ್ರಿಯು ಕೊಡುವ ಉತ್ತರಕ್ಕೆ ‘ನುಡಿ ಕೊಡುವುದು’ ಎನ್ನುತ್ತಾರೆ. ‘ಸ್ವರಸೇವೆ’ಯ ನಾದದ ಸ್ಫುರಣೆಯಲ್ಲಿ ಒದಗಿ ಬರುವ ಮಾತು ನುಡಿಯಾಗುತ್ತದೆ. ಅದನ್ನು ಜನರು ಸತ್ಯವಾಕ್ಯವೆಂದು ನಂಬುತ್ತಾರೆ. ಅಷ್ಟೇ ಅಲ್ಲದೆ, ಹಾಗೆ ಬಂದ ಉತ್ತರವನ್ನು ಕಾಲಾಂತರದಲ್ಲಿ ಅಲ್ಲಗಳೆಯುವ ದಾರಿಯೂ ಇದೆ! ‘ನುಡಿ ಸರಿಯಾಗಲಿಲ್ಲ’ ಅಥವಾ ‘ಸರಿ ನುಡಿ ಬರಲಿಲ್ಲ’ ಎಂದು ಜನರು ಪಾತ್ರಿಯ ಮಾತನ್ನೇ ಕೆಡವಿ ಹಾಕುತ್ತಾರೆ! ದೈವದ ಮೇಲಿನ ನಂಬಿಕೆ ಮುಂದುವರೆಯುತ್ತದೆ!

‘ಮಾತಿಗೆ ತಪ್ಪಬಾರದು’, ‘ಮಾತು ಬಿಡದ ಅಣ್ಣಪ್ಪ’, ‘ಮಾತೆಂಬುದು ಜ್ಯೋತಿರ್ಲಿಂಗ’, ‘ಮಾತಿನ ಮಲ್ಲ’, ‘ಉತ್ತಮ ವಾಗ್ಮಿ’, ‘ಅವನದ್ದು ಬರೀ ಮಾತು’.... ಹೀಗೆ ಜನಮಾನಸದಲ್ಲಿ ಭಾಷೆ ಎನ್ನುವುದು ಮಾತು ಮತ್ತು ನುಡಿಯ ಮಧ್ಯದಲ್ಲಿ ತುಯ್ಯುತ್ತಲೇ ಇರುತ್ತದೆ. ಅಂಥ ಭಾಷೆಯು ಮನುಷ್ಯನ ಸಂಪರ್ಕಕ್ಕೆ ಬಂದು ಅದು ಅವನ ಅಸ್ತಿತ್ವದ ಭಾಗವಾಗುವುದು ಹೇಗೆ? ತನ್ನೆಲ್ಲ ಸಂವಹನಕ್ಕೂ ಯಾವುದೋ ಒಂದು ಭಾಷೆಯ ಅಗತ್ಯವಿದ್ದರೆ ಸಾಕೇ ಅಥವಾ ಬೇರೆ ಬೇರೆ ಭಾಷೆಗಳ ಅಗತ್ಯವಿದೆಯೇ? ತನ್ನ ಸಂವಹನಕ್ಕೆ ತಕ್ಕುದಾದ ಭಾಷೆಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಮನುಷ್ಯನಿಗಿದೆಯೇ? ಇನ್ನೂ ಸ್ಪಷ್ಟವಾಗಿ ಕೇಳಬೇಕೆಂದರೆ– ಹತ್ತಾರು ಭಾಷೆಗಳಿರುವ ತನ್ನ ಪರಿಸರದಲ್ಲಿ ಮನುಷ್ಯ ಯಾವ ಭಾಷೆಯನ್ನು ಯಾಕೆ ಮತ್ತು ಹೇಗೆ ಕಲಿಯುತ್ತಾನೆ?

ಮೊದಲಿಗೆ ಭಾಷೆಯೊಂದನ್ನು ತನ್ನ ಮಾತಾಗಿಸಿಕೊಳ್ಳುವ ಸ್ವಾತಂತ್ರ್ಯ ಮನುಷ್ಯನಿಗಿರುವುದಿಲ್ಲ. ಮಾತೃಭಾಷೆಯಲ್ಲಿಯೇ ಮಾತನ್ನು ಮೊದಲು ಕಲಿಯಬೇಕಿರುವುದು ಅನಿವಾರ್ಯ. ನಮ್ಮ ಭಾಷಾ ವ್ಯವಹಾರವನ್ನೇ ಅವಲೋಕಿಸಿದರೆ, ಹಿಂದೆ ನಾವೇ ಬಳಸುತ್ತಿದ್ದ ಎಷ್ಟೋ ಪದಗಳನ್ನು ಈಗ ಬಳಸುತ್ತಲೇ ಇಲ್ಲವಲ್ಲ ಅನ್ನುವುದನ್ನು ಕಂಡು ಆಶ್ಚರ್ಯವಾಗುತ್ತದೆ. ಅಂದರೆ ನಮ್ಮ ಮಾತೃಭಾಷೆಯ ಒಳಗೂ ನಮಗೇ ತಿಳಿಯದಂತೆ ನಾವು ನಿತ್ಯವೂ ಪರಿವರ್ತನೆಗೆ ಒಳಗಾಗುತ್ತಲೇ ಇರುತ್ತೇವೆ.

ಬೆಳೆಯುತ್ತ ಬೆಳೆಯುತ್ತ ನಾಲ್ಕಾರು ಭಾಷೆಗಳ ವಿನಿಯೋಗ ಕಂಡುಬರುತ್ತದೆ. ಈ ಹಂತದಲ್ಲೂ ಯಾವ ಭಾಷೆಯನ್ನು ತಾನು ಕಲಿತರೆ ಒಳಿತು ಎಂದು ಆಯ್ದುಕೊಂಡು ಕಲಿತ ಮಾತ್ರಕ್ಕೆ ಆ ಭಾಷೆ ಒಲಿಯುವುದಿಲ್ಲ. ನಾನು ಮೊದಲಿನಿಂದಲೂ ಇಂಗ್ಲಿಷ್ ಮೀಡಿಯಮ್ಮಿನಲ್ಲೇ ಕಲಿತಿದ್ದರೂ, ಇಂಜಿನಿಯರಿಂಗ್ ಕಾಲೇಜು ಸೇರುವವರೆಗು ಅಂದರೆ ಸುಮಾರು ಹತ್ತು–ಹನ್ನೆರಡು ವರ್ಷಗಳಷ್ಟು ಕಾಲ ನನಗೆ ಇಂಗ್ಲಿಷ್‌ನಲ್ಲಿ ಮಾತಾಡುವಾಗ ಪೂರ್ತಿ ಧೈರ್ಯವಿರಲಿಲ್ಲ. ಒಂದು ಬಗೆಯ ಹಿಂಜರಿಕೆ ಇದ್ದೇ ಇತ್ತು. ಯಾಕೆಂದರೆ ನಮ್ಮ ಶಾಲೆಯಲ್ಲಿ ಕಲಿಯುವುದಕ್ಕೆ ಮಾತ್ರ ಇಂಗ್ಲಿಷನ್ನು ಉಪಯೋಗಿಸುತ್ತಿದ್ದೆವು. ಮಿಕ್ಕಂತೆ ಸ್ನೇಹಿತರೊಂದಿಗೆ ಟೀಚರುಗಳೊಂದಿಗೆ ಕನ್ನಡ–ತಮಿಳಿನಲ್ಲೇ ಮಾತಾಡುತ್ತಿದ್ದೆವು.

ಹಾಗೆ ನೋಡಿದರೆ, ನಾನು ಕ್ರಿಕೆಟ್ ಕಾಮೆಂಟರಿ ಕೇಳುತ್ತ ಕಲಿತಷ್ಟು ಇಂಗ್ಲಿಷನ್ನೂ ಸಹ ಶಾಲೆಯಿಂದ ಕಲಿಯಲಿಲ್ಲ. ಆದ್ದರಿಂದ ಇಂಗ್ಲಿಷ್ ಮೀಡಿಯಮ್ಮಿನಲ್ಲಿ ಓದಿದ ಮಾತ್ರಕ್ಕೆ ಇಂಗ್ಲಿಷ್ ಬರುತ್ತದೆ ಎನ್ನುವುದೊಂದು ಭ್ರಮೆ. ಇನ್ನು, ಮೂರನೆಯ ಭಾಷೆ ಎಂದು ಆಯ್ದುಕೊಂಡಿದ್ದ ಹಿಂದಿಯ ಪರಿಸ್ಥಿತಿ ಇದಕ್ಕಿಂತಲೂ ಕರುಣಾಜನಕವಾಗಿತ್ತು. ನಾನು ಮುಂಬೈಗೆ ಹೋಗುವವರೆಗೂ ನನ್ನ ಹಿಂದಿ ಮಾತು ತುಂಡರಿಸುತ್ತಲೇ ಇತ್ತು. ಈ ದೇಶದ ಜನರು ಶಾಲೆಯಲ್ಲಿ ಕಲಿತದ್ದಕ್ಕಿಂತ ಹೆಚ್ಚಿನ ಹಿಂದಿಯನ್ನು ಸಿನಿಮಾಗಳನ್ನು ನೋಡಿ ಕಲಿತಿರುತ್ತಾರೆ.

ನಾನು ಶಿವಾಜಿನಗರದಲ್ಲಿ ಬೆಳೆದವನಾದ್ದರಿಂದ ಮೂರ್ನಾಲ್ಕು ಭಾಷೆಗಳು ಕಲಿಯದಲೇ ಆಡುವುದಕ್ಕೆ ಒದಗಿತು. ನಮ್ಮ ಪಕ್ಕದ ಮನೆಯಲ್ಲಿ ತೆಲುಗು ಭಾಷಿಗರಿದ್ದರು. ಮೇಲಿನ ಮನೆಯವರು ಮರಾಠಿಗರು. ಎದುರು ಮನೆಯವರು ತಮಿಳರು. ಬೀದಿಯಲ್ಲಿ ನಿಂತರೆ ಹೆಜ್ಜೆಗೊಬ್ಬರು ಉರ್ದು ಮಾತನಾಡುವವರು. ಸ್ನೇಹಿತರ ವಲಯದಲ್ಲಿ ಎಲ್ಲ ಭಾಷಿಗರೂ ಇದ್ದರು. ಎಲ್ಲರಿಗೂ ಎಲ್ಲ ಭಾಷೆಯೂ ಅಲ್ಪಸ್ವಲ್ಪ ತಿಳಿದಿತ್ತು. ಅದು ಕಲಿತು ತಿಳಿದದ್ದಲ್ಲ; ಕೇಳಿ ತಿಳಿದದ್ದು. ತಮಾಷೆಯೆಂದರೆ, ನಾನು ಶಾಲೆಯಲ್ಲಿ ಕಲಿಯದ ತಮಿಳು–ತೆಲುಗಿನಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಮಾತನಾಡುತ್ತಿದ್ದೆ. ಆದರೆ ಕಲಿತ ಇಂಗ್ಲಿಷಿನಲ್ಲಿ ಮಾತಾಡುವುದಕ್ಕೆ ಹಿಂಜರಿಯುತ್ತಿದ್ದೆ.

ಇಂಗ್ಲಿಷ್ ನಮಗೆ ಅರ್ಧ ತಿಳಿದ ಅರ್ಧ ಕಲಿತ ಭಾಷೆಯಾಗಿತ್ತು. ಕಲಿತಿದ್ದೆವು, ಆದರೆ ಬಳಕೆಯಲ್ಲಿರಲಿಲ್ಲ. ಬಳಸುವಾಗ ಕಲಿತಿದ್ದರ ಎಚ್ಚರ, ತಪ್ಪಾಗಬಾರದೆನ್ನುವ ಎಚ್ಚರ. ಈ ಹಿಂಜರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಆ ಭಾಷೆಯ ಪರಿಸರಕ್ಕೆ ಒಗ್ಗಿಕೊಳ್ಳುವುದಕ್ಕೆ ಇಂಜಿನಿಯರಿಂಗ್ ಸೇರುವವರೆಗೂ ಕಾಯಬೇಕಾಯಿತು. ಇನ್ನೂ ತಮಾಷೆಯ ವಿಷಯವೆಂದರೆ, ಹಳ್ಳಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಬಂದು ಇಂಜಿನಿಯರಿಂಗ್ ಸೇರಿದ ಸ್ನೇಹಿತರು ನನ್ನಷ್ಟೇ ಸುಲಭವಾಗಿ ಸಿಡ್ನಿ ಶೆಲ್ಡನ್, ಜೆಫ್ರಿ ಆರ್ಚರ್‌ಗಳನ್ನು ಓದುತ್ತ, ಕ್ರಿಕೆಟ್ ಕಾಮೆಂಟರಿ ಕೇಳುತ್ತ, ಇಂಗ್ಲಿಷ್ ಸಿನಿಮಾಗಳನ್ನು ನೋಡುತ್ತ ಆ ಪರಿಸರಕ್ಕೆ ಒಗ್ಗಿಕೊಂಡರು.

ಹಾಗೆಂದು ಇದು ಕೇವಲ ಪರಿಸರದ ಪ್ರಭಾವವಲ್ಲ. ಸೋಂಕು ರೋಗದ ಹಾಗೆ ಪರಿಸರಕ್ಕೆ ತಕ್ಕಂತೆ ಭಾಷೆ ನಮ್ಮೊಳಗೆ ನುಸುಳುತ್ತದೆ ಎಂದುಕೊಳ್ಳುವ ಹಾಗೂ ಇಲ್ಲ. ಯಾಕೆಂದರೆ ಸುತ್ತಲೂ ತುಳುವಿನ ಪರಿಸರದಿಂದ ಕೂಡಿರುವ ಕುಂದಾಪುರ ತಾಲ್ಲೂಕಿನಲ್ಲಿ ಮಾತ್ರ ಎಲ್ಲೂ ತುಳುವಿನ ಪಸೆಯಿಲ್ಲ. ಅಲ್ಲಿ ಯಾರಿಗೂ ತುಳು ಭಾಷೆ ಬರುವುದಿಲ್ಲ. ಉಡುಪಿ–ಬ್ರಹ್ಮಾವರ ದಾಟಿ ಬಿಟ್ಟರೆ ತುಳು ಮಾಯ. ಅಷ್ಟೇ ಏಕೆ. ತುಳುವಿನಲ್ಲೂ ಶೂದ್ರ ತುಳು, ಬ್ರಾಹ್ಮಣರ ತುಳು ಅಂತಿದೆ.

ಕುಂದಾಪುರ ಕನ್ನಡದಲ್ಲೂ ಶೂದ್ರ ಭಾಷೆ, ಬ್ರಾಹ್ಮಣ ಭಾಷೆ ಇದೆ. ಒಂದೇ ಊರಿನ ಎದುರುಬದುರು ಮನೆಯವರು ಮಾತನಾಡುವ ಒಂದೇ ಬಗೆಯ ಕನ್ನಡ ಭಾಷೆಯಲ್ಲೂ ವ್ಯತ್ಯಾಸವಿದೆ! ಇಲ್ಲಿ ಭಾಷೆಯ ಸಂಕರವನ್ನು ತಡೆಹಿಡಿದಿರುವುದು ಕೇವಲ ಜಾತಿ ಅಥವಾ ಭೌಗೋಳಿಕ ವಿಭಜನೆ ಅಂತ ಸುಲಭವಾಗಿ ಹೇಳುವಂತಿಲ್ಲ. ನಾಲ್ಕಾರು ಭಾಷೆಗಳು ಸುಲಭವಾಗಿ ನನ್ನೊಳಗೆ ನುಸುಳಿದ್ದರೂ ತುಳು ಭಾಷೆ ಮಾತ್ರ ಇಂದಿಗೂ ನನ್ನೊಳಗೆ ಸೇರಿಕೊಂಡಿಲ್ಲ. ಹಲವಾರು ಸ್ನೇಹಿತರು ಸಂಬಂಧಿಕರು ತುಳುವಿನಲ್ಲಿ ಮಾತಾಡುವುದನ್ನು ನಿತ್ಯ ಕೇಳುತ್ತಲಿದ್ದರೂ ಆ ಕಡೆ ಗಮನ ಹರಿದಿಲ್ಲ.

ಭಾಷೆಯನ್ನು ಆಯ್ದುಕೊಂಡು ಆಸಕ್ತಿಯಿಂದ ಕಲಿತು ಕಲಿಸುತ್ತಿರುವವರೂ ಇದ್ದಾರೆ. ನಾವು ಕೆಲಸಕ್ಕೆ ಸೇರಿದ ಹೊಸತರಲ್ಲಿ ಕಂಪನಿಯಲ್ಲಿ ನಮಗೆ ಫ್ರೆಂಚ್ ಕಲಿಸಿಕೊಡಲಾಯಿತು. ಅದನ್ನು ಕಲಿಸಿಕೊಡುತ್ತಿದ್ದವನ ಮಾತೃಭಾಷೆ ಬಂಗಾಳಿ. ಬಂಗಾಳಿಯ ಬಳುಕುವ ಲಯದಲ್ಲಿಯೇ ಫ್ರೆಂಚ್ ಭಾಷೆಯನ್ನು ಬಳುಕಿಸಿ ಆಡುತ್ತಿದ್ದ. ನಾವುಗಳು ಫ್ರೆಂಚಿನಲ್ಲಿ, ‘ಬಾನ್ ನುಯಿ’, ‘ಬಾನ್ ಸುಯಿ’ ಅಂತೆಲ್ಲ ಒಬ್ಬರಿಗೊಬ್ಬರು ಶುಭ ಸಂದೇಶಗಳನ್ನು ರವಾನಿಸುತ್ತ ನಗುತ್ತಿದ್ದೆವು. ಜಪಾನಿ, ಜರ್ಮನ್, ಫ್ರೆಂಚ್ ಭಾಷೆಗಳ ಪದಗಳನ್ನು ಶುರುವಿನಲ್ಲಿ ಆಡುವುದು ಹಾಸ್ಯದ ಸಂಗತಿಯೇ. ಸಂಗೀತ ಕಲಿಯುವವನ ರಾಗಾಲಾಪದ ಅಣಕದಂತೆ.

ಆದರೆ, ಅದಕ್ಕಿಂತಲೂ ಹೆಚ್ಚಾಗಿ ನನಗೆ ಆಗ ಅನ್ನಿಸುತ್ತಿದ್ದದು ನಮಗೆಲ್ಲ ಫ್ರೆಂಚ್, ಜಪಾನಿ, ಜರ್ಮನ್ ಭಾಷೆಗಳನ್ನು ಕಲಿಸುತ್ತಿರುವವರು ಬೇರೆ ಯಾವ ವ್ಯವಹಾರದಲ್ಲಿ ಆಯಾ ಭಾಷೆಗಳನ್ನು ಬಳಸುತ್ತಿದ್ದಿರಬಹುದು ಎಂದು. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೂ ಫ್ರೆಂಚ್ ಭಾಷೆಯಲ್ಲಿ ಮಾತಾಡುವಷ್ಟು ಅಭಿಮಾನ ಇದ್ದಿರಲಿಕ್ಕಿಲ್ಲ. ನಮ್ಮೊಂದಿಗೆ ಮತ್ತು ಇತರ ಸಹೋದ್ಯೋಗಿಗಳೊಂದಿಗೆ ಇಂಗ್ಲಿಷಿನಲ್ಲಿಯೇ ವ್ಯವಹರಿಸುತ್ತಿದ್ದರು. ಸಂಬಂಧಿಕರೊಂದಿಗೆ ಬಂಗಾಳಿಯಲ್ಲಿಯೇ ಮಾತಾಡಬೇಕು. ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಫ್ರಾನ್ಸಿಗೆ ಹೋದರೆ ಫ್ರೆಂಚಿನಲ್ಲಿ ಮಾತಾಡುತ್ತಿದ್ದಿರಬೇಕು. ಅಥವಾ ತರ್ಜುಮೆ ಕಾರ್ಯಗಳಲ್ಲಿ ಫ್ರೆಂಚ್ ಭಾಷೆ ಬಳಕೆಗೆ ಬರುತ್ತಿದ್ದಿರಬಹುದು.

ಹೆಚ್ಚೆಂದರೆ, ಫ್ರೆಂಚ್ ಪುಸ್ತಕ ಸಿನಿಮಾಗಳನ್ನು ನೋಡುತ್ತಿದ್ದಿರಬೇಕು. ಆದರೆ, ಕಲಿಸಿಕೊಡುವುದಕ್ಕಾಗಿ ಮಾತ್ರ ಆತ ತನ್ನ ದೈನಂದಿನಲ್ಲಿ ಫ್ರೆಂಚ್ ಭಾಷೆ ಬಳಸುತ್ತಿದ್ದ. ತರಗತಿ ಮುಗಿದ ಮೇಲೆ ಆ ಭಾಷೆಯನ್ನು ಆ ಕ್ಲಾಸು ರೂಮಿನಲ್ಲಿಯೇ ಬಿಟ್ಟು ಹೋಗುತ್ತಿದ್ದ. ಇಲ್ಲಿ ಭಾಷೆ ಎನ್ನುವುದು ಕೇವಲ ಸಂವಹನ – ಸಂವೇದನೆ – ಜಿಜ್ಞಾಸೆ ಮಾತ್ರವಲ್ಲ, ವೃತ್ತಿಯೂ ಆಗಿದೆ. ಆ ಭಾಷೆಯನ್ನು ಕಲಿಯುತ್ತಿದ್ದ ನಮ್ಮ ಮುಂದೆ ಎರಡು ಅಯ್ಕೆಗಳಿದ್ದವು. ಒಂದು: ಭಾಷೆಯನ್ನು ಆಸಕ್ತಿಯ ನೆಲೆಯಿಂದ ನಮ್ಮದಾಗಿಸಿಕೊಳ್ಳುವುದು. ಎರಡು: ಭಾಷೆಯನ್ನು ವೃತ್ತಿಯಾಗಿಸಿಕೊಳ್ಳುವುದು. ನಮ್ಮಲ್ಲಿ ಬಹುತೇಕ ಮಂದಿ ಎರಡನ್ನೂ ಆಯ್ದುಕೊಳ್ಳಲಿಲ್ಲ.

ನಮ್ಮ ದೇಶದ ಸಂಸ್ಕೃತ ಭಾಷೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಾಗೆ ಫ್ರೆಂಚ್ ಭಾಷೆಯನ್ನು ಕಲಿತು ಮರೆತ ನನ್ನ ಸ್ನೇಹಿತನೊಬ್ಬ ಹಾಲೆಂಡಿಗೆ ಹೋಗಿ ನೆಲೆಸುವ ಸಂದರ್ಭ ಬಂದಾಗ ಡಚ್ ಭಾಷೆ ಕಲಿಯತೊಡಗಿದ. ಸಾಹಿತ್ಯಿಕ ಸುಖಕ್ಕಾಗಿ, ಜ್ಞಾನಾರ್ಜನೆಗಾಗಿ ಭಾಷೆಯನ್ನು ಕಲಿತು ಅಭ್ಯಾಸ ಮಾಡುವವರು ವಿರಳ. ಆ ಭಾಷೆಯ ವರ್ತುಲದಲ್ಲಿ ಅವರೊಬ್ಬರೇ ವಿಹರಿಸುತ್ತ ಅದರ ಕಾಣ್ಕೆಗಳನ್ನು ತನ್ನವರೊಂದಿಗೆ ಹಂಚಿಕೊಳ್ಳುವುದಕ್ಕೆ ಪುನಃ ತನ್ನ ಮಾತೃಭಾಷೆಗೆ ಅಥವಾ ಇಂಗ್ಲಿಷಿಗೆ ಮರಳುತ್ತಾರೆ. ಇದನ್ನೆಲ್ಲ ನೋಡುವಾಗ ಮನುಷ್ಯ ಭಾಷೆಯನ್ನು ಆಯ್ದುಕೊಳ್ಳುತ್ತಾನೋ ಇಲ್ಲವೇ ಭಾಷೆಯೇ ಮನುಷ್ಯನನ್ನು ಆಯ್ದುಕೊಳ್ಳುತ್ತದೆಯೋ ಎನ್ನುವ ಅನುಮಾನ ಬರುತ್ತದೆ!

ಒಟ್ಟಿನಲ್ಲಿ ಬದುಕಿನ ಭಾಗವಾಗದ ಹೊರತು ಯಾವ ಭಾಷೆಯು ನಮ್ಮದಾಗುವುದಿಲ್ಲ. ಅಸ್ತಿತ್ವದ ಅವಶ್ಯಕತೆಗೆ ಬೇಕಾಗುವ ಭಾಷೆಯನ್ನು ಜೀವಿಯು ತಾನಾಗಿಯೇ ಎತ್ತಿಕೊಂಡು ಅದಕ್ಕೆ ಹೊಂದಿಕೊಳ್ಳುತ್ತದೆ. ಅದಕ್ಕೆ ಬೇಕಾಗುವ (ಬೇಕೇ ಬೇಕೆಂದಿಲ್ಲದ) ಪೂರ್ವಸಿದ್ಧತೆಯನ್ನಷ್ಟೇ ಕಲಿಕೆಗಳು ಒದಗಿಸುತ್ತವೆ. ಭಾಷೆಯನ್ನು ಬದುಕಿನ ಯಾವ ಹಂತದಲ್ಲೂ ಎತ್ತಿಕೊಂಡು ತನ್ನದಾಗಿಸಿಕೊಳ್ಳುವ ಚಾತುರ್ಯ ಮತ್ತು ಸಾಮರ್ಥ್ಯ ಮನುಷ್ಯನಿಗಿರುತ್ತದೆ. ಕಲಿತಿರುವ ಭಾಷೆಗಳ ನಡುವೆ ಒಂದರಿಂದ ಮತ್ತೊಂದಕ್ಕೆ ಯಾವಾಗ ಬೇಕಾದರೂ ಜಿಗಿಯುವ ನಮ್ರತೆಯೂ ನಾಲಿಗೆಗಿದೆ.

ಕುಂದಾಪುರ, ಬಿಜಾಪುರ ಮೂಲದವರು ‘ಬೆಂಗಳೂರಿನ ಕನ್ನಡ’ ಮಾತಾಡುತ್ತಲೂ ತಮ್ಮವರನ್ನು ಕಂಡ ಕೂಡಲೇ ನಾಲಿಗೆಯು ಆಯಾ ಊರಿನ ಸ್ಥಳೀಯ ಲಯಕ್ಕೆ ಹೊರಳಿಕೊಳ್ಳುತ್ತದೆ. ಬೆಂಗಳೂರಿನಂಥ ಊರಿನಲ್ಲಿ ತಮಿಳು, ತೆಲುಗು, ಇಂಗ್ಲಿಷ್, ಹಿಂದಿ, ಮಾರ್ವಾಡಿ, ಕೊಂಕಣಿ, ಮರಾಠಿ, ತುಳು ಮುಂತಾದ ಭಾಷೆಗಳ ಆವರ್ತನದಲ್ಲಿ ಮನುಷ್ಯ ಸರಾಗವಾಗಿ ಸಂಚರಿಸುತ್ತಿರುತ್ತಾನೆ. ಸಿನಿಮಾ ನಟರು ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯ ಲಯವನ್ನೂ ಹಿಡಿದು ಸಂಭಾಷಣೆ ಒಪ್ಪಿಸುವುದನ್ನು ಕಲಿತಿರುತ್ತಾರೆ. ಇದು ಆ ನಟರಿಗಷ್ಟೇ ಇರುವ ಕಲಾ ನೈಪುಣ್ಯ ಮಾತ್ರವಲ್ಲ. ನಮ್ಮೂರಿನ ಎಷ್ಟೋ ಮಂದಿ ಆಂಧ್ರ–ತಮಿಳುನಾಡಿನ ಬೇರೆ ಬೇರೆ ಊರುಗಳಲ್ಲಿ ಹೋಟೆಲು ಮಾಡಿಕೊಂಡಿರುವವರು ಅಲ್ಲಿನ ಭಾಷೆಯನ್ನು ಅದರದೇ ಲಯದಲ್ಲಿ ಸರಾಗವಾಗಿ ಮಾತಾಡುವುದನ್ನು ಕೇಳಿದ್ದೇನೆ.

ಎಷ್ಟೋ ಬೇರೆ ಬೇರೆ ಭಾಷೆಯ ನಟರು ತಮಿಳೇ ತಮ್ಮ ದೈವವೆಂದು ಕಲಿತು ಆಡುವುದನ್ನು ಕೇಳಿದ್ದೇವೆ. ಸಂಸ್ಕೃತವನ್ನು ಸರಾಗವಾಗಿ ಉದುರಿಸುತ್ತ ಮೇಲಾಡುವವರನ್ನು ಕೇಳಿದ್ದೇವೆ. ಇದೆಲ್ಲವೂ ಜೀವಿಗೆ ಭಾಷೆಯು ಬಂಡವಾಳವಾಗಿರುವ ಅನಿವಾರ್ಯ ಸ್ಥಿತಿ. ಅದೇ ರೀತಿಯಲ್ಲಿ ಇಂದು ಇಂಗ್ಲಿಷ್ ಎಲ್ಲರಿಗೂ ಬೇಕಿರುವ ಬಂಡವಾಳದ ಭಾಷೆಯಾಗಿದೆ. ಒಂದು ಭಾಷೆಯ ಕುರಿತು ಸಹಜವಾಗಿ ಪ್ರೀತಿ ಹುಟ್ಟಿ ಅದರ ತೆಕ್ಕೆಗೆ ಬೀಳಬೇಕು. ಅದು ನಮ್ಮ ಬಾಲ್ಯದಲ್ಲಿ ಆಗಿರುತ್ತದೆ. ಭಾಷೆಯ ಮಾಧುರ್ಯಕ್ಕೆ ಚೆಲುವಿಗೆ, ಬಳುಕಿಗೆ ಮನಸೋತು ಪ್ರೀತಿಸಲು ಶುರುಮಾಡಿದಾಗ ಸಹಜವಾಗಿಯೇ ಆ ಭಾಷೆ ನಮ್ಮೊಳಗೆ ಸೇರಿಕೊಳ್ಳುತ್ತದೆ. ಅದನ್ನು ಆಡುತ್ತ ಆಡುತ್ತ ಆ ಪ್ರೀತಿ ಇಮ್ಮಡಿಗೊಳ್ಳುತ್ತದೆ.

ಹಾಗಿಲ್ಲದೇ ಹೋಗಿದ್ದರೆ ಬೇಂದ್ರೆ, ಮಾಸ್ತಿ, ಪುತಿನ ಕನ್ನಡದಲ್ಲಿ ಬರೆಯುತ್ತಲೇ ಇರಲಿಲ್ಲ.ಈ ಮಾತು ಎಲ್ಲ ಭಾಷೆಗಳಿಗೂ ಅನ್ವಯಿಸುತ್ತದೆ. ನೀರು ಗಾಳಿ ಬಿಸಿಲಿಗೆ ತಕ್ಕಂತೆ ನಮಗೇ ಗೊತ್ತಿಲ್ಲದಂತೆ, ನಮ್ಮ ದೇಹದ ಚರ್ಮದ ಬಣ್ಣ ಬದಲಾಗುವಂತೆ ಅಸ್ತಿತ್ವದ ಅನಿವಾರ್ಯತೆಗೆ ತಕ್ಕಂತೆ ಭಾಷೆಯ ಮಾತಿನ ಲಯಕ್ಕೆ ಮನುಷ್ಯ ಹೊಂದಿಕೊಳ್ಳುತ್ತಾನೆ. ಅಥವಾ ಅದರ ಪ್ರೀತಿಯ ತೆಕ್ಕೆಗೆ ಜಾರಿಕೊಳ್ಳುತ್ತಾನೆ. ಜಗನ್ನಾಥ ದಾಸರ ಮಾತೊಂದಿದೆ– ‘ಅಂದ ನುಡಿ ಹುಸಿಯಾಗಬಾರದು’. ಹುಸಿ ಆಡಬಾರದು, ಸತ್ಯವೇ ನಮ್ಮ ತಾಯಿ–ತಂದೆ ಅನ್ನುವುದು ಒಂದು ಬಗೆ. ಆದರೆ ಇಲ್ಲಿ ದಾಸರು ಹೇಳುತ್ತಿರುವುದು, ತನ್ನಿಂದ ಒಂದು ಮಾತು ಬಂತೆಂದರೆ ಅದು ಸುಳ್ಳಾಗಬಾರದು ಎಂದು.

‘ಶಾಪಾನುಗ್ರಹ ಶಕ್ತಿ’ ಎನ್ನುವ ಬಳಕೆ ನಮ್ಮಲ್ಲಿದೆ. ಮನುಷ್ಯ ತನ್ನ ಶುದ್ಧ ಸಂಕಟದಲ್ಲಿ ನೊಂದು ಆಡಿದರೆ, ಅತೀವ ಆರ್ದ್ರತೆಯಲ್ಲಿ ಹಾರೈಸಿದರೆ ಅದು ಸತ್ಯವಾಗುತ್ತದೆ ಎನ್ನುವ ನಂಬಿಕೆ ಇದು. ತನ್ನ ಮಾತು ಮತ್ತೊಬ್ಬರನ್ನು ಮರುಳುಗೊಳಿಸುವ ಸಲುವಾಗಿ ಆಡುವ ಕೇವಲ ಅಂದವಾದ ನುಡಿಯಾಗಬಾರದು. ಆಡಿದ ನುಡಿ ಹುಸಿಯಾಗದಂತೆ ತನ್ನ ಅಂತಃಸತ್ವ ಪಕ್ವಗೊಳ್ಳಬೇಕೆನ್ನುವ ಹಂಬಲ ದಾಸರಲ್ಲಿದೆ. ಅದು ಎಲ್ಲ ವ್ಯಾವಹಾರಿಕ ಅನಿವಾರ್ಯತೆಗಳ ನಡುವೆಯೂ ಭಾಷೆಯ ಮಾತಿನ ಅವತಾರದ ಆತ್ಯಂತಿಕ ಸಫಲತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.