ADVERTISEMENT

ಭೂಮ್ತಾಯಿ ಅಜ್ಜಿ ಆದದ್ದು ಯಾಕೆ?

​ಪ್ರಜಾವಾಣಿ ವಾರ್ತೆ
Published 7 ಜನವರಿ 2017, 19:30 IST
Last Updated 7 ಜನವರಿ 2017, 19:30 IST
ಭೂಮ್ತಾಯಿ ಅಜ್ಜಿ ಆದದ್ದು ಯಾಕೆ?
ಭೂಮ್ತಾಯಿ ಅಜ್ಜಿ ಆದದ್ದು ಯಾಕೆ?   

‘ಈ ಬೆಳದಿಂಗಳು, ಈ ಬೆಳ್ಳೀ ಬೆಳಕು ನನ್ನದಲ್ಲ. ಜಗತ್ತಿನಲ್ಲಿ ನಾನೇ ನತದೃಷ್ಟ’ ಎಂದು ಒಮ್ಮೆ ಚಂದ್ರಣ್ಣ ಅಳ್ತಿದ್ನಂತೆ. ಇದನ್ನ ನೋಡಿ ಸೂರ್ಯಣ್ಣನಿಗೆ ಕರುಣೆ ಮೂಡಿ ಸಮಾಧಾನ ಹೇಳಲು ಬಂದ. ‘ಯಾಕೋ ಚಂದ್ರಣ್ಣ, ಈ ಪಾಟಿ ಅಳ್ತಿದ್ದಿ’ ಎಂದ. 


‘ನೋಡಯ್ಯ, ನಿನ್ನಿಂದ ಬರೋ ಬೆಳಕು ಭೂಮಜ್ಜಿ ಮೇಲೆ ಬಿದ್ದು ಪ್ರತಿಫಲಿಸಿದ ಬೆಳಕು ನನ್ನದು. ನನ್ನದೆಂಬ ಸ್ವಂತಿಕೆ ಇಲ್ಲದ ಜೀವನವು ಒಂದು ಜೀವನವೇ. ನೀನೆ ಅದೃಷ್ಟವಂತ ಬಿಡಯ್ಯ’ ಎಂದು ಮೂಗೊರೆಸಿಕೊಂಡ.

ಸೂರ್ಯನಿಗೆ ಕೋಪ ಬಂತು. ‘ಅದ್ಯಾವ ಸೀಮೆ ಅದೃಷ್ಟ ನಂದು, ಯಾವಾಗ್ಲೂ ಬೆಂಕಿ ಅತ್ತುಸ್ಕೊಂಡು ಉರೀತಾ ಇರ್ತಿನಿ. ಹೋಗೋಗು, ನಾನೇ ನತದೃಷ್ಟ ನೀನಲ್ಲ’ ಎಂದ. ಇಬ್ಬರಿಗೂ ವಾದ ಮೊದಲಾಯಿತು.

ಅಷ್ಟರಲ್ಲಿ ನಮ್ಮ ಭೂಮ್ತಾಯಿ ಇದ್ಯಾಕ್ ಈ ವಯ್ಯಂದಿರು ಈ ಪಾಟಿ ಕೂಗಾಡ್ತಿದಾರೆ ಎಂದು ಓಡೋಡಿ ಬಂದಳು. ‘ಏನಾಗ್ಯದೆ ಅಂಥ ಕಿತ್ತಾಡ್ತಿರಪ್ಪ. ಸಾಕ್ಮಾಡಿ. ಮಾಡಕ್ ಏನು ಕ್ಯಾಮಿಲ್ದೆ ಕಿತ್ತಾಡ್ತಿರ್ಲಾ’ ಎಂದು ಬೈದಳು.

ಸೂರ್ಯಣ್ಣ ಇನ್ನು ಕೆಂಪಗಾಗಿ ‘ಭೂಮಜ್ಜಿ ನೀ ಸುಮ್ಕಿರು. ಈಯಪ್ಪ ಹೇಳ್ತದೆ, ನಾನೆ ನತದೃಷ್ಟ ಅಂಥ. ನೀನಾರು ವಸಿ ಬುದ್ಧಿ ಹೇಳವ್ವ’ ಎಂದ. ಭೂಮಜ್ಜಿಗೆ ಅದೆಲ್ಲಿತ್ತೋ ಕೋಪ, ಸೂರ್ಯಣ್ಣನ ತರಾಟೆಗೆ ತಂಗಡ್ಲು. ‘ಏನ್ಲಾ ನೀ ಹೇಳೋದು. ನಾವೆಲ್ಲ ಸರಿಸುಮಾರು ಒಂದೇ ಬಿಂದುವಿನಿಂದ, ಹೆಚ್ಚು ಕಡಿಮೆ ಒಂದೇ ಸಮನಾಂತರ ಸಮಯದಿ ಉಗಮ ಆಗಿದ್ದಲ್ವೆ. ಅದೆಂಗೆ ನೀವು ಮಾತ್ರ ಸೂರ್ಯಣ್ಣ, ಚಂದ್ರಣ್ಣ ಆಗ್ತೀರಿ. ನಾನು ಮಾತ್ರ ಅಜ್ಜಿ ಆದೇನೋ?’ ಎಂದು ಪ್ರಶ್ನಿಸಿದಳು.

ಅವಳು ಕೇಳಿದ ಪ್ರಶ್ನೆ ಸರಿಯಾಗಿದೆ ಎಂದು ಇಬ್ಬರಿಗೂ ಅನಿಸಿತು. ನಾವ್ಯಾಕೆ ಅವಳನ್ನ ಅಜ್ಜಿ ಎಂದು ಕರೆದೆವೆಂದು ಅವರಿಗೆ ತಿಳಿಯಲಿಲ್ಲ. ಈಗ ಭೂಮ್ತಾಯಿ ಹೇಳಿದಳು ‘ಅಯ್ಯೋ ಬೆಪ್ಪಯ್ಯಗಳಿರ, ನಿಜವಾಗಿಯೂ ನತದೃಷ್ಟೆ ನಾನು ಕಣ್ರೋ. ಸಾವಿರ ಅಡಿ ನೀರಿಗಾಗಿ ಕೊರೆದು ಮೈಯೆಲ್ಲ ಗಾಯವಾಗಿ ದಿನವೂ ಯಾತನೆಯಾಗಿದೆ. ಎಲ್ಲೆಂದರಲ್ಲಿ ಉಗುಳುತ್ತಾರೆ. ಪ್ಲಾಸ್ಟಿಕ್ ಅನ್ನು ನನ್ನ ಕೈಲಿ ಜೀರ್ಣಿಸಿಕೊಳ್ಳಕ್ಕಾಗಲ್ಲ.

ಈ ಮನುಷ್ಯರು ನೋಡಿದ್ರೆ ಬರಿ ಪ್ಲಾಸ್ಟಿಕ್ ಇಂದಾನೆ ನನ್ನ ಮುಚ್ತಾ ಇದಾರೆ. ಜೊತೆಗೆ ನಗರೀಕರಣ, ಜಾಗತೀಕರಣ, ಕ್ರಾಂತಿ ಎಂದು ವಿಷದ ಗಾಳಿ ಬಿಟ್ಟು ಉಸಿರಾಡದ ಹಾಗೆ ಮಾಡವ್ರೆ. ಈ ಸೂರ್ಯಣ್ಣ ಬೇರೆ ಉರಿ ಬಿಸಿಲು ಬಿಡ್ತಾನೆ. ತಂಪಾಗಿರಾದು ನನ್ನ ಹಣೇಲಿ ಬರೆದಿಲ್ಲ ಅನ್ನಿಸ್ತದೆ. ಪಾಪಿ ಜನಗಳು ತಮ್ಮ ಏಳಿಗೆ ,ಅಭಿವೃದ್ಧಿಗೋಸ್ಕರ ನನ್ನ ಸಂಪನ್ಮೂಲಗಳ್ನ ದೋಚಿ ನನ್ನ ಸ್ಥಿತಿ ಚಿಂತಾಜನಕ ಆಗೈತೆ’ ಎಂದು ದುಃಖ ತೋಡಿಕೊಂಡಳು.

ಹೌದಲ್ಲಾ ಎಂದ ಸೂರ್ಯಣ್ಣ. ‘ನಾವೇ ಪರವಾಗಿಲ್ಲ, ಒಂದ್ವೇಳೆ ನನ್ನ ಬಳಿಯೂ ಜೀವಿಸುವ ಹಾಗಿದ್ದರೆ ಹೀಗೆ ನನ್ನ ಆರೋಗ್ಯವನ್ನ ಹದಗೆಡ್ಸಿ ಹುರಿದು ಮುಕ್ಕುತ್ತಿದ್ದರೇನೋ ಈ ಮಾನವರು. ಸದ್ಯ ನಾನು ಬೆಂಕಿ ಕಾರುವುದರಿಂದ ನನ್ನ ಬಳಿ ಬರೋಕ್ಕಾಗೋದೆ ಇಲ್ಲ ನೋಡು. ನಿನ್ನ ಪರಿಸರ ಚೆನ್ನಾಗಿಲ್ಲದೆ ಸೊರಗಿ, ಮುದುಕಿಯಾದ ಹಾಗೆ ಕಾಣುತ್ತಿ ನೋಡವ್ವ – ಅದಕ್ಕೆ ಅಜ್ಜಿ ಅಂದ್ಬುಟ್ವಿ. ಸಾರಿ ಕಣವ್ವ’ ಎಂದ.

ಚಂದ್ರಣ್ಣನೂ ದನಿಗೂಡಿಸಿದ. ‘ಯೋಗಿ ಪಡೆದದ್ದು ಯೋಗಿಗೆ, ಜೋಗಿ ಪಡೆದದ್ದು ಜೋಗಿಗೆ. ನನ್ನ ತಾಪತ್ರಯಕ್ಕೆ ಯಾರೇನ ಮಾಡಿಯಾರು. ನನಗೆ ಆಸರೆಯಾದ ಸ್ನೇಹಿತೆ ಕಾಡದೇವಿಯನ್ನು ಬಿಡೋಲ್ಲ. ಮೆಟ್ರೋ, ಸ್ಟೀಲ್ ಬ್ರಿಡ್ಜ್ ಎಂಬ ಅಭಿವೃದ್ಧಿ ನೆಪ ಹೇಳಿ ಅವಳನ್ನು ನಾಶ ಮಾಡ್ತಾ ಬತ್ತಾವ್ರೆ. ಈ ಮನುಷ್ಯರ ಕಾಟ ತಪ್ಪುಸ್ಕಂಡ್ರೆ ಸಾಕಾಗದೆ.

ನನ್ನ ಜೊತೇಲಿ ಎಷ್ಟೋ ಪ್ರಾಣಿ, ಪಕ್ಷಿ ಜೀವ ಸಂಕುಲಗಳು ಇದಾವೆ. ಅವಕ್ಕೋಸ್ಕರ ಕಷ್ಟ ಸಹಿಸ್ಕಂಡು ಇದ್ದೀನಿ. ಇರ್ಲಿ ನನ್ನ ಸಂಕಷ್ಟ. ಮನುಷ್ಯರು ಮಾಡೋ ಅನ್ಯಾಯ ಹೇಳ್ತಾ ಹೋದ್ರೆ ದಿನ ಪೂರ್ತಿ ಸಾಕಾಗೊಲ್ಲ, ಕೆಲಸಕ್ಕೆ ಟೈಮಾಗೈತೆ ನಾನಿನ್ನ ಬತ್ತೀನಿ’ ಎಂದು ಭೂಮ್ತಾಯಿ ತನ್ನ ಹರಿದ ಹಸುರು ಸೀರೆಯ ಸೆರಗಲ್ಲಿ ಕಣ್ಣೊರೆಸಿಕೊಂಡು ಹೋದಳು.

ಸೂರ್ಯನಿಗೆ ಭೂಮಿಯ ಸ್ಥಿತಿ ನೋಡಿ ಅಳಬೇಕೆನಿಸದರೂ ಕಣ್ಣೀರು ಬರಲಿಲ್ಲ. ಕಣ್ಣೀರೆಲ್ಲ ಅವನದೇ ಧಗೆಯಲ್ಲಿ ಇಂಗುತ್ತಿತ್ತು. ಇನ್ನು ಚಂದ್ರನ ಪರಿಸರದಲ್ಲಿ ಮನುಷ್ಯರೇ ಅಳಲು ಸಾಧ್ಯವಿಲ್ಲ, ಅವನು ಹೇಗೆ ಅತ್ತಾನು. ಇಬ್ಬರೂ ನಾವೇ ಪುಣ್ಯವಂತರೆಂದುಕೊಂಡು ತಮ್ಮ ತಮ್ಮ ನಿಗದಿತ ಕೆಲಸಕ್ಕೆ ಹೊರಟರು.
–ಎಡೆಯೂರು ಪಲ್ಲವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT