ADVERTISEMENT

ಮರುಕಳಿಸಿದ ಇತಿಹಾಸ ಮರುಕಳಿಸಿದ ದುರಂತ

ಎ.ಎನ್‌ ಎಮ ಇಸ್ಮಾಯಿಲ್
Published 30 ಜುಲೈ 2016, 19:30 IST
Last Updated 30 ಜುಲೈ 2016, 19:30 IST
ಮರುಕಳಿಸಿದ ಇತಿಹಾಸ ಮರುಕಳಿಸಿದ ದುರಂತ
ಮರುಕಳಿಸಿದ ಇತಿಹಾಸ ಮರುಕಳಿಸಿದ ದುರಂತ   

ಒಲಿಂಪಿಕ್ಸ್ ಇತಿಹಾಸಕ್ಕೂ ಗ್ರೀಸ್‌ಗೂ ಅನೇಕಾನೇಕ ಸಂಬಂಧಗಳಿವೆ. ಪ್ರಾಚೀನ ಒಲಿಂಪಿಕ್ಸ್‌ನಿಂದ ಆರಂಭಗೊಂಡು ಅರ್ವಾಚೀನ – ಅಂದರೆ 1896ರಿಂದ ಆರಂಭಗೊಂಡ ಒಲಿಂಪಿಕ್ಸ್ ತನಕವೂ ಈ ಸಂಬಂಧವಿದೆ. ಆದರೆ ಒಲಿಂಪಿಕ್ಸ್ ಗ್ರೀಸ್‌ಗೆ ಒಳಿತುಂಟು ಮಾಡಿಲ್ಲ ಎಂಬುದು ವಾಸ್ತವ.

1896ರಲ್ಲಿ ನಡೆದ ಮೊದಲ ಆಧುನಿಕ ಒಲಿಂಪಿಕ್ಸ್ ಕೂಡಾ ಗ್ರೀಸ್ ಅನ್ನು ದಿವಾಳಿಯ ಅಂಚಿಗೆ ತಳ್ಳಿತ್ತು. 2004ರ ಒಲಿಂಪಿಕ್ಸ್ ಅಂತೂ ಗ್ರೀಸ್‌ನ ಆರ್ಥಿಕ ಬಿಕ್ಕಟ್ಟನ್ನು ತಾರಕಕ್ಕೆ ಒಯ್ದು ಅದನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿಬಿಟ್ಟಿತು. ಗ್ರೀಸ್‌ನ ಆರ್ಥಿಕ ಕುಸಿತ ಇಡೀ ಯೂರೋಪ್‌ನ ಕುಸಿತದ ಮುನ್ನುಡಿಯಾಯಿತು.

1984ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್ ಹೊರತುಪಡಿಸಿದರೆ ಇಲ್ಲಿಯತನಕದ ಯಾವ ಒಲಿಂಪಿಕ್ಸ್ ಕೂಡ ಆತಿಥೇಯ ರಾಷ್ಟ್ರಕ್ಕೆ ಲಾಭ ತಂದುಕೊಟ್ಟಿಲ್ಲ.ಆದರೂ ಒಲಿಂಪಿಕ್ಸ್ ಆತಿಥ್ಯ ವಹಿಸುವುದಕ್ಕೆ ಒಂದು ಸ್ಪರ್ಧೆಯೇ ಏರ್ಪಡುತ್ತದೆ ಎಂಬುದು ನಿಜವೇ.

ಒಲಿಂಪಿಕ್ಸ್‌ನ ಆತಿಥ್ಯ ವಹಿಸುವ ದೇಶಕ್ಕೆ ಪ್ರವಾಸೋದ್ಯಮದಿಂದ ದೊರೆಯುವ ಲಾಭದಿಂದ ತೊಡಗಿ ಕ್ರೀಡೆಯ ಮೂಲಸೌಕರ್ಯದವರೆಗೆ ಅನೇಕ ಅನುಕೂಲಗಳ ಬಗ್ಗೆ ಹೇಳಲಾಗುತ್ತದೆ. ಆದರೆ ಒಲಿಂಪಿಕ್ಸ್ ಇತಿಹಾಸ ಮಾತ್ರ ಇದಕ್ಕೆ ವಿರುದ್ಧವಾದುದನ್ನೇ ಹೇಳುತ್ತದೆ. ಇದಕ್ಕೆ ಗ್ರೀಸ್‌ನ ಕಥನವೇ ಅತ್ಯುತ್ತಮ ಉದಾಹರಣೆ.

1896ರಲ್ಲಿ ಮೊದಲ ಆಧುನಿಕ ಒಲಿಂಪಿಕ್ಸ್ ಸಂಘಟಿಸಲು ಗ್ರೀಸ್ ಮುಂದಾದಾಗ ಅದು ಆರ್ಥಿಕವಾಗಿ ಬಹಳ ದುಸ್ಥಿತಿಯಲ್ಲಿತ್ತು. ಆದರೆ ಆಗ ಗ್ರೀಸ್‌ನ ಆಡಳಿತಾತ್ಮಕ ಹೊಣೆಯನ್ನು ನಿರ್ವಹಿಸುತ್ತಿದ್ದ ರಾಜ ಮನೆತನಕ್ಕೆ ಒಲಿಂಪಿಕ್ಸ್ ಸಂಘಟಿಸುವುದರಿಂದ ತನ್ನ ಜನಪ್ರಿಯತೆ ಹೆಚ್ಚುತ್ತದೆ ಎಂಬ ನಂಬಿಕೆ ಇತ್ತು.

ಈ ಕಾರಣದಿಂದಾಗಿ ದಿವಾಳಿಯ ಅಂಚಿನಲ್ಲಿದ್ದ ಪ್ರಭುತ್ವ ಒಲಿಂಪಿಕ್ಸ್‌ಗೆ ಬೇಕಿರುವ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿತು. ಆಗಲೂ ವೆಚ್ಚಕ್ಕೆ ಸಂಬಂಧಿಸಿದ ಲೆಕ್ಕಾಚಾರಗಳೆಲ್ಲಾ ಬುಡಮೇಲಾದವು. ಮೊದಲಿಗೆ ಈ ಅಂದಾಜು 5.85 ಲಕ್ಷ ಡ್ರಾಕ್ಮಾಗಳಷ್ಟಾಗಬಹುದು ಎಂದು ಲೆಕ್ಕ ಹಾಕಲಾಗಿತ್ತು. ಅಂದರೆ, ಅಂದಿನ ಸುಮಾರು 74,000 ಅಮೆರಿಕನ್ ಡಾಲರ್‌ಗಳು.

ಸಿದ್ಧತೆ ಮುಗಿಯುವ ಹೊತ್ತಿಗೆ ಖರ್ಚಿನ ಪ್ರಮಾಣ 37.40  ಲಕ್ಷ ಡ್ರಾಕ್ಮಾಗಳಷ್ಟಾಗಿತ್ತು. ಡಾಲರ್‌ಗಳಲ್ಲಿ ಹೇಳುವುದಾದರೆ 4.48 ಲಕ್ಷ ಡಾಲರು. ಅಂದಾಜಿನ ಹಲವು ಪಟ್ಟು ಹೆಚ್ಚು ಹಣ ಖರ್ಚಾಗಿತ್ತು. ರಾಜಮನೆತನದ ಜನಪ್ರಿಯತೆ ಹೆಚ್ಚಾಯಿತೋ ಇಲ್ಲವೋ ಗೊತ್ತಿಲ್ಲ, ಖಜಾನೆಯಂತೂ ಖಾಲಿಯಾಯಿತು. ಇಷ್ಟು ಪ್ರಮಾಣದ ಖರ್ಚಿಗೆ ಕಾರಣವಾದದ್ದು ಅಥೆನ್ಸ್‌ನ ಪ್ರಾಚೀನ ಸ್ಟೇಡಿಯಂ ಅನ್ನು ಜೀರ್ಣೋದ್ಧಾರ ಮಾಡಿದ್ದಂತೆ!

ಕ್ರೀಡಾಕೂಟವನ್ನು ಸಂಘಟಿಸಲು ಸಾಧ್ಯವೇ ಇಲ್ಲ ಎನ್ನುವಂಥ ಸ್ಥಿತಿ ಉದ್ಭವಿಸಿದಾಗ ದೇಶದ ಮಾನ ಕಾಪಾಡುವುದಕ್ಕಾಗಿ ವ್ಯಾಪಾರಿಯೊಬ್ಬರು 10 ಲಕ್ಷ ಡ್ರಾಕ್ಮಾಗಳಷ್ಟು ಹಣವನ್ನು ದೇಣಿಗೆಯಾಗಿ ನೀಡಿದರು. ಇದರಿಂದ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟಕ್ಕೆ ಬಂದವರು ಖರೀದಿಸಿದ ಸ್ಮರಣಿಕೆಗಳಿಂದ ಭಾರೀ ಹಣ ಹರಿದು ಬಂತು.ಇದೆಲ್ಲದರಿಂದಾಗಿ ಅಂದಿನ ಗ್ರೀಸ್ ಆರ್ಥಿಕ ಬಿಕ್ಕಟ್ಟಿನಿಂದ ಕೂದಲೆಳೆಯ ಅಂತರದಲ್ಲಿ ಪಾರಾಯಿತು.

2004ರಲ್ಲಿ ಎರಡನೇ ಬಾರಿಗೆ ಗ್ರೀಸ್ ಒಲಿಂಪಿಕ್ಸ್ ಸಂಘಟಿಸಿದಾಗ ಹಿಂದಿನ ಅದೃಷ್ಟ ಇರಲಿಲ್ಲ. ಪರಿಣಾಮವಾಗಿ ವಿಶ್ವದ ಪ್ರಾಚೀನ ನಾಗರಿಕತೆಯೆಂಬ ಹೆಮ್ಮೆಯಿದ್ದ ಗ್ರೀಸ್ ತನ್ನ ವಿಶ್ವಪರಂಪರೆ ಪಟ್ಟಿಯಲ್ಲಿರುವ ಸ್ಥಳಗಳನ್ನು ಹರಾಜಿಗಿಡಲೂ ಮುಂದಾಗುವ ಸ್ಥಿತಿ ಉದ್ಭವಿಸಿತು. ಇದಕ್ಕೂ ಕಾರಣವಾದದ್ದು ಒಲಿಂಪಿಕ್ಸ್ ಎಂದು ಅನೇಕ ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.

‘ಇತಿಹಾಸ ಮರುಕಳಿಸುತ್ತದೆ’ ಎಂಬುದು ಗ್ರೀಸ್‌ನ ವಿಷಯದಲ್ಲಿ ಹಲವು ಬಗೆಯಲ್ಲಿ ನಿಜವಾಯಿತು. ಒಲಿಂಪಿಕ್ಸ್ ಸಂಘಟನೆಯ ಹೊಣೆಯನ್ನು ಸ್ಪರ್ಧೆಯಲ್ಲಿ ಗ್ರೀಸ್ ಗೆದ್ದುಕೊಳ್ಳುವ ಹೊತ್ತಿಗಾಗಲೇ ಯೂರೋಪಿನಲ್ಲಿ ಆರ್ಥಿಕ ಕುಸಿತದ ಸೂಚನೆಗಳು ಕಾಣಿಸತೊಡಗಿದ್ದವು. ಹೆಚ್ಚು ಕಡಿಮೆ 1896ರಲ್ಲಿ ಇದ್ದಂಥದ್ದೇ ಪರಿಸ್ಥಿತಿ. ಈ ಸಂದರ್ಭದಲ್ಲಿಯೂ ಸರ್ಕಾರ ಒಲಿಂಪಿಕ್ಸ್ ಸಂಘಟಿಸುವ ಮೂಲಕ ತನ್ನ ಆರ್ಥಿಕ ಸ್ಥಿತಿಯನ್ನು ಸುಧಾರಣೆ ಮಾಡುವ ಒಂದು ಜೂಜಾಟಕ್ಕೆ ಇಳಿಯಿತು ಎನ್ನಬಹುದೇನೋ.

1896ರಲ್ಲಿ ಪ್ರಾಚೀನ ಕ್ರೀಡಾಂಗಣವನ್ನು ಜೀರ್ಣೋದ್ಧಾರ ಮಾಡಲು ಹೊರಟು ಭಾರೀ ಪ್ರಮಾಣದ ಹಣ ವೆಚ್ಚವಾಯಿತು. 2004ರಲ್ಲಿ ಎರಡು ವಿಶೇಷ ಕ್ರೀಡಾ ಸಂಕೀರ್ಣಗಳಾದ ‘ಬೀಚ್ ವಾಲಿಬಾಲ್ ಸೆಂಟರ್’ ಮತ್ತು ‘ಒಲಿಂಪಿಕ್ ಟೆನ್ನಿಸ್ ಸೆಂಟರ್‌’ಗಳ ನಿರ್ಮಾಣಕ್ಕಾಗಿ ಭಾರೀ ಹಣ ವೆಚ್ಚವಾಯಿತು. ಆತಿಥ್ಯದ ಖರ್ಚು 4.6 ಶತ ಕೋಟಿ ಡಾಲರ್‌ಗಳ ಅಂದಾಜು ವಾಸ್ತವಕ್ಕೆ ಬರುವ ಹೊತ್ತಿಗೆ 15 ಶತ ಕೋಟಿ ಬಿಲಿಯ ಡಾಲರ್‌ಗಳಷ್ಟಾಯಿತು.

ಯುರೋಪಿನ ದೇಶಗಳೆಲ್ಲವೂ ಜನಸಂಖ್ಯೆ ಇಳಿಮುಖತೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಒಲಿಂಪಿಕ್ಸ್‌ಗಾಗಿ ನಿರ್ಮಿಸಲಾದ ಕ್ರೀಡಾ ಮೂಲಸೌಕರ್ಯಗಳು ದೇಶೀಯರಿಗೆ ಅಷ್ಟೊಂದು ಪ್ರಮಾಣದಲ್ಲಿ ಬಳಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಇತ್ತು. ಎಷ್ಟೋ ಕ್ರೀಡಾ ಸಂಕೀರ್ಣಗಳನ್ನು ಒಲಿಂಪಿಕ್ಸ್ ಸಮಯದಲ್ಲಿ ಬಳಸಿದ್ದನ್ನು ಹೊರತುಪಡಿಸಿದರೆ ಮತ್ತೆಂದೂ ಬಳಸಲು ಆಗಲೇ ಇಲ್ಲ.

2012ರಲ್ಲಿ ಗ್ರೀಸ್ ಸಂದರ್ಶಿಸಿದ ಪತ್ರಕರ್ತರು ಈ ವಿಷಯವನ್ನು ಬಹಳ ವಿವರವಾಗಿಯೇ ದಾಖಲಿಸಿದ್ದಾರೆ. ಕ್ರೀಡಾ ಸಂಕೀರ್ಣಗಳ ಬಾಗಿಲು ಕಿಟಕಿಗಳಿಗೆ ತುಕ್ಕು ಹಿಡಿದಿರುವ ದೃಶ್ಯಗಳಷ್ಟೇ ಇದ್ದವಂತೆ. ಟೆನ್ನಿಸ್ ಸಂಕೀರ್ಣವಂತೂ ಯಾವತ್ತೂ ಬಳಕೆಯಾಗಲೇ ಇಲ್ಲ.

ಎಲ್ಲದಕ್ಕಿಂತ ದೊಡ್ಡ ದುರಂತವೆಂದರೆ ಒಲಿಂಪಿಕ್ಸ್‌ಗಾಗಿ ಬರುವ ತಮ್ಮ ವಿಶೇಷ ಅತಿಥಿಗಳನ್ನು ಗ್ರೀಸ್‌ನ ಅಧ್ಯಕ್ಷರೇ ಸತ್ಕರಿಸುವ ಒಂದು ಗಂಟೆಯ ಕಾರ್ಯಕ್ರಮಕ್ಕಾಗಿ ಒಂದು ದೊಡ್ಡ ಉಪಾಹಾರ ಗೃಹ ಸಂಕೀರ್ಣವನ್ನು ನಿರ್ಮಿಸಲಾಗಿತ್ತು. ಒಲಿಂಪಿಕ್ಸ್‌ನ ನಂತರ ಇದು ಯಾವತ್ತೂ ಬಳಕೆಯಾಗಲಿಲ್ಲ. ಕೂಟ ಮುಗಿದ ಮೇಲೆ ಮುಚ್ಚಿಟ್ಟ ಪೀಠೋಪಕರಣಗಳ ಪ್ಯಾಕೇಜಿಂಗ್ ಅನ್ನು ಯಾವತ್ತೂ ತೆರೆಯಲೇ ಇಲ್ಲವಂತೆ.

ಈ ಎಲ್ಲವನ್ನೂ ಒಂದರ್ಥದಲ್ಲಿ ಇತಿಹಾಸ ಮರುಕಳಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಯಿತು. ಆದರೆ 1896ರಲ್ಲಿ ಅಂದಿನ ಪ್ರಭುತ್ವವನ್ನು ಉಳಿಸುವುದಕ್ಕೆ ಶ್ರೀಮಂತ ವ್ಯಾಪಾರಿಯೊಬ್ಬರು ಮುಂದಾಗಿ ದೇಣಿಗೆ ನೀಡಿದ್ದರು. ಆದರೆ ನಂತರ ಆರ್ಥಿಕ ಕುಸಿತದ ಸಂದರ್ಭದಲ್ಲಿ ‘ಎಟಿಎಂ’ನಿಂದ ಪೆನ್ಷನ್‌ನ ಹಣ ತೆಗೆಯಲಾಗದೆ ಹಿರಿಯರೊಬ್ಬರು ಕುಸಿದು ಕುಳಿತಿರುವ ದೃಶ್ಯ ವಿಶ್ವವ್ಯಾಪಕವಾಗಿ ಗ್ರೀಸ್‌ನ ಆರ್ಥಿಕ ಕುಸಿತದ ಸಂಕೇತವಾಗಿಬಿಟ್ಟಿತು.

ಇದು ಕೇವಲ ಗ್ರೀಸ್‌ನ ಕಥೆಯಷ್ಟೇ ಅಲ್ಲ. ಪ್ಯಾರಿಸ್, ಆಸ್ಟ್ರೇಲಿಯಾ – ಎಲ್ಲ ದೇಶಗಳೂ ಬೇರೆ ಬೇರೆ ರೀತಿಯಲ್ಲಿ ಇದೇ ಸಮಸ್ಯೆಯನ್ನು ಎದುರಿಸಿವೆ. ಆದರೆ ನಷ್ಟವನ್ನು ಸರಿದೂಗಿಸಿಕೊಳ್ಳಲು ಅವರಿಗೆ ಸಾಧ್ಯವಾಗಿದೆ ಅಷ್ಟೇ. ಗ್ರೀಸ್ ಮಾತ್ರ ಈ ವಿಚಾರದಲ್ಲಿ ಎರಡೆರಡು ಬಾರಿ ಸೋತುಬಿಟ್ಟಿತು ಎಂಬುದು ಇತಿಹಾಸದ ವ್ಯಂಗ್ಯ.

ವೇಗ, ಎತ್ತರ ಮತ್ತು ಬಲಿಷ್ಠ
ಲ್ಯಾಟಿನ್‌ ಭಾಷೆಯ ‘ಸಿಟಿಯಸ್‌, ಅಲ್ಟಿಯಸ್ ಮತ್ತು ಪೋರ್ಟಿಯಸ್‌’ ಎನ್ನುವುದು ಒಲಿಂಪಿಕ್‌ನ ಮೂಲ ಧ್ಯೇಯ. ವೇಗವಾಗಿ, ಎತ್ತರಕ್ಕೆ ಮತ್ತು ಬಲಿಷ್ಠ ಎನ್ನುವ ಅರ್ಥಗಳನ್ನು ಈ ಪದಗಳು ಕೊಡುತ್ತವೆ. ಆರಂಭದ ಒಲಿಂಪಿಕ್ ಕ್ರೀಡಾಕೂಟಗಳು ಓಟ, ಜಿಗಿತ ಮತ್ತು ಭಾರ ಎತ್ತುವಿಕೆಗೆ ಸೀಮಿತವಾಗಿದ್ದ ಕಾರಣ ಈ ಧ್ಯೇಯ ರಚನೆಯಾಗಿತ್ತು.

ಆಧುನಿಕ ಒಲಿಂಪಿಕ್‌ನ ಪ್ರವರ್ತಕ ಎನಿಸಿರುವ ಬ್ಯಾರನ್‌ ಡಿ. ಕೋಬರ್ಟ್‌ ಪ್ರಕಾರ ‘‘ಜೀವನದಲ್ಲಿ ಹೋರಾಡುವುದು ಮುಖ್ಯವೇ ಹೊರತು ಜಯಿಸುವುದು ಅಲ್ಲವೇ ಅಲ್ಲ’’. ಅದೇ ರೀತಿ ‘‘ಒಲಿಂಪಿಕ್ಸ್‌ನ ಮುಖ್ಯ ಸಂಗತಿ ‘ಪಾಲ್ಗೊಳ್ಳುವುದು’. ಇದನ್ನು ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ‘ಉತ್ತಮವಾಗಿ ಹೋರಾಡುವುದು’. ವಿಜಯ ಸಾಧಿಸುವುದಷ್ಟೇ ಅಲ್ಲ’’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.