ADVERTISEMENT

ಮೀಸಲು

ಎಂ.ನಾಗರಾಜ ಶೆಟ್ಟಿ
Published 19 ನವೆಂಬರ್ 2017, 4:18 IST
Last Updated 19 ನವೆಂಬರ್ 2017, 4:18 IST
ಮೀಸಲು
ಮೀಸಲು   

ಮಧುಕರ ಎಸೆದ ಮೂರನೆಯ ಬಾಲನ್ನು, ಕ್ರೀಸ್ ಬಿಟ್ಟು ಮುಂದೆ ಬಂದು ಬಲವಾಗಿ ಹೊಡೆದ ಶಶಿರಾಜ್. ಅವನ ತಂಡದ ಆಟಗಾರರು ‘ಸಿಕ್ಸ್, ಸಿಕ್ಸ್’ ಎಂದು ಬೊಬ್ಬೆ ಹೊಡೆಯುತ್ತಿದ್ದಂತೆ ಚೆಂಡು, ಕಂಪೌಂಡ್ ಬಳಿ ಫೀಲ್ಡ್ ಮಾಡುತ್ತಿದ್ದ ಪ್ರಭಾಕರ ಮೇಲಕ್ಕೆ ಎಗರಿ ಹಿಡಿಯಲು ಯತ್ನಿಸಿದರೂ ಸಿಗದೆ, ಓಣಿಯಲ್ಲಿ ಮಲ ತುಂಬಿಕೊಂಡು ಹೋಗುತ್ತಿದ್ದ ಭಾಗ್ಯಳ ಬಾಲ್ದಿಯೊಳಗೆ ದಬಕ್ಕೆಂದು ಬಿತ್ತು. ಅದು ಬಿದ್ದ ರಭಸಕ್ಕೆ ಹೇಲು ರಸ್ತೆಗೆ ಸಿಡಿದು, ಏನಾಯಿತೆಂದು ತಿಳಿಯದೆ, ಭಾಗ್ಯ ತಲೆ ಮೇಲೆ ಬಟ್ಟೆಯ ಸಿಂಬಿಯನ್ನು ಇಟ್ಟು ಹೊತ್ತುಕೊಂಡಿದ್ದ ಬಾಲ್ದಿಯನ್ನು ನಿಧಾನವಾಗಿ ಕೆಳಕ್ಕೆ ಇಳಿಸಿದಳು. ಚೆಂಡನ್ನು ಹಿಡಿಯಲು ಹೋದ ಹುಡುಗರು ಅದನ್ನು ನೋಡುತ್ತಾ ಅವಾಕ್ಕಾಗಿ ನಿಂತು ಬಿಟ್ಟರು.

ಕಾಸಿಯಾ ಹೈಸ್ಕೂಲಿನ ವಿಶಾಲವಾದ ಮೈದಾನದಲ್ಲಿ ಅಂದು ಬೆಳಿಗ್ಗೆ ಎಂಟು ಗಂಟೆಗೆ ಧ್ವಜಾರೋಹಣವಿತ್ತು. ಹೆಡ್‌ಮಾಸ್ಟ್ರು ಗೋವಿಂದರಾಯರು ತುಂಬಾ ಕಟ್ಟುನಿಟ್ಟಿನ ಮನುಷ್ಯ. ಎಲ್ಲಾ ಹುಡುಗರು ಖಾಕಿ ಚಡ್ಡಿ, ಬಿಳಿ ಅಂಗಿ, ಹುಡುಗಿಯರು ನೀಲಿ ಲಂಗ, ಬಿಳಿ ಬ್ಲೌಸ್ ಧರಿಸಿ ಕಡ್ಡಾಯವಾಗಿ ಕವಾಯತ್ತಿನಲ್ಲಿ ಪಾಲ್ಗೊಳ್ಳಬೇಕೆಂಬ ಸೂಚನೆಯನ್ನು ಹೊರಡಿಸಿದ್ದರು. ಹತ್ತು ದಿನಗಳಿಂದ ಸತತವಾಗಿ ಅದಕ್ಕಾಗಿ ಪ್ರಾಕ್ಟೀಸ್ ಮಾಡಲಾಗಿತ್ತು.ಕವಾಯತ್ತು ಮುಗಿದು ಬಿಸಿಲಲ್ಲಿ ವಿಶ್ರಾಮ್ ಭಂಗಿಯಲ್ಲಿದ್ದ ವಿದ್ಯಾರ್ಥಿಗಳಿಗೆ, ನೆರಳಿನಲ್ಲಿ ನಿಂತುಕೊಂಡು ಪ್ರಜಾಪ್ರಭುತ್ವದ ಬಗ್ಗೆ ಹೇಳುತ್ತಿದ್ದ ಗಣ್ಯರ ಮಾತುಗಳ ಮೇಲೆ ಲಕ್ಷ್ಯವೇನೂ ಇರಲಿಲ್ಲ. ಹೆಡ್‌ಮಾಸ್ಟ್ರು ಗಮನಿಸುತ್ತಾರೆ ಎನ್ನುವ ಕಾರಣಕ್ಕೆ ಚಡಪಡಿಸುತ್ತಾ, ಸಂಕಪ್ಪಣ್ಣನ ಹೋಟೇಲಿನ ಲಾಡು ಯಾವಾಗ ಕೊಡುತ್ತಾರೆ ಎಂದು ಕಾಯುತ್ತಿದ್ದರು.

ಸಭೆ ವಿಸರ್ಜನೆಯಾಗಿ ಕೈಯಲ್ಲಿ ಲಾಡು ಕೊಟ್ಟ ಕೂಡಲೇ ಎಲ್ಲರೂ ಜಾಗ ಖಾಲಿ ಮಾಡಿದರೂ ಹುಡುಗರ ಒಂದು ದಂಡು ಪೀಟಿ ಮೇಸ್ಟ್ರು ಗೋಪಾಲಕೃಷ್ಣ ಅವರ ಹಿಂದೆ ಬಿದ್ದಿತ್ತು. ಹಿಂದಿನ ದಿನವೇ ಅವರೆಲ್ಲಾ ಕಲೆತು, ಧ್ವಜ ಏರಿಸುವ ಕಾರ್ಯಕ್ರಮ ಮುಗಿದ ಮೇಲೆ ಕ್ರಿಕೆಟ್ ಆಡುವುದೆಂದು ತೀರ್ಮಾನಿಸಿದ್ದರು. ಶಾಲೆಯ ಆವರಣದಲ್ಲಿ ಆಟವಾಡಬೇಕಾದರೆ ಪೀಟಿ ಮಾಸ್ಟ್ರ ಒಪ್ಪಿಗೆ ಬೇಕು. ಅವರು ಒಪ್ಪಿದರೆ ಹೈಸ್ಕೂಲಿನ ಆಟದ ಸಾಮಾನು ಸಿಗುತ್ತಿತ್ತು. ಪೀಟಿ ಮಾಸ್ಟ್ರ ಅಚ್ಚುಮೆಚ್ಚಿನ ಆಟಗಾರ ಶಶಿರಾಜ್, ‘ಇವತ್ತೊಂದಿನ ಆಡುತ್ತೇವೆ, ಬಿಡಿ ಸಾರ್’ ಎಂದು ಅವರ ಹಿಂದೆ, ಮುಂದೆ ಸುತ್ತುತ್ತಿದ್ದ.

ADVERTISEMENT

ಗೋಪಾಲಕೃಷ್ಣ ಮಾಸ್ಟ್ರಿಗೆ ಹುಡುಗರನ್ನು ಆಡಲು ಬಿಡಬಾರದು ಎಂದೇನಿರಲಿಲ್ಲ. ರಜಾ ದಿನಗಳಲ್ಲಿ ಎಷ್ಟೋ ಸಲ ಅವರು ಹುಡುಗರಿಗೆ ತರಬೇತಿಗೆ ಬರಲು ಹೇಳಿದ್ದಿದೆ. ಆದರೆ ಅಂದು ಎಲ್ಲಾ ದೈಹಿಕ ಶಿಕ್ಷಕರೂ ಕಡ್ಡಾಯವಾಗಿ ನೆಹರೂ ಮೈದಾನಕ್ಕೆ ಹೋಗಬೇಕಿದ್ದುದರಿಂದ ಕ್ರಿಕೆಟ್ ಆಟದ ವಸ್ತುಗಳನ್ನು ಹುಡುಗರ ಕೈಗೊಪ್ಪಿಸಿ ಹೋಗಲು ಅವರಿಗೆ ಇಷ್ಟವಿರಲಿಲ್ಲ. ಆಟದ ಸಾಮಾನುಗಳು ಸಿಕ್ಕರೆ ಅವುಗಳು ಕೋತಿಗಳಂತಾಡುತ್ತವೆ ಎನ್ನುವುದು ಅವರಿಗೆ ಗೊತ್ತು.

ದೈಹಿಕ ಶಿಕ್ಷಕರ ಬಗೆಗೆ ಸಬ್ಜೆಕ್ಟ್ ಟೀಚರ್‌ಗಳಿಗೆ ಒಂದು ಬಗೆಯ ಅಸೂಯೆ. ಯಾವುದೋ ಒಂದು ತರಬೇತಿ ಮುಗಿಸಿ ಬಂದರೆ ಆಯಿತು; ದಿನಕ್ಕೆ ಅಬ್ಬಬ್ಬಾ ಎಂದರೆ ಎರಡು ಗಂಟೆಗಳ ಕೆಲಸ. ವರ್ಷದಲ್ಲಿ ಒಂದೆರಡು ಸಲ, ಸ್ವಾತಂತ್ರ್ಯ ದಿನಾಚರಣೆ, ಪ್ರಜಾಪ್ರಭುತ್ವ ಅಂತ ಅದೇ ಬ್ರಿಟಿಷರ ಕಾಲದ ಕವಾಯತ್ ಮಾಡಿಸಿಬಿಟ್ಟರೆ ಮುಗಿಯಿತು. ಸಂಬಳ ಏನೂ ಕಡಿಮೆಯಿಲ್ಲ. ವಿಷಯ ತಜ್ಞರು ದಿನವಿಡೀ ಒಂದಲ್ಲ ಒಂದು ಕ್ಲಾಸ್ ತೆಗೆದುಕೊಳ್ಳುವ ಜತೆಗೆ ಲೆಸನ್ ನೋಟ್ಸ್, ಸ್ಪೆಷಲ್ ಕ್ಲಾಸ್‌ಗಳನ್ನು ಮಾಡಬೇಕು. ಇಷ್ಟಲ್ಲದೆ ವಾರ್ಷಿಕ ಪರೀಕ್ಷೆಯಲ್ಲಿ ನಿಗದಿಯಾದ ಮಟ್ಟದಲ್ಲಿ ಫಲಿತಾಂಶಗಳು ಬರದಿದ್ದರೆ ಅವರನ್ನೇ ಹೊಣೆ ಮಾಡಲಾಗುತ್ತದೆ. ಆಗಾಗ್ಗೆ ಜರುಗುವ ಇನ್‌ಸ್ಪೆಕ್ಷನ್‌ಗಳಲ್ಲೂ ಪೀಟಿ ಟೀಚರ್‌ಗಳನ್ನು ಯಾರೂ ವಿಚಾರಿಸಲು ಹೋಗುವುದಿಲ್ಲ. ಇವೆಲ್ಲವುಗಳ ಜತೆಗೆ, ಗೋಪಾಲಕೃಷ್ಣ ಅವರನ್ನು ಮುಖ್ಯೋಪಾಧ್ಯಾಯರು ಹೆಚ್ಚಾಗಿ ಹಚ್ಚಿಕೊಂಡಿರುವುದು ಕೂಡಾ ಕೆಲವು ಶಿಕ್ಷಕರ ಅಸೂಯೆಗೆ ಕಾರಣವಾಗಿತ್ತು.

ಇದು ಗೋಪಾಲಕೃಷ್ಣ ಅವರಿಗೆ ತಿಳಿಯದ್ದೇನಲ್ಲ. ಕಾಸಿಯಾ ಹೈಸ್ಕೂಲಿಗೆ ಥ್ರೋಬಾಲ್, ಕೊಕ್ಕೋ, ವಾಲಿಬಾಲ್, ಕಬಡ್ಡಿ ಪಂದ್ಯಗಳಲ್ಲಿ ವರ್ಷಂಪ್ರತಿ ರಾಜ್ಯ ಮಟ್ಟದಲ್ಲಿ ಅಥವಾ ಜಿಲ್ಲಾ ಮಟ್ಟದಲ್ಲಿ, ಒಂದಲ್ಲ ಒಂದು ಪ್ರಶಸ್ತಿ ಲಭಿಸುತ್ತಿತ್ತು. ಇದಕ್ಕಾಗಿ ವರ್ಷಪೂರ್ತಿ ಗೋಪಾಲಕೃಷ್ಣ ಮೈದಾನದಲ್ಲಿ ಬೆವರು ಸುರಿಸಬೇಕಾಗಿತ್ತು. ಪತ್ರಿಕೆಗಳಲ್ಲಿ ಪ್ರಶಸ್ತಿಯನ್ನು ಪ್ರದರ್ಶಿಸಿ, ಆಟಗಾರರೊಂದಿಗೆ ಗೋಪಾಲಕೃಷ್ಣ ಮತ್ತು ಹೆಡ್‌ಮಾಸ್ಟ್ರು ಬೀಗುತ್ತಾ ಕುಳಿತಿರುವ ಭಾವಚಿತ್ರ ಪ್ರಕಟವಾಗುವಾಗ, ಕಷ್ಟಪಡುವುದು ಹೊಯಿಗೆಬಜಾರಿನ ಗಟ್ಟಿ ಮುಟ್ಟಿನ ಹುಡುಗರು, ಮೆರೆಯುವುದು ಇವರಿಬ್ಬರು ಹಕ್ಕಬುಕ್ಕರು ಎಂದು ಹಿಂದಿನಿಂದ ಆಡಿಕೊಳ್ಳುವುದು ಪೀಟಿ ಮೇಷ್ಟ್ರ ಕಿವಿಗೆ ಬಿದ್ದಿತ್ತು. ದೈಹಿಕ ಸಾಮರ್ಥ್ಯದ ಜತೆಗೆ ಚುರುಕುತನ, ನೈಪುಣ್ಯಗಳು ಇರಬೇಕಾಗುವ ಫುಟ್‌ಬಾಲ್, ಕ್ರಿಕೆಟ್ ಆಟಗಳಲ್ಲಿ ಈ ವರೆಗೆ ಜಯಿಸಲಾಗಲಿಲ್ಲ ಎನ್ನುವ ಕೊರತೆಯೂ ಅವರನ್ನು ಕಾಡುತ್ತಿತ್ತು. ಫುಟ್‌ಬಾಲ್ ತಂಡವನ್ನು ಕಟ್ಟುವುದು ಸುಲಭದ ಕೆಲಸವಾಗಿರಲಿಲ್ಲ. ಹೆಚ್ಚಿನ ಹುಡುಗರು ಅದರಲ್ಲಿ ಆಸ್ಥೆ ವಹಿಸಿ ನಿರಂತರ ತರಬೇತಿಯಲ್ಲಿ ತೊಡಗುತ್ತಿರಲಿಲ್ಲ.

ಶಶಿರಾಜ್ ಹೈಸ್ಕೂಲಿಗೆ ಸೇರಿದ ಮೇಲೆ ಕ್ರಿಕೆಟ್‌ನಲ್ಲಿ ಗೆಲ್ಲಬಹುದು ಎನ್ನುವ ಆಸೆ ಅವರಲ್ಲಿ ಕುಡಿಯೊಡೆದಿತ್ತು. ಎರಡು ವರ್ಷಗಳ ಪ್ರಯತ್ನದ ಮೇಲೆ ಕಳೆದ ವರ್ಷ ಮೊದಲ ಬಾರಿಗೆ, ಕಾಸಿಯಾ ಹೈಸ್ಕೂಲ್ ಜಿಲ್ಲಾ ಮಟ್ಟದಲ್ಲಿ ರನ್ನರ‍್ ಅಪ್ ಆಗಿತ್ತು. ಒಬ್ಬ ಒಳ್ಳೆಯ ಬೌಲರ್ ಇಲ್ಲದುದರಿಂದ ಕೊನೆಯ ಪಂದ್ಯದಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಈ ಬಾರಿ ಆ ಕೊರತೆ ನೀಗಿತ್ತು. ಎಂಟನೇ ತರಗತಿಗೆ ಪ್ರವೇಶ ಪಡೆದಿದ್ದ ಮಧುಕರ ಎಡಗೈಯಲ್ಲಿ ಉತ್ತಮವಾಗಿ ಚೆಂಡೆಸೆಯುತ್ತಿದ್ದ. ಶಶಿರಾಜ್ ಹೈಸ್ಕೂಲಿನ ಕೊನೆಯ ವರ್ಷದಲ್ಲಿದ್ದ. ಅವನು ಹೋದ ಮೇಲೆ ಮತ್ತೊಬ್ಬ ಅಂತಹ ದಾಂಡಿಗನನ್ನು ತಯಾರು ಮಾಡುವುದು ಸುಲಭವಲ್ಲ ಎನ್ನುವುದನ್ನು ಅರಿತಿದ್ದ ಗೋಪಾಲಕೃಷ್ಣ, ಏನಾದರೂ ಮಾಡಿ ಈ ಸಲ ಪ್ರಶಸ್ತಿ ಗೆಲ್ಲಲೇಬೇಕು ಎನ್ನುವ ತವಕದಲ್ಲಿದ್ದರು.

ಹೈಸ್ಕೂಲಿನ ಮೈದಾನದಲ್ಲಿ ಹುಡುಗರನ್ನು ಆಡಲು ಬಿಟ್ಟು ಹೋದರೆ, ‘ನೋಡಿ, ಆಟದ ಸಾಮಾನುಗಳನ್ನು ಕೊಟ್ಟು ಹೋಗಿದ್ದಾನೆ, ಎಷ್ಟು ಬೇಜವಾಬ್ದಾರಿ’ ಎಂದು ಯಾರಾದರೂ ಹೆಡ್‌ಮಾಸ್ಟ್ರ ಕಿವಿ ಊದುತ್ತಾರೆನ್ನುವುದು ಪೀಟಿ ಮಾಸ್ಟ್ರಿಗೆ ಗೊತ್ತಿತ್ತು. ಅದಕ್ಕಾಗಿ ಹುಡುಗರು ಕೇಳಿದಾಗ ಒಪ್ಪಿಕೊಳ್ಳದ ಗೋಪಾಲಕೃಷ್ಣ, ಒತ್ತಾಯ ಅತಿಯಾದಾಗ ಷರತ್ತು ಬದ್ಧವಾಗಿ, ಶಶಿರಾಜ್ ಮತ್ತು ಮಧುಕರನ ಸಹಿಯನ್ನು ರಿಜಿಸ್ಟರ್‌ನಲ್ಲಿ ತೆಗೆದುಕೊಂಡು, ಕ್ರಿಕೆಟ್ ಆಟದ ಸಾಮಾನುಗಳನ್ನು ಕೊಟ್ಟರು. ಹೈಸ್ಕೂಲಿನ ಮೈದಾನದಲ್ಲಿ ಆಡುವಂತಿಲ್ಲ, ಬೆಳಿಗ್ಗೆ ಹೈಸ್ಕೂಲ್ ಪ್ರಾರಂಭವಾಗುವ ಹೊತ್ತಿಗೆ ಆಟದ ಸಾಮಾಗ್ರಿಗಳನ್ನು ಹಾಗೆಯೇ ತಂದೊಪ್ಪಿಸಬೇಕು ಎಂದು ಮತ್ತೆ ಮತ್ತೆ ಹೇಳಿದರು.

ಹೈಸ್ಕೂಲಿಗೆ ಸುಮಾರು ಕಿಲೋಮೀಟರ್‌ನಷ್ಟು ದೂರದಲ್ಲಿ ಮಧುಕರನ ಮನೆಯಿತ್ತು. ಸಾಲಾಗಿ ಕಟ್ಟಿದ್ದ ನಾಲ್ಕು ಮನೆಗಳ ಮುಂದೆ ವಿಶಾಲವಾದ ಅಂಗಳವಿದ್ದು ಮೆಣಸು, ಹಪ್ಪಳ, ಮೀನು ಒಣಗಿಸಲು ಅದನ್ನು ಬಳಸುತ್ತಿದ್ದುದರಿಂದ ಸೆಗಣಿ ಬಳಿದು, ಕಲ್ಲು, ಮುಳ್ಳುಗಳಿಲ್ಲದೆ, ಆಟಕ್ಕೆ ಪ್ರಶಸ್ತವಾಗಿತ್ತು. ಗಂಡಸರು ಕೆಲಸಕ್ಕೆ ಹೊರಗೆ ಹೋಗುತ್ತಿದ್ದು, ಮನೆಯಲ್ಲಿದ್ದ ಹೆಂಗಸರು ಬೀಡಿ ಕಟ್ಟುತ್ತಲೋ, ಅಡುಗೆ ಮಾಡುತ್ತಲೋ ಇರುತ್ತಿದ್ದು ಹುಡುಗರ ತಂಟೆಗೆ ಬರುತ್ತಿರಲಿಲ್ಲ.

ಶಶಿರಾಜನ ಮಾರ್ನಮಿಕಟ್ಟೆ, ಮಧುಕರನ ಬಪ್ಪಾಲ್ ತಂಡಗಳಿಗೆ ತಲಾ ಎಂಟೆಂಟು ಆಟಗಾರರು ಎಂದು ನಿಗದಿಯಾಯಿತು. ಮಧುಕರ ಬಪ್ಪಾಲ್ ತಂಡಕ್ಕೆ ಒಬ್ಬ ಹೆಚ್ಚುವರಿ ಆಟಗಾರ ಬೇಕೆಂದು ಪಟ್ಟು ಹಿಡಿದ. ಅವನು ಹಾಗೆ ಹೇಳಲು ಕಾರಣ, ಶಶಿರಾಜನನ್ನು ಔಟ್ ಮಾಡುವುದು ಕಷ್ಟ ಎನ್ನುವುದಕ್ಕಿಂತಲೂ, ಬೆಟ್ಟಿನ ಪ್ರಕಾರ, ಗೆದ್ದ ತಂಡದವರಿಗೆ ಸೋತವರಿಂದ ಸಿಗುವ ಭಟ್ರ ಹೋಟೇಲಿನ ಬಾಳೆಕಾಯಿ ಪೋಡಿಯ ಮೇಲಿನ ಆಸೆ. ಒಬ್ಬ ಆಟಗಾರನನ್ನು ಕೊಟ್ಟರೆ ಹೆಚ್ಚು ರನ್‌ಗಳನ್ನು ಕೂಡಿಹಾಕಬಹುದು ಎನ್ನುವುದು ಅವನ ಲೆಕ್ಕಾಚಾರ. ಅದರಿಂದಾಗಿ ಮಧುಕರನ ತಂಡದಲ್ಲಿ ಒಂಬತ್ತು ಹುಡುಗರು ಸೇರ್ಪಡೆಯಾದರು. ಹತ್ತತ್ತು ಓವರುಗಳ ಪಂದ್ಯದಲ್ಲಿ, ನಾಣ್ಯ ಚಿಮ್ಮಿ ಗೆದ್ದ ಮಧುಕರನ ತಂಡ ಮೊದಲು  ಬ್ಯಾಟ್ ಮಾಡಿತು.

ಮನೆಗಳ ಹಂಚಿನ ಮೇಲೆ ಹೊಡೆದರೆ ಔಟ್, ಕಾಂಪೌಂಡಿಗೆ ಬಾಲ್ ತಗಲಿದರೆ ನಾಲ್ಕು ರನ್‌ಗಳು, ನೇರವಾಗಿ ಕಾಂಪೌಂಡಿನಾಚೆ ಹೊಡೆದರೆ ಆರು ರನ್‌ಗಳು ಎನ್ನುವ ನಿಯಮಗಳನ್ನು ರೂಪಿಸಿ, ಕಾಲು ನೋವು ಎಂದು ಮನೆಯ ಜಗಲಿಯಲ್ಲಿ ಆರಾಮವಾಗಿ ಕೂತ ಮೂರನೇ ಅಂಪೈರ್ ರಾಧಾಕೃಷ್ಣನ ಕಣ್ಗಾವಲಲ್ಲಿ ಪಂದ್ಯ ಪ್ರಾರಂಭವಾಯಿತು. ಮೊದಲನೆಯ ಓವರಿನಲ್ಲಿ ಒಂದು ಬೌಂಡರಿ ಸಹಿತ ಎಂಟು ರನ್‌ಗಳು ಬಂದವು. ಎರಡನೆಯ ಓವರಿನಲ್ಲಿ ಧನರಾಜ್ ಹೊಡೆದ ಬಾಲ್ ಹೆಂಚಿನ ಮೇಲೆ ಬಿದ್ದು, ಮನೆಯ ಒಳಗಿದ್ದ ಮುತ್ತಕ್ಕ ಹೊರಬಂದು ಬೈದು, ಔಟ್ ಅಂತ ಮೂರನೆಯ ಅಂಪೈರ್ ಬೆರಳು ಎತ್ತಿ ಧನರಾಜ ಜಗಲಿಯೆಂಬ ಪೆವಿಲಿಯನ್‌ಗೆ ಬಂದು ಕೂತಿದ್ದಾಯಿತು. ಶಶಿಯ ಟೀಮಿನಲ್ಲಿ ಸಮರ್ಥ ಬೌಲರ್‌ಗಳ ಕೊರತೆ ಇದ್ದುದರಿಂದ ಹತ್ತು ಓವರ್‌ಗಳು ಮುಗಿದಾಗ ಮಧುಕರನ ತಂಡ ಎಂಬತ್ತೊಂದು ರನ್‌ಗಳನ್ನು ಗಳಿಸಿ ಒಳ್ಳೆಯ ಪರಿಸ್ಥಿತಿಯಲ್ಲಿತ್ತು.

ಎರಡನೆಯ ಬಾರಿಗೆ ಆಡಿದ ಶಶಿಯ ತಂಡ ಒಂದು ದುರದೃಷ್ಟಕರ ರನ್ ಔಟ್ ಸೇರಿದಂತೆ ಎರಡು ಓವರ್‌ಗಳಲ್ಲಿ, ಎರಡು ವಿಕೆಟ್‌ಗಳನ್ನು ಕಳೆದುಕೊಂಡು, ಕೇವಲ ಹತ್ತು ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಎರಡನೆಯ ವಿಕೆಟ್ ಪತನವಾದಾಗ ಬ್ಯಾಟ್ ಮಾಡಲು ಬಂದ ಶಶಿರಾಜನ ಮೇಲೆ ತಂಡವನ್ನು ಯಶಸ್ವಿಯಾಗಿ ದಡಸೇರಿಸುವ ಜವಾಬ್ದಾರಿಯಿತ್ತು. ಅವನು ಬೌಂಡರಿ ಬಾರಿಸುತ್ತಾನೆಂದು ಗೊತ್ತಿದ್ದ ಮಧುಕರ ತಂಡದ ಎಲ್ಲಾ ಫೀಲ್ಡರುಗಳನ್ನು ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ. ಶಶಿರಾಜ್ ಎದುರಿಸಿದ ಮೊದಲೆರಡು ಬಾಲ್‌ಗಳಲ್ಲಿ ಎರಡೆರಡು ರನ್‌ಗಳು ಬಂದವು. ಆದ್ದರಿಂದ ಅವನ ತಂಡದವರು ಸಿಕ್ಸ್, ಸಿಕ್ಸ್ ಎಂದು ಕೂಗುತ್ತಿದ್ದರು.

ಶಶಿರಾಜ್ ಹೊಡೆದ ಕ್ರಿಕೆಟ್ ಬಾಲ್ ಬಾಲ್ದಿಯೊಳಗೆ ಅಂತರ್ಧಾನವಾಗಿದ್ದನ್ನು ನೋಡಿ ಕಾಂಪೌಂಡ್ ಬಳಿ ಫೀಲ್ಡ್ ಮಾಡುತ್ತಿದ್ದ ಪ್ರಭಾಕರ, ಗೋಡೆಗೆ ಒರಗಿಸಿಟ್ಟಿದ್ದ ಸ್ಟ್ಯಾಂಡ್ ಇಲ್ಲದ ಹರ್‌ಕ್ಯುಲಿಸ್ ಸೈಕಲನ್ನು ತೆಗೆದ. ಅದಕ್ಕೆ ಕೈಹೆಣಿಗೆಯ ವೈರ್ ಬುಟ್ಟಿಯನ್ನು ನೇತು ಹಾಕಿತ್ತು. ಅದನ್ನು ತೋರಿಸುತ್ತಾ, ಅತ್ಯಂತ ಪ್ರಾಮಾಣಿಕವಾಗಿ, ‘ನಾನು ಹೋಗುತ್ತೇನೆ. ನನಗೆ ಅರ್ಜೆಂಟ್ ಉಂಟು. ದೇವಸ್ಥಾನದ ಪೂಜೆಗೆ ಹೂ ತರಲು ಹೇಳಿದ್ದಾರೆ’ ಎಂದು ಹೊರಡಲನುವಾದ.

‘ನೋಡು, ನೋಡು. ಇಷ್ಟು ಸಮಯ ಅವನಿಗೆ ಅರ್ಜೆಂಟ್ ಇರಲಿಲ್ಲ. ಈಗ ಹೊರಟಿದ್ದಾನೆ’ ಎಂದು ಜಗಲಿಯ ಮೇಲೆ ಕೂತಿದ್ದ ರಾಧಾಕೃಷ್ಣ ಹೇಳಿದ. ಅವನಿಗೂ, ಪ್ರಭಾಕರನಿಗೂ ಅಷ್ಟಕ್ಕಷ್ಟೇ.

‘ನಿನಗೇನು ಗೊತ್ತು ಮಾರಾಯ, ನನ್ನ ತಾಪತ್ರಯ. ಬೇಗ ಮುಗೀತದೆ ಅಂದುಕೊಂಡಿದ್ದೆ’ ಪ್ರಭಾಕರ ಹೇಳಿದಾಗ, ‘ಹೇಗೂ ಹೋಗ್ತಿಯಲ್ಲ. ಭಟ್ರ ಹೋಟೇಲಿನ ಬಿಸಿ ಬಿಸಿ ಪೋಡಿ ತಿಂದುಕೊಂಡು ಹೋಗು’ ಎಂದು ರಾಧಾಕೃಷ್ಣ ಕಿಚಾಯಿಸಿದ.

‘ನಾವಿಲ್ಲಿ ಸಾಯ್ತಾ ಇದ್ದೇವೆ. ಇವನದೆಂತ ಸಾವು ಮಾರ್‍ರೆ’ ಎಂದು ಬಾಲ್‌ನ ಬಗ್ಗೆ ಮಂಡೆಬಿಸಿ ಮಾಡಿಕೊಂಡಿದ್ದ ಶಶಿ ರಾಧಾಕೃಷ್ಣನ ಮೇಲೆ ರೇಗಿ, ‘ಸುಮ್ಮನೆ ಕೂತರೆ ಆಗುವುದಿಲ್ಲ, ಕೈ ಹಾಕಿ ತೆಗಿ ನೋಡೋಣ’ ಎಂದ. ‘ಇದೊಳ್ಳೆ ಕತೆ. ನೀವು ಆಡ್‌ತಿದ್ದಿದ್ದು, ನಾನು ತೆಗಿಬೇಕಾ? ಬೇಕಾದ್ರೆ ತಕ್ಕೊಳ್ಳಿ. ಪೀಟಿ ಮಾಸ್ಟ್ರತ್ರ ಸೈನ್ ಮಾಡಿದ್ದು ಯಾರು?’ ಎಂದು ಅವನೂ ಮನೆಯ ದಾರಿ ಹಿಡಿದ.

ಗೋಪಾಲಕೃಷ್ಣ ಮಾಸ್ಟ್ರ ಹತ್ತಿರ ಯಾವ ನೆವವನ್ನೂ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹಂಪನ್‌ಕಟ್ಟೆಗೆ ಹೋಗಿ ಹೊಸ ಬಾಲ್ ತರುವುದು ಹುಡುಗರಿಂದ ಆಗದ ಕೆಲಸ; ಕ್ರಿಕೆಟ್ ಬಾಲ್ ಕೊಂಡುಕೊಳ್ಳುವಷ್ಟು ಹಣವೂ ಅವರ ಹತ್ತಿರ ಇರಲಿಲ್ಲ.

ಶಶಿರಾಜ್ ತಾನೇ ತೆಗೆಯುತ್ತೇನೆ ಎಂದು ಬಾಲ್ದಿಯ ಸಮೀಪಕ್ಕೆ ಹೋದ. ಕುಳ್ಳಗಿದ್ದ ಅವನ ಚೋಟುದ್ದದ ಕೈಗಳಿಗೆ, ಒಂದೂಕಾಲು ಅಡಿಗಿಂತ ಎತ್ತರವಿದ್ದ ತಗಡಿನ ಬಾಲ್ದಿಯ ತಳವನ್ನು ಸೇರಿದ್ದ ಚೆಂಡು ನಿಲುಕುವುದು ಅಸಾಧ್ಯವಾಗಿತ್ತು.ಬಾಲ್ದಿಯೊಳಗೆ ಇಣುಕುತ್ತಲೇ ಪೂರ್ತಿಯಾಗಿ ತುಂಬಿಕೊಂಡಿದ್ದ ಕಕ್ಕಸು ಕಣ್ಣಿಗೆ ರಾಚಿ, ಅದರ ವಾಸನೆಗೆ ಹಿಂದೆ ಸರಿದ. ಎದುರಿನಲ್ಲಿ ಮಧುಕರನ ಮನೆ ಇದ್ದುದರಿಂದ ಅವನೂ ಕೈ ಹಾಕಲು ಹಿಂಜರಿದ. ಒಮ್ಮೆ ಬೈದು ಹೋಗಿದ್ದ ಮುತ್ತಕ್ಕ ಹೊರಗೆ ಬಂದು ನೋಡಿ, ಒಂದಕ್ಕೆರಡು ಸೇರಿಸಿ ಮನೆಯವರಿಗೆ ಹೇಳಬಹುದೆಂಬ ಭಯ ಅವನಿಗಿತ್ತು.

ಪ್ರತಿಕೂಲ ಪರಿಸ್ಥಿತಿಯಿಂದ ಪಂದ್ಯ ರದ್ದಾಗುವ ಸೂಚನೆ ಸಿಗುತ್ತಿದ್ದಂತೆ, ಕೆಲವರು ಹೇಳದೆ, ಕೇಳದೆ ಜಾಗ ಖಾಲಿ ಮಾಡಿದರು. ರಾಮ ಒಬ್ಬೊಬ್ಬರೇ ಹೋಗುತ್ತಿರುವುದನ್ನು ನೋಡುತ್ತಿದ್ದ. ರಾಮನ ತಂದೆ, ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿ ವಿಶ್ವನಾಥ ಶೆಟ್ಟರು. ಅವರು ಆಗಾಗ್ಗೆ ಹೀಯಾಳಿಸುತ್ತಿದ್ದುದುಂಟು. ರಾಮನಿಗೆ ‘ಕಕ್ಕಸು’ ಎಂದು ಹೇಳಲು ಬರುತ್ತಿರಲಿಲ್ಲ, ‘ಕಕ್ಕುಸು’ ಎನ್ನುತ್ತಿದ್ದ. ಸುಮಾರು ಸಲ ತಿದ್ದಿ ಹೇಳಿದರು. ಮತ್ತೆ ಮತ್ತೆ ಅವನ ಬಾಯಿಯಿಂದ ಕಕ್ಕುಸೇ ಬರುತ್ತಿತ್ತು. ವಿಶ್ವನಾಥ ಶೆಟ್ಟರು ಸಿಟ್ಟಾಗಿ, ನನ್ನ ಮರ್ಯಾದೆ ತೆಗಿತಿ ಎಂದು ರಾಮನ ಕುಂಡೆಗೆ ಹುಣಸೆ ಮರದ ಅಡರಲ್ಲಿ ಹೊಡೆದಿದ್ದರು. ಅದರ ನೆನಪು ಬಂದು, ‘ಪಪ್ಪನಿಗೆ ತಾಳಮದ್ದಳೆಗೆ ಹೋಗಲಿಕ್ಕುಂಟು, ಮನೆಗೆ ಬೇಗ ಬರಲಿಕ್ಕೆ ಹೇಳಿದ್ದಾರೆ, ಹೋಗ್ತೇನೆ’ ಎಂದು ಉತ್ತರಕ್ಕೆ ಕಾಯದೆ ಪಿತೃ ವಾಕ್ಯ ಪರಿಪಾಲನೆಗೆ ಹೊರಟುಬಿಟ್ಟ.

‘ನಾನು ತೆಗಿತಿದ್ದೆ, ಮೊನ್ನೆ ನಮ್ಮ ಕಕ್ಸು ಕ್ಲೀನ್ ಮಾಡಿದ್ದಲ್ವಾ, ಅದರ ನಾತ ಇನ್ನೂ ಮೂಗಲ್ಲುಂಟು’ ಎಂದ ಫ್ರಾನ್ಸಿಸ್. ಅವರ ಮನೆಯ ಸೆಪ್ಟಿಕ್ ಪಾಯಿಖಾನೆ ತುಂಬಿಹೋಗಿ ನೀರು ಸುರಿದಷ್ಟೂ ಮಲ ಹೊರಗೆ ಬರುತ್ತಿತ್ತು. ಥಾಮಸ್ ಪರ್ಬು ಮಲದ ಗುಂಡಿಗೆ ಮುಚ್ಚಿದ್ದ ಹಾಸುಗಲ್ಲುಗಳನ್ನು ಎತ್ತಿಸಿ, ತೋಟಿಗಳಿಂದ ರಾತ್ರಿಯೆಲ್ಲಾ ಕೆಲಸ ಮಾಡಿಸಿ, ಅದನ್ನು ಖಾಲಿ ಮಾಡಿಸಿದ್ದರು. ಆ ವಾಸನೆಗೆ ಕೂರಲೂ ನಿಲ್ಲಲೂ ಆಗುತ್ತಿರಲಿಲ್ಲ. ಏನು ತಿಂದರೂ ಹೇಲು ತಿಂದಂತೆ ಆಗುತ್ತಿತ್ತು.

ಮನೆಯಲ್ಲಿ ಇರಲಾರದೆ ಪ್ರಾನ್ಸಿಸ್ ಕೇಳಿದ್ದ, ‘ಡ್ಯಾಡಿ, ಈ ವಾಸ್ನೆಗೆ ಅವ್ರು ಹೇಗೆ ಕೆಲಸ ಮಾಡ್ತಾರೆ?’ ಪರ್ಬುಗಳು ಹೇಳಿದ್ದು, ‘ಚೆನ್ನಾಗಿ ಕುಡಿದು ಬರ‍್ತಾರೆ. ಸ್ಮೆಲ್ ಗೊತ್ತಾಗೂದಿಲ್ಲ’ ಮಮ್ಮಿ, ‘ಮೂಗಿನ ಒಳಗೆ ಏನೋ ಇಡ್ತಾರೆ’ ಎಂದರು. ಫ್ರಾನ್ಸಿಸ್ ಭಾಗ್ಯಳ ಮೂಗನ್ನು ನೋಡುತ್ತಿದ್ದ; ಅಲ್ಲಿ ಏನೂ ಕಾಣಿಸುತ್ತಿರಲಿಲ್ಲ.

ರವಿ ಗೆಳೆಯರ ಗುಂಪಿನಲ್ಲಿ ಆಪತ್ಬಾಂಧವನಂತೆ, ಯಾವ ಕೆಲಸಕ್ಕೂ ಸಿದ್ಧ. ಅವನು ಮತ್ತು ಮಧುಕರ ಆಪ್ತ ಸ್ನೇಹಿತರು. ತೆಗೆಯುತ್ತೀಯಾ ಎಂದು ನೇರವಾಗಿ ಅವನನ್ನು ಕೇಳಲಾರದೆ ಮಧುಕರ ಅವನ ಮುಖ ನೋಡಿದ. ರವಿ ಕೂಡಾ ಅದೇ ಯೋಚನೆಯಲ್ಲಿದ್ದ.

ರವಿಯ ಮನೆಯಲ್ಲಿ ಕಕ್ಕಸು ಹಿಂದುಗಡೆ ಇತ್ತು. ಮಲವನ್ನು ಬಾಚಲು ಮನೆಯ ಮುಂದಾಗಿ ಹೋಗಬೇಕು. ಅಂಗಳದಲ್ಲಿ ಹಗ್ಗವನ್ನು ಕಟ್ಟಿ, ಬಟ್ಟೆ ಒಣಗಲು ಹಾಕುತ್ತಿದ್ದರು. ಒಮ್ಮೆ ಪೂರ್ತಿಯಾಗಿ ಬಟ್ಟೆಗಳನ್ನು ಹಾಕಿದ್ದರಿಂದ ಹೋಗಲು ದಾರಿ ಇಲ್ಲದೆ, ಭಾಗ್ಯ ಒಗೆದು ಹಾಕಿದ್ದ ಸೀರೆಯನ್ನು ಸರಿಸಿದಳು. ಅದನ್ನು ರವಿಯ ಅಮ್ಮ ನೋಡಿಬಿಟ್ಟರು.

‘ಜಾಗ ಇಲ್ಲದೆ ಇದ್ರೆ ನಮ್ಮನ್ನು ಕರಿಬೇಕು, ಬಟ್ಟೆ ಮುಟ್ಟಲು ನಿನಗೆಷ್ಟು ಧೈರ್ಯ’ ಎಂದು ಅವರು ಭಾಗ್ಯಳಿಗೆ ಚೆನ್ನಾಗಿ ಬೈದು, ಬಟ್ಟೆಯನ್ನು ಮತ್ತೆ ಒಗೆಯಲು ಹಾಕಿದರು. ಅದನ್ನು ರವಿ ನೋಡಿದ್ದ. ಹೇಲಿಗೆ ಕೈಹಾಕಿ ಬಾಲ್ ತೆಗೆದೆ ಎಂದು ಗೊತ್ತಾದರೆ ಊಟ ಕೂಡಾ ಹಾಕುವುದಿಲ್ಲ ಎನ್ನುವುದು ಅವನಿಗೆ ಖಾತರಿಯಿತ್ತು.

ಹುಡುಗರು ಒಬ್ಬರ ಮುಖ ಒಬ್ಬರು ನೋಡುತ್ತಾ ನಿಂತಿರುವುದನ್ನು ನೋಡುತ್ತಿದ್ದ ಭಾಗ್ಯ ಬಾಲ್ದಿಯನ್ನು ಎತ್ತಿ ತಲೆಯ ಮೇಲಿಟ್ಟುಕೊಂಡಳು.

ಅದನ್ನು ಗಮನಿಸಿದ ಮಧುಕರ, ‘ನಿಲ್ಲು, ನಿಲ್ಲು, ಬಾಲ್ ಬೇಕು’ ಎಂದು ಅವಳ ದಾರಿಗೆ ಅಡ್ಡವಾಗಿ ಹೋದ. ‘ಬೇಕಾದರೆ ತೆಗಿರಿ’ ಎಂದು ಭಾಗ್ಯ ಬಾಲ್ದಿಯನ್ನು ಮತ್ತೆ ಇಳಿಸಿದಳು. ಶಶಿರಾಜ್ ಮಧುಕರನ ಕಿವಿಯಲ್ಲಿ ಏನೋ ಹೇಳಿದ. ಅವನು ಅದಕ್ಕೆ ತಲೆಯಲ್ಲಾಡಿಸಿದ. ಇಬ್ಬರೂ  ಭಾಗ್ಯಳ ಬಳಿಗೆ ಬಂದರು. ಧೈರ್ಯ ತಂದುಕೊಂಡು ಶಶಿರಾಜನೇ ಮೆತ್ತಗೆ ಕೇಳಿದ, ‘ಭಾಗ್ಯ, ಬಾಲ್ ತೆಗೆದುಕೊಡ್ತಿಯಾ?’

‘ಓಹೋ, ಯಾಕೆ ನಾನು ಹಾಕಿದ್ದಾ?’ ಕೇಳಿದಳು ಭಾಗ್ಯ. ಹುಡುಗರಿಗೆ ಏನು ಉತ್ತರ ಹೇಳಬೇಕೆಂದು ತಿಳಿಯಲಿಲ್ಲ. ಹರಕಲು ಸೀರೆ, ಗುಂಡಿ ಕಿತ್ತುಹೋಗಿ ಪಿನ್ ಹಾಕಿದ್ದ ಕುಪ್ಪಸ ತೊಟ್ಟ ಭಾಗ್ಯ, ಗೊನೆ ಕತ್ತರಿಸಿದ ಬಾಳೆಗಿಡದಂತಿದ್ದಳು. ಅವಳ ಸೊರಗಿದ ದೇಹದಲ್ಲಿ ಹರೆಯದ ಕಳೆ ಇತ್ತು. ಲಕ್ಷಣವಾಗಿದ್ದ ಅವಳು ಕೆಲಸಕ್ಕೆ ಸೇರಿದಾಗ ನೋಡಿದವರು, ಹೆಚ್ಚು ದಿನ ಈ ಕೆಲಸ ಮಾಡುತ್ತಾಳೆ ಅಂತ ಅಂದುಕೊಂಡಿರಲಿಲ್ಲ.

ಭಾಗ್ಯಳಿಗಿಂತ ಮೊದಲು ಮಲ ಎತ್ತಲು ಬರುತ್ತಿದ್ದವಳು ದಾರು. ಅವಳು ಪದೇ, ಪದೇ ಗೈರುಹಾಜರಾಗುತ್ತಿದ್ದಳು. ನಲ್ವತ್ತೈದರ ಪ್ರಾಯದಲ್ಲೇ ಅವಳಿಗೆ ಕಾಯಿಲೆ ಅಂಟಿಕೊಂಡಿತ್ತು. ಸ್ವಲ್ಪ ಗುಣ ಕಂಡಾಗ ಬಂದು ಕೆಲಸ ಮಾಡುತ್ತಿದ್ದರೂ ನಿಶ್ಶಕ್ತಿಯಿಂದಾಗಿ, ಮಲ ತುಂಬಿದ ಬಾಲ್ದಿಯನ್ನು ಎತ್ತಿ ತಲೆ ಮೇಲೆ ಇಟ್ಟುಕೊಳ್ಳುವುದಕ್ಕೆ ಅವಳ ಕೈಯಲ್ಲಿ ಆಗುತ್ತಿಲಿಲ್ಲ.

ಅವಳೊಮ್ಮೆ ಸತತವಾಗಿ ಎಂಟತ್ತು ದಿನಗಳಿಂದ ವಾರ್ಡಿಗೆ ಬಾರದೇ ಇದ್ದಾಗ ಪರಿಸ್ಥಿತಿ ಚಿಂತಾಜನಕವಾಗಿತ್ತು. ಎಲ್ಲರ ಮನೆಯ ಕಕ್ಕಸುಗಳು ಮಲದಿಂದ ತುಂಬಿಹೋಗಿದ್ದವು. ಮಲಸಂಜಾತ ಅಣು, ರೇಣು, ತೃಣ, ಕಾಷ್ಠದಂತಹ ಜಂತುಗಳು ಮೇಲೆ ಮೊಣಕಾಲಲ್ಲಿ ಕೂತು ದೇಹಬಾಧೆ ತೀರಿಸಿಕೊಳ್ಳುವವರಲ್ಲಿ ಭಯವನ್ನೂ, ಅಸಹ್ಯವನ್ನೂ ಏಕಕಾಲದಲ್ಲಿ ಹುಟ್ಟಿಸುತ್ತಿದ್ದವು. ಅವನ್ನು ನಿವಾರಿಸಲು ಹೊಯ್ದ ನೀರು, ಮಲಸಮೇತ ಚರಂಡಿಯಲ್ಲಿ ಹರಿದು ಸಮಸ್ತ ಲೋಕಕ್ಕೇ ದುರ್ವಾಸನೆಯನ್ನು ಹರಡುತ್ತಿತ್ತು. ಇಡೀ ವಾರ್ಡ್ ಹೇಲುಗುಂಡಿಯಾಗಿತ್ತು.

ಕೆಲವರು ಒಪ್ಪೊತ್ತು ಆಹಾರ ಸೇವಿಸಿ ಬಹಿರ್ದೆಸೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದರು; ಹೊಸದಾಗಿ ಮದುವೆಯಾಗಿ ಬಂದಿದ್ದ ಹೆಣ್ಣು ಮಕ್ಕಳು ಗಂಡನನ್ನು ಕರೆದುಕೊಂಡು ತವರು ಮನೆಗೆ ಹೊರಟುಹೋದರು; ರಾತ್ರಿ ವೇಳೆ ಎಲ್ಲರೂ ಮಲಗಿದ್ದನ್ನು ನೋಡಿ ಖಾಲಿ ಜಾಗ ಹುಡುಕಿ ಕೂತುಕೊಳ್ಳುವವರ ಆಟವೂ ಬಹಳ ದಿನ ನಡೆಯಲಿಲ್ಲ.

ಇದು ಸಣ್ಣ, ಪುಟ್ಟ ವಿಷಯಗಳನ್ನು ತಲೆಗೆ ಹಚ್ಚಿಕೊಳ್ಳದ ನಾಗರಿಕರಲ್ಲಿ ಎಚ್ಚರವನ್ನೂ, ಜಾಗೃತಿಯನ್ನೂ ಹುಟ್ಟು ಹಾಕಿ, ಜಪ್ಪು ಮಾರ್ಕೆಟಿನಲ್ಲಿ ದಿನಾಲೂ ಭೇಟಿಯಾಗುತ್ತಿದ್ದ ಗೋಪಾಲಕೃಷ್ಣ, ಸೋಮಣ್ಣ, ತ್ಯಾಂಪಣ್ಣ, ಹಾಜಿರ್‌ಬ್ಯಾರಿ, ವನಜಾ, ಗೀತಾ; ಗಡಂಗಿನಲ್ಲಿ ಸಿಗುವ ಮೋನಪ್ಪ, ಥಾಮಸ್, ದಾಮು, ಚಂದ್ರ, ಗೋವಿಂದ, ನಾರ್ಣಪ್ಪ; ಬೀಡಿ ಬ್ರಾಂಚಿಗೆ ಬರುವ ಯಮುನಾ, ವಾರಿಜಾ, ಮೋಹಿನಿ, ಮೋನು, ಇಬ್ರಾಯಿ ಎಲ್ಲರೂ ಅಲ್ಲಲ್ಲಿ ಕೂತು, ನಿಂತು ಮಲಬಾಧೆಯ ತೀವ್ರತೆಯ ಕುರಿತು ದಿನಾಲೂ ದೀರ್ಘವಾಗಿ ಚರ್ಚಿಸಿದರು.

ಇದಕ್ಕೆ ಏಕ ಮಾತ್ರ  ಪರಿಹಾರ, ಮುನಿಸಿಪಾಲ್ಟಿಗೆ ನಡೆದ ಚುನಾವಣೆಯಲ್ಲಿ ಮಾರ್ನಮಿಕಟ್ಟೆ ವಾರ್ಡ್‌ನಿಂದ ಆಯ್ಕೆಯಾಗಿ ಹೋದ ಕೌನ್ಸಿಲರ್ ಸಂಜೀವಣ್ಣನವರನ್ನು ಭೇಟಿಯಾಗುವುದು ಎನ್ನುವ ಒಮ್ಮತದ ತೀರ್ಮಾನವಾಯಿತು. ಅದರಂತೆ, ಸಂಜೀವಣ್ಣನವರನ್ನು ಭೇಟಿಯಾದ ನಾಗರಿಕರ ಪ್ರತಿನಿಧಿಗಳು, ‘ನೀವು ಬರಿ ಓಟು ಕೇಳಲು ಬರುವುದೋ ಇಂತಹ ಸಂದಿಗ್ಧ ಸಮಯದಲ್ಲಿ ನಮ್ಮ ಹಿಂದೆ ಇರುತ್ತೀರೋ’ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

ಮೊದಲ ಬಾರಿ ವಾರ್ಡ್‌ನಿಂದ ಆರಿಸಿಬಂದ ಸಂಜೀವಣ್ಣನಿಗೆ ಒಳ್ಳೆಯ ಕೆಲಸ ಮಾಡಬೇಕು ಎನ್ನುವ ಉಮೇದೇನೋ ಇತ್ತು. ಆದರೆ ಸಮಸ್ಯೆ ಈ ರೂಪದಲ್ಲಿ ಎದುರಾಗಬಹುದು ಎಂದು ಅವರು ಊಹಿಸಿರಲಿಲ್ಲ. ತನ್ನ ವಾರ್ಡಿನ ಗೌರವಾನ್ವಿತ ಮತದಾರರನ್ನು ಸಮಾಧಾನಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು  ನೀಡಿ  ಮುನ್ಸಿಪಲ್ ಆಫೀಸಿಗೆ ದೌಡಾಯಿಸಿದರು. ಕಮಿಷನರ್‌ರವರ ಮುಂದೆ ಕೂತು ಮೂಗಿಗೆ ಅಡರುವಂತೆ ಸನ್ನಿವೇಶದ ಗಹನತೆಯನ್ನು ಅವರಿಗೆ ಒತ್ತಿ, ಒತ್ತಿ ಹೇಳಿದರು.

ಕಮಿಷನರ್‌ಗೆ ದಾರುವಿನ ಕೆಲಸದ ಬಗ್ಗೆ ದೂರುಗಳು ಬರುತ್ತಿದ್ದವು. ಆದರೆ ಅವಳ  ಜಾಗದಲ್ಲಿ ಮತ್ತೊಬ್ಬರನ್ನು ನೇಮಿಸುವುದು ಸುಲಭದ ಮಾತಾಗಿರಲಿಲ್ಲ. ಮುನ್ಸಿಪಾಲ್ಟಿಯಲ್ಲಿದ್ದ ತೋಟಿಗಳಿಗೆ ಕೆಲಸದ ಹಂಚಿಕೆಯನ್ನು  ಮಾಡಲಾಗಿದ್ದು, ಅವರವರ ವಾರ್ಡ್‌ನಲ್ಲಿ ಅವರಿಗೆಲ್ಲಾ ಸಾಕಷ್ಟು ಹೊರೆ ಇತ್ತು. ಇನ್ನೊಂದು ವಾರ್ಡ್‌ನ ಕೆಲಸವನ್ನು ಒಪ್ಪಿಕೊಳ್ಳಲು ಯಾರು ಕೂಡಾ ಸಿದ್ಧರಿರಲಿಲ್ಲ. ಕೊನೆಗೆ ಸಾಹೇಬರು, ಮುನ್ಸಿಪಲ್ ಆಸ್ಪತ್ರೆಯಲ್ಲಿ ವಾರಕ್ಕೆರಡು ದಿನ ಕೆಲಸ ಮಾಡುತ್ತಿದ್ದ ಭಾಗ್ಯಳನ್ನು ಮಾರ್ನಮಿಕಟ್ಟೆ ವಾರ್ಡ್‌ನ ಮಲ ಹೊರುವ ಕೆಲಸಕ್ಕೆ ನೇಮಿಸಿದರು.

ಈಗಲೂ, ಬೀಡಿ ಕಟ್ಟಲು ತಂದಿದ್ದ ಸೂಪು, ಕಬ್ಬಿಣದ ಉಗುರು, ಉದ್ದಕತ್ತರಿ ಭಾಗ್ಯಳ ಜೋಪಡಿಯಲ್ಲಿ ಜೋಪಾನವಾಗಿವೆ. ಮೂರನೆಯ ತರಗತಿಯಲ್ಲಿದ್ದ ಅವಳನ್ನು ತಮ್ಮ ಹುಟ್ಟಿದಾಗ ನೋಡಿಕೊಳ್ಳುವುದಕ್ಕಾಗಿ ಶಾಲೆ ಬಿಡಿಸಿ ಕೂರಿಸಿದ್ದರು. ಅವಳ ಅಮ್ಮೆ ಮುನಿಸಿಪಾಲ್ಟಿಯಲ್ಲಿ ಕರೆದಾಗ ಹೋಗಿ ಚರಂಡಿ ಕೆಲಸ ಮಾಡುತ್ತಿದ್ದ. ಅಪ್ಪೆಗೆ ಆಸ್ಪತ್ರೆಯ ಪಾಯಿಖಾನೆ ತೊಳೆಯುವ ಕೆಲಸವಿತ್ತು. ಚಿಕ್ಕಂದಿನಿಂದ ಅವರು ಮಾಡುತ್ತಿದ್ದ ಕೆಲಸವನ್ನು ನೋಡುತ್ತಿದ್ದ ಭಾಗ್ಯಳಿಗೆ ಆ ಕೆಲಸ ಮಾಡುವುದು ಬೇಡ ಅನ್ನಿಸಿತ್ತು. ಶಾಲೆಗೆ ಹೋಗುತ್ತಿದ್ದಾಗ ಪರಿಚಯವಾದ ಗೆಳತಿ ವಿನುತಳ ಮನೆಗೆ ಹೋಗುತ್ತಾ, ಅವರ ಮನೆಯಲ್ಲಿ ಬೀಡಿ ಕಟ್ಟುವುದನ್ನು ನೋಡುತ್ತಿದ್ದಳು. ವಿನುತಳ ಅಕ್ಕನ ಹತ್ತಿರ ಹೇಳಿಸಿಕೊಂಡು ಬೀಡಿ ಕಟ್ಟುವುದನ್ನು ಕಲಿತುಕೊಂಡಳು. ವಿನುತ ತಾವು ತರುವ ಬೀಡಿ ಎಲೆ, ಹೊಗೆಸೊಪ್ಪನ್ನು ಉಳಿಸಿ, ಭಾಗ್ಯಳಿಗೆ ಕೊಡುತ್ತಿದ್ದಳು. ಅದರಿಂದ ಅಲ್ಪಸ್ವಲ್ಪ ಹಣ ಸಿಗುತ್ತಿತ್ತು.

ನಿನ್ನ ಹೆಸರಲ್ಲಿಯೇ ಕಟ್ಟಿದರೆ ಹೆಚ್ಚು ಹಣ ಸಿಗುತ್ತದೆ ಎಂದು ವಿನುತ, ಬೀಡಿ ಬ್ರಾಂಚಲ್ಲಿ ಮಾತಾಡಿ ಭಾಗ್ಯಳ ಹೆಸರನ್ನು ಸೇರಿಸಿದಳು. ಆಗಷ್ಟೇ ಹೈಸ್ಕೂಲಿಗೆ ಸೇರಿದ್ದ ವಿನುತನ ತಮ್ಮ ಗಿರೀಶ, ಭಾಗ್ಯ ಕಟ್ಟಿದ ಬೀಡಿಯನ್ನು ತೆಗೆದುಕೊಂಡು ಹೋಗಿ ಬ್ರಾಂಚಿಗೆ ಕೊಡುತ್ತಿದ್ದ.

ಮೊದಲ ವಾರದ ಕೊನೆಯಲ್ಲಿ ಭಾಗ್ಯ ಕಟ್ಟಿದ ಬೀಡಿಗೆ ಲೆಕ್ಕ ಹಾಕಿ ಹಣ ಕೊಟ್ಟಾಗ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಗಿರೀಶನ ಹತ್ತಿರ ದುಡ್ಡು ಕೊಟ್ಟು ಸಂಕಪ್ಪಣ್ಣನ ಹೋಟೇಲಿನಿಂದ ಎರಡು ಪ್ಲೇಟ್ ಸಿರಾ ತರಿಸಿಕೊಂಡು, ಒಂದನ್ನು ಗೆಳತಿಯ ಮನೆಗೆ ಕೊಟ್ಟು, ಇನ್ನೊಂದನ್ನು ಮನೆಯವರಿಗೆ ತಿನ್ನಿಸಿ ಸಂಭ್ರಮಿಸಿದಳು.

ಆದರೆ, ಅವಳ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಪ್ರತಿದಿನ ಕಟ್ಟಿದ ಬೀಡಿಯನ್ನು ಬ್ರಾಂಚಿಗೆ ಒಯ್ದು, ಅವರು ಅಳತೆ ಮಾಡಿ ಕೊಡುವ ಎಲೆ, ಹೊಗೆಸೊಪ್ಪು ತೆಗೆದುಕೊಂಡು ಬರಬೇಕಿತ್ತು. ಗಿರೀಶ ಶಾಲೆಯಿಂದ ಬರಲು ತಡವಾದಾಗ ಭಾಗ್ಯಳೇ ಹೋಗಿ ಬರುತ್ತಿದ್ದಳು. ಅವಳು ಬೀಡಿ ಬ್ರಾಂಚಿಗೆ ಹೋಗಿ ಬೀಡಿ ಕೊಟ್ಟು ಬರುತ್ತಿದ್ದುದನ್ನು ಗಮನಿಸುತ್ತಾ ಇದ್ದವರು, ಬ್ರಾಂಚಿನವರ ಹತ್ತಿರ ವಿಚಾರಿಸಿದರು. ಅವಳೇ ಬೀಡಿ ಕಟ್ಟುತ್ತಿದ್ದಾಳೆ ಎನ್ನುವುದು ತಿಳಿಯಿತು. ತೋಟಿಗಳು ಕಟ್ಟಿದ ಬೀಡಿ ನಾವು ಎಳೆಯಬೇಕೇ ಎಂದು ಗಲಾಟೆ ಮಾಡಿದರು. ಇದರಿಂದ ಭಾಗ್ಯಳಿಗೆ ಎಲೆ, ಹೊಗೆಸೊಪ್ಪು ಕೊಡುವುದನ್ನು ಬೀಡಿ ಬ್ರಾಂಚಿನವರು ನಿಲ್ಲಿಸಿಬಿಟ್ಟರು.

ಭಾಗ್ಯಳ ಅಪ್ಪೆ ಪದೇ ಪದೇ ಉಬ್ಬಸದಿಂದ ನರಳುತ್ತಿದ್ದಳು. ಕೆಲವೊಮ್ಮೆ, ದಮ್ಮು ಜಾಸ್ತಿಯಾಗಿ, ರಾತ್ರಿಯೆಲ್ಲಾ ನಿದ್ದೆಯಿಲ್ಲದೆ, ಬೆಳಿಗ್ಗೆ ಚಾಪೆ ಬಿಟ್ಟು ಏಳುತ್ತಿರಲಿಲ್ಲ. ಅವಳು ಕೆಲಸಕ್ಕೆ ಹೋಗದಿದ್ದರೆ ಮಜೂರಿಯಲ್ಲಿ ಕಡಿತ ಮಾಡಲಾಗುತ್ತಿತ್ತು. ಅಪ್ಪೆ, ತಾನು ಕೆಲಸಕ್ಕೆ ಹೋಗದ ದಿನಗಳಲ್ಲಿ ಭಾಗ್ಯಳಿಗೆ ಆಸ್ಪತ್ರೆಯ ಪಾಯಿಖಾನೆಗಳನ್ನು ತೊಳೆಯುವ ಕೆಲಸಕ್ಕೆ ಹೋಗಲು ಹೇಳುತ್ತಿದ್ದರು; ಭಾಗ್ಯ ಒಪ್ಪುತ್ತಿರಲಿಲ್ಲ.

ಅಮ್ಮೆಗೆ ಕೆಲಸ ಇದ್ದರೆ, ಇದೆ. ಇಲ್ಲದಿದ್ದರೆ, ಇಲ್ಲ. ಕೆಲಸ ಇಲ್ಲದ ದಿನಗಳಲ್ಲಿ ಒಂದು ಹೊತ್ತಿನ ಗಂಜಿಗೂ ಕಷ್ಟ. ಆಸ್ಪತ್ರೆಯ ಜವಾನ ಒಮ್ಮೆ ಮನೆಗೆ ಬಂದು, ನೀನು ಕೆಲಸಕ್ಕೆ ಬಾರದಿದ್ದರೆ ಬೇರೆಯವರನ್ನು ನೇಮಿಸುತ್ತಾರಂತೆ ಎಂದು ಅಪ್ಪೆಗೆ  ಹೇಳಿಹೋಗಿದ್ದ. ಆದ್ದರಿಂದ ಗತ್ಯಂತರವಿಲ್ಲದೆ, ಭಾಗ್ಯ ಆಸ್ಪತ್ರೆಯ ಕೆಲಸಕ್ಕೆ ಕರೆದಾಗ ಹೋಗುತ್ತಿದ್ದಳು.

ಮಾರ್ನಮಿಕಟ್ಟೆ ವಾರ್ಡಿನ ಕೆಲಸಕ್ಕೆ ಹೋಗಲು ಹೇಳಿದಾಗ ಮನೆಯವರೆಲ್ಲ ಸಂತೋಷಪಟ್ಟರೂ ಭಾಗ್ಯಳಿಗೆ ಮನೆ, ಮನೆಗೆ ಹೋಗಿ ಕಕ್ಕಸು ಬಾಚಲು ಇಷ್ಟವಿರಲಿಲ್ಲ. ದಿನಾ ಕೆಲಸ ಸಿಗುವುದೇ ತಮ್ಮ ಪಾಲಿನ ದೊಡ್ಡ ಭಾಗ್ಯ ಎಂದುಕೊಂಡಿದ್ದ ಅಪ್ಪೆ, ಅಮ್ಮೆ ಅವಳು ಎಷ್ಟು ಅತ್ತು, ಕರೆದರೂ ಒಪ್ಪದೆ, ತಲೆ ಮೇಲೆ ಬಾಲ್ದಿ ಹೊರಿಸಿಯೇ ಬಿಟ್ಟರು.

ಅಂಗೈಯಗಲದ ತಗಡಿನ ಎರಡು ತುಂಡುಗಳಿಂದ, ಕಕ್ಕಸ್ಸಿನಲ್ಲಿ ಸಂಗ್ರಹವಾದ ಮಲವನ್ನು ಬಾಚಿ ಬಾಲ್ದಿಗೆ ತುಂಬಿ ತಲೆಯ ಮೇಲಿಟ್ಟುಕೊಂಡು ಹೋಗಬೇಕು. ಕೆಲಸ ಶುರುಮಾಡಿದ ವಾರದಲ್ಲಿ ಕಣ್ಣು, ಮೂಗು, ಕೈ ಎಲ್ಲದಕ್ಕೂ ಮಲ ಅಂಟಿದಂತೆ ಕಾಣುತ್ತಿತ್ತು. ಐನೂರಒಂದು ಬಾರ್‌ಸೋಪು ಹಾಕಿ ತೊಳೆದರೂ ವಾಸನೆ ಇದ್ದ ಹಾಗೆ ಆಗುತ್ತಿತ್ತು.

ಈ ಕೆಲಸ ಮಾಡಿಕೊಂಡಿರುವುದಕ್ಕಿಂತ ಸತ್ತು ಬಿಡೋಣ ಅಂದುಕೊಳ್ಳುತ್ತಿದ್ದಳು. ಸೂರ್ಯ ಬೆಳಿಗ್ಗೆ ಬರುವುದು ನನಗೆ ಕಾಟ ಕೊಡಲು ಎಂದು ಬೇಜಾರಿನಲ್ಲೇ ಏಳುತ್ತಿದ್ದಳು. ಶಾಲೆಗೆ ಹೋಗುವ ತಮ್ಮಂದಿರನ್ನು ನೋಡಿ, ನನ್ನಿಂದಾಗಿ ಅವರಾದರೂ ಚೆನ್ನಾಗಿರಲಿ ಅಂದುಕೊಂಡು, ಚಪ್ಪಲಿ ಇಲ್ಲದ ಕಾಲೆಳೆದುಕೊಂಡು ಒಲ್ಲದ ಮನಸ್ಸಿನಿಂದ ಹೋಗುತ್ತಿದ್ದಳು.

ಭಾಗ್ಯ ನಿತ್ಯ ಮಲ ಹೊರಲು ಬರತೊಡಗಿದಾಗ ಪರಮಾನಂದವಾಗಿದ್ದು ಕೌನ್ಸಿಲರ್ ಸಂಜೀವಣ್ಣನಿಗೆ. ನಾನು ಮಾಡಿದ ಜನ ಹೇಗೆ ಎಂದು ಕೇಳಿಕೊಂಡು ಓಡಾಡುತ್ತಿದ್ದರು. ವಾರ್ಡಿನಲ್ಲಿ ಭಾಗ್ಯಳನ್ನು ಮಾತಾಡಿಸುವವರು ಯಾರೂ  ಇರಲಿಲ್ಲ. ಕೆಲಸಕ್ಕೆ ಬಂದ ಶುರುವಿನಲ್ಲಿ ಬೊಗಳುತ್ತಿದ್ದ ನಾಯಿಗಳೂ ಸುಮ್ಮನಾಗಿದ್ದವು.

ಕೆಲವೊಮ್ಮೆ ಪಾಯಿಖಾನೆಗಳನ್ನು ತೊಳೆಯಲು ಹೇಳಿದಾಗ ಭಾಗ್ಯಳ ಕೈಗೊಂದಿಷ್ಟು ಚಿಲ್ಲರೆ ಕಾಸು ಸಿಗುತ್ತಿತ್ತು. ವರ್ಷಕ್ಕೊಂದೆರಡು ಸಲ, ಉಟ್ಟು, ಉಟ್ಟು ಹಳೆಯದಾದ ಸೀರೆಗಳನ್ನು ಯಾರಾದರೂ ಪುಣ್ಯಾತ್ಮರು ದಾನ ಮಾಡುತ್ತಿದ್ದರು; ಬ್ಯಾರ್ದಿಯೊಬ್ಬರು ಹಬ್ಬಕ್ಕೆ ಮಾಡಿದ ಬಿರಿಯಾನಿಯನ್ನು ಕಟ್ಟಿ ಕೊಡುತ್ತಿದ್ದರು, ಹೀಗೆ ಮಾರ್ನಮಿಕಟ್ಟೆ ವಾರ್ಡ್‌ನಲ್ಲಿ ಎರಡು ವರ್ಷಗಳಿಂದ ಅವಳ ಹೊಟ್ಟೆಪಾಡು ಸಾಗುತ್ತಿತ್ತು. ಆದರೂ ಭಾಗ್ಯ ಮನೆಯ ಮುಂದೆ ಕೂತು ಬೀಡಿ ಕಟ್ಟುವವರನ್ನು ನೋಡಿದಾಗ ಒಂದು ನಿಮಿಷ ನಿಂತು, ನೋಡದೆ ಮುಂದೆ ಹೋಗುತ್ತಿರಲಿಲ್ಲ.

ಭಾಗ್ಯ ಕೆಳಗಿಳಿಸಿದ ಬಾಲ್ದಿಯಿಂದ ದುರ್ವಾಸನೆ ಹೊರಹೊಮ್ಮುತ್ತಿತ್ತು. ಪಕ್ಕದಲ್ಲಿ ನಿಂತ ಗೆಳೆಯರು ಚಿಂತಿತರಾಗಿದ್ದರು. ವಿಶ್ವನನ್ನಾದರೂ ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದರೆ ಹೇಗಾದರೂ ಮಾಡಿ ಹಿಡಿಯುತ್ತಿದ್ದ ಎಂದು ಹುಡುಗರಲ್ಲೊಬ್ಬ ಹೇಳಿದ. ವಿಶ್ವ ಒಳ್ಳೆಯ ಕ್ಷೇತ್ರ ರಕ್ಷಕ ಎಂದು ಗುರುತಿಸಿಕೊಂಡಿದ್ದ. ‘ಅದು ಆಗಿ ಹೋದ ಕತೆ. ಈಗ ತೆಗೆಯುವ ಬಗ್ಗೆ ಹೇಳು’ ಎಂದ ಶಶಿ.

ಗೆಳೆಯರ ಹಿಂದೆ ಕೈ ಕಟ್ಟಿ ನಿಂತಿದ್ದ ವಿಶ್ವ ಹೆಚ್ಚು ಮಾತಾಡುವ ಪೈಕಿ ಅಲ್ಲ. ಅವನ ತಾಯಿ, ತಂಗಿ ಹುಟ್ಟುವ ಸಮಯದಲ್ಲಿ ತೀವ್ರವಾದ ಕಾಯಿಲೆಗೆ ತುತ್ತಾಗಿ, ಯಾವ ಔಷಧಿಯಿಂದಲೂ ಹುಷಾರಾಗದೆ, ಎರಡು ವರ್ಷ ಮಲಗಿದಲ್ಲೇ ಇದ್ದು ತೀರಿಕೊಂಡಿದ್ದರು. ಆಗ ವಿಶ್ವನಿಗೆ ಏಳೆಂಟು ವರ್ಷ. ಅಮ್ಮ ಮೈಮೇಲೆ ಪರಿವೆಯಿಲ್ಲದೆ ಬಿದ್ದುಕೊಂಡಿದ್ದಾಗ ಕೆಲವೊಮ್ಮೆ ಅವರ ಆರೈಕೆಯನ್ನು ಅವನೇ ಮಾಡುತ್ತಿದ್ದ. ಅಮ್ಮನ ಬಿಟ್ಟ ಕಣ್ಣುಗಳನ್ನು ನೋಡುತ್ತಾ ತಬ್ಬಿಕೊಂಡು ಮಲಗುವುದು ಅವನಿಗೆ ಖುಷಿಕೊಡುವ ಕೆಲಸವಾಗಿತ್ತು.

ತಾಯಿ ತೀರಿದ ಮೇಲೆ ತಂದೆ ಮರು ಮದುವೆ ಮಾಡಿಕೊಳ್ಳಲಿಲ್ಲ. ಅದರಿಂದ ವಿಶ್ವನ ಜವಾಬ್ದಾರಿ ಹೆಚ್ಚಿತು. ಮನೆಯ ಕೆಲಸದಲ್ಲಿ ತಂದೆಗೆ ಸಹಾಯ ಮಾಡಿ ತಂಗಿಯನ್ನೂ ನೋಡಿಕೊಳ್ಳುತ್ತಿದ್ದ. ಗೆಳೆಯರೊಟ್ಟಿಗೆ ಅವನ ಒಡನಾಟ ಶುರುವಾಗಿದ್ದು ತಂಗಿ ಶಾಲೆಗೆ ಹೋಗಲು ಪ್ರಾರಂಭಿಸಿದ ಮೇಲೆಯೇ.

ಸಮಯ ಮೀರುತ್ತಿತ್ತು. ಹಿಂದೆ ನಿಂತು ಎಲ್ಲರನ್ನೂ ಗಮನಿಸುತ್ತಿದ್ದ ವಿಶ್ವನಿಗೆ ಯಾರೂ ಕೈ ಹಾಕಿ ಚೆಂಡನ್ನು ತೆಗೆಯುವ ಹಾಗೆ ಕಾಣಲಿಲ್ಲ. ಗೆಳೆಯರನ್ನು ಸರಿಸಿ, ಒಂದೊಂದೇ ಹೆಜ್ಜೆ ಇಟ್ಟು ಬಾಲ್ದಿಯ ಸಮೀಪ ಹೋದ.

ಅವನು ಬರುತ್ತಿರುವುದನ್ನು ನೋಡುತ್ತಿದ್ದ ಭಾಗ್ಯಳಿಗೆ ಗಿರೀಶನ ನೆನಪಾಯಿತು. ಅವನು ಕೂಡಾ ಹೀಗೆ ಇದ್ದ. ಮನೆಗೆ ಬಂದು ಅವಳು ಕಟ್ಟಿದ ಬೀಡಿಯನ್ನು ತೆಗೆದುಕೊಂಡು ಹೋಗುತ್ತಿದ್ದ. ಕೆಲವು ಸಲ ಅವಳಿಗೆ ಇಪ್ಪತ್ತೈದರ ಕಟ್ಟುಗಳನ್ನು ಮಾಡಿ ಇಡಲು ಆಗುತ್ತಿರಲಿಲ್ಲ. ಆಗ ಅವನೇ ಸಹಾಯ ಮಾಡಿ ಕಟ್ಟುಗಳನ್ನು ಚೀಲದಲ್ಲಿ ತುಂಬಿಸಿಕೊಳ್ಳುತ್ತಿದ್ದ.

ವಿಶ್ವ ಬಾಲ್ದಿಯ ಹತ್ತಿರ ಬಂದಾಗ ಭಾಗ್ಯ ಅದಕ್ಕೆ ಅಡ್ಡವಾಗಿ ನಿಂತುಬಿಟ್ಟಳು. ವಿಶ್ವ ತಲೆ ಎತ್ತಿ ಭಾಗ್ಯಳ ಮುಖ ನೋಡಿದ. ಅವಳ ಅಗಲವಾದ ಕಣ್ಣುಗಳಿಂದ ನೀರು ಹರಿಯುತ್ತಿತ್ತು. ವಿಶ್ವನಿಗೆ ಅವಳ ಕಣ್ಣೀರನ್ನು ಒರೆಸುವ ಮನಸ್ಸಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.