ADVERTISEMENT

ವರನಟನ ಅಪೂರ್ವ ನೆರಳು

ಗುಡಿಹಳ್ಳಿ ನಾಗರಾಜ
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST
ಹಿರಣ್ಯಕಶಿಪು ಪಾತ್ರದಲ್ಲಿ ಅಶೋಕ್
ಹಿರಣ್ಯಕಶಿಪು ಪಾತ್ರದಲ್ಲಿ ಅಶೋಕ್   
ವರನಟ ರಾಜಕುಮಾರ್ ಅವರಂತೆ ನಟಿಸಿ ತೋರಿಸಿ ‘ಜೂನಿಯರ್ ರಾಜಕುಮಾರ್’ ಎಂಬ ಅಭಿದಾನಕ್ಕೆ ಒಳಗಾದ ನಾಲ್ಕಾರು ಮಂದಿ ಕರ್ನಾಟಕದಲ್ಲಿ ಇದ್ದಾರೆ. ಅವರ ಪೈಕಿ ನಂಬರ್ ಒನ್ ಸ್ಥಾನದಲ್ಲಿರುವವರು ಹಾವೇರಿಯ ಅಶೋಕ ಬಸ್ತಿ. 
 
ರಾಜ್ ಅಭಿನಯಿಸಿದ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಚಿತ್ರದ ಯಾವುದೇ ಪಾತ್ರವಿರಲಿ – ರಾಜ್‌ರವರೇ ನಟಿಸಿದ್ದಾರೆ ಎಂಬ ಭಾವ ಉಂಟು ಮಾಡುತ್ತಾರೆ ಅಶೋಕ. ಅವರ ಪಾತ್ರಗಳಷ್ಟೇ ಅಲ್ಲ, ಸಹಜ ಸ್ಥಿತಿಯಲ್ಲಿ ರಾಜ್ ಹೇಗೆ ವರ್ತಿಸುತ್ತಿದ್ದರು ಎಂಬುದನ್ನು ಅಶೋಕ್ ಮಾಡಿ ತೋರಿಸಿದಾಗ ಸ್ವತಃ ರಾಜಕುಮಾರ್ ಅವರೇ ಸೋಜಿಗಪಟ್ಟುಕೊಳ್ಳುತ್ತಿದ್ದರಂತೆ, ಅಂತಹ ಅಪ್ಪಟ ಅನುಕರಣೆ ಅವರದು.
 
 ಅಶೋಕ ಬಸ್ತಿ ಮೈಮನಗಳಲ್ಲೆಲ್ಲ ರಾಜ್ ಅವರನ್ನೇ ತುಂಬಿಕೊಂಡಿದ್ದಾರೆ. ನಡೆ, ನುಡಿ, ಊಟ, ಓಡಾಟ, ಡ್ರೆಸ್ ಸೇರಿದಂತೆ ಎಲ್ಲವೂ ರಾಜಕುಮಾರ್ ಅವರದೇ ಪಡಿಯಚ್ಚು. ರಾಜ್ ಸಿನಿಮಾಗಳನ್ನು ಏಳೆಂಟು ವರ್ಷಗಳ ಬಾಲಕ ಅಶೋಕ ಹಾವೇರಿಯಲ್ಲಿ ನೋಡಲು ಶುರುಮಾಡಿದ ದಿನದಿಂದ ಒಂದೊಂದಾಗಿ ಮೈಗೂಡಿಸಿಕೊಂಡು ಕ್ರಮೇಣ ರಾಜ್‌ರನ್ನೇ ಆವಾಹಿಸಿಕೊಂಡು ಬಿಟ್ಟಿದ್ದಾರೆ.
 
 ಹಾವೇರಿ ಸಮೀಪದ ವರದಾ ನದಿ ದಂಡೆಯ ಮೇಲಿರುವ ದೇವಗಿರಿಯ (ಇದು ಸಂಗೀತ ಸಂತ ಪುಟ್ಟರಾಜ ಗವಾಯಿಗಳ ಹುಟ್ಟೂರು ಹೌದು) ಫಕೀರಪ್ಪ ಮಾಸ್ತರ – ತಿಪ್ಪಮ್ಮ ದಂಪತಿಗೆ ಜನಿಸಿದ 13 ಮಕ್ಕಳಲ್ಲಿ ಅಶೋಕ ಹತ್ತನೆಯವರು (ಜನನ: 1963) ಅನುಕರಣೆ ರಕ್ತಗತವಾಗಿತ್ತೇನೋ ಎಂಬಂತೆ ನಾಲ್ಕೈದು ವರ್ಷದ ಬಾಲಕನಲ್ಲೇ ಅದು ಮೊಳೆತುಬಿಟ್ಟಿತು. ಇತರರು ನಡೆದ ಹಾಗೆ ನಡೆದು ತೋರಿಸೋದು... ಅವರು ಮಾತನಾಡಿದ ಹಾಗೆ ಮಾತಾಡಿ.. ಬೈಸಿಕೊಳ್ಳೋದು, ಹೊಡೆಸಿಕೊಳ್ಳೋದರಿಂದ ಅಶೋಕನ ಸೃಜನಶೀಲತೆಗೆ ಚಾಲನೆ ಸಿಕ್ಕಿತು. 
 
ಹೊಳೆ(ವರದಾ ನದಿ) ಸಾಲಲ್ಲಿ ಎರಡೆಕರೆ ಜಮೀನಿತ್ತು. ಮನೆಯಲ್ಲಿ ಕುದುರೆ ಇದ್ದವಂತೆ. ಕುದುರೆ ಹತ್ತಿ ರಾಜನ ಸೋಗಿನಲ್ಲಿ ಹಾಡೋದು, ಹಲಗೆ ನುಡಿಸೋದು ಇಂತಹ ಕೆಲಸಗಳಲ್ಲಿ ಸದಾ ನಿರತನಾಗಿ ತುಂಟ ಹುಡುಗನೆಂದು ಊರ ತುಂಬಾ ಪ್ರಖ್ಯಾತನಾಗಿಬಿಟ್ಟ. ಶಾಲೆಗೆ ಹೋಗೆಂದು ಅಣ್ಣ ಬಾರಿಸಿದರೆ, ಊರಿಂದ ಓಡಿಹೋಗಿಬಿಡ್ತಿದ್ದ. ಸಾಕಷ್ಟು ಸಿನಿಮಾಗಳನ್ನು ನೋಡಬಹುದು ಎಂಬ ಕಾರಣಕ್ಕೆ ಹಾವೇರಿಗೆ ಹೋಗಿ ಹೋಟೆಲ್ ಸಪ್ಲೈಯರ್, ಕ್ಲೀನರ್ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದ. 
 
ಎಂಟು–ಹತ್ತು ವರ್ಷದ ಬಾಲಕನಿಗೆ ರಾಜ್‌ರನ್ನು ಭೇಟಿಮಾಡಬೇಕೆಂಬ ಆಸೆ ಚಿಗುರೊಡೆಯಿತು. ಕಿಸೆಯಲ್ಲಿ ನಾಲ್ಕಾಣೆ ಇಲ್ಲದಿದ್ದರೂ ಬೆಂಗಳೂರು ರೈಲು ಹತ್ತೇಬಿಟ್ಟ. ಹರಿಹರದಲ್ಲಿ ರೈಲ್ವೆ ಟಿ.ಸಿ. ಅಶೋಕನನ್ನು ಹಿಡಿದು ಹಾಕಿದರು. ಅವರ ಎದುರಿಗೆ ರಾಜಕುಮಾರ್ ಹಾಗೆ ಹಾಡಿದ, ನಟಿಸಿದ, ನರ್ತಿಸಿದ. ‘ಭಲಾ’ ಎಂದ ಟಿ.ಸಿ. ಹರಿಹರದಲ್ಲೇ ಕ್ಯಾಂಪ್ ಮಾಡಿದ್ದ ಧಾರವಾಡದ ನೀಲಕಂಠಪ್ಪನ ಕಂಪನಿಗೆ ಹುಡುಗನನ್ನು ಸೇರಿಸಿದರು. ‘ಮೊದಲು ಪರದೆ ಎಳೆ, ಗೇಟಿಗೆ ನಿಲ್ಲು, ಆ ನಂತರ ಪಾತ್ರ ಮಾಡಲು ಅವಕಾಶ ನೀಡ್ತೇನೆ’ ಎಂದರು ಮಾಲೀಕರು. ಇನ್ನೇನು ಅಶೋಕನಿಗೂ ಪಾತ್ರವೊಂದರಲ್ಲಿ ನಟಿಸುವ ಅವಕಾಶ ಬರುತ್ತದೆ ಎನ್ನುವ ಹೊತ್ತಿಗೆ ಕಂಪನಿಯೇ ನಿಂತುಹೋಯಿತು!
 
 ಸೋವಿ ದರದಲ್ಲಿ ಬಟ್ಟೆ ಮಾರಾಟ ಎಂದು ಮೈಕಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದ ಗಾಡಿಯ ಬೆನ್ನತ್ತಿ ಹೋಗಿ ಮೈಕಿನಲ್ಲಿ ಪ್ರಚಾರ ಮಾಡುವ ಕೆಲಸ ಗಿಟ್ಟಿಸಿಕೊಂಡ. ರಾಜಕುಮಾರ್ ಹಾಗೇ ಮಾತನಾಡಿ ಹರಿಹರದ ಜನತೆಯ ಗಮನ ಸೆಳೆದ. ಒಂದೆರಡು ತಿಂಗಳು ನಡೆಯಿತು. ಗಾರೆ ಕೆಲಸ ಮಾಡಿದ. ಇಟ್ಟಂಗಿ ಬಟ್ಟಿಯಲ್ಲಿ ಕೆಲಸಕ್ಕೆ ನಿಂತ. 
 
 ಅಶೋಕನ ಪ್ರತಿಭೆ ಅರಿತುಕೊಂಡ ಪುರದ ಎನ್ನುವವರು ‘ಗಿರಿಮಲ್ಲೇಶ್ವರ ನಾಟಕ ಸಂಘ’ಕ್ಕೆ ಸೇರಿಸಿಬಂದರು. ಅಲ್ಲಿ ನಟನೆಯ ಪಾಠ ದೊರೆಯಿತು. ಆ ಕಂಪನಿಯಲ್ಲಿದ್ದ ಪ್ರಖ್ಯಾತ ನಟ ಎಲಿವಾಳ ಸಿದ್ದಯ್ಯಸ್ವಾಮಿಯವರು ಶಾಲೆ ಕಾಲೇಜುಗಳಲ್ಲಿ ಏಕಪಾತ್ರಾಭಿನಯ ಮಾಡುತ್ತಿದ್ದ ಮತ್ತೊಬ್ಬ ಹೆಸರಾಂತ ನಟ ಕಂಪ್ಲಿ ಹನುಮಂತಾಚಾರ್ ಅವರಿಗೆ ಪರಿಚಯಿಸಿ, ‘ನಿಮಗೆ ಸಹಾಯಕ್ಕೆ ಬರುತ್ತಾನೆ, ಈ ಹುಡುಗನನ್ನು ಜೊತೆ ಇಟ್ಟುಕೊಳ್ರಿ’ ಎಂದು ಅವರ ಬಳಿ ಬಿಟ್ಟರು. ಅಲ್ಲಿ ಏಕಪಾತ್ರಾಭಿನಯ ಕಲಿತರು ಅಶೋಕ. ನಂತರ ನಾಟಕ ಕಂಪನಿ ಸೇರಿ ವಿವಿಧ ಪಾತ್ರಗಳ ನಟನೆ ಕಲಿಯುವ ಹೊತ್ತಿನಲ್ಲೂ ನಿರಂತರ ರಾಜ್‌ರದ್ದೇ ಧ್ಯಾನ. 
 
 ನಾಟಕ ಕಂಪನಿಗಳ ಏಳುಬೀಳಿನ ಕಾಲ ಅದು. ಗಲ್ಲಾಪೆಟ್ಟಿಗೆ ಕಳೆಗುಂದಿದಾಗ ಸಿನಿಮಾ ನಟನಟಿಯರನ್ನು ಕರೆತರುತ್ತಿದ್ದರು. ನಾಟಕದ ಮಧ್ಯೆ ಮಧ್ಯೆ ರಾಜ್ ಅಭಿನಯದ ದೃಶ್ಯಗಳನ್ನು ಏಕೆ ಪ್ರದರ್ಶಿಸಬಾರದು ಎನಿಸಿತು ಅಶೋಕಗೆ. ನಾಟಕ ಕಂಪನಿ ಮಾಲೀಕರನ್ನು ಹೋಗಿ ಕೇಳಿಕೊಂಡರು. ಪುಟ್ಟರಾಜ ಗವಾಯಿಗಳ ಕಂಪನಿಯಲ್ಲೇ ಮೊದಲು ಅವಕಾಶ ಸಿಕ್ಕಿತು. ‘ಹಿಡ್ಕಿಮಠ ನಾಟಕ ಕಂಪನಿ’ ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ರಾಜಕುಮಾರ್ ಅನುಕರಣೆಯನ್ನು ಜನ ಇಷ್ಟಪಡತೊಡಗಿದರು. ಕ್ರಮೇಣ ಆಕರ್ಷಣೆ ಹೆಚ್ಚಾಯಿತು. ಅಶೋಕರ ಅನುಕರಣೆ ಮತ್ತಷ್ಟು ಸುಧಾರಿಸಿತು. ಸಂಭಾವನೆ ಹೆಚ್ಚಿದಂತೆ ರಾಜಕುಮಾರ್ ಪಾತ್ರಗಳಿಗೆ ಧರಿಸುತ್ತಿದ್ದ ವೇಷಭೂಷಣಗಳನ್ನು ಹೆಚ್ಚಿಸಿಕೊಂಡರು. ಗುಡಿಗೇರಿ, ಅರಿಷಿಣಗೋಡಿ, ಆಶಾಪುರ ಸೇರಿದಂತೆ ಹಲವು ನಾಟಕ ಕಂಪನಿಗಳ ಅತಿಥಿ ನಟರಾಗಿಬಿಟ್ಟರು.
 
 ಎರಡು ದಶಕಗಳ ಕಾಲ ಇದು ಯಶಸ್ವಿಯಾಗಿ ನಡೆಯಿತು. ‘ನಮ್ಮ ನಾಟಕ ಕಂಪನಿಯಿಂದ ಅಶೋಕ ಉದ್ಧಾರವಾದ’ ಎಂದರು ಮಾಲೀಕರು. ‘ರಾಜ್ ಅನುಕರಣೆಯ ನನ್ನ ಗ್ಲಾಮರ್‌ನಿಂದ ಗಲ್ಲಾಪೆಟ್ಟಿಗೆ ತುಂಬಿತು’ ಎಂದುಕೊಂಡರು ಅಶೋಕ. ಪರಸ್ಪರ ಅನುಕೂಲವಾಗಿತ್ತು. 
 
ಅಶೋಕ ಅವರಿಗೆ ಸ್ವಂತ ಸಂಸ್ಥೆ ಮಾಡಬೇಕು ಎನಿಸಿತು. ಪತ್ನಿ ರೇಣುಕಾ ಬಸ್ತಿ, ಪುತ್ರ ರಾಘವೇಂದ್ರ ಬಸ್ತಿ ಹಾಗೂ ರುದ್ರೇಶ ಬಾರಕೇರ ಮತ್ತು ಮಂಟೇಶ ಕಲ್ಲೂರು ಬಳಗ ಇಟ್ಟುಕೊಂಡು ‘ಅಶೋಕ ಬಸ್ತಿ (ಜೂನಿಯರ್ ರಾಜಕುಮಾರ್) ಮಿತ್ರಮಂಡಳಿ’ ರಚಿಸಿಕೊಂಡು – ರಾಜ್, ಪುನೀತ್, ಉಪೇಂದ್ರ, ವಿಷ್ಣು ಮುಂತಾದ ಕಲಾವಿದರ ಅನುಕರಣೆ ಮತ್ತು ಸಂಗೀತದ ಕಾರ್ಯಕ್ರಮ ನೀಡುತ್ತಾರೆ. ಈಗಲೂ ನಾಟಕ ಕಂಪನಿಗೆ ಕರೆ ಬಂದರೆ ಹೋಗುತ್ತಾರೆ. ಇದುವರೆಗೆ ಅಶೋಕ ಅವರು ನೀಡಿರುವ ಕಾರ್ಯಕ್ರಮಗಳ ಸಂಖ್ಯೆ 20 ಸಾವಿರ ದಾಟಿದೆ. ಕರ್ನಾಟಕ ಸರ್ಕಾರದ ‘ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳು ಅವರ ಪ್ರತಿಭೆಗೆ ಸಂದಿವೆ. 
 
‘ಈಗಲೂ ನನಗೆ ರಾಜಕುಮಾರ್ ಚಿತ್ರ ನೋಡಿದರೆ ಸಾಕು, ದೇವರು ಮೈಮೇಲೆ ಬಂದಂತಾಗುತ್ತದೆ. ಅವರು ನನ್ನೊಂದಿಗೆ ಮಾತನಾಡಿದ ಹಾಗೆ ಭಾಸವಾಗುತ್ತದೆ. ಆಗ ನಾನು ನಾನಾಗಿರುವುದಿಲ್ಲ...’ ಎನ್ನುವ ಅಶೋಕ ಅವರು ಯಾವುದೇ ಪಾತ್ರದಲ್ಲಿ ನಟಿಸಬಲ್ಲ ಪ್ರತಿಭಾವಂತ ಕಲಾವಿದರೂ ಹೌದು.

ಒಳ್ಳೆಯ ಹಾಡುಗಾರರು. ರಾಜ್ ಗೀತೆಗಳನ್ನು ಯಥಾವತ್ತಾಗಿ ಹಾಡುತ್ತಾರೆ. ಯಾವುದೇ ಪ್ರದೇಶದ ವ್ಯಕ್ತಿಯನ್ನು ಸ್ವಲ್ಪ ಹೊತ್ತು ಸೂಕ್ಷ್ಮವಾಗಿ ಗಮನಿಸಿದರೆ ಸಾಕು; ಅವರ ಮಾತು ವರ್ತನೆಯನ್ನು ಬಟ್ಟಿ ಇಳಿಸಿಬಿಡುತ್ತಾರೆ. ಹಾಡು, ನಟನೆ ಬಲ್ಲ ಅಪ್ಪಟ ಪ್ರತಿಭಾವಂತ ಆಗಿರುವುದರಿಂದಲೇ ಅವರಿಗೆ ಅನುಕರಣೆಯೂ ಅಷ್ಟೇ ಚೆನ್ನಾಗಿ ಒಲಿದಿದೆ. ಅಷ್ಟಕ್ಕೂ ಅಭಿನಯ ಎಂದರೆ ಅನುಕರಣೆಯೇ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.