ADVERTISEMENT

ವಿಮಾನ ನಿಲ್ದಾಣದಲ್ಲಿ ಆರ್ಕಿಡ್ ಉದ್ಯಾನ!

ಸಹನಾ ಕಾಂತಬೈಲು
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST
ವಿಮಾನ ನಿಲ್ದಾಣದಲ್ಲಿ ಆರ್ಕಿಡ್ ಉದ್ಯಾನ!
ವಿಮಾನ ನಿಲ್ದಾಣದಲ್ಲಿ ಆರ್ಕಿಡ್ ಉದ್ಯಾನ!   

ಆರ್ಕಿಡ್ ಉದ್ಯಾನವೇ? ಇದು ಹೇಗೆ ಸಾಧ್ಯ ಎಂದು ಹುಬ್ಬೇರಿಸಬಹುದು. ಆದರೆ ಇದು ನಿಜ. ಈ ವಿಶಿಷ್ಟ ಉದ್ಯಾನ ಇರುವುದು ಸಿಂಗಪುರದ ‘ಚಾಂಗಿ’ ವಿಮಾನ ನಿಲ್ದಾಣದಲ್ಲಿ.

‘ಚಾಂಗಿ’ ನಡೆದು ನೋಡಬೇಕಾದ ಹಾಗೂ ನಡೆದಷ್ಟೂ ಮುಗಿಯದ ಸುಸಜ್ಜಿತ ಬೃಹತ್ ವಿಮಾನ ನಿಲ್ದಾಣ. ಸ್ವಚ್ಛತೆ, ಅದ್ದೂರಿತನ ಹಾಗೂ ಪ್ರಯಾಣಿಕಸ್ನೇಹಿ ಸವಲತ್ತುಗಳಿಂದ ಗಮನಸೆಳೆಯುವ ಈ ವಿಮಾನ ನಿಲ್ದಾಣ ಬೃಹತ ನಗರವೊಂದರ ದೊಡ್ಡ ತುಣುಕಿನಂತೆ ಕಾಣಿಸುತ್ತದೆ. ಉಚಿತ ಇಂಟರ್‌ನೆಟ್ ಸೌಲಭ್ಯ ಇರುವ ಕಂಪ್ಯೂಟರ್‌ಗಳು, ಕಣ್ಮನ ಸೆಳೆಯುವ ಅಂಗಡಿ ಮಳಿಗೆಗಳು, ಹೋಟೆಲ್‌ಗಳು, ಗೋಡೆಯ ಎರಡೂ ಬದಿಯಲ್ಲಿ ಅಲ್ಲಲ್ಲಿ ಹೂ ಗಿಡಗಳು... ಹೀಗೆ ಕಣ್ತುಂಬಿಕೊಳ್ಳುತ್ತ ಸಾಗಿದರೆ ‘ಟರ್ಮಿನಲ್ 2’ರಲ್ಲಿ ಸಿಗುತ್ತದೆ ‘ಆರ್ಕಿಡ್ ಗಾರ್ಡನ್’.

ಇದೊಂದು ಅಪರೂಪದ ಮನಮೋಹಕ ಆರ್ಕಿಡ್ ಉದ್ಯಾನ. 1997ರಲ್ಲಿ ಇದನ್ನು ನಿರ್ಮಿಸಲಾಯಿತು. ಇದರಲ್ಲಿ 30 ಜಾತಿಯ ಸುಮಾರು ಸಾವಿರ ಆರ್ಕಿಡ್‌ಗಳಿವೆ. ಅವುಗಳನ್ನು ಬಣ್ಣ ಮತ್ತು ಆಕಾರಕ್ಕೆ ಅನುಗುಣವಾಗಿ ವಿಂಗಡಿಸಲಾಗಿದೆ. ಒಂದಕ್ಕಿಂತ ಒಂದು ಸುಂದರ, ಅತ್ಯಾಕರ್ಷಕ.

ಫಕ್ಕನೆ ನೋಡಿದಾಗ ಕೃತಕ ಹೂವೋ ಎಂಬ ಭ್ರಮೆಯನ್ನು ಮೂಡಿಸುತ್ತವೆ. ಕೆಲವನ್ನು ನೆಲದ ಮೇಲೆ ಹರಳು ಕಲ್ಲು ಹಾಸಿ ಬೆಳೆಸಿದ್ದರೆ, ಇನ್ನು ಕೆಲವನ್ನು ಕುಂಡಗಳಲ್ಲಿ, ಸಾಗುವಾನಿ ಮರದ ಬೊಡ್ಡೆಗಳಲ್ಲಿ, ಮತ್ತೆ ಕೆಲವನ್ನು ಗಾಜಿನ ಗೋಳಗಳಲ್ಲಿ ಬೆಳೆಸಿದ್ದಾರೆ. ಈ ಉದ್ಯಾನ ಇಡೀ ವಿಮಾನ ನಿಲ್ದಾಣಕ್ಕೆ ಶೋಭೆ ತಂದಿದೆ. ಆರ್ಕಿಡ್‌ಗಳು ಪ್ರಕೃತಿಯ ಮೂಲವಸ್ತುಗಳಾದ ಗಾಳಿ, ಭೂಮಿ, ಬೆಂಕಿ ಮತ್ತು ನೀರನ್ನು ಪ್ರತಿನಿಧಿಸುತ್ತವೆ ಎನ್ನುವುದು ಸ್ಥಳೀಯರ ನಂಬಿಕೆ.

ಬಿಳಿ ಬಣ್ಣದ ಆರ್ಕಿಡ್ ಗಾಳಿಯನ್ನು, ಕಂದು ಮತ್ತು ಹಸಿರು ಹೂಗಳು ಭೂಮಿಯನ್ನು, ಕೆಂಪು, ಹಳದಿ, ಕೇಸರಿ ಬಣ್ಣಗಳ ಆರ್ಕಿಡ್ಗಳು ಬೆಂಕಿಯನ್ನು, ನೀಲಿ ಹಾಗೂ ನೇರಳೆ ಹೂಗಳು ನೀರನ್ನು ಪ್ರತಿನಿಧಿಸುತ್ತವೆ ಎಂದು ಹೇಳುತ್ತಾರೆ. ಉದ್ಯಾನದ ಮಧ್ಯೆ ಸುಂದರ ‘ಕೊಯಿ’ ಜಾತಿಯ ಮೀನಿನ ಕೊಳವಿದೆ. ಕೆಂಪು, ನೀಲಿ, ಹಳದಿ, ಕಪ್ಪು ಬಣ್ಣಗಳಿಂದ ಕೂಡಿದ ಮೀನುಗಳು ಓಡಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಗಾರ್ಡನ್‌ನ ಸುತ್ತಲೂ ಸಿಮೆಂಟಿನ ಕಟ್ಟೆ ಕಟ್ಟಿದ್ದಾರೆ. ನಡುನಡುವೆ ಕಲ್ಲಿನ ಬೆಂಚುಗಳಿವೆ. ಇವುಗಳ ಮೇಲೆ ಕುಳಿತು ಬಣ್ಣ ಬಣ್ಣದ ಆರ್ಕಿಡ್ ಹೂಗಳನ್ನು, ಮೀನುಗಳನ್ನು ನೋಡುತ್ತ ಪ್ರಯಾಣದ ಆಯಾಸ ಪರಿಹರಿಸಿಕೊಳ್ಳಬಹುದು. ಆರ್ಕಿಡ್ ಗಾರ್ಡನ್ ಅಲ್ಲದೆ ‘ಬಟರ್‌ಫ್ಲೈ ಗಾರ್ಡನ್’, ‘ಸನ್‌ಫ್ಲವರ್ ಗಾರ್ಡನ್’ ಹಾಗೂ ‘ಕ್ಯಾಕ್ಟಸ್ ಗಾರ್ಡನ್’ಗಳಿವೆ. ಜಗತ್ತಿನ ಅತ್ಯುತ್ತಮ ಪರಿಸರಸ್ನೇಹಿ ನಿಲ್ದಾಣ ಎನ್ನುವುದು ‘ಚಾಂಗಿ’ಯ ಹೆಚ್ಚುಗಾರಿಕೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.