ADVERTISEMENT

ವಿಶಿಷ್ಟ ನೆನಪು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2017, 19:30 IST
Last Updated 1 ಏಪ್ರಿಲ್ 2017, 19:30 IST
ವಿಶಿಷ್ಟ ನೆನಪು
ವಿಶಿಷ್ಟ ನೆನಪು   

‘ವಿಶ್ವರಂಗಭೂಮಿ ದಿನ’ದ ನೆಪದಲ್ಲಿ ನೆನಪು ಮಾಡಿಕೊಂಡ ಮಹಾನ್ ಕಲಾವಿದ, ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರ ಲೇಖನ (ಮಾರ್ಚ್ 26, ಲೇ: ಎನ್‌. ಜಗನ್ನಾಥ ಪ್ರಕಾಶ್) ಅರ್ಥಪೂರ್ಣವಾಗಿತ್ತು. ಅವರಿಗೆ ಉಗ್ಗಿನ (stammering) ತೊಂದರೆಯಿತ್ತು. ಆದರೆ ಆ ಒಂದು ನ್ಯೂನತೆ ಅಥವಾ ದೋಷವನ್ನೂ ನಾಟಕದ ಸಂಭಾಷಣೆ ಹೇಳುವಾಗ ಔಚಿತ್ಯಪೂರ್ಣವಾಗಿ, ಕಲೆಯಾಗಿ ಪರಿವರ್ತಿಸಿಕೊಂಡು ತಮ್ಮ ದೌರ್ಬಲ್ಯವನ್ನು ಮರೆಸುತ್ತಿದ್ದರಂತೆ. ‘ನಾಟಕಶಿರೋಮಣಿ’ ಎಂಬುದು ಅವರ ಅಪೂರ್ವ ಅಭಿನಯ ಕೌಶಲಕ್ಕಾಗಿ ಸಹೃದಯರು ಮೆಚ್ಚಿ ನೀಡಿದ ಬಿರುದು.
–ಡಾ. ಆರ್. ಲಕ್ಷ್ಮೀನಾರಾಯಣ, ಬೆಂಗಳೂರು

*
ಐತಿಹ್ಯ!
‘ಕನ್ನಡ ರಂಗಮಂಚದ ಆಚಾರ್ಯ ಪ್ರತಿಭೆ’ ಎ.ವಿ. ವರದಾಚಾರ್ಯರು ತಮ್ಮ ಕಾಲದಲ್ಲಿ ಒಂದು ‘ಐತಿಹ್ಯ’ವೇ ಆಗಿದ್ದವರು. ಅ.ನ.ಕೃ. ಅವರ ಬೃಹತ್ಕಾದಂಬರಿ ‘ನಟಸಾರ್ವಭೌಮ’ದ ನಾಯಕ ಪಾತ್ರ ವರದಾಚಾರ್ಯರು. (ಮೊದಮೊದಲು ಆಕ್ಷೇಪಣೀಯವಾಗಿದ್ದ ಕಾದಂಬರಿಯನ್ನು ಈಚೆಗೆ ‘ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ’ ಮರುಮುದ್ರಿಸಿದೆ)
–ಸಿಪಿಕೆ, ಮೈಸೂರು

*
ಹೆಣ್ಣಾಗುವ ಅಗತ್ಯ
‘ಹೆಣ್ಣಾಗುವುದು ಹೇಗೆ? (ಮಾರ್ಚ್‌ 19, ಲೇ: ರವೀಂದ್ರ ಭಟ್) ಲೇಖನ ಸಕಾಲಿಕವಾಗಿದೆ, ಅರ್ಥಪೂರ್ಣವಾಗಿದೆ. ಮಂಟಪ ಪ್ರಭಾಕರ ಉಪಾಧ್ಯರ ಅನುಭವ ಕಥನವನ್ನು ಆಧರಿಸಿದ ಈ ಬರಹ, ಶಿವ ತನ್ನ ಜಟೆಯಲ್ಲಿ ಗ೦ಗೆಯನ್ನು ಬಿಗಿದಿಟ್ಟ೦ತೆ ಹಲವು ಅರ್ಥಗಳನ್ನು ತನ್ನಲ್ಲಿ ಇರಿಸಿಕೊಂಡಿದೆ. ಅದರೊಳಗೆ ಹುದುಗಿರುವ ಅರ್ಥವನ್ನು ತಿಳಿದು ಪೋಷಕರು ಮಕ್ಕಳನ್ನು ಬೆಳೆಸುವುದು ಇ೦ದಿನ ಅಗತ್ಯಗಳಲ್ಲೊ೦ದು.
–ಶಶಿಕಲಾ ಮೋಹನ ಜೋಶಿ

ADVERTISEMENT

*
ಅನನ್ಯ ಮಾಲಿಕೆಗಳು
‘ಮುಕ್ತಛಂದ’ದಲ್ಲಿ ಪ್ರಕಟಗೊಂಡ ‘ಪಿಸುಗುಡುವ ಚಿತ್ರಪಟ’ ಹಾಗೂ ‘ನೆನಪಿನ ಗಣಿ’ ಮಾಲಿಕೆಗಳು ವಿಶಿಷ್ಟ ಬರಹಗಳ ಮೂಲಕ ಗಮನಸೆಳೆದವು.
‘ಪಿಸುಗುಡುವ ಚಿತ್ರಪಟ’ ಕನ್ನಡ ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಹೊಸ ಸಂವೇದನೆಯೊಂದರ ಪರಿಚಯವೇ ಸರಿ. ಯುವ ಛಾಯಾಚಿತ್ರಕಾರರ ಛಾಯಾಗ್ರಹಣದ ಹಿಂದಿನ ತಾತ್ವಿಕತೆಯನ್ನು ಅನಾವರಣಗೊಳಿಸುವ ಈ ಬರಹಗಳು ದೃಶ್ಯಮಾಧ್ಯಮದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ.

ತಾಂತ್ರಿಕ ಅಂಶಗಳ ಬದಲಿಗೆ ಮಾನವೀಯ ಅಂಶಗಳಿಗೆ ಹೆಚ್ಚು ಒತ್ತು ನೀಡಿದ ಬರಹಗಳು ಕಲೆಮಾಧ್ಯಮವೊಂದು ಸಮಾಜದೊಂದಿಗೆ ನಡೆಸುವ ಅನುಸಂಧಾನದಂತೆಯೂ ಮುಖ್ಯವೆನ್ನಿಸಿತು. ‘ನೆನಪಿನ ಗಣಿ’ ಮಾಲಿಕೆ ವಿವಿಧ ಕ್ಷೇತ್ರಗಳ ಸಾಧಕರ ಬದುಕಿನ ಕೆಲವು ಘಟನೆಗಳನ್ನು ದಾಖಲಿಸುವ ಮೂಲಕ, ಹೊಸ ತಲೆಮಾರಿನ ತರುಣ ತರುಣಿಯರ ವ್ಯಕ್ತಿತ್ವ ವಿಕಸನಕ್ಕೆ ಮಾದರಿಗಳನ್ನು ಒದಗಿಸಿದೆ.
–ಕೆ.ಎಂ. ವನಜಾಕ್ಷಿ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.