ADVERTISEMENT

ಸಾವಿನ ಮನೆಯಲ್ಲಿ ಹಕ್ಕು ಚಲಾವಣೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 19:30 IST
Last Updated 31 ಡಿಸೆಂಬರ್ 2016, 19:30 IST
ಸಾವಿನ ಮನೆಯಲ್ಲಿ ಹಕ್ಕು ಚಲಾವಣೆ
ಸಾವಿನ ಮನೆಯಲ್ಲಿ ಹಕ್ಕು ಚಲಾವಣೆ   
ಬದುಕಿದ್ದಾಗ ಬೇಡ ಎಂದು ಬಿಟ್ಟು ಹೋದವರು ಸತ್ತಮೇಲೆ ಹಕ್ಕು ಚಲಾಯಿಸುವುದು ಯಾವ ನ್ಯಾಯ? ಅಮ್ಮನನ್ನು ‘ನನ್ನ ಅಮ್ಮನೇ ಅಲ್ಲ’ ಎಂದು ತಿರಸ್ಕರಿಸಿದ ಮಕ್ಕಳಲ್ಲಿ ನಾನೂ ಒಬ್ಬಳು ಎಂದು ಹೇಳಿಕೊಳ್ಳಲು ಅದೇನೋ ಕಸಿವಿಸಿ. ಆಗಷ್ಟೆ ಹದಿಹರೆಯಕ್ಕೆ ಕಾಲಿಟ್ಟ ನನ್ನ ಮೇಲೆ ಅಮ್ಮನ ಸೋದರ ಮಾವನಿಂದಲೇ ಲೈಂಗಿಕ ಶೋಷಣೆಯಾಯಿತು. ಅದನ್ನು ಅಮ್ಮನಲ್ಲಿ ಹೇಳಿಕೊಂಡಾಗ ನನ್ನ ಬಾಯಿ ಮುಚ್ಚಿಸಿ, ಮಾವನನ್ನು ಸಮರ್ಥಿಸಿಕೊಂಡಿದ್ದಳು. 
 
ಅಮ್ಮನ ಮೇಲೆ ನನ್ನದು ಇಪ್ಪತ್ತು ವರ್ಷಗಳ ಮುನಿಸು. ಹಳೆಯದನ್ನು ನೆನಪಿಸಿಕೊಂಡಾಗ ಈಗಲೂ ಮಾನಸಿಕ ಯಾತನೆ. ಅದು ಅಪ್ಪನ ಸಾವಿನ ನೋವು. ಸಾವಿನ ನೋವಿಗಿಂತ ಹೆಚ್ಚಾಗಿ ಕಾಡ್ತಿರೋದು – ಹೆತ್ತ ತಂದೆಗೆ ಅಂತ್ಯ ಸಂಸ್ಕಾರ ಮಾಡುವ ಅವಕಾಶವೂ ನನ್ನ ತಾಯಿಯಿಂದಲೇ ವಂಚಿತವಾಗಿದ್ದು. ನನ್ನ ತಂದೆಗೆ ನಾನು ಹಿರಿಯ ಮಗಳಾದರೆ, ನನ್ನ ಬೆನ್ನ ಹಿಂದೆ ಹುಟ್ಟಿದ್ದು ನನ್ನ ತಂಗಿ. ಇಬ್ಬರಿಗೂ ಮದುವೆಯಾಗಿ ಗಂಡನ ಮನೆ ಸೇರಿದ್ದೆವು. ಆದರೂ, ಮದುವೆಯಾಗಿ ಮೂವತ್ತೆಂಟು ವರ್ಷಗಳು ಕಳೆದರೂ ಅಪ್ಪ ಅಮ್ಮನ ನಡುವೆ ಅದ್ಯಾಕೋ ಹೊಂದಾಣಿಕೆ ಸಾಧ್ಯವಾಗಿರಲಿಲ್ಲ. ಅದು ನಮಗೂ ಬಿಡಿಸಲಾರದ ಕಗ್ಗಂಟು. ಅಮ್ಮನ ದುಡ್ಡಿನ ದುರಾಸೆಗೆ, ಊರು ಸುತ್ತುವ ಚಪಲಕ್ಕೆ ಅಪ್ಪನ ಹದಗೆಟ್ಟ ಆರೋಗ್ಯದಿಂದಾಗಿ ಕಡಿವಾಣ ಹಾಕಿದಂತಾಯ್ತು. ಕೊನೆಗೂ ಎಂಟು ತಿಂಗಳ ಹಿಂದೆ ಅವರಿಬ್ಬರ ಸಂಬಂಧ ಮುರಿದು ಬಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟ ಗಂಡನನ್ನು ಬಿಟ್ಟು ಅಮ್ಮ ತಂಗಿಯ ಮನೆ ದಾರಿಹಿಡಿದ್ರು. ಅಪ್ಪನ ಜವಾಬ್ದಾರಿ ನನ್ನ ಹೆಗಲಿಗೆ. 
 
ಅಪ್ಪ ಯಾವಾಗ ತಾವು ಸಂಪಾದಿಸಿದ ಲಕ್ಷ ಲಕ್ಷ ರೂಪಾಯಿಗಳನ್ನು ಅಮ್ಮನ ಹೆಸರಿಗೆ ನಾಮಿನಿ ಮಾಡಿಸಿದ್ದಾರೆ ಎಂದು ತಿಳಿಯಿತೋ – ಒಂದು ತಿಂಗಳ ಹಿಂದೆ ನನ್ನ ತಂಗಿ ಅಪ್ಪನನ್ನು ಆಸ್ಪತ್ರೆಗೆ ತೋರಿಸುವ ನೆಪ ಹೇಳಿ ನಾನು ಮನೆಯಲ್ಲಿ ಇಲ್ಲದ ವೇಳೆ ಅವಳ ಮನೆಗೆ ಕರೆದೊಯ್ದಿದ್ದಳು. ಅಮ್ಮ ಮತ್ತು ಅಮ್ಮನ ಮಗಳಿಂದ ದೂರವಿದ್ದ ನಾನು ಅವರ ಗೋಜಿಗೆ ಹೋಗದೆ, ಅಪ್ಪ ವಾಪಸ್ಸಾಗುವ ದಿನ ಕಾಯ್ತಿದ್ದೆ. ಆದರೆ ಬಂದಿದ್ದು ಅಪ್ಪ ಅಲ್ಲ , ಅಪ್ಪನ ಸಾವಿನ ಸುದ್ದಿ. ಅದು ತಿಳಿದಿದ್ದು ಮೂರನೇ ವ್ಯಕ್ತಿಯ ಮೂಲಕ. 
 
ತಂಗಿ ಮನೆಯಲ್ಲೇ ಅಪ್ಪನ ಕೊನೆಯ ಪೂಜೆ ವಿಧಿವಿಧಾನಗಳನ್ನು ಪೂರೈಸಿದ್ದಳು. ‘ಆಸ್ಪತ್ರೆಗೆ ದೇಹದಾನ ಮಾಡಲಾಗುತ್ತಿದೆ’ ಎಂದು ಹೇಳಿ, ಅಪ್ಪನ ಶವವನ್ನು ಆಸ್ಪತ್ರೆಗೆ ತಂದಾಗ ಕೊನೆಯ ಬಾರಿ ಎಂಬಂತೆ ಅವರ ಮುಖವನ್ನು ನೋಡಿದ್ದಷ್ಟೇ. ನನ್ನ ತಂದೆಯ ಹುಟ್ಟೂರಿನಲ್ಲಿ ಅವರ ಅಂತಿಮ ಸಂಸ್ಕಾರ ಮಾಡುವುದಕ್ಕೂ ಅಮ್ಮ ಅನುಮತಿ ನೀಡಲಿಲ್ಲ. ಆಸ್ಪತ್ರೆಗೆ ಅಪ್ಪನನ್ನು ದಾಖಲು ಮಾಡಿದ್ದಾಗ ಅಪ್ಪನ ಶವವನ್ನು ಆಸ್ಪತ್ರೆಗೆ ದಾನ ಮಾಡಿದರೆ ಬಿಲ್‌ನಲ್ಲಿ ಅರವತ್ತು ಸಾವಿರ ಕಡಿಮೆ ಮಾಡಿಕೊಂಡಿದ್ದಕ್ಕೆ ಅಪ್ಪ ಆಸ್ಪತ್ರೆ ಪಾಲಾದ್ರು. 
 
ಮಕ್ಕಳಿಗಿಂತ ಹೆಂಡತಿಗೆ ಹೆಚ್ಚಿನ ಹಕ್ಕು ಇರುವುದನ್ನು ಅಮ್ಮ ಈ ರೀತಿ ಲಾಭ ಪಡೆದಿದ್ದರು ಎಂದು ಹೇಳುವುದಕ್ಕೂ ಮನಸ್ಸಿಗೆ ಕಷ್ಟವಾಗುತ್ತದೆ. 
 
ಅಪ್ಪಾಜಿ ನನ್ನನ್ನು ಕ್ಷಮಿಸಿ ಬಿಡಿ. ನಾನು ಸಾಯುವವರೆಗೆ ಈ ನೋವು ನನ್ನನ್ನು ಕಾಡುತ್ತದೆ. ಈ ಕ್ಷಣದಲ್ಲೂ ನಿಮ್ಮ ದೇಹ ಶವಾಗಾರದಲ್ಲೇ ಇದೆ ಎಂದು ನೆನಪಿಸಿಕೊಂಡಾಗ ಆಸ್ಪತ್ರೆಯವರೊಂದಿಗೆ ಸೆಣೆಸಾಡಿ ನಿಮ್ಮನ್ನು ಅಲ್ಲಿಂದ ಬಿಡಿಸಿಕೊಂಡು ಬರಲೇ ಎಂದು ಅನಿಸುತ್ತದೆ. ಆದರೆ ನಾನು ಅಸಹಾಯಕಳಾಗಿದ್ದೇನೆ. ಸಾಧ್ಯವಾದರೆ ನಿಮ್ಮ ಮಗಳನ್ನು ಕ್ಷಮಿಸಿಬಿಡಿ. 
–ತೇಜಸ್ವಿನಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.