ಹಿಂದಿನ ಸಾಲಿನ ಹುಡುಗರು ಎಂದರೆ
ನಮಗೇನೂ ಭಯವಿಲ್ಲ!
ಎಸ್. ನರಸಿಂಹಸ್ವಾಮಿಯವರ ಪದ್ಯದ ಈ ಸಾಲುಗಳು ನನಗೆ ಬಹಳಷ್ಟು ಅಚ್ಚುಮೆಚ್ಚು. ಕ್ಲಾಸಿನಲ್ಲಿ ಮುಂದೆ ಕುಳಿತ ಬುದ್ಧಿವಂತ ಅಂತ ಸಿಕ್ಕಾ ಹಾಕಿಸಿಕೊಂಡ ಹುಡುಗರ ಬಗೆಗೆ ಮಾಸ್ತರರಿಗೆ ಬಲು ಪ್ರೀತಿ. ಹಿಂದೆ ಕುಳಿತವರು ಮೂರ್ಖ ಶಿಖಾಮಣಿಗಳು, ಹೋಂವರ್ಕ್ ಮಾಡಿಕೊಂಡು ಬರದ ಮುಗ್ಗಲಗೇಡಿಗಳು, ಪ್ರಶ್ನೆ ಕೇಳಿದರೆ ಉತ್ತರ ಹೇಳಲಾಗದ ಪೆದ್ದರು, ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸದ ಮತಿಗೇಡಿಗಳು...
ಹೀಗೆ ಅವರ ಬಗೆಗೆ ಹತ್ತು ಹಲವು ಗ್ರಹಿಕೆಗಳು. ‘ಎಲ್ಲಾರೂ ಮುಂದೇ ಕೂಡೋದಾದ್ರೆ ಹಿಂದೆ ಕೂಡೋರು ಯಾರು ಸಾರ್?’ ಅಂತ ನನಗೆ ಕೇಳಬೇಕೆನಿಸುತ್ತಿತ್ತು. ಹಿಂದೆ ಕೂತವರ ಕಡೆಗೆ ಮಾಸ್ತರರು ಒಮ್ಮೊಮ್ಮೆ ಕಣ್ಣು ಹಾಯಿಸಿ ಎಡವಟ್ಟು ಪ್ರಶ್ನೆಗಳನ್ನು ಕೇಳಿ, ಅವರನ್ನು ಫಜೀತಿಗೊಳಿಸಿ ದಡ್ಡಶಿಖಾಮಣಿ ಅಂತ ಪಟ್ಟಗಟ್ಟುತ್ತಾರೆ. ಆಗ ಮುಂದಿನವರು ಇವರನ್ನು ನೋಡಿ ನಗುತ್ತಾರೆ. ಆ ಕೊಂಕು ನಗೆ ಹಿಂದೆ ಕುಳಿತ ಹುಡುಗರಿಗೆ ಚೇಳಾಗಿ ಕುಟುಕುತ್ತದೆ.
ಮುಂದಿನ ಸಾಲಿನ ಪ್ರಭೃತಿಗಳಿಗೆ ದಕ್ಕಿರುವ ಅವಕಾಶಗಳು ಹಿಂದಿನ ಸಾಲಿನ ಹುಡುಗರಿಗೆ ದಕ್ಕಿರಲಿಕ್ಕಿಲ್ಲ. ಮುಂದಿನವರಿಗೆ ಸೂಕ್ತ ಪರಿಸರ, ಬೆಂಬಲ, ಮಾರ್ಗದರ್ಶನ ಸಿಕ್ಕು ಓದು ಬರಹದಲ್ಲಿ ಆಸಕ್ತಿ ಕುದುರಲು ಅವಕಾಶಗಳು ಒದಗಿಬರಬಹುದು. ಕೆಲವರ ಬುದ್ಧಿ ಹುಟ್ಟಾ ಚುರುಕೂ ಇರಬಹುದು. ಇಲ್ಲಾ, ಈ ಶ್ಯಾಣ್ಯಾ ಹುಡುಗರೆಂಬುವರು ಆಟ–ನೋಟ ಬಿಟ್ಟು ಬುಕ್‌ವರ್ಮ್ ಆಗಿರಬಹುದು. ಅಂಕಗಳನ್ನು ಗಳಿಸುವ ಉತ್ತಮ ಯಂತ್ರಗಳಾಗಿರಬಹುದು.
ನನ್ನ ಗೆಳೆಯನೊಬ್ಬನಿದ್ದ ಪಿ.ಯು.ಸಿಯಲ್ಲಿ. 70–80 ವಿದ್ಯಾರ್ಥಿಗಳು ಕ್ಲಾಸಿನಲ್ಲಿ. ಇವ ಹಾಜರಿ ಹಾಕಿ ಆಗಾಗ ಹಿಂದಿಂದಲೇ ಮಾಯವಾಗಿ ಬಿಡುತ್ತಿದ್ದ. ಈ ನನ್ನ ಗೆಳೆಯ ಆಗ ಗೌಂಡಿ ಕೆಲಸದಲ್ಲಿ ಕೂಲಿಯಾಳಾಗಿ ದುಡೀತಿದ್ದ. ಹೀಗೇ ಒಮ್ಮೆ ಕ್ಲಾಸಿಂದ ಪಾರಾಗುವಾಗ ಮಾಸ್ತರರ ಕೈಯಲ್ಲಿ ಸಿಕ್ಕುಬಿದ್ದ. ಹೋಗುವವನನ್ನು ತಡೆದರು. ಹೀಂಗ ಮಾಡೋದು ಸರಿಯೇನು? ಅಂತ ಪ್ರಶ್ನಿಸಿದರು. ಆತ ಮುಖ ಕೆಳಗೆ ಹಾಕಿಕೊಂಡು ನಿಂತ. ಅವನ ತಲೆಗೆ ಇಂಗ್ಲಿಷ್ ಹತ್ತಲಿಲ್ಲ.
‘ಸ್ಪೆಲ್ಲಿಂಗುಗಳು, ಉಚ್ಚಾರಗಳು ಒಂದಕ್ಕೊಂದು ಸಂಬಂಧವಿಲ್ಲದ ಈ ಅಪದ್ಧ ಭಾಷೆಯನ್ನು ಯಾಕೆ ತಂದು ತುರುಕುತ್ತಾರೋ ಮಾರಾಯ’ ಅಂತ ಅವನ ಆಕ್ಷೇಪ. ಆದರೆ ಈ ಹುಡುಗ ಗೌಂಡಿಯಾಗಿ, ಮೇಸ್ತ್ರಿಯಾಗಿ ಕೆಲಸ ಮಾಡುತ್ತ ಈಗ ಒಬ್ಬ ದೊಡ್ಡ ಕಂಟ್ರ್ಯಾಕ್ಟರ್. ಅನೇಕ ಕೆಲಸಗಾರರಿಗೆ ಆಶ್ರಯದಾತ. ಈತ ಈಚೆಗೆ ದಾರಿಯಲ್ಲಿ ಕಂಡಾಗ ನನಗೆ ಹೇಳಿದ– ‘ಮೊನ್ನೆ ಇಂಗ್ಲಿಷ್ ಮಾಸ್ತರರು ಭೇಟಿಯಾಗಿದ್ರಪಾ. ಅವರಿಗೆ, ನಿಮ್ಮ ಪುಣ್ಯ ಸಾರ್, ಇಂಗ್ಲಿಷ್‌ನಲ್ಲಿ ನಪಾಸಾದೆ. ದುಡಿತದ ದಾರಿ ಕಂಡುಕೊಂಡು ಒಂದು ನೆಲೆಗೆ ಹತ್ತಿದೆ.. ಅಂದೆ.
ಅವರು ನಗುತ್ತಾ ಕೈಕುಲುಕಿ, ಬೆನ್ನ ಮೇಲೆ ಕೈಯಾಡಿಸಿ ಶುಭಾಶಯ ಕೋರಿದರು’. ಆಗ ನಾನು ‘ಒಂದು ದಾರಿ ಮುಚ್ಚಿದರೆ ಹಲವು ದಾರಿಗಳಿರುತ್ತವೆ ಬಿಡು..’ ಅಂದೆ. ಇನ್ನೊಬ್ಬ ನನ್ನ ಹಿಂದಿನ ಬೆಂಚಿನ ಗೆಳೆಯ ಪಿಯುಸಿಯೇನೋ ಪಾಸಾದ. ಆದರೆ ಅವನಿಗೆ ಕಲಿಯಲು ಅವಕಾಶ ಸಿಗಲಿಲ್ಲ. ಅವ ಈಗ ಪ್ರಗತಿಪರ ಕೃಷಿಕ. ಆಗ ಸದಾ ತುಂಟಾಟ ಮಾಡಿಕೊಂಡಿರ್ತಿದ್ದ. ಇವ ಈಗ ಒಬ್ಬ ಆದರ್ಶ ರೈತ.
ಈಚೆಗೆ ಪತ್ರಿಕೆಯಲ್ಲಿ ಮೂವರು ತಾವು ಕೊನೆಯ ಬೆಂಚಿನ ಹುಡುಗರು ಎಂದು ತಮ್ಮನ್ನು ಗುರುತಿಸಿಕೊಂಡು ತಮಗೆ ಪಾಠವೆಂದರೆ ಕಬ್ಬಿಣದ ಕಡಲೆಯಾಗಿತ್ತೆಂದು ಹೇಳಿಕೊಂಡಿದ್ದಾರೆ. ಇಂಥ ಹುಡುಗರಲ್ಲಿ ಒಬ್ಬನಾದ ಶಶಾಂಕ ಎಂಜಿನಿಯರಿಂಗ್ ವ್ಯಾಸಂಗದಲ್ಲಿ ಪ್ರತಿಭಾವಂತನೇನಾಗಿರಲಿಲ್ಲ. ಅಪ್ಪನಿಗೆ ಕಾಯಿಲೆಯಾದಾಗ ಅಮೆರಿಕದ ವೈದ್ಯರಿಂದ ವರದಿಗಳನ್ನು ತ್ವರಿತವಾಗಿ ತರಿಸಿಕೊಳ್ಳಬೇಕಾಗಿತ್ತು. ಅದಕ್ಕೆ ಬೇಕಾದ ತಂತ್ರಾಂಶ ಇಲ್ಲದಾಗ ತಾನೇ ಅದನ್ನು ರೂಪಿಸಿ ಯೋಜನೆಯೊಂದನ್ನು ತಯಾರಿಸಿದ. ಒಂದು ಕಂಪನಿಯನ್ನು ಆರಂಭಿಸಿದ. ಇನ್ನೊಬ್ಬ ಹುಡುಗ ಯೋಗೇಂದ್ರನಿಗೆ ಮೊದಲ ಸಾಲು ಅಂದರೆ ಭಯವಂತೆ.
ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯೂ ಮೊದಲ ಬೆಂಚಿನಲ್ಲಿ ಕುಳಿತ ಉದಾಹರಣೆಯೇ ಇಲ್ಲ ಎನ್ನುವ ಈತ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಲಾಗಲಿಲ್ಲ. ಅಲ್ಲಿ ಇಲ್ಲಿ ಅಲೆದಾಡಿ ಆನ್‌ಲೈನ್ ಪ್ರವಾಸೋದ್ಯಮ ಆರಂಭಿಸಿ ನಾಲ್ಕು ವರ್ಷಗಳಲ್ಲಿ ಒಂದು ಬೃಹತ್ ಕಂಪನಿ ಮಾಡಿದ್ದಾನೆ. ಮುಂಬೈನ ಹರಿಗೆ ಕಾಲೇಜಿಗೆ ಹೋಗುವದೆಂದರೆ ಅಲರ್ಜಿ. ಈತ ಚಾರಣ ಮತ್ತು ಪ್ರವಾಸೊದ್ಯಮದಲ್ಲಿ ಆಸಕ್ತಿ ತಳೆದು ಒಂದು ಕಂಪೆನಿ ನಡೆಸುವಲ್ಲಿ ಯಶಸ್ವಿಯಾಗಿದ್ದಾನೆ.
ಹಿಂದಿನ ಸಾಲಿನ ಹುಡುಗರು ದಡ್ಡ ಶಿಖಾಮಣಿಗಳೇನಲ್ಲ. ಅವರದು ಸಂಕೋಚ ಸ್ವಭಾವ ಇರಬಹುದು, ಹಿಂಜರಿಕೆ ಇರಬಹುದು, ಮುನ್ನುಗ್ಗಿ ಮಿಂಚಬೇಕೆಂದವರಲ್ಲ. ಆ ಬಳಿಕ ಅವರಿಗೆ ಅವಕಾಶದ ಬಾಗಿಲುಗಳು ತೆರೆದುಕೊಂಡಾಗ ಮಹತ್ವದ ಕೊಡುಗೆ ನೀಡಿದವರು ಆಗಿದ್ದಾರೆ. ಕಲಿಯುವಾಗ ಮುಂದೆ ಕೂತು ಮಾಸ್ತರರ ಮೇಲೆ ಛಾಪಾ ಹಾಕಲು ಅವರಿಗೆ ಇಷ್ಟವಿರಲಿಕ್ಕಿಲ್ಲ. ಹಿಂದೆಯೇ ಕೂತು ಗೆಳೆಯರೊಂದಿಗೆ ಆಗಾಗ ಮಾತಾಡುತ್ತಾ, ಮಾಸ್ತರರನ್ನು ವಿಮರ್ಶಿಸುತ್ತಾ ಇರುವವರು ಅವರು. ಇಲ್ಲವೇ ತಮ್ಮ ನೋಟ್‌ಬುಕ್ಕಿನಲ್ಲಿ ತಮಗೆ ಬೇಕಾದ ಚಿತ್ರಗಳನ್ನು ತೆಗೆಯುತ್ತ ಕೂಡುವ ಕಲಾವಿದರು ಅವರು.
ಇನ್ನು ಸಭೆ ಸಮಾರಂಭಗಳಲ್ಲಿಯ ಹಿಂದಿನ ಸಾಲಿನ ಕಡೆಗೆ ಹೊರಳೋಣ. ದೊಡ್ಡ ದೊಡ್ಡ ಸಭೆ ಸಮಾರಂಭಗಳಲ್ಲಿ ಮುಂದಿನ ಸಾಲಿನಲ್ಲಿ ವಿಐಪಿಗಳಿಗಾಗಿ ಸ್ಥಳಗಳನ್ನು ಕಾಯ್ದಿರಿಸಲಾಗುತ್ತದೆ. ವೇದಿಕೆಯ ಮೇಲೆ ಪ್ರತಿಷ್ಠಿತ ರಾಜಕಾರಣಿ, ಇಲ್ಲಾ ಸ್ಟಾರ್ ವ್ಯಾಲ್ಯು ಇರುವ ಸಾಹಿತಿ, ಇಲ್ಲಾ ಸುಪ್ರಸಿದ್ಧ ಸ್ಟಾರ್ ಭಾಷಣ ಬಿಗಿಯುತ್ತಾರೆ. ಸ್ವಾಗತಕಾರರು ಅವರ ಗುಣಗಾನ ಮಾಡಿ ಮುಂದಿನ ಸಾಲುಗಳಲ್ಲಿಯ ಗಣ್ಯರೆಂಬವರ ಹೆಸರುಗಳನ್ನು ಹೇಳಿ, ಅವರು ತಮ್ಮ ಉಪಸ್ಥಿತಿಯಿಂದ ಸಮಾರಂಭದ ಶೋಭೆ ಹೆಚ್ಚಿಸಿದ್ದಾರೆಂದು ಹೇಳುತ್ತ ಸ್ವಾಗತಿಸುತ್ತಾರೆ.
ಆದರೆ ವೇದಿಕೆ ಮೇಲಿನ ಈ ಪ್ರತಿಷ್ಠಿತರು ತಮ್ಮ ಉದ್ಘಾಟನಾ ಭಾಷಣ ಅಥವಾ ಮುಖ್ಯ ಭಾಷಣ ಮುಗಿಸಿಕೊಂಡು ವೇದಿಕೆ ಮೇಲಿಂದ ನಿರ್ಗಮಿಸುತ್ತಿದ್ದಂತೆ ಸಭೆಯ ಶೋಭೆ ಹೆಚ್ಚಿಸಿದ್ದ ಮುಂದಿನ ಸಾಲಿನ ಗಣ್ಯರು ಎಂದರೆ ಸುಮಾರಾಗಿ ಅವರ ಅನುಯಾಯಿಗಳು ಜಾಗ ಖಾಲಿ ಮಾಡುತ್ತಾರೆ. ಮುಂದಿನ ಕುರ್ಚಿಗಳು ಬಿಕೋ ಎನ್ನತೊಡಗಿದಾಗ ಸಂಘಟಕರು ಹಿಂದಿನ ಸಾಲಿನಲ್ಲಿ ಕುಳಿತವರಿಗೆ ಕೈಮುಗಿದು ಮುಂದೆ ಕೂಡಲು ಕೇಳಿಕೊಳ್ಳುತ್ತಾರೆ. ಹಿಂದಿನವರು ಅನಿವಾರ್ಯವಾಗಿ ಮುಂದಿನ ಸಾಲುಗಳನ್ನು ಅಲಂಕರಿಸಬೇಕಾಗುತ್ತದೆ.
ಇದು ದೊಡ್ಡ ದೊಡ್ಡ ಸಭೆ ಸಮಾರಂಭಗಳ ವಿಷಯವಾಯಿತು. ಇನ್ನುಳಿದ ಸಭೆಗಳಲ್ಲಿ ಮುಂದಿನವರು ಮುಂದೆ ಆಸೀನರಾಗಿರುತ್ತಾರೆ. ಹಿಂದಿನವರು ಹಿಂದೆಯೇ ಇರುತ್ತಾರೆ. ಹಿಂದೆ ಕೂಡುವದು ನನಗಂತೂ ಬಹಳ ಸುರಕ್ಷಿತ ಅನಿಸುತ್ತದೆ. ಮುಂದೆ ಕುಳಿತ ಕೆಲವು ಪ್ರತಿಷ್ಠಿತರು ಎದ್ದು ಹೊಗಬಹುದು. ಅವರಿಗೇನೂ ಅನಿಸುವದಿಲ್ಲ. ಆದರೆ ಸಾಮಾನ್ಯವಾಗಿ ತೀರ ಮುಂದೆ ಕೂತು ನಡುವೆ ಎದ್ದು ಹೋಗುವದು ಭೂಷಣ ಎನಿಸುವದಿಲ್ಲ. ಸಭೆಯ ನಡವಳಿಕೆಗೆ, ಶಿಷ್ಟಾಚಾರಕ್ಕೆ ತಕ್ಕುದಲ್ಲ. ಅದು ಮುಂದಿನ ಭಾಷಣಕಾರರಿಗೆ ಮುಜುಗರ ಉಂಟುಮಾಡುವದು. ಅದಕ್ಕಾಗಿ ಹಿಂದೆ ಕುಳಿತುಕೊಳ್ಳುವುದು. ನೆಟ್ಟಗೆ ಸಭೆಗೆ ಭಂಗ ಬರದಂತೆ ನಿಧಾನ ಎದ್ದು ಹೋಗಬಹುದು.
ಸೂಕ್ಷ್ಮ ಮತ್ತು ಸಂಕೋಚ ಸ್ವಭಾವದವರು ಮುಂದೆ ಕೂತರೆ ಸೀಟ್ ಅರೆಸ್ಟ್ ಆಗಿ ಕಾರ್ಯಕ್ರಮ ಎಷ್ಟೇ ಬೋರು ಹೊಡೆದರೂ ಮುಗಿಯುವವರೆಗೂ ಕೂಡಬೇಕಾಗುತ್ತದೆ. ಇದು ದೊಡ್ಡ ಪೀಕಲಾಟ. ಹಾಗೆ ಎದ್ದು ಹೋಗುವದು ಸಭ್ಯತೆಯ ಲಕ್ಷಣವಲ್ಲ. ಮುಂದೆ ಕುಳಿತ ಬಳಿಕ ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತದೆ. ಎಷ್ಟೇ ಬೋರು ಹೊಡೆದರೂ ಕುರ್ಚಿಗೆ ಗಟ್ಟಿಯಾಗಿ ಅಂಟಿಕೊಂಡು ಕೂಡೋದು ಕಷ್ಟದ ಸಂಗತಿ. ನಿಜ, ಮುಂದೆ ಕೂತರೆ ನೀವೊಬ್ಬ ಪ್ರಥಮ ದರ್ಜೆಯ ವ್ಯಕ್ತಿಯಾಗಿ ಸ್ವಾಗತಕಾರರಿಂದ ಬಿಂಬಿತರಾಗಬಹುದು.
ವಂದನಾರ್ಪಣೆ ಮಾಡುವವರು ನಿಮ್ಮ ಹೆಸರನ್ನು ತಗೊಂಡು ನಿಮ್ಮ ಅಮೂಲ್ಯ ಸಮಯವನ್ನು ಇಲ್ಲಿ ವಿನಿಯೋಗಿಸಿದ್ದಕ್ಕಾಗಿ ನಿಮ್ಮನ್ನು ಕೊಂಡಾಡಬಹುದು. ನಿಮ್ಮ ಪ್ರತಿಷ್ಠೆ ಹೆಚ್ಚಿ ನೀವು ಹತ್ತರ ಕೂಡ ಹನ್ನೊಂದು ಅಲ್ಲ ಎಂಬ ಭಾವನೆ ಬರುವದು. ಆದರೆ ನಿಮಗೆ ಅಲ್ಲಿ ಸ್ವಾತಂತ್ರ್ಯ ಇರುವದಿಲ್ಲ. ಮುಂದೆ ಕೂತು ಪಕ್ಕದವರೊಂದಿಗೆ ಗಟ್ಟಿಯಾಗಿ ಮಾತಾಡುವಂತಿಲ್ಲ. ಬಿಮ್ಮನೆ ಬಿಗಿದುಕೊಂಡು ಕೂಡಬೇಕಾಗುತ್ತದೆ. ಹಿಂದೆ ಅಪರಿಚಿತರಾಗಿ ಕೂಡುವುದು ನೆಟ್ಟಗೆ ಅಲ್ಲವೆ?
ನೀವು ಆಕಸ್ಮಿಕವಾಗಿ ಮುಂದಿನ ಸಾಲಿನಲ್ಲಿ ಕೂತಿದ್ದರೆ ಬೇರೆ ಅಪಾಯವನ್ನು ಎದುರಿಸಬೆಕಾಗುವದು. ಯಾವುದೇ ದೊಡ್ಡ ಅಧಿಕಾರಿ, ಗಣ್ಯವ್ಯಕ್ತಿ ಬಂದರೆ ಸಂಘಟಕರು ಬಂದು ಮುಂದಿನ ಜಾಗೆ ಖಾಲಿ ಮಾಡಿ ಹಿಂದೆ ಕೂಡಲು ನಿಮ್ಮನ್ನು ವಿನಂತಿಸಿಕೊಳ್ಳಬಹುದು. ಇಲ್ಲಾ ನೀವೇ ಆ ಗಣ್ಯರಿಗೆ ಜಾಗೆ ಖಾಲಿ ಮಾಡಿ ಹಿಂದೆ ಯಾವುದೋ ಸೀಟನ್ನು ಹುಡುಕಿಕೊಳ್ಳಬೇಕಾಗಬಹುದು. ಈ ಪೇಚಿನ ಪ್ರಸಂಗ ಬರಬಾರದೆಂದರೆ ಆದಷ್ಟೂ ಹಿಂದೆ ಕೂಡುವುದೇ ನೆಟ್ಟಗೆ.
ಈಚೆಗೆ ಹೀಗೇ ಆಯಿತು. ಗಣ್ಯವ್ಯಕ್ತಿ ಎಂಬುವರು ಸಭೆ ನಡೆದಿರುವಾಗ ತಡವಾಗಿ ಒಳಬಂದು ಮುಂದಿನ ಸಾಲಿನ ಕಡೆಗೆ ಬಂದು ನಿಂತರು. ಭಾಷಣಕಾರರು ತಮ್ಮ ಭಾಷಣ ಕೆಲ ಕ್ಷಣ ನಿಲ್ಲಿಸಬೇಕಾಯಿತು. ಮುಂದೆ ಒಂದು ಕುರ್ಚಿಯೂ ಖಾಲಿ ಇಲ್ಲ. ಅಲ್ಲಿದ್ದವರು ಯಾರಾದರೂ ಎದ್ದು ತಮಗೆ ಕುರ್ಚಿ ಕೊಡಬೇಕೆಂದು ಆ ಗಣ್ಯರ ಅಪೇಕ್ಷೆ. ಕೊನೆಗೆ ಅವರು ಹಾಗೇ ನಿಂತದ್ದು ಕಂಡು ಒಬ್ಬ ಸೌಜನ್ಯಮೂರ್ತಿ ಎದ್ದು ತಾವು ಕೂಡಬಹುದು ಎಂದು ಹೇಳಿ ಹಿಂದಿನ ಸಾಲಿನಲ್ಲಿದ್ದ ಖಾಲಿ ಕುರ್ಚಿಯತ್ತ ಹೋಗಿ ಕೂತರು. ಆ ಗಣ್ಯ ವ್ಯಕ್ತಿ ಅತ್ಯಂತ ಸಮಾಧಾನ, ಸಂತೃಪ್ತಿಯಿಂದ ಮುಂದಿನ ಸಾಲಿನಲ್ಲಿ ಆಸೀನರಾದರು.
ಇದೆಲ್ಲ ಯಾಕೆ ಬೇಕು? ಮೊದಲೇ ಹಿಂದಿನ ಸಾಲಿನಲ್ಲಿ ಆರಾಮಾಗಿ ಕೂಡಬಹುದಲ್ಲ! ಮುಂದಿನ ಸಾಲಿನ ಸ್ಪರ್ಧೆ ಮೇಲಾಟ ಇಲ್ಲ. ಭಾಷಣಕಾರರ ಮಾತು ಚೆನ್ನಾಗಿದ್ದರೆ ಹಿಂದೆ ಕೂತು ಗಟ್ಟಿಯಾಗಿ ಚಪ್ಪಾಳೆ ಹಾಕಬಹುದು. ಭಾಷಣ ದಿಕ್ಕು ತಪ್ಪಿ ಎತ್ತೆತ್ತಲೋ ಹೋದರೆ ಮುಗಿಸಲು ಚಪ್ಪಾಳೆ ಹಾಕಬಹುದು. ನನ್ನ ಹಾಗೆಯೇ ಹಿಂದಿನ ಸಾಲಿನಲ್ಲಿ ಕೂಡುವ ನನ್ನ ಗೆಳೆಯರೊಬ್ಬರು ಮಾಡುವ ಭಾಷಣದ ರನ್ನಿಂಗ್ ಕಾಮೆಂಟರಿ ಆಲಿಸುತ್ತಾ ಕೂಡಲು ಇಷ್ಟಪಡುತ್ತೇನೆ.
ಈ ಸ್ವಾತಂತ್ರ್ಯ ಮುಂದಿನ ಸಾಲಿನಲ್ಲಿ ಸಿಗದು. ಭಾಷಣ ತೀರಾ ಚಿಟ್ಟೆನಿಸಿದರೆ ಸಲೀಸಾಗಿ ಹಿಂಬಾಗಿಲಿನಿಂದ ಯಾರಿಗೂ ತೊಂದರೆ ಆಗದ ಹಾಗೆ, ಸಭೆಗೆ ಭಂಗ ಬಾರದ ಹಾಗೇ ಎದ್ದು ಹೋಗುವ ಅವಕಾಶ ಇದ್ದೇ ಇರುತ್ತದೆ. ರನ್ನಿಂಗ್ ಕಾಮೆಂಟರಿಯ ಸಖ ಪಕ್ಕದಲ್ಲಿ ಇರದಿದ್ದಲ್ಲಿ ಅಲ್ಲಿ ಕೂತೇ ಒಂದು ಜೊಂಪು ನಿದ್ದೆ ತೆಗೆಯಬಹುದು. ಇಲ್ಲಾ ಎದ್ದು ಹೋಗಿ ಸಿಗರೇಟ್ ಸೇದಿ, ಚಹಾ ಕುಡಿದು, ಮೂತ್ರಕ್ಕೆ ಹೋಗಿ ಫ್ರೆಶ್ ಆಗಿ ನೀವು ನಿರೀಕ್ಷಿಸುವ ಮುಂದಿನ ಭಾಷಣಕಾರರ ಭಾಷಣಕ್ಕೆ ಮತ್ತೆ ಹಾಜರಾಗಬಹುದು.
ಮುಂದಿನ ಸೀಟುಗಳಲ್ಲಿ ಕೂತವರಿಗೆ ತೀರ ಮುಂದೆಯಷ್ಟೇ ಕಾಣುತ್ತದೆ. ಅವರದು ಸೀಮಿತ ದೃಷ್ಟಿ. ಹಿಂದೆ ಕೂತವರಿಗೆ ಮಾತ್ರ ಎಲ್ಲರೂ ಕಾಣುತ್ತಾರೆ. ವೇದಿಕೆಯ ಮೇಲಿರುವವರು ಮತ್ತು ಮುಂದುಗಡೆಯ ಎಲ್ಲರೂ. ಹಿಂದಿನವರ ಕಣ್ಣು ದೊಡ್ಡದಾಗಿರುತ್ತದೆ. ಎಲ್ಲವನ್ನೂ ಸರಿಯಾಗಿ ನಿರೀಕ್ಷಿಸುವ ವಿಶಾಲ ದೃಷ್ಟಿ ಇರುತ್ತದೆ. ಮೇಲೆ ಕೂತವರ ಮತ್ತು ಮುಂದಿನ ಸಾಲಿನವರ ರೀತಿ ರಿವಾಜುಗಳನ್ನು ನಿರೀಕ್ಷಿಸುತ್ತಾ ವಿಮರ್ಶೆ ಮಾಡಬಲ್ಲರು. ಹಿಂದಿನ ಸಾಲಿನವರು ಸ್ವತಂತ್ರ ಜೀವಿಗಳು. ಯಾವುದೇ ಮುಲಾಜಿಗೆ ಕಟ್ಟುಬಿದ್ದು ಕೂಡಬೇಕಾಗಿಲ್ಲ. ಇವರಿಗೆ ಪ್ರತಿಷ್ಠೆ ಬೇಕಿಲ್ಲ, ಗೌರವಾದರಗಳು ಬೇಕಿಲ್ಲ. ಇವರಿಗೆ ಯಾವ ಭ್ರಮೆಗಳೂ ಕಾಡುವುದಿಲ್ಲ.
ಮುಂದಿನ ಸಾಲಿನ ನನ್ನ ಗೆಳೆಯನೊಬ್ಬ ನಾನು ಹಿಂದಿಂದೇ ಇರೋದನ್ನು ಕಂಡು ‘ನೀನು ಮುಂದಿನ ಸಾಲಿಗೆ ಬರೋದು ಯಾವಾಗ?’ ಅಂತ ಚೇಷ್ಟೆ ಮಾಡಿದ. ಅವನು ಇಷ್ಟಕ್ಕೇ ಬಿಡದೆ ‘ಇಡೀ ಪ್ರಪಂಚ ಮೇಲಾಟದಲ್ಲಿದೆ. ಇಲ್ಲಿ ಮೇಲು, ಮೇಲಿನ ಮತ್ತು ಮುಂದಿನ ಸ್ಥಾನಮಾನಗಳಿಗಾಗಿ ಪೈಪೋಟಿ ಏರ್ಪಟ್ಟಿದೆ. ನೀನು ಸದ್ದುಗದ್ದಲವಿಲ್ಲದೆ ಹಿಂದೆ ಕೂತರೆ ಹ್ಯಾಗೆ? ನಿನ್ನನ್ನು ಯಾರು ಕೇಳುವವರು?’ ಅಂದ.
‘ಮುಂದೆ ಬರೋದು ಎಂದರೆ ಏನು?’ ಅಂತ ಕೇಳಿದೆ. ‘ನಿನ್ನಂಥವನಿಗೆ ಏನು ಹೇಳೋದು? ಮುಂದೆ ಅಂದರೆ ಹಿಂದೆ ಹಿಂದೆ ಉಳಿಯದೇ, ನೂಕುನುಗ್ಗಲಿನಲ್ಲಿ ಎಲ್ಲರನ್ನು ಹಿಂದೆ ತಳ್ಳುತ್ತಾ ಮುಂದೆ ಬಂದು ಒಕ್ಕರಿಸುವುದು... ಹಿಂದೆ ಬಂದರೆ ಒದೆಯದ ಮುಂದೆ ಬಂದರೆ ಹಾಯದ ನಿಮ್ಮಂಥವರು ಮುಂದೆ, ಅಂದರೆ ಪ್ರಸಿದ್ಧಿಗೆ ಬರಲು ಸಾಧ್ಯವಿಲ್ಲ ಬಿಡು... ನೀನು ಬು.ಜೀ.ಯೂ ಅಲ್ಲ ಸು.ಜೀ.ಯೂ ಅಲ್ಲ’ ಎಂದ.
‘ಹೊಸ ಪದಗಳನ್ನು ಚಲಾವಣೆಗೆ ತಂದಿರುವಿಯಲ್ಲ! ಏನೋ ಹಾಗಂದರೆ?’ ಎಂದೆ. ‘ಥತ್ ತೇರಿ, ಇಷ್ಟು ಗೊತ್ತಿಲ್ಲವೇನೂ? ಬು.ಜೀ ಅಂದರೆ ಬುದ್ಧಿಜೀವಿ, ಸು.ಜೀ ಅಂದರೆ ಸುದ್ದಿ ಜೀವಿ. ಬು.ಜೀಯ ಲಕ್ಷಣಗಳನ್ನು ಬಣ್ಣಿಸಲೆ? ಆತ ಜುಬ್ಬಾ ಹಾಕಿಕೊಂಡು, ಕುರುಚಲು ಗಡ್ಡ ಬಿಟ್ಟು, ಕೆದರಿದ ತಲೆ ಇದ್ದು, ಬಗಲಿಗೆ ಚೀಲ ಹಾಕಿಕೊಂಡಿರುವ, ಅಸ್ತವ್ಯಸ್ತವಾಗಿ ಕಾಣುವ ವ್ಯಕ್ತಿ. ಇನ್ನೂ ಸ್ವಲ್ಪ ಮುಂದುವರೆದು ಹೇಳಬಹುದಾದರೆ– ಕುಡಿದು ಕುಡಿದು ಗಟಾರಕ್ಕೆ ಬಿದ್ದಾಗ ಅವನ ಸಂಗಾತಿಗಳಿಂದ ಅಥವಾ ಚಾಲಕನಿಂದ ಮನೆಯ ಬೆಡ್‌ರೂಮಿಗೆ ಹೊತ್ತು ಹಾಕಿಸಿಕೊಳ್ಳುವ ಅಪರೂಪದ ವ್ಯಕ್ತಿ.
ಇನ್ನು ಸು.ಜೀ. ಅಂದರೆ ದಿನಾ ಸಭೆ, ಸಮಾರಂಭಗಳಲ್ಲಿ ವೇದಿಕೆಯ ಮೇಲೆ ವಿರಾಜಮಾನವಾಗಿದ್ದು, ಇಲ್ಲಾ ಕನಿಷ್ಠ ಮುಂದುಗಡೆಯಾದರೂ ಇದ್ದು ಪತ್ರಿಕೆಯಲ್ಲಿ ಹೆಸರು ರಾರಾಜಿಸುತ್ತಿರಬೇಕು. ಯಾವ ದಿನ ಆತನ ಹೆಸರು ಮತ್ತು ಫೋಟೋ ಪತ್ರಿಕೆಯಲ್ಲಿ ಕಾಣಿಸಿಕೊಳ್ಳುವದಿಲ್ಲವೋ ಆ ದಿನ ಅವನಿಗೆ ಊಟ ರುಚಿಸದು, ನಿದ್ದೆ ಬಾರದು... ನೀನು ಬು.ಜೀ.ಯೂ ಅಲ್ಲ, ಸು.ಜೀ.ಯೂ ಅಲ್ಲ. ನೀನು ಮುಂದೆ ಬರಲಾರೆ’ ಎಂದು ತನ್ನ ಮಾತಿಗೆ ತಾನೇ ನಗುತ್ತಾ ಹೇಳಿದ.
‘ನೀನು ಹೀಗೆ ಹುಡುಗಾಟ ಮಾಡುವುದು ತರವಲ್ಲ’ ಅಂದೆ. ‘ತಪ್ಪು ತಿಳಿಯಬೇಡ. ನಾನು ಹೇಳುತ್ತಿರುವದು ಸೋ ಕಾಲ್ಡ್ ಬು.ಜೀ. ಮತ್ತು ಸು.ಜೀ ಕುರಿತು ಅಷ್ಟೇ... ನೀನು ಈವರೆಗೂ ಹಿಂದಿಂದೆಯೇ ಸಾಮಾನ್ಯನಾಗಿರುವುದಕ್ಕಿಂತ ಎಲ್ಲೆಡೆ ಮೊದಲ ಪಂಕ್ತಿಯಲ್ಲಿ ಕಾಣಿಸಿಕೊಳ್ಳಲಿ ಅನ್ನೋ ಕಳಕಳಿಯಿಂದ ಹೀಗೆ ಹೇಳಿದೆ ಅಷ್ಟೇ’ ಅಂದ.
‘ಥ್ಯಾಂಕ್ಯೂ ನಿನ್ನ ಕಾಳಜಿಗೆ. ನನಗೆ ಇಂಥ ಯಾವ ಭ್ರಮೆಗಳಿಲ್ಲ’. ಅಡಿಗರ ‘ಸಾಮಾನ್ಯನಂತೆ ನಾನು’ ಪದ್ಯದಿಂದ ಪ್ರೇರಿತನಾಗಿ ಮತ್ತೂ ಮಾತಾಡಿದೆ, ‘ನಾವೆಲ್ಲರೂ ಸಾಮಾನ್ಯರು, ಆದರೆ ಸಾಮಾನ್ಯರಲ್ಲ. ನಮಗೆಲ್ಲರಿಗೂ ನಮ್ಮದೇ ಚಹರೆ ಇದೆ... ವಿವಿಧ ಹೂ ಹಣ್ಣು ಬಿಡುವ ಗಿಡಮರಗಳಿಗೇನು ಕಮ್ಮಿ. ಅವು ಮರೆಯಲ್ಲಿದ್ದರೇನು, ಬಯಲಲ್ಲಿದ್ದರೇನು? ಪರಾಕು ಪಂಪುಗಳು ಬೇಕಿಲ್ಲ.
ಪ್ರತಿಯೊಂದು ಜೀವಿಗೂ ತನ್ನದೇ ವಿಕಾಸ ಇದೆ, ಪರಿಧಿ ಇದೆ. ನನಗೂ ನನ್ನದೇ ಆಕಾರ ಇದೆ, ರೂಪ ಇದೆ, ವಿನ್ಯಾಸ ಇದೆ. ನಾನು ಸಾಮಾನ್ಯ ಹೌದು; ಸಾಮಾನ್ಯನಲ್ಲ....’ ಇನ್ನೂ ಮುಂದುವರೀತಾ– ‘ಕುವೆಂಪು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಆರಂಭದಲ್ಲಿ ಹೇಳಿದ್ದಾರಲ್ಲ! ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಃಶ್ಚಿತ್‌ವಲ್ಲ’. ಇದು ಬರೀ ಕಾದಂಬರಿಗೆ ಅನ್ವಯಿಸುವ ಮಾತಲ್ಲ, ಜೀವನಕ್ಕೂ’ ಅಂದೆ.
‘ಹೋಗಲಿಬಿಡೋ ಮಾರಾಯ, ನಾ ಹೇಳಿದ್ದು ನಿನಗರ್ಥವಾಗೋದಿಲ್ಲ, ನೀ ಹೇಳಿದ್ದು ನನಗರ್ಥವಾಗೋದಿಲ್ಲ’ ಅನ್ನುತ್ತ ‘ಬೈ’ ಹೇಳಿ ಹೊರಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.