ಪ್ರತಿವರ್ಷ ಬೇಸಿಗೆ ಬರಲಿ, ನಮ್ಮೂರು ನಿಮ್ಮೂರು ಎನ್ನದೆ ಬಹುಪಾಲು ಎಲ್ಲ ಊರುಗಳಲ್ಲಿ ಸಾಲುಮರಗಳಾಗಿ, ಉದ್ಯಾನಗಳಲ್ಲೂ ಇದ್ದು, ಕಣ್ಣು ಕೋರೈಸುವ ಕೆಂಪನೆಯ ಹೂಗೊಂಚಲುಗಳನ್ನು ಸೃಷ್ಟಿಸಿ, ಭೂಮಿಗೆ ಹಿಡಿದ ಕೆಂಪು ಕೊಡೆಗಳಂತೆ ಕಾಣುವ ಗುಲ್‌ಮೊಹರ್ ಮರಗಳು ಕಣ್ಣುಗಳಿಗೆ ಹಬ್ಬ.
ಮನಸ್ಸಿಗೆ ಉಲ್ಲಾಸ, ಉತ್ಸಾಹದ ಚಿಲುಮೆಗಳಂತೆ ಕಾಣುವ ರಕ್ತವರ್ಣದ ಹೂಗೊಂಚಲುಗಳಿಂದ ಆವೃತವಾದ ಈ ಬೃಹತ್ ಮರಗಳಲ್ಲಿ ಅಲ್ಲಲ್ಲಿ ಉದ್ದನೆಯ ಕತ್ತಿಗಳಂತೆ ಕಾಣುವ ಕಾಯಿಗಳು ನೇತಾಡುತ್ತಿರುತ್ತವೆ. ಅಲ್ಲಲ್ಲಿ ಪುಟ್ಟಪುಟ್ಟ ಕಡುಹಸಿರು ಎಲೆಗಳಿಂದ ತುಂಬಿದ ಗರಿಗಳು. ಇದೇನು? ಈಗ ತಾನೇ ಮರ ಹೂ ತಳೆದಿದೆ.
ಇಷ್ಟುಬೇಗ ಕಾಯಿಗಳು ಸಹ ಕಾಣುತ್ತಿವೆಯಲ್ಲಾ ಎನಿಸುವುದೆ? ತಾಳಿ! ಈಗ ಕಾಣುವ ಕಾಯಿಗಳು ಕಳೆದ ವರ್ಷ ಫಲಪ್ರದವಾದ ಪರಾಗಸ್ಪರ್ಶದ ಪರಿಣಾಮ! ಇಂದಿನ ಗುಲ್‌ಮೊಹರ್ ಹೂವುಗಳು ಮತ್ತು ಕಳೆದ ವರ್ಷದ ಕಾಯಿಗಳನ್ನು ಒಟ್ಟಿಗೆ ನೋಡಿದಾಗ ಮೊಮ್ಮಕ್ಕಳಿಂದ ಸುತ್ತುವರೆದ ಅಜ್ಜ ಅಜ್ಜಿಯರ ನೆನಪಾಗುವುದಿಲ್ಲವೇ? ಅಂದಹಾಗೆ ಈ ಗುಲ್‌ಮೊಹರ್, ಆಫ್ರಿಕಾದ ಸ್ಪಾಥೋಡಿಯಾ (ಉಚ್ಚಿಕಾಯಿಮರ) ಮತ್ತು ನಮ್ಮದೇ ಆದ ಮುತ್ತುಗದ ಮರಗಳು ತಮ್ಮ ಉಜ್ವಲ ಕೆಂಪುವರ್ಣದ ಹೂಗಳ ಚೆಲುವಿನಿಂದ ‘ಕಾಡಿನ ಜ್ವಾಲೆ’ ಎಂಬ ಬಿರುದಿಗೆ ಭಾಜನವಾಗಿವೆ.
ಗುಲ್‌ಮೊಹರ್ ಭಾರತಕ್ಕೆ ಬಂದ ಬಗೆ ಒಂದು ರೋಚಕ ಕಥೆ. ಸುಮಾರು ಮುನ್ನೂರು ವರ್ಷಗಳ ಹಿಂದೆ ಪೋರ್ಚುಗೀಸರ ಒಂದು ಬೃಹತ್ ನೌಕಾಪಡೆ ಭಾರತದ ಕಡೆಗೆ ಸಮುದ್ರಯಾನ ಕೈಗೊಂಡಿದ್ದಾಗ ಅವುಗಳಲ್ಲೊಂದು ನೌಕೆ ಭೀಕರ ಬಿರುಗಾಳಿಯ ದೆಸೆಯಿಂದ ತಮ್ಮ ನೌಕೆಗಳ ಗುಂಪಿನಿಂದ ಬೇರೆಯಾಗಿ ಮಡಗಾಸ್ಕರ್ ದ್ವೀಪದ ಕಡೆಗೆ ತಳ್ಳಲ್ಪಟ್ಟಿತು.
ಆಹಾರ, ನೀರುಗಳಿಲ್ಲದೆ ಕಂಗಾಲಾಗಿದ್ದ ಆ ಹಡಗಿನ ನಾವಿಕರಿಗೆ ವರ್ಣರಂಜಿತ ಕೆಂಪನೆಯ ಹೂವುಗಳ ಮರಗಳಿಂದ ತುಂಬಿದ್ದ ಭೂಭಾಗವೊಂದು ಕಣ್ಣಿಗೆ ಬಿದ್ದು ಅವರು ಆ ಜಾಗವನ್ನು ಸೇರಿಕೊಂಡರು. ಇದೇ ಆ ಭೂಭಾಗಕ್ಕೆ ಮೊದಲ ಮಾನವ ಪ್ರವೇಶ! ಮುಂದೆ ಅದು ತನ್ನಲ್ಲಿದ್ದ ವಿಶಿಷ್ಟ ಸಸ್ಯ ಪ್ರಾಣಿಗಳ ಸಮೃದ್ಧಿಯಿಂದ ಹೊಸತನ್ನು ಬಯಸುವ ಪ್ರಕೃತಿಶಾಸ್ತ್ರಜ್ಞರ ಸ್ವರ್ಗವಾಯ್ತು.
ಈ ಮರಗಳ ಅಸಂಖ್ಯಾತ ಉಜ್ವಲ ವರ್ಣದ ಹೂವುಗಳು ಪರಾಗವಾಹಕಗಳಾದ ಚಿಟ್ಟೆ, ಜೇನ್ನೊಣ, ಹಕ್ಕಿಗಳನ್ನು ಆಕರ್ಷಿಸಿ ತಾವೂ ಉಳಿದುಕೊಂಡವು. ಹೀಗೆ ಗುಲ್‌ಮೊಹರ್ ಹೂ ಮರ ತನ್ನ ಸೌಂದರ್ಯದಿಂದ ಮನುಷ್ಯರನ್ನು ಆಕರ್ಷಿಸಿ ಅವು ಜಗತ್ತಿನ ವಿವಿಧ ಭಾಗಗಳಿಗೆ ರವಾನೆಗೊಂಡವು.
ಫ್ರೆಂಚ್ ಮತ್ತು ಬ್ರಿಟಿಷರು ಗುಲ್‌ಮೊಹರ್ ಅನ್ನು ಮಾರಿಷಸ್‌ನಿಂದ ಭಾರತಕ್ಕೆ ತಂದು ನಮ್ಮ ದೇಶದ ಬೇರೆ ಬೇರೆ ಭಾಗಗಳಲ್ಲಿ ಅವನ್ನು ಪ್ರತಿಷ್ಠಾಪಿಸಿದರು. ಬ್ರಿಟಿಷರು ಸಾಂಬಾರ ಪದಾರ್ಥಗಳನ್ನರಸಿ ನಮ್ಮ ದೇಶಕ್ಕೆ ಕಾಲಿಟ್ಟರು ಎಂಬುದು ಸಾಮಾನ್ಯ ತಿಳಿವಳಿಕೆ. ಅವರು ಬರಿ ವ್ಯಾಪಾರಿಗಳಾಗಿ ಮಾತ್ರ ಬರಲಿಲ್ಲ. ಕ್ರಮೇಣ ಸೈನಿಕರು ನಾವಿಕರು ವೈದ್ಯರುಗಳೂ ಬಂದರು.
ಹೀಗೆ ಇಂಗ್ಲೆಂಡಿನಿಂದ ಬಂದ ವೈದ್ಯರುಗಳಲ್ಲಿ ಒಂದು ವೈಶಿಷ್ಟ್ಯವಿತ್ತು. ಆಗಿನ ಕಾಲದ ಬ್ರಿಟಿಷ್ ವಿದ್ಯಾಭ್ಯಾಸದ ಪದ್ಧತಿಯಂತೆ ಅವರು ವೈದ್ಯಕೀಯದ ಜೊತೆಗೆ ಸಸ್ಯಶಾಸ್ತ್ರದಲ್ಲೂ ಪರಿಣತಿ ಗಳಿಸಿರಬೇಕಿತ್ತು. ಈ ಹಿನ್ನಲೆಯಿಂದ ಭಾರತಲ್ಲೆ ಬಂದ ಕ್ಲೆಗ್‍ಹಾರ್ನ್, ರಾಕ್ಸ್‌ಬರ್ಗ್, ರಾಬರ್ಟ್‌ವೈಟ್, ಡಲ್‌ಜೆಲ್, ಅಲೆಗ್ಸಾಂಡರ್ ಗಿಬ್ಸನ್ ಇವರು ವೈದ್ಯಕೀಯ ಕೆಲಸದ ಜೊತೆಗೆ ಇಲ್ಲಿನ ಸಸ್ಯಗಳ ಅಧ್ಯಯನ ಮಾಡಿದರು.
ಸಸ್ಯಗಳ ಒಣಮಾದರಿಗಳನ್ನು (herbarium) ತಯಾರಿಸಿದರು. ಸ್ಥಳೀಯ ಚಿತ್ರಕಲಾವಿದರಿಗೆ ಜಲವರ್ಣಗಳಲ್ಲಿ ಸಸ್ಯಗಳನ್ನು, ಅವುಗಳ ವಿವಿಧ ಭಾಗಗಳನ್ನು ಅವು ಇದ್ದಂತೆ ವೈಜ್ಞಾನಿಕ ಮಾಹಿತಿಗಳಿಗೆ ಅನುಗುಣವಾಗಿ ಚಿತ್ರಿಸುವ ತರಬೇತಿ ಕೊಟ್ಟರು. ಅದ್ಭುತವಾದ ಸಸ್ಯಚಿತ್ರಗಳು ಈ ಕಲಾವಿದರ ಕುಂಚಗಳಿಂದ ಹೊರಬಂದವು. ಆದರೆ ಈ ಕಲಾವಿದರುಗಳಿಗೆ ತಾವು ರಚಿಸಿದ ಸಸ್ಯಚಿತ್ರಗಳ ಅಡಿಯಲ್ಲಿ ತಮ್ಮ ಹೆಸರುಗಳನ್ನು ಬರೆದು ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳುವ ಅರಿವೇ ಇರಲಿಲ್ಲ!
ಹೀಗಾಗಿ ಈ ಕಲಾವಿದರು ಅನಾಮಧೇಯರಾದರು. ಇವರಿಂದ ಸಸ್ಯಚಿತ್ರಗಳನ್ನು ಬರೆಸಿದ ವೈದ್ಯರುಗಳ ದಫ್ತರಿನಲ್ಲಿ ಇವರಿಗೆ ಕೊಟ್ಟ ವೇತನಗಳನ್ನು ನಮೂದುಗಳಿವೆಯೇ ಹೊರತು ಕಲಾವಿದರುಗಳ ಹೆಸರುಗಳೇ ನಾಪತ್ತೆ. ದಕ್ಷಿಣ ಇಂಡಿಯಾದಲ್ಲಿ ರಾಬರ್ಟ್ ವೈಟ್ ಬರೆಸಿದ ಚಿತ್ರಗಳಲ್ಲಿ ಮಾತ್ರ ‘ರಂಗಯ್ಯ’, ‘ಗೋವಿಂದೂ’ ಎಂಬ ಚಿತ್ರಕಾರರ ಹೆಸರುಗಳು ಇವೆ.
ಈಗ ಪುನಃ ಗುಲ್‌ಮೊಹರ್ಗೆ ಹಿಂತಿರುಗೋಣ. 1828ರಲ್ಲಿ ಬಾಂಬೆ ಪ್ರೆಸಿಡೆನ್ಸಿಯು ಪುಣೆಯ ಹತ್ತಿರದ ಡಾಪುರಿಯಲ್ಲಿ ಒಂದು ಸಸ್ಯೋದ್ಯಾನವನವನ್ನು ಸ್ಥಾಪಿಸಿತು. 1837ರಲ್ಲಿ ಅಲೆಗ್ಸಾಂಡರ್ ಗಿಬ್ಸನ್ ಎಂಬ ಸ್ಕಾಟ್ಲೆಂಡಿನ ವೈದ್ಯ ಇದರ ಮುಖ್ಯಸ್ಥನಾಗಿ ನೇಮಕಗೊಂಡ.
ಗಿಬ್ಸನ್ ತನ್ನ ವಿದ್ಯಾಭ್ಯಾಸದ ಶಿಸ್ತಿಗೆ ಅನುಗುಣವಾಗಿ ವೈದ್ಯಕೀಯದ ಜೊತೆಗೆ ಔಷಧಿಯ ಸಸ್ಯಗಳನ್ನು ಬೆಳೆಸುವುದು ಮತ್ತು ಸ್ಥಳೀಯ ಸಸ್ಯಗಳನ್ನು ಸಂಗ್ರಹಿಸಿ ಅವುಗಳ ಜಲವರ್ಣ ಚಿತ್ರಗಳನ್ನು ಸ್ಥಳೀಯ ಕಲಾವಿದರಿಂದ ಬರೆಸುವ ಕಾರ್ಯ ಮಾಡಿದ. ಹೀಗೆ ಗಿಬ್ಸನ್ ಬರೆಸಿದ ಚಿತ್ರಗಳಲ್ಲಿ ಗುಲ್‌ಮೊಹರ್ ಚಿತ್ರವೂ ಒಂದಾಗಿದೆ.
ವರ್ಣಚಿತ್ರದಲ್ಲಿರುವ ಗುಲ್‌ಮೊಹರ್ ಹೂವುಗಳ ರೆಂಬೆಯನ್ನು ಗಮನಿಸಿ– ಪುಟ್ಟಪುಟ್ಟ ಹಸಿರು ಎಲೆಗಳಿಂದ ತುಂಬಿದ ಗರಿಗಳಂದದ ರೆಂಬೆ, ತನ್ನೆಲ್ಲ ವರ್ಣವೈಭವವನ್ನು ತದ್ವತ್ತಾಗಿ ನಿರೂಪಿಸುತ್ತಿರುವ ಹೂವುಗಳು ನಿಜಕ್ಕೆ ಅದೆಷ್ಟು ಸಮೀಪವಾಗಿವೆ. ವೈಜ್ಞಾನಿಕ ನಿಖರತೆಗೆ ಒತ್ತುಕೊಟ್ಟರೂ ಹೂವುಗಳ, ಎಲೆಗಳ ಸೊಬಗನ್ನು ಚಿತ್ರಿಸಿರುವ ಅನಾಮಧೇಯ ಕುಂಚ ಗುಲ್‌ಮೊಹರ್ ಚಿತ್ರವನ್ನು ಒಂದು ಕಲಾಕೃತಿಯನ್ನಾಗಿಸಿದೆ.
ಹತ್ತೊಂಬತ್ತನೆ ಶತಮಾನದಲ್ಲಿ ಅನೇಕ ಸ್ಕಾಟ್ ವೈದ್ಯರುಗಳ ಉಸ್ತುವಾರಿಯಲ್ಲಿ ರಚಿತವಾದ ಸಸ್ಯಚಿತ್ರಗಳು ಅದ್ಹೇಗೊ ಸ್ಕಾಟ್ಲೆಂಡಿನ ಎಡಿನ್ಬರಾದ ಬಟಾನಿಕ್ ಗಾರ್ಡನ್‌ನ ಸಸ್ಯಾಗಾರವನ್ನು ಸೇರಿದವು. ಶತಮಾನ ಕಾಲ ಅಜ್ಞಾತವಾಸ ಅನುಭವಿಸಿದ ಮೇಲೆ ಈಗ ಅವು ಬೆಳಕಿಗೆ ಬಂದು, 1998ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ 50 ವರ್ಷಗಳ ಸವಿನೆನಪಿಗಾಗಿ ಈ ಚಿತ್ರಗಳು ಎಡಿನ್ಬರಾದಲ್ಲಿ ಪ್ರದರ್ಶನಗೊಂಡವು.
ಇದಕ್ಕೆಲ್ಲಾ ಮುಖ್ಯ ಕಾರಣ ಎಡಿನ್ಬರಾ ಸಸ್ಯೋದ್ಯಾನದ ಈಗಿನ ಕ್ಯುರೇಟರ್ ಆದ ಹೆನ್ರಿನಾಲ್ಟಿ ಅವರು. ಅಂದು ರಚಿತವಾಗಿ ಇಂದು ಬೆಳಕಿಗೆ ಬಂದ ಸಸ್ಯ ಕಲಾಕೃತಿಗಳನ್ನು ನೋಡಿದಾಗ ಅಂದಿನ ಅನಾಮಿಕ ಕಲಾವಿದರ ಪ್ರತಿಭೆಯ ಬಗ್ಗೆ ಆನಂದ, ವಿಷಾದಗಳೆರಡೂ ಉಂಟಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.