‘ಗ ಡ ಗಡ, ದಡ ದಡ’ ಎಂಬ ಪುಟ್ಟ ಸೈಕಲ್ಲಿನ ಸದ್ದು ನಮ್ಮ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆಯೇ ಕೇಳಿತೆಂದರೆ ಅಥವಾ ರಾತ್ರಿ ಎಂಟಾದರೂ ಸೈಕಲ್ಲಿನ ಸದ್ದು ರಸ್ತೆಯಲ್ಲಿ ಕೇಳುತ್ತಿದೆಯೆಂದರೆ ಮಕ್ಕಳಿಗೆ ರಜೆ ಬಂದಿದೆಯೆಂದೇ ನನಗೆ ಖಾತ್ರಿ. ಮಕ್ಕಳು ಬಿದ್ದಾರೆಂದು/ಕಲಿಯಲೆಂದು ಎರಡು ಚಕ್ರದ ಸೈಕಲ್ಲಿಗೆ ಮತ್ತೆರೆಡು ಸಹಾಯಕ ಚಕ್ರ ಇರುತ್ತದಲ್ಲಾ, ಅಂಕುಡೊಂಕಾದ ಟಾರ್ ರಸ್ತೆಯ ಮೇಲೆ ಕರಕರ ಎಂದರೂ ನಮ್ಮನ್ನೂ ಬಾಲ್ಯದ ಅಂಗಳಕ್ಕೆ ಕರೆದೊಯ್ಯುತ್ತದೆ. ನಿರೀಕ್ಷಾ, ಚಿರಂತನ, ರಿಷಾಲಿಕಾ, ತನುಶ್ರೀ, ಶರಧಿ – ಹೀಗೆ ಪುಟಾಣಿ ಸ್ನೇಹಬಳಗ ನನ್ನನ್ನು ತಮ್ಮ ತೆಕ್ಕೆಗೆ ಕೂಗಿ ಕರೆಯುತ್ತದೆ.
ಚುಮುಚುಮು ಚಳಿಗಾಲವಿದು. ಚಳಿ ಎಂದು ದೊಡ್ಡವರು ಬೆಚ್ಚಗೆ ಹೊದ್ದೋ, ಬಿಸಿಬಿಸಿ ಕಾಫಿ, ಬೋಂಡ ಬಜ್ಜಿಯನ್ನೋ ತಿನ್ನಲು ಬಯಸಿದರೆ, ಚಳಿಯ ಅರಿವೇ ಇಲ್ಲದಂತೆ ಮಕ್ಕಳು ತಮ್ಮ ಪಾಡಿಗೆ ತಾವು ಬೀದಿಯಲ್ಲಿ ಆಟವಾಡುವುದನ್ನು ನೋಡುವುದೇ ಒಂದು ಭಾಗ್ಯ. ಇದೆಲ್ಲ ಅರೆ ಹಳ್ಳಿಯ/ಪಟ್ಟಣದ ಚಿತ್ರ.
ಆದರೆ ಪೇಟೆಯ ಮಕ್ಕಳು ಯಾವ ಋತುವಿನಲ್ಲಿಯೂ ಮನೆಯ ಹೊರಗೇ ಬರುವುದಿಲ್ಲ. ತಾವುಂಟು ತಮ್ಮ ಮೊಬೈಲ್ ಗೇಮ್ಸ್ ಅಥವಾ ಟಿ.ವಿ. ಅಥವಾ ಕಂಪ್ಯೂಟರ್ ಉಂಟು ಎಂದಾಗಿದೆ.
ಯಾವಾಗಲೂ ತಮ್ಮದೇ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡು ತಮ್ಮ ಪಾಡಿಗೆ ತಾವಿರಬೇಕೆಂದು ಬಯಸುವ ಮಕ್ಕಳಿಗೆ ಅದರಾಚೆಗೂ ವಿಶಾಲವಾದ ಜಗತ್ತು ಇದೆ ಎಂಬುದನ್ನು ತೋರಿಸಬೇಕಾದ ಅಗತ್ಯತೆ ಇದೆ. ಇದನ್ನು ಅಪ್ಪ, ಅಮ್ಮ, ಅಜ್ಜಿ, ತಾತ, ಶಿಕ್ಷಕರು, ಹಿರಿಯರು, ಸ್ನೇಹಿತರು ಪ್ರೀತಿಯಿಂದ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ.
ಮಕ್ಕಳಿಗೆ ಬರುವ ರಜಾಗಳಲ್ಲಿ ಕ್ರಿಸ್ಮಸ್ ರಜೆ ತುಂಬಾ ಮುಖ್ಯವಾದ ರಜಾ ವೇಳೆ. ಇಗೋ ತಗೋ ಎನ್ನುವಷ್ಟರಲ್ಲಿ ರಜಾ ಮುಗಿದೇ ಹೋಗಿರುತ್ತದೆ. ಬೇಸಿಗೆ ರಜೆಯ ಮಜವೇ ಬೇರೆ. ಬೆವರು ಸುರಿವ ಆ ಕಾಲದಲ್ಲಿ ನದಿ, ಕೆರೆ, ಕಾಲುವೆ ಎಂದು ಆನಂದಿಸಬಹುದು. ಕ್ರಿಸ್‌ಮಸ್ ರಜೆಯ ಸಮಯವಾದರೋ ಚಳಿಗಾಲ. ಕೊರೆವ ನೀರನ್ನು ಮುಟ್ಟುವುದೇ ಕಷ್ಟ. ಬೆಳಿಗ್ಗೆ ಏಳಬೇಕು ಅನ್ನಿಸುವುದೇ ಇಲ್ಲ. ಏಳಲು ಒತ್ತಾಯಿಸಿದರೂ ಮತ್ತೆ ಮುಸುಕು ಹಾಕಿ ಮಲಗಬೇಕೆನಿಸುತ್ತದೆ. ಈ ಚಳಿಗಾಲದಲ್ಲಿ ಬಿಸಿಲು ಕಂಡರೆ ಮೈಚಾಚುವ ಮನಃಸ್ಥಿತಿ.
ಈ ಪುಟ್ಟ ರಜಾವನ್ನು ಹೇಗೆಲ್ಲ ಕಳೆಯಬಹುದು ನೋಡೋಣ
ಒಂದೆರಡು ದಿನದ ಪ್ರವಾಸವನ್ನು ಯೋಜಿಸಬಹುದು. ಆದರೆ ಇದು ಸೂಕ್ಷ್ಮ ಹವಾಮಾನದ ಕಾಲವಾದುದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರ ವಹಿಸಬೇಕು. ಊಟ, ನೀರು ಇತ್ಯಾದಿ. ಇಲ್ಲದಿದ್ದಲ್ಲಿ ಶಾಲೆಯಲ್ಲಿ ರಿವಿಷನ್, ಪ್ರಿಪರೇಟರಿ ಪರೀಕ್ಷೆಗಳಲ್ಲಿ ಮಕ್ಕಳಿಗೆ ಅನಾನುಕೂಲ ಆಗಬಹುದು. ಪ್ರವಾಸವನ್ನು ಮಕ್ಕಳ ಅಭಿಪ್ರಾಯ ಪಡೆದು ಚರ್ಚಿಸಿಯೇ ಆಖೈರುಗೊಳಿಸಬೇಕು. ಅದರ ಸಿದ್ಧತೆಯಲ್ಲಿ ಅವರನ್ನು ತೊಡಗಿಸಿಕೊಂಡರೆ ಅವರಿಗೆ ಸಂತಸದ ಜೊತೆಗೆ ಪ್ರವಾಸ ಹೋಗುವಾಗಿನ ಸಿದ್ಧತೆಗಳ ಬಗೆಗೂ ಅರಿವು ಮೂಡುತ್ತದೆ. ವಯಸ್ಕರಾದ ಮೇಲೆ ಕ್ರಮಬದ್ಧವಾದ ಯೋಜನೆ ಮಾಡುವುದಕ್ಕೆ ಇವು ನಾಂದಿಯಾಗುತ್ತವೆ.
ಮೊದಲು ವಿದ್ಯಾರ್ಥಿಗಳು ಮಾಡಬೇಕಾದ ಕೆಲಸವೆಂದರೆ, ಶಾಲೆಯಲ್ಲಿ ಕೊಟ್ಟ ರಜಾ ಪ್ರಾಜೆಕ್ಟ್‌ಗಳನ್ನು ಮುಗಿಸುವುದು. ಕೆಲವು ಮಕ್ಕಳು ಮೊದಲು ಆಟ ಆಮೇಲೆ ಪಾಠ ಎನ್ನುವ ಮನಃಸ್ಥಿತಿ ಬೆಳೆಸಿಕೊಂಡಿರುತ್ತಾರೆ. ಮಾಡಬೇಕಾದ ಹೋಮ್ ವರ್ಕ್ಸ್ ಆಗಾಗ ನೆನಪಿಗೆ ಬಂದು ರಜವನ್ನೂ ಕಳೆಯಲಿಕ್ಕಾಗದು, ಆ ಕಡೆ ಹೋಮ್ ವರ್ಕ್ ಸಮಯದಲ್ಲಿ ಮಾಡಲಾಗದ ಪರಿಸ್ಥಿತಿ. ಹೀಗಾಗಿ ಮೊದಲು ಶಾಲೆಯ ಕೆಲಸಗಳನ್ನೆಲ್ಲ ಮುಗಿಸಿಕೊಳ್ಳಬೇಕು. ಅನಾರೋಗ್ಯದಿಂದಲೋ ಕಾರ್ಯಕ್ರಮಕ್ಕೆ ಹೋದದ್ದರಿಂದಲೋ ಪೆಂಡಿಂಗ್ ಇರುವ ಹೋಮ್ ವರ್ಕ್ ನೋಟ್ಸ್ ಮುಗಿಸಿಕೊಳ್ಳಬೇಕು. ಅದು ಮೊದಲಿನ ಒಂದೆರಡು ದಿನ.
ಬಹುಮುಖ್ಯರಾದ ಕೆಲವು ಬಂಧುಗಳ ಮನೆಗಳಿಗೆ ಮಕ್ಕಳನ್ನು ಒಂದೆರೆಡು ದಿನಗಳಿಗೆ ಕರೆದುಕೊಂಡು ಹೋದರೆ ಮಕ್ಕಳಿಗೂ ರಿಲಾಕ್ಸ್ ಆದಂತೆ. ಇದು ಸಂಬಂಧಗಳನ್ನು ಮತ್ತಷ್ಟು ಬೆಸೆಯಲು ಅನುಕೂಲ. ಜೊತೆಗೆ ಸ್ಥಳ ಬದಲಾವಣೆಯಿಂದ ಹೊಸ ಹುರುಪು ಮೂಡುತ್ತದೆ.
ಮುಂದಿನ ಎರಡು ತಿಂಗಳಲ್ಲೇ ಬರುವ ಅಂತಿಮ ಪರೀಕ್ಷೆಗೆ ಮಕ್ಕಳನ್ನು ಮಾನಸಿಕವಾಗಿ ತಯಾರಿ ಮಾಡಬಹುದು. ಧೈರ್ಯ ತುಂಬುವ ಜೊತೆಗೆ ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿಯನ್ನು ಮಕ್ಕಳ ಜೊತೆಗೇ ಕುಳಿತು ಮಾಡಬೇಕು. (ಪರೀಕ್ಷೆ ಹತ್ತಿರವಾದಾಗ ಇದಾವುದರ ಕಡೆಗೂ ಗಮನ ಹರಿಸಲು ಸಾಧ್ಯವಾಗುವುದಿಲ್ಲ) ಮೂರ್ನಾಲ್ಕು ವರ್ಷಗಳ ಪ್ರಶ್ನಪತ್ರಿಕೆಗಳನ್ನು ಓದುವಂತೆ ಮಾಡಬಹುದು. ಪ್ರಶ್ನಪತ್ರಿಕೆಯ ಸ್ವರೂಪ ತಿಳಿದರೆ ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕಂತೆ ಮಕ್ಕಳು ತಯಾರಿ ಮಾಡಿಕೊಳ್ಳುತ್ತಾರೆ
ಹೊಸವರ್ಷದ ಶುಭಾಶಯ ಕೋರಲು ಗ್ರೀಟಿಂಗ್ ಕಾರ್ಡ್ ಮಾಡುವುದು. (ಕೊಂಡ ಶುಭಾಶಯ ಪತ್ರಕ್ಕೂ, ನಾವೇ ಮಾಡಿದ ಕರಕುಶಲಕಾರ್ಯಕ್ಕೂ ತೃಪ್ತಿಯಲ್ಲಿ ಹೆಚ್ಚಿನ ವ್ಯತ್ಯಾಸವಿದೆ.)
ಹೂವು-ಹಣ್ಣಿನ ಗಿಡಗಳನ್ನು ನೆಡುವ, ನೀರುಣಿಸುವ ಅಭ್ಯಾಸವನ್ನು ಮಾಡಿಸಬಹುದು. ಮಕ್ಕಳಿಗೆ ಪ್ರಕೃತಿಯೊಂದಿಗೆ ಪ್ರೀತಿ ಮೂಡುವ ಜೊತೆಗೆ, ಆಮ್ಲಜನಕ ದೊರೆಯುತ್ತದೆ. ಬಿಸಿಲಿನಲ್ಲಿ ಈ ಕೆಲಸ ಮಾಡುವುದರಿಂದ ವಿಟಮಿನ್ ‘ಡಿ’ ದೊರಕಿ ಚರ್ಮ ಮತ್ತು ಮೂಳೆಯ ಆರೋಗ್ಯ ವೃದ್ಧಿಸುತ್ತದೆ.
ಮಕ್ಕಳ ಮುಂದಿನ ವಿದ್ಯಾಭ್ಯಾಸದ ಕುರಿತು ತಜ್ಞರನ್ನು ಸಂಪರ್ಕಿಸಿ ಆ ನಿಟ್ಟಿನಲ್ಲಿ ಯೋಜಿಸಬೇಕು. ಏಕೆಂದರೆ. ಎಷ್ಟೋ ಶಾಲಾ-ಕಾಲೇಜುಗಳಲ್ಲಿ ಪರೀಕ್ಷೆಗೆ ಮೊದಲೇ/ಫಲಿತಾಂಶಕ್ಕೆ ಮೊದಲೇ ಮುಂದಿನ ತರಗತಿಗೆ ಪ್ರವೇಶ ಕೊಟ್ಟುಬಿಟ್ಟಿರುತ್ತಾರೆ.
ಸಣ್ಣ–ಪುಟ್ಟ ಪುಸ್ತಕಗಳನ್ನು ಓದುವ ರೂಢಿಯನ್ನು ಮಾಡಿಸಬಹುದು. ಜೊತೆಗೆ ಪತ್ರಿಕೆಗಳ ತಲೆಬರಹವನ್ನು ಓದುವ ಅಭ್ಯಾಸ ಮಾಡಿಸುವುದು ಅದರಲ್ಲಿರುವ ವಿಶೇಷ ವಿಷಯಗಳನ್ನು ಕತ್ತರಿಸಿ ಒಂದು ಪುಸ್ತಕದಲ್ಲಿ ಅಂಟಿಸಿಡುವುದು ಇತ್ಯಾದಿ. ಇದು ಮಕ್ಕಳಲ್ಲಿ ಮನನಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಪ್ರಾಜೆಕ್ಟ್ ಕೊಟ್ಟಾಗ ಅದನ್ನು ಸರಾಗವಾಗಿ ಮಾಡಿ ಮುಗಿಸಲು ಅನುಕೂಲವಾಗುತ್ತದೆ.
ಹೆಚ್ಚಾಗಿ ಒಲೆಯ ಮುಂದೆ ನಿಲ್ಲದಂತಹ ತಿಂಡಿ ತಿನಿಸುಗಳನ್ನು ಮಾಡುವುದನ್ನು ಮಕ್ಕಳಿಗೆ ಕಲಿಸಬಹುದು. ಉದಾ. ಕೋಸಂಬರಿ, ಬ್ರೆಡ್ ಟೋಸ್ಟ್, ಚುರುಮುರಿ. ಚಳಿಗೆ ನೆಗಡಿ, ಕೆಮ್ಮು, ಕಫ ಮಕ್ಕಳಲ್ಲಿ ಸಾಮಾನ್ಯ. ಹಾಗಾಗಿ ಕೆಲವು ಸುಲಭ ಕಷಾಯಗಳನ್ನು ಮಾಡಿಕೊಳ್ಳುವುದರ ಜೊತೆಗೆ ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರೆ ಆರೋಗ್ಯದ ಬಗ್ಗೆಯೂ ಜಾಗೃತಿ ಉಂಟುಮಾಡಿದಂತಾಗುತ್ತದೆ
ಕೈಬರಹ (ಹ್ಯಾಂಡ್ ರೈಟಿಂಗ್) ಅಂದವಾಗಿಸುವ ಅಲ್ಪಕಾಲದ ಕೋರ್ಸ್‌ಗಳಿಗೆ ಸೇರಿಸಬಹುದು. ಚೆನ್ನಾದ ತಿಳಿವಳಿಕೆ ಇದ್ದರೂ, ಅನೇಕ ಬಾರಿ ಸಹ್ಯವಲ್ಲದ ಕೈಬರಹದಿಂದ ಮೌಲ್ಯಮಾಪಕರಿಗೆ ಮಕ್ಕಳ ಉತ್ತರಪತ್ರಿಕೆಯ ಬಗೆಗೆ ಅನಾದರ ಮೂಡಬಹುದು, ಮತ್ತು ಅದರಿಂದಾಗಿಯೇ ಕಡಿಮೆ ಅಂಕ ಬರಬಹುದು.
ನಿಘಂಟುವನ್ನು ನೋಡುವ ಕ್ರಮ ಹೇಗೆ ಎನ್ನುವುದನ್ನು ಮಕ್ಕಳಿಗೆ ಕಲಿಸುವ ಸದ್ಸಮಯವನ್ನಾಗಿಸಬಹುದು. ನೋಡುವ ಪ್ರಕ್ರಿಯೆಯಲ್ಲಿ ಹೊಸ ಹೊಸ ಪದಗಳ ಪರಿಚಯವೂ ಆದಂತಾಗುತ್ತದೆ. ದಿನಕ್ಕೊಂದು ಪದ ಕಲಿಯುವಿಕೆ. ಅಥವಾ ಒಂದು ಪದಕ್ಕಿರುವ ಬೇರೆ ಬೇರೆ ಅರ್ಥಗಳು, ಸಮಾನಾಂತರ ಪದಗಳು, ಪದಬಂಧ ಇತ್ಯಾದಿ ಎಕ್ಸರ್‌ಸೈಜ್ ಮಾಡಿಸಬಹುದು.
ಚರ್ಮದ ಶುಷ್ಕತೆ ಉಂಟುಮಾಡುವ ಈ ಚಳಿಗಾಲದಲ್ಲಿ ಮತ್ತು ಮುಂಬರುವ ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ವಹಿಸಬೇಕಾದ ಮುಂಜಾಗ್ರತೆ, ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಸ್ವಚ್ಛತೆಯ ಪಾತ್ರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಈ ಪುಟ್ಟ ರಜೆ ಸಹಾಯಕ.
ಪೇಪರ್ ಆರ್ಟ್ ಮಾಡುವುದು, ಸಣ್ಣ ಪುಟ್ಟ ರೆಪೇರಿ ಕೆಲಸಗಳನ್ನು ಮಾಡಿಸುವುದು, ತರಕಾರಿ ಹಣ್ಣು ದಿನಸಿಯನ್ನು ಕೊಳ್ಳಲು ಮಕ್ಕಳನ್ನು ಕರೆದೊಯ್ಯಬೇಕು. ಅದರ ಬೆಲೆ ತಿಳಿಯುವುದರ ಜೊತೆಗೆ ಮನೆಯ ಅವಶ್ಯಕತೆಗಳ ಅರಿವು ಮೂಡಿಸಿದಂತಾಗುತ್ತದೆ.
ನಮ್ಮ ಮಕ್ಕಳೇ ನಮ್ಮ ಬಲ, ಧೈರ್ಯ ಮತ್ತು ಅವರ ಉಜ್ವಲ ಭವಿಷ್ಯವೇ ನಮ್ಮ ಧ್ಯೇಯ. ಹಾಗಾಗಿ ಯಾವುದನ್ನೂ ಮಕ್ಕಳಿಗೆ ಉಪದೇಶ ಮಾಡಬೇಕಿಲ್ಲ. ನಾವು ಕೆಲಸ ಮಾಡುವಾಗ ಮಕ್ಕಳನ್ನು ಜೊತೆಯಲ್ಲಿ ಇರಿಸಿಕೊಂಡರೆ, ತೊಡಗಿಸಿಕೊಂಡರೆ ತಾವೇ ತಾವಾಗಿ ಕಲಿಯುತ್ತಾರೆ. ಮಕ್ಕಳೊಂದಿಗಿರುವಾಗ ಗಾದೆಗಳು, ಅವುಗಳ ಅರ್ಥಗಳು, ಒಗಟನ್ನು ಬಿಡಿಸುವುದೇ ಮುಂತಾದವುದಗಳನ್ನು ಕಲಿಸಬಹುದು.
ಬಹುಮುಖ್ಯವಾದ ಅಂಶವೆಂದರೆ ಇಂಥ ಎಲ್ಲ ಕ್ರಿಯೆಗಳು ತಂದೆ–ತಾಯಿ, ಅಜ್ಜ–ಅಜ್ಜಿಯಂದಿರೊಂದಿಗೆ ಮಕ್ಕಳ ಒಡನಾಟ, ಆತ್ಮೀಯತೆ, ಪ್ರೀತಿಯನ್ನು ಮತ್ತಷ್ಟು ಬಲಪಡಿಸುತ್ತವೆ. ಅಂಥ ಮಮತೆ, ವಾತ್ಸಲ್ಯ, ಪ್ರೀತಿಗಳೇ ನಮ್ಮ ಆಸ್ತಿ.
ಈ ರಜೆಯನ್ನು ಬೆಚ್ಚಗೆ ಆನಂದಿಸೋಣ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.