ADVERTISEMENT

ಆಹಾ ಚಹಾ...

ಬಾಲಕೃಷ್ಣ ಹೊಸಂಗಡಿ
Published 22 ಸೆಪ್ಟೆಂಬರ್ 2018, 20:23 IST
Last Updated 22 ಸೆಪ್ಟೆಂಬರ್ 2018, 20:23 IST
   

ಕೇರಳದ ವಯನಾಡಿನ ಸುಲ್ತಾನ್ ಬತ್ತೇರಿಯ ನಸುಬೆಳಕಿನ ಕತ್ತಲೆಯಲ್ಲೆಲ್ಲೋ ದಶಕಗಳ ಹಿಂದೆ ಕಂಡ ಚಿತ್ರವೊಂದು ಸ್ಮೃತಿಪಟಲದಲ್ಲಿ ಅಚ್ಚೊತ್ತಿ ಕುಳಿತಿದೆ. ಅಲ್ಲೊಂದು ತಟ್ಟುಕ್ಕಡ ಯಾನೆ ಗೂಡಂಗಡಿ. ಅಲ್ಲಿ ಚಕ್ರವೊಂದು ತಿರುಗುತ್ತಿರುವಂತೆ ಮಂದ ಬೆಳಕಿನಲ್ಲಿ ಆಭಾಸ. ಬೆಳ್ಳಿ ಬೆಳಕಿನ ಐದರ ನಸುಕು. ನೀಲಿ ಪರದೆ ಇಳಿಬಿಟ್ಟ ಮಂಜಿನ ಮುಂಜಾನೆ. ಅಂಗಡಿಯ ಪೆಟ್ರೋಮ್ಯಾಕ್ಸ್‌ನ ಮಿಣ ಮಿಣ ಬೆಳಕು. ಅದರ ಮುಂದೆ ಕಪ್ಪನೆಯ ಮನುಷ್ಯಾಕೃತಿಗಳ ಗುಂಪು. ಗೂಡಂಗಡಿಯ ಆಚೆ ಭಾಗದಲ್ಲಿ, ಬೆಳಕಿನ ಹಿಂಭಾಗದಲ್ಲಿ ತಿರುಗುವ ಚಕ್ರ. ಕುತೂಹಲದಿಂದ ಹತ್ತಿರ ಹೋಗಿ ನೋಡಿದರೆ, ಚಕ್ರವಲ್ಲ, ಅಲ್ಯೂಮಿನಿಯಂ ಪಾತ್ರೆಯೊಂದರಿಂದ ಇನ್ನೊಂದು ಪಾತ್ರೆಗೆ ಹಾರುತ್ತಿದ್ದ ಚಹಾ. ಚಹಾದ ವೃತ್ತಾಕಾರದ ಹಾರಾಟ. ಈ ‘ಚಾಯಚಿತ್ರ ನೋಡುವುದಕ್ಕೇ ಗುಂಪಾಗಿದ್ದ ಜನ. ಅವರು ಕೇವಲ ಚಹಾ ಹೀರುತ್ತಿರಲಿಲ್ಲ, ಚಹಾ ಕಣ್ತುಂಬಿಕೊಳ್ಳುತ್ತಿದ್ದರಷ್ಟೇ. ಚಹಾದೊಡೆಯನ ಚಕ್ರೇಶ್ವರ ಚರಿತೆ ಎಂದರೆ ಇದೇ ಇರಬೇಕೆನ್ನಿಸುತ್ತದೆ!

ಕತ್ತಲೆಯೇ ಕರಗಿ ಬೆಳಗು ಮೂಡುವ ಬಗೆಯಲ್ಲೇ ಮೂಡುತ್ತದೆ ಗಾಜಿನ ಪುಟ್ಟ ಗ್ಲಾಸಿನಲ್ಲಿ ಕೇರಳದ ಕಟ್ಟಂಚಾಯ. ಬರಿಯ ನೀರು ಕುದಿಸಿ ಚಹಾಪುಡಿ ಹಾಕಿ ಸಕ್ಕರೆ ಕದಡಿದರೆ ಕಟ್ಟಂಚಾಯ ಅಥವಾ ಬ್ಲ್ಯಾಕ್ ಟೀ ರೆಡಿ. ಕೇರಳದುದ್ದಗಲ ತಟ್ಟುಕಡಗಳಲ್ಲಿ ಪುಟ್ಟುಂ ಕಡಲೆಕರಿ ಕಟ್ಟಂಚಾಯ ಕಟ್ಟಿಟ್ಟಬುತ್ತಿ. ಬೆಳ್ಳಂಬೆಳಗು ಒಂದು ಕೈಯಲ್ಲಿ ನ್ಯೂಸ್‌ಪೇಪರು ಇನ್ನೊಂದು ಕೈಯಲ್ಲಿ ಕಪ್ಪುಚಹಾ: ಇದು ಸಾಮಾನ್ಯ ಕೇರಳಿಗನ ಅಸಾಮಾನ್ಯ ಚಿತ್ರ. ಸುದ್ದಿ ಮಿದುಳು ಮೀಟುತ್ತಿರುವಾಗ, ಚಹಾ ಹೃದಯ ಕಲಕುತ್ತಿರುತ್ತದೆ ಅಥವಾ ಚಹಾ ಮಿದುಳು ಮೀಟುತ್ತಿರುವಾಗ, ಸುದ್ದಿ ಹೃದಯ ಕಲಕುತ್ತಿರುತ್ತದೆ.

ಜಾಹೀರಾತೊಂದರಲ್ಲಿ ಚಹಾ ಹೀರುತ್ತಾ ನಟ ಮೋಹನಲಾಲ ಹೇಳುವ ಮೋಹಕ ಮಾತು ಇದು: ‘ಉಯರಂ ಕೂಡುಂದೋರುಂ ಚಾಯಯುಡೆ ಸ್ವಾದ್ ಕೂಡುಂ (ಎತ್ತರ ಹೆಚ್ಚಾದಂತೆ ಚಹಾದ ರುಚಿಯೂ ಹೆಚ್ಚಾಗುತ್ತದೆ). ಮುನ್ನಾರಿನ ಎತ್ತರೆತ್ತರದ ಗುಡ್ಡಗಳೆಲ್ಲ ಚಹಾಪೊದೆಗಳ ಚಾದರ ಹೊದ್ದುಕೊಂಡು ಬಿದ್ದುಕೊಂಡಿವೆ. ಹಸುರಿನ ಕೇಕ್ ಕತ್ತರಿಸಿಟ್ಟಂತೆ ಕಾಣಿಸುವ ಮುನ್ನಾರಿನ ಚಹಾ ತೋಟಗಳಲ್ಲಿ ನಾರಿಯರ ಕೈಯೇ ಮುಂದು. ಚಹಾದೆಲೆಗಳನ್ನು ಹೂವೆಂಬಂತೆ ಕಿತ್ತು ತಮ್ಮ ಒಡಲು ಸುತ್ತಿದ ಬುಟ್ಟಿಯಲ್ಲಿ ತುಂಬುವವರೂ ಅವರೇ. ಬಹುತೇಕ ಕಡೆಗಳಲ್ಲಿ ಈ ಚಹಾ ತೋಟದ ಚಾಂದಿನಿಯರೇ ಮನೆ ನೋಡಿಕೊಳ್ಳುವ ಸೌಧಾ(ದಾ)ಮಿನಿಯರೂ. ಹಾಗಾಗಿ ಪ್ರತೀ ಕಪ್ಪು ಚಹಾದಲ್ಲೂ ಈ ‘ಪೆಣ್‌ಕುಟ್ಟಿಗಳ ಕಣ್ಣೀರು, ಬೆವರೂ, ಕಿಬ್ಬೊಟ್ಟೆಯ ನೋವೂ, ನಿಟ್ಟುಸಿರೂ ಎಲ್ಲ ಕಲಸಿಕೊಂಡಿರುತ್ತದೆ.

ADVERTISEMENT

ಮಲಯಾಳಿಗಳಿಗೆ ಚಹಾ ಪವಿತ್ರ. ಪರಶ್ಶಿನ ಕಡವಿನ ಮುತ್ತಪ್ಪನ್ ಕ್ಷೇತ್ರದಲ್ಲಿ ಬೇಯಿಸಿದ ಪಚ್ಚೆಹೆಸರು ಮತ್ತು ಚಹಾ ಪ್ರಸಾದ. ಕಾಸರಗೋಡಿನ ಕಾನತ್ತೂರು ಕ್ಷೇತ್ರದಲ್ಲಿ ಪವಿತ್ರ ಚಹಾ ಸ್ವೀಕರಿಸಲೇಬೇಕು. ಹೀಗೆ ಚಹಾ ಕೂಡ ಧರ್ಮಕ್ಷೇತ್ರಗಳಲ್ಲಿ ಸ್ಥಾನಮಾನ ಗಳಿಸಿಕೊಂಡಿದೆ.

ಚಲ ಚಯ್ಯಂ ಚಯ್ಯಂ ಚಯ್ಯಾ ಅನ್ನುವುದನ್ನೇ ಚಾಯ ಚಾಯ ಮಾಡಿ ರೈಲು ಹತ್ತಿ ಮಂಗಳೂರಲ್ಲಿ ಇಳಿದರೆ ಕೇಳುವ ತುಳು ಭಾಷೆಯ ಮಾತೇ ‘ಬಲೇ ಚಾ ಪರ್ಕ (ಬನ್ನಿ ಚಹಾ ಕುಡಿಯೋಣ). ‘ಅಯ್ಕ್ ದಾಯೆ ಮಂಡೆಚ್ಚ ಮಲ್ಪುವರ್‌ಯೇ. ಕುಲ್ಲ್‌ದ ಪಾತೇರ್ಗಾ. ಬಲೇ ಚಾ ಪರ್ಕ (ಅದಕ್ಕೆಲ್ಲ ಯಾಕೆ ತಲೆಬಿಸಿ ಮಾಡ್ತೀರಿ. ಕೂತು ಮಾತಾಡೋಣ. ಬನ್ನಿ ಚಹಾ ಕುಡಿಯೋಣ).

ದಶಕಗಳ ಕಾಲ ನೂರಾರು ಪ್ರದರ್ಶನ ಕಂಡ ತುಳುನಾಡಿನ ಸುಪ್ರಸಿದ್ಧ ಹಾಸ್ಯ ನಾಟಕವೊಂದರ ಹೆಸರು ಕೂಡ ‘ಬಲೇ ಚಾ ಪರ್ಕ. ತುಳು ನಾಟಕಗಳೆಂದರೆ ಪಂಚಿಂಗ್ ಡೈಲಾಗ್, ವಿಶಿಷ್ಟ ಮ್ಯಾನರಿಸಂಗೆ ಪ್ರಖ್ಯಾತ. ತುಳುವಿನಲ್ಲಿ ಅಂಕುರಿಸಿದ ಬಲೇ ಚಾ ಪರ್ಕ (ಬನ್ನಿ ಚಹಾ ಕುಡಿಯೋಣ). ದೇವದಾಸ್ ಕಾಪಿಕಾಡ್ ಅವರ ಮಾಂತ್ರಿಕ ನಿರ್ದೇಶನದಲ್ಲಿ ದೇಶ- ವಿದೇಶಗಳಲ್ಲಿ ಪ್ರದರ್ಶನ ಕಂಡಿದೆ. ತಂದೆ ಮಕ್ಕಳಿಬ್ಬರು ನಡೆಸುವ ‘ಅ.ದಾ.ಮ. ಕೇಫೆ ಎಂಬ ಹೋಟೆಲ್ ಸಾಹಸ, ಮಗನ ಗುಪ್ತ ಪ್ರಣಯ ಇವುಗಳ ಸುತ್ತ ಹೆಣೆದ ಕಥೆ. ಬಲೇ ಚಾ ಪರ್ಕ ಎಂಬ ನಾಟಕ ತಂಡವೇ ಹುಟ್ಟಿಕೊಳ್ಳುತ್ತದೆ. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡುತ್ತದೆ. ತನ್ಮೂಲಕ ತುಳು ಆಚಾರ-ವಿಚಾರ ಲೋಕ ಸಂ‘ಚಾ’ರ ಮಾಡುತ್ತದೆ.

ಮಂಗಳೂರಿನ ದೊಡ್ಡ ಬಿಂದಿಗೆ ಚಹಾ ‘ಚಾರ್ಮಾಡಿ ಹತ್ತಿ ಬೆಂಗಳೂರು ತಲುಪಿದರೆ ಗಿಡ್ಡವಾಗಿ ಬೈಟೂ ಟೀ ಆಗುತ್ತದೆ. ಹಂಡೆಗಟ್ಟಲೆ ಚಹಾ ಕುಡಿಯುವವನ ಮಂಡೆಬಿಸಿಯಾಗುತ್ತದೆ. ಮೊದಮೊದಲಿಗೆ ಬೈಟೂ ಟೀ ಕೊಡುವವರನ್ನು ಕಂಡರೆ ‘ಕೆಬಿತ್ತ ಕಂಡೆಗ್ ದೀಯೋಡ್ (ಕೆನ್ನೆಗೆ ಬಾರಿಸಬೇಕು) ಅಂತ ಹಂಡೆ ಟೀಯವನಿಗೆ ಅನ್ನಿಸುತ್ತದೆ. ಆಮೇಲಾಮೇಲೆ ಒಮ್ಮೆಗೇ ಕುಡಿದು ಹೊಟ್ಟೆ ಉಬ್ಬರಿಸುವುದಕ್ಕಿಂತ ಆಗಾಗ ಕುಡಿದು ಕುಪ್ಪಳಿಸುವುದೇ ಮಜಾ ಅಂತ ಗೊತ್ತಾಗುತ್ತದೆ. ಹೀಗೆ ಬುಂಡೇನ ಎತ್ತಿ ಕುಡಿದುಬಿಡುತ್ತಿದ್ದವ ಕೊನೆಗೆ ಸಿಪ್ ಬೈ ಸಿಪ್‌ಗೆ ಇಳಿಯುತ್ತಾನೆ. ಚಾಯ ಪರ್ಪರಾ (ಚಹಾ ಕುಡಿಯುತ್ತೀರಾ) ಎಂದು ಕೇಳಿದರೆ ದೊಡ್ಡ ಗ್ಲಾಸೆಂದೂ, ಟೀ ತಗೋತೀರಾ ಎಂದರೆ ಬೈಟೂಗೆ ಹತ್ತಿರ ಎಂದೂ ಅರ್ಥೈಸುವಷ್ಟು ‘ಚಾಣಾಕ್ಷನಾಗುತ್ತಾನೆ. ಚಾಮರಾಜಪೇಟೆಯಲ್ಲಿ ಚಹಾ ಕುಡಿದು ಚಾವುಂಡರಾಯನ ಬಗ್ಗೆ ಮಾತನಾಡುತ್ತಾ ಛತ್ರಚಾಮರಕ್ಕೆ ಹಂಬಲಿಸುತ್ತಾನೆ. ಚಾಮರಾಜಪೇಟೆ, ಚಾಮರಾಜನಗರ, ಚಾರ್ಮಾಡಿಘಾಟು, ಚಾಮುಂಡೇಶ್ವರಿ ಬೆಟ್ಟ, ಚಾಲುಕ್ಯ ಹೋಟೆಲ್ ಎಲ್ಲೆಲ್ಲೂ ಚಾ ಕಾಣಿಸಿ ಅಚಾನಕ್ ಬೋಧತಪ್ಪುತ್ತಾನೆ.

ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕಾಲಮ್ಮು ‘ಚಹಾದ ಜೋಡಿ ಚೂಡಾದ್ಹಂಗ ಬರ‍್ತಾ ಇದ್ದಾಗ ಚಹಾ ಸರಿ, ಜೋಡಿ ಸರಿ ಇದೇನಿದು ಚೂಡಾ ಎಂದು ಅಂದಕಾಲದಲ್ಲಿ ಕಾಸರಗೋಡಿನಲ್ಲೇ ಇದ್ದಾಗ ಹುಬ್ಬೇರಿಸಿದ್ದೂ ಇದೆ. ಮಲಯಾಳಂನಲ್ಲಿ ಚೂಡ್ ಎಂದರೆ ಸುಡು ಅಥವಾ ಬಿಸಿ ಎಂದರ್ಥ. ಚಹಾವೇ ಬಿಸಿ ಇರಬೇಕಿದ್ದರೆ ಅದರ ಜೋಡಿ ಇನ್ನೊಂದು ಬೆಚ್ಚಗಿದ್ದು ಏನೋ ಇರಬೇಕು ಎಂದು ಗೆಳೆಯರೆಲ್ಲ ಸೇರಿ ಭಯಂಕರ ಮಂಡೆಬಿಸಿ ಮಾಡಿ ತರ್ಕಿಸಿದ್ದೂ ಇದೆ. ಗೆಳೆಯ ವೀರಣ್ಣನ ಮನೆಯಲ್ಲಿ ಬಿಸಿ ಮಂಡಕ್ಕಿಯ ಚೂಡ ತಿಂದಮೇಲೆ ಹೊಟ್ಟೆ ತಣ್ಣಗಾಗಿ ಉತ್ತರ ನೆತ್ತಿಗೇರಿದೆ. ‘ಚಹಾದ ಜೋಡಿ ಅಂದ್ರ ಮತ್ತ...

ಸತ್ಯರಾಜ ಚಿಕ್ಕ ಚಾಯಕಡೈಗೆ ಬಂದು ಹೇಳಿದ: ‘ತಂಬೀ ಒರು ಕಾಜಾಹ್... ... ಸೂಡಾ. ತನ್ನ ಕೈಯಲ್ಲಿದ್ದ ಹಳದಿ ಕಾಜಾ ಪ್ಯಾಕೆಟ್ ಅನ್ನು ಬೆಂಚಿನ ಮೇಲಿಟ್ಟ. ಪಕ್ಕದಲ್ಲಿದ್ದವ ಆ ಪ್ಯಾಕೆಟ್ ಎತ್ತಿ ಓಡಿದ. ಸತ್ಯರಾಜನ ಒಂದೇ ಗುಟುಕಿಗೆ ಚಹಾ ಒಳಗೆ. ಹಬೆ ಹೊರಗೆ. ಇಮ್ಮಡಿ ಶಕ್ತಿಯಿಂದ ಕುಡಿ ಕುಡಿ ಕಾಜಾ ಕುಡಿ ಎಂದೆಲ್ಲ ಹಿನ್ನೆಲೆಯಲ್ಲಿ ಗಾಯನಿಸುತ್ತಾ ಓಡಿದ. ‘ಅಯ್ಯಾ ಇರಟ್ಟ ಪೋವುದು. ಉಡುಪಿಂಗಳಾ ಮಾಟಿಂಗಳಾ... ಎನ್ನುತ್ತಾನೆ ಎಗರಿಸಿದವ. ‘ಕಾಜಾವಿನ್ ಸುಮಯ್ ತೆರಿಯುಂ ಎನ್ನುತ್ತಾ ಸತ್ಯರಾಜ ‘ಅಪ್ಪ ಟೀ ಸಾಪಿಡ್ಲಾಮಾ. ತಂಬಿ ರಂಡ್ ಕಾಜಾ...ಸೂಡಾ. ಎನ್ನುತ್ತಾನೆ. ಇದು ತಮಿಳಿನ ಟೀ ಅಡ್ವಟೈಸುಮೆಂಟು.

ತೆಲುಗಿನ ಚಹಾ ಜಾಹೀರಿನ ಗಂಧದಲ್ಲಿ ಪದಗಳ ಮಧುರ ಬಂಧವಿದೆ: ‘ಏಲಕುಲ ರಾಗಂ, ಕುಂಕುಮ ಪೂವುಲ ನಾದಂ, ಮಹತ್ತರಮಯಿನ ಈ ಕಲಯಿಕಿ ಕಶ್ಮೀರಿ ಸ್ಯಾಫ್ರನ್, ಲವಂಗಾಲ ದರುವು, ದಾಲ್ಜಿನಿ ವಿರುಪು, ಅಮೋಘಮಯಿನ ಈ ಮೇಳವಿನ್‌ಪೇ ಜಯ್‌ಪುರಿ ಸ್ಪೈಸಿ ಮಸಾಲ, ಲೇಲೇತ ಲೆಮನ್‌ಗ್ರಾಸ ವರ್ಷಿಣಿ, ಮಿಂಟ್‌ಲಲಿತ ತರಂಗಿಣಿ ದ್ವಯಮೇ ತಾಜಾ ಮುಂಬೈ ಮಿಂಟ್ ಅಂಡ್ ಲೆಮನ್ ಗ್ರಾಸ್. ಇದಿಗೋ ತಾಜ್. ಇಪ್ಪುಡು ಅದ್ವಿತೀಯಮಯಿನ ಮೂಡು ರುಚಿಲೋ. ವಾಹ್...

ಇಬಾದತ್ ಬೆಸೆವ ಬಳ್ಳಿಯ ಚಹಾ

ಮೊನ್ನೆ ಬಿಳಿಮಲೆಯವರು ಟ್ಯಾಗ್‌ ಮಾಡಿದ ಪುಟ್ಟ ವೀಡಿಯೊ, ಚಹಾವೊಂದರ ಕಾರಣದಿಂದ ಧಾರ್ಮಿಕ ಸೌಹಾರ್ದ ಮರುಸ್ಥಾಪನೆಗೊಳ್ಳು ವುದನ್ನು ಹೇಳುತ್ತದೆ. ಅಲ್ಲೊಂದು ಗಣಪತಿ ವಿಗ್ರಹ ಮಾರುವ ಅಂಗಡಿ. ಅಲ್ಲಿ ಮೂರ್ತಿ ಮಾಡುತ್ತಿರುವ ಬಿಳಿ ಗಡ್ಡದ ಅಜ್ಜ. ಅಲ್ಲಿಗೆ ಬಂದ ಅಂಗಿಯ ಕೈ ಮಡಚಿ ಇನ್‌ಶರ್ಟ್ ಮಾಡಿದ ವ್ಯಕ್ತಿ ಕೇಳುತ್ತಾನೆ- ಬಯ್ಯಾ ವೋ ಬಪ್ಪಾಕಿ ಮೂರ್ತಿ ಲೇನಿ ಥಿ ಘರ್‌ಕೇಲಿಯೇ (ಅಣ್ಣಾ ಮನೆಗೆ ಒಯ್ಯಲು ಗಣೇಶ ವಿಗ್ರಹ ಬೇಕಾಗಿತ್ತು).

‘ಹಾಂ ಹಾಂ ಬಿಲ್‌ಕುಲ್, ಆತಾಹೂಂ.. ಆಯಿಯೇ (ಖಂಡಿತ, ಬಂದೆ.. ಬನ್ನಿ) ಎಂದು ಅಂಗಡಿಯ ಅಜ್ಜ ಅಲ್ಲಿರುವ ವಿವಿಧ ಭಂಗಿಯ ಮೂರ್ತಿಗಳನ್ನು ತೋರಿಸುತ್ತಾನೆ.

‘ಭಯ್ಯಾ ವೋ ಪೆಹಲೀ ಬಾರ್ ಬಪ್ಪಾಕೋ ಘರ್‌ಪೇ ಬಿಟಾನಾ ಹೈ. ಕುಚ್ ಸ್ಪೆಷಲ್ ಬತಾಯಿಯೇನ, (ಅಣ್ಣಾ ಮೊದಲ ಬಾರಿಗೆ ಗಣೇಶನನ್ನು ಕೂರಿಸುತ್ತಾ ಇದ್ದೇನೆ. ಏನಾದ್ರೂ ವಿಶೇಷ ರೀತಿಯದ್ದು ಇದ್ದರೆ ಹೇಳಿ)

‘ಆಯಿಯೇ ಯೇ ದೇಖಿಯೇ (ಬನ್ನಿ ನೋಡಿ)

‘ಚಾರ್‌ಭುಜವಾಲಿ ಮೂರ್ತಿ (ಚತುರ್ಭುಜ ವಿಗ್ರಹ)

‘ಜೀ ಇಸ್ಸೇ ಅಭಯ್‌ಮುದ್ರಾವಾಲಿ ಕೆಹ್‌ತೇ ಹೈ (ಇದನ್ನೇ ಅಭಯಮುದ್ರಾ ಅಂತಲೂ ಕರೆಯುತ್ತಾರೆ)

‘ಅಚ್ಚಾ (ಸರಿ)

‘ಚೋಟೂ’(ಹುಡುಗನನ್ನು ಕರೆದು) ‘ಚಾಯ್ ಚಲೇಗಿ?’ (ಚಾಯ ನಡೆಯುತ್ತದಾ?)

‘ಬಿಲ್‌ಕುಲ್’ (ಖಂಡಿತ)

‘ದೇಖಿಯೇ’ (ನೋಡಿ)

‘ಭಯ್ಯಾ ವೋ ಕೋಯಿ ಬಪ್ಪಾ ಕಿ ಮೂಷಕ್ ಕಾ ಸಾಥ್‌ವಾಲಿ (ಅಣ್ಣಾ ಬಪ್ಪಾ ಮೂಷಕನ ಜತೆಗೆ ಇರುವಂಥದ್ದು)

‘ಹಾಂ ಹಾಂ ಹೈ ನಾ, ಆಗೇ ಆಯಿಯೇ’ (ಹಾಂ ಇದೆಯಲ್ಲ, ಮುಂದೆ ಬನ್ನಿ)

‘ಹಾಂ ಇಸ್‌ ಮೂರ್ತಿ ಮೇ ಹೈ ನಾ ಬಪ್ಪಾ ಅಪ್‌ನಾ ವಾಹನ್‌ಕೆ ಸಾಥ್ (ಈ ಮೂರ್ತಿಯಲ್ಲಿ ಬಪ್ಪಾ ತನ್ನ ವಾಹನ ಜತೆ ಇದ್ದಾನಲ್ಲ)

‘ಮೂಷಕ್. ಆಪ್ ಜಾನ್‌ತೇ ಹೈ ಮೂಷಕ್ ಬಪ್ಪಾ ಕಾ ವಾಹನ್ ಬನ್‌ನೇ ಸೆ ಪೆಹೆಲೇ ಏಕ್ ಅಸುರ್ ಥಾ. (ಮೂಷಕ. ನಿಮಗೆ ಗೊತ್ತೆ. ಬಪ್ಪಾನ ವಾಹನ ಆಗುವುದಕ್ಕಿಂತ ಮೊದಲು ಅಸುರನಾಗಿದ್ದ)

‘ಆಪ್ ಕೋ ತೋ ಕಾಫಿ ಕುಚ್ ಪತಾ ಹೈ (ನಿಮಗೆ ಎಷ್ಟೆಲ್ಲ ಗೊತ್ತಿದೆ)

ವ್ಯಕ್ತಿ ಮೂರ್ತಿ ನೋಡುತ್ತಿರುವ ಹೊತ್ತಿಗೇ ಹಿನ್ನೆಲೆಯಲ್ಲಿ ಮಸೀದಿಯ ನಮಾಜಿನ ಪ್ರಾರ್ಥನೆಯ ಧ್ವನಿ ಕೇಳಿಸುತ್ತದೆ. ಭಕ್ತ ಗ್ರಾಹಕ ಗಣೇಶನನ್ನು ನಿಟ್ಟಿಸುವುದರಲ್ಲಿ ತಲ್ಲೀನನಾಗಿದ್ದರೆ ಅಂಗಡಿಯವ ಕಿಸೆಯಲ್ಲಿದ್ದ ಟೋಪಿ ತಲೆಗೇರಿಸುತ್ತಾನೆ. ಭಕ್ತ ‘ಯೇ ವಾಲಿ (ಇದು) ಎನ್ನುತ್ತಾ ಸರಕ್ಕನೆ ಹಿಂದೆ ತಿರುಗಿದಾಗ ಕಾಣಿಸಿದ್ದು ಟೋಪಿ ಹಾಕಿ ನಿಂತ ಅಜ್ಜ. ಆತ ‘ಫೈನಲ್ ಕರ್‌ದೇ? (ಫೈನಲ್ ಮಾಡಲೇ) ಎನ್ನುತ್ತಾನೆ. ಖರೀದಿಗೆ ಬಂದವನ ಮುಖಭಾವವೇ ಬದಲಾಗುತ್ತದೆ. ‘ಆಕ್ಚುವಲ್ಲೀ ಆಜ್ ತೋಡಾ ಕುಚ್ ಕಾಮ್ ಹೈ. ಮೇ ಕಲ್ ಆತಾ ಹೂಂ' (ನಿಜವಾಗಿ ಈವತ್ತು ಸ್ವಲ್ಪ ಕೆಲಸ ಇದೆ. ನಾನು ನಾಳೆಬರುತ್ತೇನೆ) ಎಂದು ಹೊರಡುತ್ತಾನೆ.

‘ಭಾಯಿಜಾನ್ ಚಾಯ್ ತೋ ಲೇತೇ ಜಾಯಿಯೇ’ (ಚಾ ಕುಡಿದು ಹೋಗಿರಲ್ಲ)

ಹೊರಟವ ನಿಂತ. ಚೋಟು ತಂದ ಚಹಾದ ಕಡೆಗೆ ನಡೆಯುತ್ತಾನೆ. ಚಹಾ ಕುಡಿಯುತ್ತಾನೆ.

‘ನಮಾಜ್‌ ಅದಾ ಕರ್‌ನೇವಾಲಿ ಹಾಥ್ ಬಪ್ಪಾ ಕಿ ಮೂರ್ತಿ ಸಜಾಯೇಂಗೆ ತೊ ಹೈರಾನಿ ತೊ ಹೋಗಿ. (ನಮಾಜ್ ಆದಾ ಮಾಡುವ ಕೈಯೇ ಬಪ್ಪಾನ ಮೂರ್ತಿ ಮಾಡುತ್ತದೆ. ಕಷ್ಟ ಆಗುತ್ತದೆ.)

‘ಯಹೀ ಕಾಮ್ ಕ್ಯೂಂ?’ (ಇದೇ ಕೆಲಸ ಯಾಕೆ?)

‘ಭಾಯಿ ಜಾನ್ ಯೆಹೀ ತೋ ಇಬಾದತ್ ಹೈ’ (ಇದು ನಮ್ಮ ಆರಾಧನೆ)

ಕುಡಿದು ಮುಗಿಸಿದ ಚಹಾದ ಗ್ಲಾಸನ್ನು ಅಜ್ಜ ವ್ಯಕ್ತಿಯ ಕೈಯಿಂದ ಎತ್ತಿಕೊಳ್ಳುತ್ತಾನೆ.

‘ತೋ ಕಲ್ ಮಿಲೇಂಗೇನ? (ಹಾಗಾದರೆ ನಾಳೆ ಸಿಗೋಣ ಅಲ್ವೆ?)

‘ನಹಿ ಆಪ್ ಬಪ್ಪಾ ಕೆ ಮೂರ್ತಿ ಬುಕ್ ಕರ್‌ದೀಜಿಯೇ (ಇಲ್ಲ. ನೀವು ಗಣೇಶ ಮೂರ್ತಿಯನ್ನು ಬುಕ್ ಮಾಡಿಬಿಡಿ)

‘ಕೌನ್ಸೀ ವೋ ಚಾರ್ ಹಾಥ್‌ವಾಲಿ (ಯಾವುದು ಚತುರ್ಭುಜದ್ದೇ)

‘ನಹೀ ನಹೀ ಅಭಯ್‌ಮುದ್ರಾವಾಲಿ (ಇಲ್ಲ ಇಲ್ಲ ಅಭಯಮುದ್ರೆಯದ್ದು)

ಹಹಹ

ಚಹಾ ನಾದೋಪಾಸನೆಯ ಮಂತ್ರ

ಚಹಾ ಎಂದರೆ ಗಂಧರ್ವ ಸಂಗೀತ, ಚಹಾ ಎಂದರೆ ಅಮೃತಶಿಲೆಯನ್ನೇ ಮೇಣ ಮಾಡಿದ ವಾಸ್ತುಶಿಲ್ಪ, ತಬಲಾದ ನಾದದ ನದಿಯ ದ್ರಾಕ್ಷಾಕಲ್ಪ. ಸಂತೂರಿನ ತುಂತುರು ಝರಿ. ಸರೋದದ ನವಿರಾದ ರೋದನ. ಸಿತಾರಿನ ತಾರಾ ತರಂಗ. ಗಿಟಾರಿನ ರಾಕ್‌ಮಯ ಸಂಗ. ಉತ್ತರಾದಿಯಲ್ಲಿ ಸಂಗೀತ ಎಂದರೆ ಆಲಾಪ. ಚಹಾದ ಕೂಟದ ಮಿಲಾಪ.
ವಾರಾಣಸಿಯ ಇಡಿಕಿರಿದ ಬೀದಿ ಸುತ್ತಿ, ಗಂಗೆಯ ತಡಿಯುದ್ದ ಘಾಟ್‌ಗಳನ್ನು ಹತ್ತಿ ಇಳಿದು ತಲಾಶ್ ಮಾಡಿದರೂ ಚಹಾದ ಜೋಡಿ ಪೂರಿ- ಜಿಲೇಬಿ ಬಿಟ್ಟರೆ ಇನ್ನೇನೂ ಸಿಗಲಿಲ್ಲ. ಉಬ್ಬಿದ ಪೂರಿ, ಉರುಟುರುಟು ಗರಿಗರಿ ಜಿಲೇಬಿ. ತೈಲಮಯಾ ಈ ಲೋಕವೆಲ್ಲ ಎಂದೆನಿಸಿದ್ದೂ ಇದೆ. ಶಿಮ್ಲಾದಲ್ಲಿ ಚಹಾದ ಪರಾಂಥಾಮಯ. ಉತ್ತರದಲ್ಲಿ ಚಹಾದ ಜತೆ ತೈಲ ಸಮೃದ್ಧ. ಅವರೆಲ್ಲ ತೈಲಪರೇ. ಆದರೆ ದಕ್ಷಿಣದಲ್ಲಿ ಚಹಾದ ಜೋಡಿ ಮೈದಾ ಸಮೃದ್ಧ. ಇವರೆಲ್ಲ ‘ಮೈದಾಸ್ ಟಚ್ ಕೊಡುವವರೇ. ಬಿಸ್ಕಿಟು, ರಸ್ಕು, ಬೆಣ್ಣೆ ಬಟರ್ರು, ಬ್ರೆಡ್ಡು, ಟೋಸ್ಟು, ಬನ್ನುಗಳದ್ದೇ ಕಾರುಬಾರು.

ಕಳೆದ ಶತಮಾನದ ಅರವತ್ತರ ದಶಕಗಳಲ್ಲಿ ನಟಿ ಜೀನತ್ ಅಮಾನ್ ಚಹಾ ಜಾಹೀರಾತಿನ ರಾಯಭಾರಿ ಆಗಿದ್ದು ಅನಂತರ ಅವರ ಸ್ಥಾನಕ್ಕೆ ಬಂದವರು ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್. ದಶಕಗಳ ಕಾಲ ಅವರದ್ದೇ ರಾಯಭಾರತ್ವ. ಆ ತಬಲಾ, ಆ ಗುಂಗುರು ಕೂದಲು, ‘ಅರೇ ಹುಜೂರ್ ವಾಹ್ ತಾಜ್ ಬೋಲಿಯೇ’ ಎನ್ನುವ ಆ ಮಾತು- ಅದೊಂದು ಅನುಭೂತಿ. ಕಪ್ಪಿನಲ್ಲಿ ಚಹಾ ಕುಣಿದಾಡುತ್ತದೆ. ನಂತರ ಕಾಣಿಸಿದ್ದು ಜಾಕೀರ್ ಹುಸೇನ್ ಮತ್ತು ಆದಿತ್ಯ ಕಲ್ಯಾಣ್‌ಪುರ್ ಜತೆಗಿನ ಜುಗಲ್‌ಬಂದಿ.

ಆಮೇಲೆ ನಟಿ ಕಥಕ್ ನರ್ತಕಿ ಮಾಧುರಿ ದೀಕ್ಷಿತ್ ಸರದಿ. ಮಾಧುರಿ ದೀಕ್ಷಿತಳ ತಾಜ್‌ ಇ ಬೈಠಕ್‌ನಲ್ಲಿ ನೀಲಾದ್ರಿ ಕುಮಾರ್‌ಜೀ ಅವರ ಮೈಮರೆಸುವ ಝಿತಾರ್ ವಾದನ (ಸ್ವತಃ ನೀಲಾದ್ರಿ ಅವರೇ ನಿರ್ಮಿಸಿದ ಸಿತಾರ್ ಮತ್ತು ಗಿಟಾರ್‌ನ ಸಮ್ಮಿಶ್ರ ರೂಪ.) ತಬಲಾ ಸತ್ಯಜಿತ್ ತಲ್ವಲ್ಕರ್, ಪಿಯಾನೋದಲ್ಲಿ ಅಗ್ಮೆಲೋ ಫೆರ್ನಾಂಡಿಸ್, ಮೃದಂಗದಲ್ಲಿ ವಿದ್ವಾನ್ ಶ್ರೀಧರ್ ಪಾರ್ಥಸಾರಥಿ. ಅದು ರಾಗ್ ದಾರ್ಜಲಿಂಗ್. ಇನ್ನೊಮ್ಮೆ ಸರೋದ್ ಮಾಂತ್ರಿಕ ಅಮ್ಝದ್ ಅಲೀಖಾನ್, ಅಮಾನ್ ಅಲಿಖಾನ್ ಮತ್ತು ಅಯಾನ್ ಅಲೀ ಖಾನ್ ಕಾಣಿಸಿದ್ದಾರೆ.

ಸಂತೂರಿನ ತರಂಗಕ್ಕೆ ಸರೋವರ ಸ್ವರ

ಅದು ಕಾಶ್ಮೀರದ ದಾಲ್ ಸರೋವರ. ಅಲ್ಲೊಬ್ಬ ಕೇಳುತ್ತಾನೆ- ‘ಇಸೇ ಕೈಸೆ ಬಜಾತೇ ಹೈ?’ ಅವನು ನುಡಿಸುತ್ತಾನೆ. ಸರೋವರವೇ ಸ್ವರಗೂಡಿದಂತೆ. ದೋಣಿಮನೆಗಳೆಲ್ಲ ಹಂಸಗಳಂತೆ ಅವನ ಸುತ್ತ ನೆರೆಯುತ್ತವೆ. ಹೂ ಮಾರುವವರ ದೋಣಿ, ಹಣ್ಣು ಮಾರುವವರ ದೋಣಿ, ತರಕಾರಿಯವರ- ದಿನಸಿಯವರ ದೋಣಿ. ನಾನಾ ನಮೂನೆಯ ದೋಣಿ ಮನೆ. ದಾಲ್ ಸರೋವರ ಸ್ವರ ಸಂಗೀತಕ್ಕೆ ಜೀವರಸ ತುಂಬಿಕೊಳ್ಳುತ್ತದೆ. ಆ ಸಂಗೀತ ಉಪಕರಣ ಸಂತೂರ್. ನುಡಿಸಿದ ಮಾಂತ್ರಿಕ ಪಂಡಿತ್ ಶಿವಕುಮಾರ್ ಶರ್ಮಾರ ಪುತ್ರ ರಾಹುಲ್ ಶರ್ಮಾ.

ಸುತ್ತ ಸೇರಿದವರೆಲ್ಲ ‘ವಾಹ್ ಉಸ್ತಾದ್’ ಎನ್ನುತ್ತಾರೆ. ‘ಅರೇ ಹುಜೂರ್ ವಾಹ್ ತಾಜ್ ಬೋಲಿಯೇ’ ಎನ್ನುತ್ತಾರೆ ರಾಹುಲ್ ಶರ್ಮಾ. ಸಂತೂರ್ ನಿಜವಾಗಿಯೂ ಕಾಶ್ಮೀರಿ ಜನಪದ ಸಂಗೀತೋಪಕರಣ. ಶರ್ಮಾ ಕೂಡಾ ಮೂಲತಃ ಕಾಶ್ಮೀರದವರೇ.

ಹಾಂಗ್‌ಕಾಂಗಿನ ಕೂಂಗ್ ವೊ ತೊಂಗ್

ಚೈನಾ ಹೇಳಿಕೇಳಿ ಕ್ರಿಸ್ತ ಪೂರ್ವದಲ್ಲೇ ಚಾ ಪಾನದ ಅಭ್ಯಾಸ ರೂಢಿಸಿಕೊಂಡಿತ್ತು ಎನ್ನುವುದನ್ನು ಇತಿಹಾಸದ ಪುಟಗಳು ಹೇಳುತ್ತವೆ. ಚೀನಿಯರಿಗೆ ಚಹಾ ಎಂದರೆ ಔಷಧ. ಚೀನಿಯರ ನಿತ್ಯ ಜೀವನದ ಏಳು ಅಗತ್ಯಗಳಲ್ಲಿ ಒಂದು ಚಹಾ. ‘ಮನಸೇ ರಿಲ್ಯಾಕ್ಸ್’ ಅಂತ ಚೀನೀಯರು ಚಾ ಕುಡಿದುಬಿಡುತ್ತಾರೆ. ಚಹಾ ಎಂದರೆ ಅವರಿಗೆ ಮಾನಸೋಲ್ಲಾಸದ ಮುಕ್ತ ದಾರಿ. ಟೀ ಕೇಕುಗಳನ್ನು ಮಾಡಿ ಬಳಸುತ್ತಾರೆ.

ಮಲೇಷ್ಯಾದ ಹಳೆಯ ನಗರ ಮಲಕ್ಕಾದ ದಾತಾರನ್ ಪಹ್ಲವಾನ್ ಮಾಲ್‌ನಲ್ಲಿ ಕಾಣಿಸಿದ್ದೇ ಕೂಂಗ್ ವೊ ತೊಂಗ್- ಇದು ಚೀನೀ ಹರ್ಬಲ್ ಚಹಾದಂಗಡಿ. ಕಾಫಿಯ ಕೆಫಿನ್‌ಗಿಂತ ಚಹಾದ ಜತೆಗಿನ ಟಿಫಿನ್ ವಾಸಿ ಎನ್ನುವುದು ಆಧುನಿಕರ ಮಾತು. ಚಹಾದ ಜತೆಗೆ ಔಷಧೀಯ ಸಸ್ಯಗಳನ್ನು ಸೇರಿಸಿ ಸಾಂಪ್ರದಾಯಿಕ ರೀತಿಯಲ್ಲಿ ಚಹಾ ತಯಾರಿಸುತ್ತಾರೆ. ಆಳೆತ್ತರದ ಕಡಾಯಿಯ ಒಳಗೆ ಕುದಿಯುವ ಚಹಾದ ಅರೋಮಾ ಆಘ್ರಾಣಿಸುವುದೇ ಆಹ್ಲಾದಕಾರಿ.

ಅಬ್ರುಮ್ ಕಾಂಟೋನಿಸ್ ಪ್ಲಾಂಟ್ ಚಹಾ ಲಿವರ್ ಸ್ವಚ್ಛ ಮಾಡಿ ದೇಹದ ಉಷ್ಣತೆ ಹೊರ ಹಾಕುತ್ತದಂತೆ. ಸ್ಪಿಕಾ ಪ್ರುನಲ್ಲೇ ಡ್ರಿಂಕ್ ಇದು ಕಣ್ಣಿನ ದೃಷ್ಟಿಯನ್ನೂ ಕೂಡಾ ಹೆಚ್ಚಿಸುತ್ತದಂತೆ. ಯಾಸೇ ಮೇ ಹರ್ಬಲ್ ಟೀ ದೇಹದ ವಿಷಾಂಶಗಳನ್ನು ಹೋಗಲಾಡಿಸುತ್ತದಂತೆ. ಲಿಂಗ್ ಝಿ ಮೊಮೊರ್ಡಿಕಾ ಹರ್ಬಲ್ ಟೀ ಪುಪ್ಪುಸದ ಕೆಲಸವನ್ನು ಸಲೀಸು ಮಾಡಿ ಬಿಡುತ್ತದಂತೆ. ಹರ್ಬಲ್ ಜೆಲ್ಲಿ, ಹರ್ಬಲ್ ಚಹಾ ದೇಹದ ವಿಷಾಂಶ ಹೊರಹಾಕಿ ಚರ್ಮವನ್ನು ಸುಂದರಗೊಳಿಸುತ್ತದಂತೆ. ವೊಂಗ್‌ಲೋ ಕತ್ ಟೀ ಉಷ್ಣತೆ ಶಮನ ಮತ್ತು ವಿಷಾಂಶ ವಿಸರ್ಜನಕ್ಕೆ ಅತ್ಯುತ್ತಮ ಪೇಯ. ಚಹಾವನ್ನು ಔಷಧಗೊಳಿಸಿ ಮಾರುವ ವಿಧಾನ ಈಗ ಜನಪ್ರಿಯ. ಕಪ್ಪು- ಮೆರೂನ್ ಬಟ್ಟೆ ತೊಟ್ಟ ಸಿಬ್ಬಂದಿ ನಸುನಗುತ್ತಲೇ ಗ್ರಾಹಕರನ್ನು ಬರಮಾಡಿಕೊಳ್ಳುತ್ತಾರೆ. ಚೈನಾದ ಹಾಂಗ್‌ಕಾಂಗ್‌ನಲ್ಲಿ ಆರಂಭಗೊಂಡ ಈ ಚಹಾದಂಗಡಿ ಈಗ ಜಗತ್ತಿನ ಅನೇಕ ರಾಷ್ಟ್ರಗಳಿಗೂ ವ್ಯಾಪಿಸಿದೆ.

ನ್ಯೂಟೀ

ಮಲೇಷ್ಯಾದ ಜೋಂಕರ್ ಸ್ಟ್ರೀಟ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕನೆ ಕಣ್ಣಿಗೆ ಬಿದ್ದ ಟೀ ಅಂಗಡಿ ನ್ಯೂಟೀ. ಅಲ್ಲಿನ ಚಹಾದ ಅನುಭವವೇ ಭಿನ್ನ. ಪರ್ಲ್ ಮಿಲ್ಕ್ ಟೀ, ಗುಲಾ ಮಲಕಾ ಪರ್ಲ್ ಮಿಲ್ಕ್ ಟೀ, ಹಾಝೆಲ್‌ನಟ್ ಮಿಲ್ಕ್ ಟೀ, ರೆಡ್ ಬೀನ್, ಬಿಗ್ ಬ್ಯಾಂಗ್ ಮೂ ಟೀಗಳೆಲ್ಲ ಒಂದು ಕಡೆಯಾದರೆ, ಇನ್ನೊಂದೆಡೆ ಬ್ಲ್ಯಾಕ್ ಟೀ, ಮಚ್ಚಾ, ಕೋಕೋ ಚೀಸ್, ಮಚ್ಚಾ ಚೀಸ್ , ಬ್ಲ್ಯಾಕ್‌ ಟೀ ಚೀಸ್ ಇತ್ಯಾದಿ ಸ್ವಾದದ ಚಹಾ.

ಕೊಕೊ, ಹಾಝಲ್‌ನಟ್ ಕೊಕೊ, ಸ್ಟ್ರಾಬೆರಿ ಕೊಕೊ ಇತ್ಯಾದಿ ಫ್ಲೇವರ್‌ಗಳು ಇವೆ. ಜೇನು- ನಿಂಬೆ- ಅಲೋವೆರಾ ಮಿಶ್ರಣ, ದ್ರಾಕ್ಷಿ -ಅಲೊವೆರಾ- ಪ್ಯಾಷನ್‌ಫ್ರೂಟ್ ಮಿಶ್ರಣ, ಮಾವು- ಅಲೋವೆರಾ, ಲಿಚೀ- ಅಲೊವೆರಾ, ಐಸ್ ಪ್ಲಮ್- ಅಲೊವೆರಾ, ದ್ರಾಕ್ಷಿ- ಗ್ರೀನ್ ಟೀ, ಪ್ಯಾಷನ್‌ಫ್ರೂಟ್- ಗ್ರೀನ್ ಟೀ, ಮ್ಯಾಂಗೋ ಗ್ರೀನ್ ಟೀಗಳು ಇಲ್ಲಿ ಕಾಣಿಸುತ್ತವೆ. ಈ ರೀತಿಯ ವಿಧವಿಧ ಸ್ವಾದಗಳ ಚಹಾ ವೈವಿಧ್ಯ ಈಗ ಕರ್ನಾಟಕದ ನಗರಗಳಲ್ಲೂ ಸಿಗುತ್ತಲಿದೆ.

ಜಪಾನೀಯರ ಚಹಾಪಾನ

ಟೀ ಪಾರ್ಟಿ ಅಥವಾ ಟೀ ಸೆರೆಮನಿ ಎಂದರೆ ಜಪಾನೀಯರಿಗೆ ಎಲ್ಲಿಲ್ಲದ ವಿಜೃಂಭಣೆ. ಹೂ ಬಿಟ್ಟ ಚೆರ್ರಿ ಮರದ ಕೆಳಗೆ ಜಪಾನೀಯರು ಕುಟುಂಬ ಸಮೇತ ನೆರೆಯುತ್ತಾರೆ. ಚಹಾದ ಮಾತುಗಳಿಗೆ ಕಿವಿಯಾಗುತ್ತಾರೆ. ಮೇಲೆ ಮಧುರ ಮಕರಂದ ಹೊತ್ತು ನಸುಗೆಂಪನೆ ಬಿರಿವ ಚೆರ್ರಿ ಹೂ. ಕೆಳಗೆ ಕೈಯಲ್ಲಿ ಹಸಿಹಸಿರು ಚಹಾದ ಹಬೆ ಉಸಿರು. ಕಹಿ ನೀಗಲು ಮೇಪಲ್ ಎಲೆಯಾಕಾರದ ಸಿಹಿ ಚಾಕೋಲೇಟ್. ತಿಳಿಬಾನಿನ ತುಂಬ ಚೆರ್ರಿ ಬ್ಲಾಸಮಿಂಗ್.

ಅದು ಜಪಾನಿನ ಕೋಬೆಯಲ್ಲಿರುವ ಕೋಬೆ ಆರ್ಟ್ ಸೆಂಟರ್. ಕಳೆದ ವರ್ಷ ಅಂದರೆ 2017ರ ಏಪ್ರಿಲ್ ಮೊದಲ ವಾರ. ಸಂದರ್ಭ ಲೈಬ್ರಶಿಯಾ ಏಷ್ಯಾದ ಸಾಹಿತ್ಯ ಸಮ್ಮೇಳನ. ಅದರ ಆಯೋಜಕ ಸಂಸ್ಥೆ ಇಂಟರ್‌ನ್ಯಾಷನಲ್ ಅಕಾಡೆಮಿಕ್ ಫೋರಂ ಇದ್ದಕ್ಕಿದ್ದ ಹಾಗೆ ಘೋಷಿಸಿದ್ದೇ ಟೀ ಸೆರಿಮನಿಯ ಸಮಾಚಾರ. ಜಪಾನಿ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟ ಹೆಣ್ಣುಮಕ್ಕಳು ಹಾಜರ್. ಸಭಾಂಗಣದ ವೇದಿಕೆಯ ಭಾಗದಲ್ಲಿ ವರ್ಣೋಜ್ವಲ ಛತ್ರ. ಅದರಡಿಯಲ್ಲಿ ಕುದಿಯುತ್ತಿದ್ದ ಜಪಾನಿ ಚಹಾ. ಅದರ ಪಕ್ಕದಲ್ಲೇ ಸರಭರ ಚಲಿಸುತ್ತಾ ಕೂಲಾಗಿದ್ದ ಜಪಾನಿ ಅಜ್ಜಿ. ಮೊದಲಿಗೆ ಚಹಾ ಸಂಪ್ರದಾಯದ ಕುರಿತ ಪುಟ್ಟದೊಂದು ಟಿಪ್ಪಣಿ. ಅನಂತರ ವಿತರಣೆ.

ನಮ್ಮನ್ನೆಲ್ಲ ಅವರು ಬರಮಾಡಿಕೊಂಡು, ಬಂದ ಅತಿಥಿಗಳ ಕೈಯಲ್ಲಿ ಚಹಾದ ಬೋಗುಣಿ ಇಟ್ಟು ಪ್ರಾರ್ಥನೆ ಮಾಡಿ ಮೂರು ಸುತ್ತು ತಿರುಗಿಸಿ, ಚಾಕೋಲೇಟ್ ನೀಡಿದರು. ಬದುಕಿನ ಸಂಬಂಧಗಳೂ ಭದ್ರಂ ಶುಭಂ. ಅದು ಚಹಾದ ದಾರಿ ಸಂಸ್ಕೃತಿಯ ಧಾರೆ ತುಟಿಗೊತ್ತಿಕೊಂಡು ಹೊಟ್ಟೆ ಸೇರುವ ಕ್ಷಣ. ಜಪಾನೀಯರು ಭಾರತೀಯರ ಹಾಗೆ ಹಾಲು ಸಕ್ಕರೆ ಬೆರೆಸಿದ ಚಹಾ ಕುಡಿಯುವವರಲ್ಲ. ಅವರದೇನಿದ್ದರೂ ಮಚಾ ಸಂಸ್ಕೃತಿ.

ಮಚಾ ಎಂದರೆ ಪುಡಿ ಮಾಡಿದ ಹಸಿರು ಚಹಾ. ನುಣ್ಣನೆಯ ಹಸಿರು ಚಹಾಪುಡಿಯನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಚಹಾ. ಇದೇ ಅವರ ಚನೊಯು. ಅವರ ಸಮೋ ಅಥವಾ ಚದೋ. ಚಹಾ ನೀಡುವ ಈ ಸಂಸ್ಕೃತಿಯನ್ನೇ ಅವರು ಒತೆಮಾಯೆ ಎಂದು ಕರೆಯುತ್ತಾರೆ. ಹೌದು ಕುಡಿದವರನ್ನೆಲ್ಲ ಒತ್ತೆಯಾಗಿಸುವ ಮಾಯೆ. ಹೌದು ಚಹಾ ಎಂದರೆ ಸೆರೆಮನಿ ಅಕ್ಷರಶಃ ಪ್ರೀತಿಯ ಸೆರೆಮನಿ.

ಜಪಾನಿ ಚಹಾ ಆಚರಣೆಯ ಹಿಂದಿನ ಮಹತ್ವದ ಪ್ರೇರಣೆ ಎಂದರೆ ಝೆನ್ ಬುದ್ಧ ತತ್ವ. ಎಲೆಯನ್ನು ಹಾಕಿ ಮಾಡುವ ಸೆಂಚ. ಈ ಕಾರ್ಯಕ್ರಮ ಸೆಂಚಾದೊ. ಇದು ಚನೋಯು ಸಂಸ್ಕೃತಿಗಿಂತ ಭಿನ್ನ. ಅನೌಪಚಾರಿಕ ಚಹಾಕ್ಕಾಗಿ ಸೇರಿಸಿದ್ದರೆ ಚಡಾಯ್ ಆಗುತ್ತದೆ. ಔಪಚಾರಿಕ ಚಹಾ ತಂಡವಾಗಿದ್ದರೆ ಅದು ಚಜೀ. ಚಡಾಯ್‌ನಲ್ಲಿ ಸಿಹಿ ಹಂಚುತ್ತಾರೆ. ಸಣ್ಣ ಭೋಜನ ಕೂಡ ಇರುತ್ತದೆ. ಚಜೀಯಲ್ಲಿ ಹಾಗಲ್ಲ. ಇದರಲ್ಲಿ ಪೂರ್ಣ ಪ್ರಮಾಣದ ಕೈಸಕಿ ಊಟವೂ ಇರುತ್ತದೆ. ದಪ್ಪದ, ತೆಳ್ಳನೆಯ ಚಹಾ ಎಲ್ಲ ಇರುತ್ತದೆ. ಚನೋಯ್, ಸದೋ, ಒಚಾ ಎಂದೂ ಕರೆಯುತ್ತಾರೆ.

ಮಾತು ಮಾತಿಗೂ ಚಹಾ ಕುಡಿಯುವವರಿದ್ದಾರೆ. ಚಹಾ ಮುಂದಿಟ್ಟುಕೊಂಡೇ ಚಾಯ್ ಪೆ ಚರ್ಚಾ ನಡೆಸುವವರಿದ್ದಾರೆ. ಅರಸುಗಳಿಗಿದು ವೀರ, ಮಂತ್ರಿಗಳ ಬುದ್ಧಿಗುಣ. ಚಹಾ ಬೇಡ ಎನ್ನುವವರೂ ಚಹಾ ಇಲ್ಲದೇ ಬದುಕೇ ಇಲ್ಲ ಎನ್ನುವವರೂ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.