ನಂಬಿಕೆಟ್ಟವರಿಲ್ಲವೋ...
ಹಾಡುತ್ತಾ
ನೆರೆ ಬರದಲ್ಲೂ ಕಾಲನ ಬೆನ್ನೇರಿ
ಹಸಿವು ಕೊಲ್ಲುವ ಬೇಟೆಗಾರರು ನಾವು
ಗುರಿ ಇಡುವುದರಲ್ಲಿ ನಿಪುಣರಷ್ಟೇ
ಬಿದ್ದ ಬೇಟೆ ಯಾವ ನರಿ ತೋಳಗಳ ಪಾಲೋ
ಬೆವರಿನ ಪಾಲು ಕೇಳಲು
ಕೆಸರು ಮೆತ್ತಿಕೊಂಡ ನಮಗೆ
ಹೆಸರೇ ಇಲ್ಲ
ದುಡಿಮೆ ನಂಬಿ ಕೆಟ್ಟವರು ನಾವು
ನೇಗಿಲ ಜೊತೆಗೇ ಬದುಕು,
ರಟ್ಟೆ ಮೂಳೆ ಸವೆಸಿ ಉತ್ತು ಬಿತ್ತಿ
ಬೆವರಿಗೆ ಬೆಲೆ ಸಿಗದೆ ಅತ್ತು
ಅತ್ತೂ ನೋವು ನುಂಗಿ
ಹಿಂಗಿಹೋದ ಬಾವಿಯಂತೆ
ಮುಗಿಲಿಗೆ ಕಣ್ಣ ಹಾಯಿಸಿ
ಹಗ್ಗ, ಅಗ್ಗದ ಔಷಧಿಯ
ವಾಡೆ ಮೂಡೆಯಲ್ಲಿ ಜತನ ಮಾಡಿದ್ದೇವೆ
ಜಪ್ತಿಗಿರುವ ಹೊಲ ಮನೆ
ಮಾನ ಉಳಿಸಿಕೊಳ್ಳಲು!
ಮುಗಿಲ ನಂಬಿ ಕೆಟ್ಟವರು ನಾವು
ಎಲ್ಲಿಯವರೆಗೆ
ನಮ್ಮ ಬೆವರ ಬೆಳೆಗೆ ದಲ್ಲಾಳಿಗಳು
ಮಣ್ಣಿನ ನಂಟಿಲ್ಲದ ವ್ಯಾಪಾರಿಗಳು
ಬೆಲೆ ಕಟ್ಟುತ್ತಾರೋ ಅಲ್ಲಿಯವರೆಗೆ
ರೈತ ನಿರ್ದಯೀ ವ್ಯವಸ್ಥೆಯ ಜೀತದಾಳು
ಅನ್ನ ಉಂಡವರ ಮನುಷ್ಯತ್ವವ
ನಂಬಿ ಕೆಟ್ಟವರು ನಾವು
ಹಸಿವು ವಿಶ್ವರೂಪ ತಾಳುವವರೆಗೆ
ರೈತ ಬೆಳೆದ ಫಸಲಿಗೆ
ಚೌಕಾಸಿ ನಡೆಯುತ್ತಲೇ ಇರಬಹುದು
ಮಣ್ಣು ನಂಬಿ ಕೆಟ್ಟವರು ನಾವು
ಅನ್ನದಾತ, ನೇಗಿಲ ಯೋಗಿ
ಬಿರುದು ಬಾವಲಿಗಳ ಭಾರವೊ
ಅಸ್ಥಿಮಜ್ಜೆಗಿಳಿದ ಮಣ್ಣಿನ ನಂಟೋ
ನಡು ಬಾಗಿಸಿ ದಿನವೂ ಹೊಲಕೆ
ನೇಗಿಲ ಶಿಲುಬೆ ಹೊರುತ್ತಲೇ
ಇರುವ ಮಣ್ಣಿನ ಮಕ್ಕಳು ನಾವು
ಸಮತೆಯ ಕಣ್ಣಿಲ್ಲದ ಧರ್ಮ,
ಮುಕ್ಕೋಟಿ ದೇವರುಗಳನೂ ಮಿಕ್ಕಿ
ಮೇಟಿ ನಂಬಿ ಕೆಟ್ಟವರು ನಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.