ADVERTISEMENT

ಕವಿತೆ: ಹುಡುಕಾಟವೆಂಬುದು ವ್ಯಾಧಿ

ಸ್ಮಿತಾ ಅಮೃತರಾಜ್
Published 7 ಆಗಸ್ಟ್ 2021, 19:30 IST
Last Updated 7 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಂದು ಪಾತ್ರೆಯ ಗಾತ್ರ
ತನ್ನ ಪಾತ್ರಕ್ಕಿಂತ ಹೆಚ್ಚಿಗೆ
ಇನ್ನೇನು ಭರಿಸಲು ಸಾಧ್ಯ
ನೀನೇ ಹೇಳು?
ಮೊಗೆದೂ ಮೊಗೆದೂ ಮತ್ತೂ ಮತ್ತೂ
ಸುರಿದು ತುಂಬಿದ್ದಕ್ಕೆ ಕಾರ್ಯಕಾರಣವುಂಟೇ?

ಕವಿತೆಗೂ ವಿಜ್ಞಾನಕ್ಕೂ ಕೂಡಿ
ಬರದು ಸಖ್ಯ
ಇದು ನಿನಗೂ ಗೊತ್ತಿರುವ
ಸತ್ಯ.

ಸುರಿಯುವ ಓಘಕ್ಕೆ
ತುಂಬಿದ್ದೂ ಚೆಲ್ಲಿ ಆರಿ ಹೋಗುತ್ತಿದೆ
ಕಂಡೂ ಕಾಣದಂತಿರುವ ಸಣ್ಣದೊಂದು ಬಿರುಕು
ಪಾತ್ರದ ತಳಕ್ಕೀಗ ಅಡರಿಕೊಂಡಿದೆ.

ADVERTISEMENT

ಹಿಡಿ ಹೃದಯ ಮುಷ್ಟಿಗಾತ್ರ
ಎದೆಬಡಿತ ರಕ್ತಸಂಚಲನ
ಹಿಡಿ ಜೀವ ಇಲ್ಲೇ ಹಿಡಿದು ನಿಂತಿದೆಯೆಂಬುದು
ಎಲ್ಲರಂತೆ ನೀನೂ ಓದಿ ಉರುಹೊಡೆದವಳೆ.
ಬದುಕು ಬರೇ ಶುಷ್ಕ ವಿಜ್ಞಾನವೇ?
ನಿನ್ನ ಮರು ತರ್ಕ ಕೂಡ ಸರಿಯೇ.

ಮಿದು ಹೃದಯದೊಳಗೆ
ಬಂಡೆಗಾತ್ರ ದುಗುಡ
ಪ್ರತೀ ಬಡಿತಕ್ಕೂ ಉಲಿವ ಧ್ಯಾನ
ಕೊಟ್ಟಷ್ಟೂ ಪಡೆದಷ್ಟೂ ತೀರದು
ಉಸಿರ ಸುಖದ ಕಂಪನ..

ಈ ಅತೀತಗಳಾಚೆಗೇ ನಂಬಿಕೆ ಇಡುವ
ನಿನಗೋ ಹುಂಬ ನಿರೀಕ್ಷೆ.
ಒಲವಿಗೆ ಬಿದ್ದ ಜೀವಗಳದ್ದು ಬಿಡಿ,
ಇದು ಸಹಜ ತಹತಹಿಕೆ.

ಅಕೋ.. ಅಲ್ಲಿ
ಅಚ್ಚರಿಯೊಂದು ಘಟಿಸುತ್ತಿದೆ.
ಇಂಗಿಸಿಕೊಳ್ಳುತ್ತಲೇ ತೇವಗೊಳ್ಳುವ ನೆಲ
ಅಕಾರಣ ಪ್ರೀತಿಯ ದ್ಯೋತಕದಂತೆ
ಬೇಲಿ ಸಾಲಿನ ಮೇಲೆ ಅರಳಿ ನಿಂತ
ಪುಟ್ಟ ನೀಲಿ ಹೂ ನಗೆ.

ಭೂಮಿಯಂತಹ ಹೃದಯ ಪಾತ್ರೆ
ನಿಜಕ್ಕೂ ಇದ್ದೀತೇ?
ಧಾರೆ ಧಾರೆ ಸುರಿದರೂ ಬರಿದಾಗದೇ
ಹಾಗೇ ಉಳಿದೀತೇ?

ಎಲ್ಲವಕ್ಕೂ ಇಲ್ಲಿ ಸಾಕ್ಷ್ಯವಿಲ್ಲ
ಇದ್ದರೂ ಪ್ರಶ್ನಿಸುವ ಹಾಗಿಲ್ಲ.
ಅಕ್ಕನಿಂದಲೇ ಶುರುಗೊಂಡಿದೆ ಯಾದಿ
ಹುಡುಕಾಟವೆಂಬುದು ಹೀಗೆ..
ಅದು ಜನುಮಕ್ಕಂಟಿದ ವ್ಯಾಧಿ.
-ಸ್ಮಿತಾ ಅಮೃತರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.