ADVERTISEMENT

ಮೂಕಳಾದ ‘ಉಪಕಾರಿ’

ಹಡವನಹಳ್ಳಿ ವೀರಣ್ಣಗೌಡ
Published 16 ಮಾರ್ಚ್ 2019, 19:45 IST
Last Updated 16 ಮಾರ್ಚ್ 2019, 19:45 IST
   

ಶಿ ವಪುರ ಎನ್ನುವ ಹಳ್ಳಿ. ಅಲ್ಲಿ ಸುಧಾಕರ ಮತ್ತು ಸುಶೀಲಾ ಎಂಬ ದಂಪತಿ ಇದ್ದರು. ಅವರು ತಮ್ಮ ಜೀವನೋಪಾಯಕ್ಕಾಗಿ ಒಂದು ಹಸುವನ್ನು ಸಾಕಿದ್ದರು. ಹಸು ಇವರಿಗೆ ಬೇಕಾಗುವಷ್ಟು ಹಾಲು ಕೊಡುತಿತ್ತು. ಜೊತೆಗೆ ಇವರ ಜಮೀನಿಗೆ ಸಾಕಾಗುವಷ್ಟು ಸಗಣಿ ಗೊಬ್ಬರವೂ ಸಿಗುತಿತ್ತು. ಗಂಡ- ಹೆಂಡತಿ ಹಸುವಿಗೆ ಪ್ರೀತಿಯಿಂದ ‘ಉಪಕಾರಿ’ ಎಂದು ಹೆಸರಿಟ್ಟಿದ್ದರು.

ಸುಧಾಕರನಿಗೆ ಜಮೀನಿನ ಕೆಲಸವಿರುತ್ತಿದ್ದರಿಂದ ಸುಶೀಲೆಯೇ ಹಸುವಿನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತ ಅದಕ್ಕೆ ಮೇವು– ನೀರು ಕೊಡುತ್ತಿದ್ದಳು. ಹಸು ಕೂಡ ತಮ್ಮ ಒಡೆಯರಿಗೆ ವಿಧೇಯತೆ ತೋರುತಿತ್ತು.

ಒಂದು ದಿನ ಸುಶೀಲೆ ಹಸುವಿಗೆ ಮೇವು ತಿನ್ನಿಸಲು ಹೋದಾಗ ಅದು ತಿನ್ನದೆ ಕಣ್ಣೀರು ಸುರಿಸುತ್ತಾ ನಿಂತಿತು. ಗಾಬರಿಗೊಂಡ ಸುಶೀಲೆ ಹಸುವನ್ನು ಸಂತೈಸುತ್ತ, ‘ಏಕೆ, ಏನಾಯಿತು’ಎಂದು ಒತ್ತಾಯಿಸಿ ಕೇಳಿದಳು. ಆಗ ಹಸುವು, ‘ಅಕ್ಕ ಈ ದಿನ ಅರ್ಧರಾತ್ರಿಗೆ ನಿನ್ನ ಗಂಡ ಸಾಯುತ್ತಾನೆ, ಅದಕ್ಕಾಗಿ ನನಗೆ ದುಃಖವಾಗಿದೆ’ ಎಂದಿತು.

ADVERTISEMENT

ಹಸು ಹೇಳಿದ ಸುದ್ದಿಯಿಂದ ದಿಗ್ಭ್ರಾಂತಳಾದ ಸುಶೀಲೆ, ‘ನನ್ನ ಗಂಡನನ್ನು ಉಳಿಸಿಕೊಳ್ಳಲು ಏನು ಉಪಾಯ ಮಾಡಬೇಕು ಹೇಳು’ ಎಂದು ಹಸುವನ್ನು ಗೋಗರೆದಳು. ತನ್ನ ಒಡತಿಯ ದುಃಖವನ್ನು ಕಂಡ ಹಸುವು, ‘ಅಕ್ಕ ಉಪಾಯವನ್ನು ತಿಳಿಸುವೆ, ಆದರೆ ಆ ಉಪಾಯವನ್ನು ನಾನು ತಿಳಿಸಿಕೊಟ್ಟಿದ್ದು ಎಂದು ಯಾರು ಎಷ್ಟು ಒತ್ತಾಯಪಡಿಸಿದರೂ ಹೇಳಬಾರದು. ಹಾಗಿದ್ದರೆ ಮಾತ್ರ ಉಪಾಯ ಹೇಳಿಕೊಡುತ್ತೇನೆ’ ಎಂದಿತು.

‘ನೀನು ಹೇಳಿದಂತೆಯೇ ಆಗಲಿ. ನಾನು ಯಾರಿಗೂ ಈ ರಹಸ್ಯವನ್ನು ಹೇಳುವುದಿಲ್ಲ’ ಎಂದು ಸುಶೀಲೆ ಹಸುವಿಗೆ ವಚನ ಕೊಟ್ಟಳು. ಒಡತಿಯ ಮಾತನ್ನು ನಂಬಿದ ಉಪಕಾರಿ ಹಸುವು, ‘ಅರ್ಧರಾತ್ರಿಗೆ ಸರಿಯಾಗಿ ಯಮದೂತರು ಬರುತ್ತಾರೆ. ಆ ಹೊತ್ತಿಗೆ ನೀನು ಒಂದು ತಂಬಿಗೆ ಹಾಲು ಹಿಡಿದು ಬಾಗಿಲಲ್ಲಿ ಕಾಯುತ್ತಿರು. ಅವರು ಬಂದಾಗ ಹಾಲು ಕುಡಿಯದ ಹೊರತು ಅವರನ್ನು ಮನೆಯ ಒಳಗೆ ಬಿಡಬೇಡ. ಮುಂದಿನದೆಲ್ಲಾ ಒಳ್ಳೆಯದೇ ಆಗುತ್ತದೆ’ ಎಂದು ಹೇಳಿತು.

ಹಸು ‘ಉಪಕಾರಿ’ ನೀಡಿದ ಸಲಹೆಯಂತೆ ಸುಶೀಲೆಯು ಹಾಲಿನೊಂದಿಗೆ ಮನೆಯ ಬಾಗಿಲಲ್ಲಿ ಯಮದೂತರ ನಿರೀಕ್ಷೆಯಲ್ಲಿದ್ದಳು. ಸರಿಯಾಗಿ ಅರ್ಧರಾತ್ರಿಗೆ ಯಮದೂತರು ಸುಧಾಕರನ ಮನೆಗೆ ಬಂದರು. ಬಾಗಿಲಲ್ಲಿಯೇ ನಿಂತಿದ್ದ ಸುಧಾಕರನ ಹೆಂಡತಿ ಸುಶೀಲೆ, ಹಾಲನ್ನು ಕುಡಿಯುವಂತೆ ಯಮದೂತರನ್ನು ವಿನಂತಿಸಿಕೊಂಡಳು. ಯಮದೂತರು ಅವಳ ವಿನಂತಿಯನ್ನು ತಿರಸ್ಕರಿಸುತ್ತಾ, ‘ನಾವು ಮಾನವರು ಕೊಡುವ ಏನನ್ನೂ ಸ್ವೀಕರಿಸುವುದಿಲ್ಲ’ ಎಂದರು. ಆದರೆ ಸುಶೀಲೆ ಅವರ ಮಾತಿಗೆ ಕಿವಿಗೊಡದೆ ‘ಈ ಹಾಲನ್ನು ಕುಡಿಯುವವರೆಗೂ ನಿಮ್ಮನ್ನು ನಾನು ಒಳಗೆ ಬಿಡುವುದಿಲ್ಲ’ ಎಂದು ಬಾಗಿಲಿಗೆ ಅಡ್ಡವಾಗಿ ನಿಂತುಬಿಟ್ಟಳು. ಅವಳ ಹಟಕ್ಕೆ ಸೋತು ಯಮದೂತರು ಹಾಲನ್ನು ಕುಡಿಯಲೇಬೇಕಾಯಿತು. ಆ ನಂತರ ಮನೆಯೊಳಗೆ ಹೋಗಿ ಸುಧಾಕರನ ಪ್ರಾಣವನ್ನು ಪಾಶದಲ್ಲಿ ಬಿಗಿದು ಯಮಲೋಕಕ್ಕೆ ಕೊಂಡೊಯ್ದರು.

ವಿಳಂಬವಾಗಿ ಬಂದ ದೂತರನ್ನು ಕಂಡ ಯಮನು ‘ಎಲೈ ದೂತರೇ, ಒಬ್ಬ ಮಾನವನ ಜೀವವನ್ನು ತರಲು ಇಷ್ಟು ತಡವೇಕೆ’ ಎಂದು ಅಬ್ಬರಿಸಿದನು. ದೂತರು ಯಮರಾಜನಿಗೆ ನಮಸ್ಕರಿಸುತ್ತ ಸುಧಾಕರನ ಮನೆಯಲ್ಲಿ ನಡೆದ ಎಲ್ಲಾ ಸಮಾಚಾರವನ್ನು ತಿಳಿಸಿದರು. ಇದೆಲ್ಲವನ್ನೂ ಆಲಿಸಿದ ಯಮನು, ‘ಎಲೈ ದೂತರೇ, ಹಾಲುಂಡ ಮನೆಗೆ ಯಾರಾದರು ವಿಷ ಉಣಿಸುತ್ತಾರೆಯೇ, ಹೋಗಿ ಆ ಮಹಾ ತಾಯಿಯ ಗಂಡನ ಪ್ರಾಣವನ್ನು ಮರಳಿ ಕೊಟ್ಟು ಬನ್ನಿ’ ಎಂದು ಆಜ್ಞೆಯಿತ್ತ.

ಯಮನ ಅಪ್ಪಣೆಯಂತೆ ದೂತರು ಸುಶೀಲೆಯ ಮನೆಗೆ ಬಂದರು. ಅವಳ ಗಂಡನ ಪ್ರಾಣವನ್ನು ಹಿಂದಿರುಗಿಸಿ ‘ನಾವು ನಿನ್ನ ಗಂಡನ ಪ್ರಾಣವನ್ನು ಒಯ್ಯುವ ವಿಷಯವನ್ನು ಮೊದಲೇ ನಿನಗೆ ತಿಳಿಸಿದವರು ಯಾರು?’ ಎಂದು ಪ್ರಶ್ನಿಸಿದರು. ಎಷ್ಟೇ ಒತ್ತಾಯ ಮಾಡಿದರೂ ಸುಶೀಲೆ ಬಾಯಿಬಿಡಲಿಲ್ಲ. ಇದರಿಂದ ಸಿಟ್ಟಾದ ಯಮದೂತರು, ‘ಉಪಾಯ ತಿಳಿಸಿದವರು ಯಾರೆಂದು ನೀನು ಹೇಳದಿದ್ದರೆ ನಿನ್ನ ಗಂಡನ ಪ್ರಾಣವನ್ನು ಪುನಃ ಎಳೆದೊಯ್ಯತ್ತೇವೆ’ ಎಂದು ಸಿಟ್ಟಿನಿಂದ ಅರ್ಭಟಿಸಿದರು. ಯಮದೂತರ ಮಾತಿಗೆ ಹೆದರಿದ ಸುಶೀಲೆ ಹಸುವಿಗೆ ಕೊಟ್ಟ ವಚನವನ್ನು ಮುರಿದು, ನಡೆದದ್ದನ್ನೆಲ್ಲಾ ಹೇಳಿಬಿಟ್ಟಳು. ಇದನ್ನು ತಿಳಿದ ಯಮದೂತರು ಹಸುವಿಗೆ, ‘ನಿನಗೆ ಇನ್ನು ಮಂದೆ ಮಾತು ಬಾರದೆ ಮೂಕಪ್ರಾಣಿಯಾಗಿರು’ ಎಂದು ಶಾಪವಿತ್ತರು.

ಸ್ವಾರ್ಥ ಸಾಧನೆಗಾಗಿ ಮಾನವನು ಕೊಟ್ಟ ಮಾತನ್ನ ಮರೆತು ವಚನ ಭ್ರಷ್ಟರಾಗುತ್ತಾರೆ ಎಂಬುದು ಅರಿವಿಗೆ ಬರುವ ಮುನ್ನವೇ ಹಸು ಮೂಕವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.