ADVERTISEMENT

ಆಂಧ್ರದ 53 ಔಷಧ ಕಂಪೆನಿ ರಾಜ್ಯಕ್ಕೆ

ವಿಧಾನ ಪರಿಷತ್‌ಗೆ ಸಿ.ಎಂ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಸುವರ್ಣ ವಿಧಾನಸೌಧ (ಬೆಳಗಾವಿ): ಆಂಧ್ರಪ್ರದೇಶದ 53 ಔಷಧ ತಯಾರಿಕಾ ಕಂಪೆನಿಗಳು ರಾಜ್ಯದಲ್ಲಿ ಘಟಕ ಸ್ಥಾಪಿಸಲು ಮುಂದಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿಗೆ ಗುರುವಾರ ತಿಳಿಸಿದರು.

ಹೀರೊ ಕಂಪೆನಿ ರಾಜ್ಯದಿಂದ ಹೊರ ಹೋಗಿರುವ ಬಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ತಾರಾ ಅನೂರಾಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೀರೊ ಹೊರತಾಗಿ ಬೇರೆ ಯಾವುದೇ ಕಂಪೆನಿ ರಾಜ್ಯದಿಂದ ಹೋಗಿಲ್ಲ. ಈ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ.

ಹೊಸ ರಾಜ್ಯವಾಗಿ ರೂಪುಗೊಂಡಿರುವ ಆಂಧ್ರದಲ್ಲಿ ಹೆಚ್ಚಿನ ರಿಯಾಯಿತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹೀರೊ ಕಂಪೆನಿ ರಾಜ್ಯದಿಂದ ಹೋಗಿದೆ. ಅದೇ ಆಂಧ್ರ ಪ್ರದೇಶದಿಂದ 53 ಔಷಧ ಕಂಪೆನಿಗಳು ರಾಜ್ಯಕ್ಕೆ ಬರುತ್ತಿವೆ. ಯಾದಗಿರಿ ಜಿಲ್ಲೆಯಲ್ಲಿ ಇವುಗಳು ಬಂಡವಾಳ ಹೂಡಲಿವೆ’ ಎಂದರು.

‘ಮಹಾರಾಷ್ಟ್ರದ ಉದ್ಯಮಿಗಳು ನನ್ನನ್ನು ಭೇಟಿ ಮಾಡಿ ಬಂಡವಾಳ ಹೂಡಿಕೆಗೆ ಅವಕಾಶ ನೀಡುವಂತೆ ಕೋರಿದ್ದಾರೆ. ಅದಕ್ಕೆ ಅಗತ್ಯ ಕ್ರಮವನ್ನೂ ಕೈಗೊಳ್ಳಲಾಗಿದೆ. ತಮಿಳುನಾಡಿನ ಕಂಪೆನಿಗಳು ಕೂಡ ಬಂಡವಾಳ ಹೂಡಲು ಮುಂದೆ ಬಂದಿವೆ. ಇಡೀ ದೇಶದಲ್ಲಿ ಕರ್ನಾಟಕವು ಬಂಡವಾಳ ಹೂಡಿಕೆಗೆ ಅತ್ಯಂತ ನೆಚ್ಚಿನ ತಾಣವಾಗಿದೆ’ ಎಂದು ಅವರು ಹೇಳಿದರು.

‘ಧಾರವಾಡದ ಮಮ್ಮಿಗಟ್ಟಿ ಬಳಿಯಲ್ಲಿ ₨೧,೪೦೦ ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪನೆಗೆ ಹೀರೊ ಮೋಟೊ ಕಾರ್ಪ್ಸ್ ಉದ್ದೇಶಿಸಿತ್ತು. ಭೂಮಿ ಸೇರಿದಂತೆ ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಸರ್ಕಾರ ನೀಡಿತ್ತು. ಆದರೆ, ಆಂಧ್ರದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಕಂಪೆನಿ ಅಲ್ಲಿಗೆ ಹೋಗಿದೆ. ಇನ್ನೂ ಅಲ್ಲಿ ಅಧಿಕೃತವಾಗಿ ಅನುಮತಿ ಸಿಕ್ಕಿಲ್ಲ. ಹೀರೊ ಮತ್ತೆ ರಾಜ್ಯಕ್ಕೆ ಬರುವ ನಿರೀಕ್ಷೆ ನಮಗಿದೆ’ ಎಂದರು.

ಕೇಂದ್ರಕ್ಕೆ ಪತ್ರ: ‘ಒಂದು ವೇಳೆ, ಆಂಧ್ರ ಪ್ರದೇಶದ ಕೈಗಾರಿಕಾ ವಲಯಕ್ಕೆ ವಿಶೇಷ ರಿಯಾಯಿತಿ ಕೊಟ್ಟರೆ, ನಮಗೂ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ಅವರು ಹೇಳಿದರು.

‘ಕೈಗಾರಿಕೆಗಳ ಉತ್ತೇಜನಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಹೊಸ ಕೈಗಾರಿಕಾ ನೀತಿಯನ್ನೂ ಪ್ರಕಟಿಸಿದ್ದೇವೆ. ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ರಿಯಾಯ್ತಿಗಳನ್ನು ನೀಡಲಾಗಿದೆ. ಹೈದರಾಬಾದ್- ಕರ್ನಾಟಕ ಭಾಗಕ್ಕೆ ಪ್ರತ್ಯೇಕ ನೀತಿ ರೂಪಿಸಲಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಸಾಲ ಕೊಡಿಸಿ: ಈ ಚರ್ಚೆಯ ಸಂದರ್ಭದಲ್ಲೇ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ, ‘ಗುಜರಾತ್‌ನ ಅದಾನಿ ಸಮೂಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ಬ್ಯಾಂಕ್‌ನಿಂದ  ಸಾಲ ಕೊಡಿಸಿದ್ದಾರೆ. ಅದೇ ರೀತಿ, ರಾಜ್ಯ ಸರ್ಕಾರವು ಇಲ್ಲಿನ ಕಂಪೆನಿಗಳಿಗೆ ಸಾಲ ಕೊಡಿಸಬೇಕು’ ಎಂದು ವ್ಯಂಗ್ಯವಾಗಿ ಹೇಳುತ್ತಿದ್ದಂತೆಯೇ, ವಿ. ಸೋಮಣ್ಣ, ವೈ ನಾರಾಯಣ ಸ್ವಾಮಿ, ಅಶ್ವತ್ಥ ನಾರಾಯಣ ಸೇರಿದಂತೆ ಬಿಜೆಪಿಯ ಇತರ ಸದಸ್ಯರು ವಿರೋಧ ವ್ಯಕ್ತಪಡಿಸಿ ಗದ್ದಲ ಉಂಟು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.