ADVERTISEMENT

ಆದಾಯ ತೆರಿಗೆ ವಿನಾಯ್ತಿ ಸೌಲಭ್ಯ

ಜೆ.ಸಿ.ಜಾಧವ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST
ಆದಾಯ ತೆರಿಗೆ ವಿನಾಯ್ತಿ ಸೌಲಭ್ಯ
ಆದಾಯ ತೆರಿಗೆ ವಿನಾಯ್ತಿ ಸೌಲಭ್ಯ   

ತೆರಿಗೆಯ ವಿಚಾರ ಬಂದಾಗ ಬಹಳಷ್ಟು ಜನ ಅದನ್ನು ತಪ್ಪಿಸುವ ವಿಚಾರ ಮಾಡುತ್ತಾರೆ ಅಥವಾ ಆ ವಿಷಯದ ಬಗ್ಗೆ ಅಷ್ಟೊಂದು ಗಮನವನ್ನೇ ನೀಡುವುದಿಲ್ಲ. ಅದರಲ್ಲೂ ಆದಾಯ ತೆರಿಗೆ ಎಂದರೆ ಗಾಬರಿಯಾಗುವವರೇ ಜಾಸ್ತಿ. ಆದರೆ ಸರ್ಕಾರ ನಿಗದಿಪಡಿಸಿದ ದರದ ತೆರಿಗೆ ಪಾವತಿಸುವುದು ಎಲ್ಲಾ ನಾಗರಿಕರ ಕರ್ತವ್ಯ. ಏಕೆಂದರೆ ತೆರಿಗೆಯ ಸಂಗ್ರಹದಿಂದಲೇ ಸರ್ಕಾರದ ಎಲ್ಲಾ ಜನಪರ ಕಲ್ಯಾಣ ಯೋಜನೆಗಳು ಜಾರಿಯಾಗುತ್ತವೆ.

ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ಎಲ್ಲರೂ ಆದಾಯ ತೆರಿಗೆಯಲ್ಲಿ ವಿನಾಯ್ತಿ ಪಡೆಯುವ ವಿಧಾನಗಳ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಹೆಚ್ಚು. ನಾಗರಿಕರಿಗೆ ತೆರಿಗೆ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರವು ಅನೇಕ ವಿನಾಯ್ತಿಗಳನ್ನು ನೀಡುತ್ತಿದೆ. ಅಂತಹ ಸೌಲಭ್ಯ ಪಡೆದು ತೆರಿಗೆಯನ್ನು ಕಡಿಮೆ ಮಾಡಿಕೊಳ್ಳುವುದೇ  ಜಾಣತನ.

ಹಾಗೆಯೇ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ನೀಡುವ ಸಂಬಳದ ಜೊತೆಗೆ ಹೆಚ್ಚುವರಿ ಸಂಭಾವನೆ ಅಥವಾ ಸೌಲಭ್ಯಗಳನ್ನು (Perquisites) ನೀಡುತ್ತಾರೆ. ಇವುಗಳೂ ಸಂಬಳದ ಹೆಡ್ ಆಫ್ ಅಕೌಂಟ್‌ನಲ್ಲಿ ಬರುತ್ತವೆ. ಆದರೆ ಕೆಲವು ಭತ್ಯೆಗಳು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿವೆ. ಅವುಗಳನ್ನು ತಿಳಿದಿಕೊಳ್ಳುವುದು ಅವಶ್ಯ.

ADVERTISEMENT

ವೈದ್ಯಕೀಯ ಸೌಲಭ್ಯಗಳು ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ

ಉದ್ಯೋಗದಾತ ತನ್ನ ಉದ್ಯೋಗಿಗಳಿಗೆ, ಉದ್ಯೋಗಿಯ ಕುಟುಂಬಸ್ಥರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಆಸ್ಪತ್ರೆ, ನರ್ಸಿಂಗ್ ಹೋಮ್‌ನಲ್ಲಿ ಪಡೆಯುವ ಚಿಕಿತ್ಸೆಯು ಆದಾಯ ತೆರಿಗೆಯಿಂದ ವಿನಾಯ್ತಿ ಪಡೆಯುವ ಸೌಲಭ್ಯವಾಗಿದೆ. ಅಲ್ಲದೇ ಉದ್ಯೋಗಿಯ ಕುಟುಂಬದವರಿಗೆ ವೈದ್ಯಕೀಯ ಚಿಕಿತ್ಸೆ ಪಡೆಯುವ ಸಲುವಾಗಿ ಖರ್ಚು ಮಾಡಿದ ಮೊತ್ತ ₹15,000 ಗಳವರೆಗೆ ವಾಪಸ್‌ ಪಡೆಯುವ ಸೌಲಭ್ಯವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದೆ.

ಮನೋರಂಜನೆ ಹಾಗೂ ಕ್ರೀಡಾ ಸೌಲಭ್ಯ

ಮನೋರಂಜನೆ ಅಥವಾ ಕ್ರೀಡಾ ಚಟುವಟಿಕೆಗಳಿಗಾಗಿ ಮಾಲೀಕರು ತಮ್ಮ ಸಮೂಹದ ಉದ್ಯೋಗಿಗಳಿಗೆ ನೀಡುವ ಸೌಲಭ್ಯವು ತೆರಿಗೆಯಿಂದ ವಿನಾಯ್ತಿ ಪಡೆದಿದೆ.  ಈ ಉದ್ದೇಶಗಳಿಗಾಗಿ ಎಲ್ಲಾ ಉದ್ಯೋಗಿಗಳ ಅನುಕೂಲಕ್ಕಾಗಿ ಸ್ಥಾಪಿಸಿರುವ ಹೆಲ್ತ್-ಕ್ಲಬ್, ಸ್ಪೋರ್ಟ್ಸ್ ಕ್ಲಬ್ ಸೌಲಭ್ಯಗಳು ವಿನಾಯ್ತಿಗೆ ಅರ್ಹವಾಗಿರುತ್ತವೆ.

ತರಬೇತಿ ವೆಚ್ಚ

ಕೌಶಲ್ಯ ಹೆಚ್ಚಿಸಲು ಸಂಸ್ಥೆಗಳು ನೀಡುವ ತರಬೇತಿಯ ವೆಚ್ಚವು ವಿನಾಯ್ತಿ ವ್ಯಾಪ್ತಿಗೆ ಬರುತ್ತದೆ

ಟೆಲಿಫೋನ್ ಹಾಗೂ ಲ್ಯಾಪ್-ಟಾಪ್

ಕಾರ್ಪೊರೇಟ್‌ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಒದಗಿಸುವ ಟೆಲಿಫೋನ್, ಮೊಬೈಲ್, ಲ್ಯಾಪ್-ಟಾಪ್ ಅಥವಾ ಕಂಪ್ಯೂಟರ್ ಕೊಳ್ಳಲು ನೀಡುವ ಮೊತ್ತವು  ವಿನಾಯ್ತಿ ಪಡೆದಿರುತ್ತದೆ.

ಮಕ್ಕಳ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ

ಮಾಲೀಕರು ತಮ್ಮ ಉದ್ಯೋಗಿಗಳ ಮಕ್ಕಳಿಗಾಗಿ ನೀಡುವ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ಸೌಲಭ್ಯ ನೀಡುವ ಸಲುವಾಗಿ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಲ್ಲಿ ಓದುವ ಉದ್ಯೋಗಿಯ ಮಕ್ಕಳಿಗೆ ಮಾಡುವ ವೆಚ್ಚ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದೆ. ಆದರೆ ಈ ಮೊತ್ತವು ಪ್ರತಿ ಮಗುವಿಗೆ ಪ್ರತಿ ತಿಂಗಳು ₹ 1000 ಮೀರಿರಬಾರದು ಎನ್ನುವ ನಿಬಂಧನೆ ಇದೆ.

ಆಹಾರ ಮತ್ತು ಪೇಯಗಳ ಸೌಲಭ್ಯ

ಉಚಿತ ಆಹಾರ ಹಾಗೂ ಅಲ್ಕೋಹಾಲ್ ರಹಿತ ಪೇಯ, ಕಚೇರಿಯ ಸಮಯದಲ್ಲಿ ಉದ್ಯೋಗಿಗಳಿಗೆ ನೀಡುವ ಸೌಲಭ್ಯ ಅಥವಾ ಈ ಕಾರಣಕ್ಕಾಗಿ ನೀಡುವ ಪೇಡ್ ಓಚರ್‌ಗಳು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿವೆ.

ಸಾಲ ಸೌಲಭ್ಯ

ಕಂಪನಿಗಳು ಉದ್ಯೋಗಿಗಳಿಗೆ ನೀಡುವ ಸಾಲದ ಮೊತ್ತ ₹ 20,000ಗಳ ವರೆಗೆ ಹಾಗೂ ವೈದ್ಯಕೀಯ ಚಿಕಿತ್ಸೆ ಪಡೆಯಲು ಆದಾಯ ತೆರಿಗೆ ನಿಯಮ 3ಎ ಅಡಿ ತಿಳಿಸಿದ ಕಾಯಿಲೆಗಳಿಗೆ ನೀಡುವ ಮೊತ್ತವು ಆದಾಯ ತೆರಿಗೆಯಿಂದ ವಿನಾಯ್ತಿ ಪಡೆದಿದೆ.

ವಿಮೆ ಪ್ರೀಮಿಯಂ ಹಾಗೂ ಪಿಂಚಣಿಗಾಗಿ ನೀಡುವ ಮೊತ್ತ

ಸಂಸ್ಥೆಯು ಉದ್ಯೋಗಿಗಳಿಗೆ ಅಪಘಾತ ವಿಮೆಗಾಗಿ ನೀಡುವ ಪ್ರೀಮಿಯಂ ಹಾಗೂ ಪಿಂಚಣಿ ನಿಧಿಗೆ ನೀಡುವ ಮೊತ್ತವು ಅಂದರೆ ಗರಿಷ್ಠ ₹1.50 ಲಕ್ಷಗಳವರೆಗೆ ವಾರ್ಷಿಕವಾಗಿ ನೀಡಿದರೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದು.

ವೇತನ ಪಡೆಯುವವರು ಹೀಗೆ ಹಲವಾರು ಸೌಲಭ್ಯಗಳನ್ನು ಬಳಸಿಕೊಂಡು ಆದಾಯ ತೆರಿಗೆಯಿಂದ ವಿನಾಯ್ತಿ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.