ADVERTISEMENT

ಇಂದು ‘ಜಿಎಸ್‌ಟಿಎನ್‌’ ತಾಂತ್ರಿಕ ಸಮಸ್ಯೆ ಪರಿಶೀಲನೆ

ಪಿಟಿಐ
Published 15 ಸೆಪ್ಟೆಂಬರ್ 2017, 19:30 IST
Last Updated 15 ಸೆಪ್ಟೆಂಬರ್ 2017, 19:30 IST
ಇಂದು ‘ಜಿಎಸ್‌ಟಿಎನ್‌’ ತಾಂತ್ರಿಕ ಸಮಸ್ಯೆ ಪರಿಶೀಲನೆ
ಇಂದು ‘ಜಿಎಸ್‌ಟಿಎನ್‌’ ತಾಂತ್ರಿಕ ಸಮಸ್ಯೆ ಪರಿಶೀಲನೆ   

ನವದೆಹಲಿ: ಜಿಎಸ್‌ಟಿ ಜಾಲತಾಣದಲ್ಲಿ (ಜಿಎಸ್‌ಟಿಎನ್‌) ಇರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲು ಐವರು ಸಚಿವರ ತಂಡ ಬೆಂಗಳೂರಿನಲ್ಲಿ ಶನಿವಾರ ಸಭೆ ಸೇರಲಿದೆ.

ಸೆಪ್ಟೆಂಬರ್ 12 ರಂದು ಜಿಎಸ್‌ಟಿ ಮಂಡಳಿಯು ಈ ತಂಡ ರಚನೆ ಮಾಡಿತ್ತು. ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ನೇತೃತ್ವದಲ್ಲಿ ಶನಿವಾರ ಮೊದಲ ಸಭೆ ನಡೆಯಲಿದೆ. ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್‌, ಛತ್ತೀಸಗಡದ ವಾಣಿಜ್ಯ ತೆರಿಗೆ ಸಚಿವ ಅಮರ್ ಅಗರ್‌ವಾಲ್‌, ಕರ್ನಾಟಕದ ಕೃಷಿ ಸಚಿವ ಕೃಷ್ಣ ಬೈರೇಗೌಡ ಮತ್ತು ತೆಲಂಗಾಣದ ಹಣಕಾಸು ಸಚಿವ ಇ. ರಾಜೇಂದ್ರ ತಂಡದಲ್ಲಿರುವ ಇತರೆ ಸದಸ್ಯರಾಗಿದ್ದಾರೆ.

ರೆವೆನ್ಯೂ ಕಾರ್ಯದರ್ಶಿ ಹಸ್ಮುಖ್ ಆಧಿಯಾ, ಜಿಎಸ್‌ಟಿಎನ್ ಅಧ್ಯಕ್ಷ ಅಜಯ್ ಭೂಷಣ್ ಪಾಂಡೆ ಮತ್ತು ಸಿಇಒ ಪ್ರಕಾಶ್ ಕುಮಾರ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್‌ 19ರಂದು ಜಾಲತಾಣದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಇದರಿಂದ ಅರ್ಧ ದಿನದವರೆಗೂ ರಿಟರ್ನ್ ಸಲ್ಲಿಕೆ ಮತ್ತು ಇನ್‌ವೈಸ್ ಅಪ್‌ಲೋಡ್‌ ಮಾಡಲು ಸಾಧ್ಯವಾಗಿರಲಿಲ್ಲ.

ADVERTISEMENT

ಹೀಗಾಗಿ ರಿಟರ್ನ್ ಸಲ್ಲಿಕೆ ಅವಧಿಯನ್ನು ಆಗಸ್ಟ್ 25ರವರೆಗೆ ವಿಸ್ತರಣೆ ಮಾಡಲಾಗಿತ್ತು. ಆ ಬಳಿಕವೂ ತೆರಿಗೆದಾರರು ಜಾಲತಾಣ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದರು.  ಸೆಪ್ಟೆಂಬರ್ 12 ರಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಜಾಲತಾಣದ ಸಮಸ್ಯೆಗಳ ಪರಿಶೀಲನೆ ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಂಡಳಿಯು ಐವರು ಸದಸ್ಯರಿರುವ ಸಚಿವರ ತಂಡ ರಚನೆ ಮಾಡಿತ್ತು.

ಸ್ಥಿತ್ಯಂತರ ತೆರಿಗೆ: ‘ಸಿಬಿಇಸಿ’ ನಿಗಾ

ಸರಕು ಮತ್ತು ಸೇವಾ ತೆರಿಗೆಯಡಿ (ಜಿಎಸ್‌ಟಿ) ಜುಲೈ ತಿಂಗಳಿನಲ್ಲಿ ಸಂಗ್ರಹವಾಗಿರುವ ₹ 95 ಸಾವಿರ ಕೋಟಿಗಳಲ್ಲಿ ₹ 65 ಸಾವಿರ ಕೋಟಿಗಳನ್ನು ‘ಸ್ಥಿತ್ಯಂತರ ತೆರಿಗೆ ವಾಪಸಾತಿ’ ರೂಪದಲ್ಲಿ ತಮಗೆ ಮರಳಿಸಬೇಕು ಎಂದು ತೆರಿಗೆದಾರರು ಕೇಳಿಕೊಂಡಿರುವುದರಿಂದ ಅಬಕಾರಿ ಮತ್ತು ಸೀಮಾ ಸುಂಕ ಕೇಂದ್ರೀಯ ಮಂಡಳಿಯು (ಸಿಬಿಇಸಿ) ಈ ಬಗ್ಗೆ ನಿಗಾ ವಹಿಸಲು ಮುಂದಾಗಿದೆ.

₹ 1 ಕೋಟಿಗಿಂತ ಹೆಚ್ಚಿನ ಮೊತ್ತದ ತೆರಿಗೆ ವಾಪಸಾತಿ ಕೋರಿಕೆಗಳನ್ನು ಪರಿಶೀಲಿಸಲು ‘ಸಿಬಿಇಸಿ’ ಕ್ರಮ ಕೈಗೊಳ್ಳಲಿದೆ. ಜುಲೈ 1ರಿಂದ ಜಾರಿಗೆ ಬಂದಿರುವ ಜಿಎಸ್‌ಟಿ ವ್ಯವಸ್ಥೆಯಡಿ, ಅದಕ್ಕೂ ಮುಂಚಿನ ತೆರಿಗೆ ವ್ಯವಸ್ಥೆಯಲ್ಲಿ ಖರೀದಿಸಿದ ಸರಕುಗಳಿಗೆ ಸಂಬಂಧಿಸಿದಂತೆ ತೆರಿಗೆ ವಾಪಸ್‌ ಮಾಡಲು ಅವಕಾಶ ಇದೆ. ಇದು ಜಿಎಸ್‌ಟಿ ಜಾರಿಗೆ ಬಂದ ನಂತರದ 6 ತಿಂಗಳವರೆಗೆ ಮಾತ್ರ ಅನ್ವಯವಾಗಲಿದೆ.

ಅಬಕಾರಿ, ಸೇವಾ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಪಾವತಿಸಿದ್ದಕ್ಕೆ ಪ್ರತಿಯಾಗಿ ₹ 65 ಸಾವಿರ ಕೋಟಿಗಳಷ್ಟು ಮೊತ್ತವನ್ನು ಮರಳಿಸಬೇಕು ಎಂದು ತೆರಿಗೆದಾರರು ‘ಟಿಆರ್‌ಎಎನ್‌–1’ ಅರ್ಜಿ ನಮೂನೆಯಲ್ಲಿ ಕೋರಿಕೆ ಸಲ್ಲಿಸಿದ್ದಾರೆ. ಗೊಂದಲ ಅಥವಾ ತಪ್ಪಿನಿಂದಾಗಿ ಈ ಪ್ರಮಾಣದಲ್ಲಿ ತೆರಿಗೆ ಮರು ಪಾವತಿಗೆ ಮನವಿ ಸಲ್ಲಿಸಿರುವುದನ್ನು ತಳ್ಳಿ ಹಾಕುವಂತಿಲ್ಲ. ಹುಟ್ಟುವಳಿ ತೆರಿಗೆ ಮರಳಿ ಪಡೆಯಲು (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌) ಕೋರಿಕೆ ಸಲ್ಲಿಸಿರುವುದನ್ನು ಕಾಲಮಿತಿ ಒಳಗೆ ಪರಿಶೀಲಿಸಬೇಕಾಗಿದೆ. 162 ಉದ್ದಿಮೆ ಸಂಸ್ಥೆಗಳು ₹ 1 ಕೋಟಿಗಿಂತ ಹೆಚ್ಚಿನ ಮೊತ್ತ ಮರಳಿ ಪಡೆಯಲು ಕೋರಿಕೆ ಸಲ್ಲಿಸಿವೆ ಎಂದು ‘ಸಿಬಿಇಸಿ’ ಮೂಲಗಳು ತಿಳಿಸಿವೆ.

ಕಳೆದ ವಾರ, 59.57 ಲಕ್ಷ ತೆರಿಗೆದಾರರ ಪೈಕಿ ಶೇ 70ರಷ್ಟು ವರ್ತಕರು, ಉದ್ಯಮಿಗಳು ರಿಟರ್ನ್ಸ್‌ ಸಲ್ಲಿಸಿದ್ದರು. ಸ್ಥಿತ್ಯಂತರ ನಿಯಮಗಳ ಅನ್ವಯ, ರಿಟೇಲ್‌ ವರ್ತಕರು ಮತ್ತು ವ್ಯಾಪಾರಿಗಳು 90 ದಿನಗಳವರೆಗೆ ಇಂತಹ ಕೋರಿಕೆ ಸಲ್ಲಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.