ADVERTISEMENT

ಎಸ್‌ಬಿಎಂ ತ್ರೈಮಾಸಿಕ ಶೇ44 ಪ್ರಗತಿ

ನಿವ್ವಳ ಲಾಭ ರೂ. 75 ಕೋಟಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:44 IST
Last Updated 28 ಜುಲೈ 2014, 19:44 IST

ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು(ಎಸ್‌ಬಿಎಂ) ಜೂ. 30ಕ್ಕೆ ಕೊನೆಗೊಂಡ 2014-15ನೇ ಹಣ ಕಾಸು ವರ್ಷದ 1ನೇ ತ್ರೈಮಾಸಿಕದಲ್ಲಿ 74.77 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಏಪ್ರಿಲ್ ಜೂನ್‌ ಅವಧಿಯಲ್ಲಿನ ಲಾಭ ರೂ. 52.22  ಕೋಟಿಗೆ ಹೋಲಿಸಿದರೆ ಈ ಬಾರಿಯ ಲಾಭ ಶೇ 44ರಷ್ಟು ವೃದ್ಧಿಯಾಗಿದೆ.

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಎಸ್‌ಬಿಎಂ’ ವ್ಯವಸ್ಥಾಪಕ ನಿರ್ದೇಶಕ ಶರದ್‌ ಶರ್ಮಾ, ಠೇವಣಿಗಳ ವಿಭಾಗ ದಲ್ಲಿ ಶೇ 20ರಷ್ಟಿದ್ದ ದೊಡ್ಡ ಮೊತ್ತದ ಠೇವಣಿಗಳನ್ನು ಶೇ 12ಕ್ಕೆ ತಗ್ಗಿಸಿದ್ದರಿಂದ ವೆಚ್ಚ ಕಡಿಮೆ ಆಯಿತು. ಜತೆಗೆ ನಿವ್ವಳ ಬಡ್ಡಿ ವರಮಾನ ಶೇ 3.08ಕ್ಕೆ ಹೆಚ್ಚಿತು. ಇದರಿಂದ ಈ ಬಾರಿ ಉತ್ತಮ ನಿವ್ವಳ ಲಾಭಗಳಿಕೆ ಸಾಧ್ಯ ವಾಯಿತು ಎಂದರು.

ಜತೆಗೆ ಚಾಲ್ತಿ ಮತ್ತು ಉಳಿತಾಯ ಖಾತೆಗಳ ಠೇವಣಿ ಪ್ರಮಾಣ ಶೇ 34.88ಕ್ಕೇರಿದೆ. ಕಾರ್ಪೊರೇಟ್‌ ಸಾಲ ವಿತರಣೆ ಕಡಿಮೆ ಮಾಡಿ ರಿಟೇಲ್‌ ಸಾಲ (ಕಾರು ಶೇ 24, ಗೃಹ ಸಾಲ ಶೇ 19 ರಷ್ಟು ಅಧಿಕ) ವಿಭಾಗದತ್ತ ಹೆಚ್ಚು ಗಮನ ಹರಿಸಲಾಯಿತು. ಇದರಿಂದಲೂ ವರಮಾನ ವೃದ್ಧಿಯಾಗಿ ಅಧಿಕ ಲಾಭ ತಂದುಕೊಟ್ಟಿತು ಎಂದರು. ಇದೇ ವೇಳೆ, ಒಟ್ಟಾರೆ ವಸೂಲಾಗದ ಸಾಲ ಪ್ರಮಾಣ (ಗ್ರಾಸ್‌ ಎನ್‌ಪಿಎ) ಶೇ 5.61ರಿಂದ ಶೇ 5.13ಕ್ಕೂ ನಿವ್ವಳ ‘ಎನ್‌ಪಿಎ’ ಶೇ 3.43ರಿಂದ ಶೇ 2.72ಕ್ಕೂ ಇಳಿಕೆಯಾಗಿದೆ ಎಂದರು.

ಬ್ಯಾಸೆಲ್‌ 3 ನಿಯಮ ಪಾಲನೆಗಾಗಿ ಬ್ಯಾಂಕ್‌ನ ವಹಿವಾಟು ಬಂಡವಾಳ ಹೆಚ್ಚಿಸಿಕೊಳ್ಳಬೇಕಿದೆ. ಹಕ್ಕಿನ ಷೇರುಗಳ ಮೂಲಕ ₨500 ಕೋಟಿ ಸಂಗ್ರಹಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಆರ್‌ಬಿಐ ಅನುಮತಿಗೆ ಕಾಯುತ್ತಿದ್ದೇವೆ ಎಂದು ಶರ್ಮಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೂನ್‌ 30ರ ವೇಳೆಗೆ ರೂ. 61,000 ಕೋಟಿ ಠೇವಣಿ, ರೂ. 49,000 ಸಾಲ ವಿತರಣೆ ಸೇರಿ ಒಟ್ಟು ರೂ. 1.10 ಲಕ್ಷ ಕೋಟಿ ವಹಿವಾಟು ನಡೆಸಲಾಗಿದೆ. 2015ರ ಮಾ. 31ರ ವೇಳೆಗೆ ವಹಿವಾ ಟನ್ನು ರೂ. 1.27 ಲಕ್ಷ ಕೋಟಿಗೆ ಮುಟ್ಟಿ ಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಚೀಫ್‌ ಜನರಲ್‌ ಮ್ಯಾನೇಜರ್‌ ಕಲ್ಯಾಣ್‌ ಮುಖರ್ಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.