ADVERTISEMENT

ಕೃಷಿ ಉತ್ಪನ್ನಕ್ಕೆ ಆನ್‌ಲೈನ್‌ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2015, 19:30 IST
Last Updated 14 ಜೂನ್ 2015, 19:30 IST

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಎಲೆಕ್ಟ್ರಾನಿಕ್‌ ಹಾಗೂ ಗೃಹಬಳಕೆಯ ವಸ್ತುಗಳ ವ್ಯಾಪಾರ ನಡೆಯುವಂತೆಯೇ ರೈತರು ಈಗ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಬಹುದು; ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೇ ಗ್ರಾಹಕರು ನೇರವಾಗಿ ರೈತರಿಂದ ಗುಣಮಟ್ಟದ ಉತ್ಪನ್ನ ಖರೀದಿಸಬಹುದು.

ಬೆಂಗಳೂರಿನ ಫಾರ್ಮಿಲಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಇಂತಹದೊಂದು ವೆಬ್‌ಸೈಟ್‌ ಅಭಿವೃದ್ಧಿಪಡಿಸಿದೆ.
ರೈತರು ತಾವು ಬೆಳೆಯುವ ಬೆಳೆ, ಪ್ರಮಾಣ, ದರದ ಜೊತೆಗೆ ಅದರ ಚಿತ್ರವನ್ನೂ ವೆಬ್‌ಸೈಟ್‌ನಲ್ಲಿ ಸೇರಿಸ ಬಹುದು. ಗ್ರಾಹಕರು ತಮ್ಮ ದರಕ್ಕೆ ಹೊಂದುವ ಉತ್ಪನ್ನಗಳನ್ನು ಪೂರೈಸುವ ರೈತರನ್ನು ಆನ್‌ಲೈನ್‌ನಲ್ಲಿಯೇ ಸಂಪರ್ಕಿಸಬಹುದು. ಇದಕ್ಕೆಲ್ಲ ಒಂದು ಸ್ಮಾರ್ಟ್‌ ಫೋನ್‌ ಹಾಗೂ ಅಂತರ್ಜಾಲ ವ್ಯವಸ್ಥೆ ಇದ್ದರೆ ಸಾಕು.

ಫಾರ್ಮಿಲಿ ಸಂಸ್ಥೆಯ www.farmily.comm ವೆಬ್‌ಸೈಟ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುತ್ತಿದ್ದು, ದೇಶ, ವಿದೇಶದ ಗ್ರಾಹಕರು, ರೈತರೊಂದಿಗೆ ಸಂಪರ್ಕ ಕಲ್ಪಿಸುತ್ತಿದೆ. ಇದರಲ್ಲಿ ಮೊಬೈಲ್‌ ಆ್ಯಪ್‌ ಸಹ ಲಭ್ಯವಿದೆ. ಸದ್ಯ ಭಾರತದಲ್ಲಿ ಈ ವೆಬ್‌ಸೈಟ್‌ನಲ್ಲಿ 20 ಸಾವಿರಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿ ಕೊಂಡಿದ್ದಾರೆ. ಕರ್ನಾಟಕದಲ್ಲಿ ನಾಲ್ಕರಿಂದ ಐದು ಸಾವಿರ ಜನ ಫಾರ್ಮಲಿ ಸದಸ್ಯರಾಗಿದ್ದಾರೆ.

ಹೇಗಿದೆ ವ್ಯವಸ್ಥೆ?: ಫಾರ್ಮಿಲಿ  ವೆಬ್‌ಸೈಟ್‌ನಲ್ಲಿ ಮೊಬೈಲ್‌ ಸಂಖ್ಯೆ ಹಾಗೂ ಪೂರ್ಣ ವಿಳಾಸ ಭರ್ತಿ ಮಾಡಿ ಯಾರು ಬೇಕಾದರೂ ಖಾತೆ ತೆರೆಯಬಹುದು. ಖಾತೆ ಹೊಂದಿರುವ ಗ್ರಾಹಕರು ವೆಬ್‌ಸೈಟ್‌ನಲ್ಲಿ ತಮಗೆ ಬೇಕಾದ ಬೆಳೆಯ ಹೆಸರನ್ನು ಆಯ್ಕೆ ಮಾಡಿದಾಗ, ಆ ಬೆಳೆ ಬೆಳೆಯುವ ಸಮೀಪದ (ಫಾರ್ಮಿಲಿ ಸದಸ್ಯ ) ರೈತರ ಗುರುತು ಜಿಪಿಎಸ್‌ ನಕ್ಷೆಯ ಮೂಲಕ ಲಭ್ಯವಾಗುತ್ತದೆ.

ಆ ಗುರುತಿನ ಮೇಲೆ ಕ್ಲಿಕ್‌ ಮಾಡಿ ದಾಗ ರೈತ ಹಾಗೂ ಅವರ ಬಳಿ ಇರುವ ಬೆಳೆಯ ಮಾಹಿತಿ ಇರುತ್ತದೆ. ಗ್ರಾಹಕ ಆಯ್ದ ಬೆಳೆಗೆ ತಾನು ನೀಡಬಹುದಾದ ದರ ನಮೂದಿಸಿ ಸೆಂಡ್‌ ಬಟನ್‌ ಒತ್ತಿದರೆ, ರೈತನ ಮೊಬೈಲ್‌ಗೆ ಈ ಮಾಹಿತಿ ಮತ್ತು ಗ್ರಾಹಕನ ದೂರವಾಣಿ ಸಂಖ್ಯೆಯ ಸಂದೇಶ ತಲುಪುತ್ತದೆ. ಆಗ ರೈತ ಆ ಗ್ರಾಹಕನಿಗೆ ಕರೆ ಮಾಡಿ ವ್ಯವಹಾರ ಕುದುರಿಸಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು.

‘ಮೊದಲ ಹಂತದಲ್ಲಿ ಉತ್ಪಾದನೆ, ಖರೀದಿಯಷ್ಟೇ ನಡೆಯಲಿದೆ. ನಂತರ ದಲ್ಲಿ ಕೃಷಿ ಉತ್ಪನ್ನಗಳ ಬೇಡಿಕೆಯ ಸ್ಪಷ್ಟ ಅಂಕಿ ಅಂಶ ನಿರ್ಧಾರವಾಗಲಿದೆ. ಆಗ ಬೇಡಿಕೆಗೆ ತಕ್ಕಂತೆ ರೈತರು ಬೆಳೆ ಬೆಳೆಯು ವುದರಿಂದ ಅನಗತ್ಯ ಪೋಲಾಗುವುದನ್ನು ತಡೆಯಬಹುದು ಮತ್ತು ಮಾರುಕಟ್ಟೆಯಲ್ಲಿನ ದರದ ವ್ಯತ್ಯಾಸವನ್ನು ನಿರ್ಧರಿಸಲು ನೆರವಾಗಲಿದೆ’ ಎನ್ನುತ್ತಾರೆ ಫಾರ್ಮಲಿ ಸಂಸ್ಥೆಯ ವ್ಯವಸ್ಥಾಪಕ ಕಾರ್ತಿಕ್‌ ನಟರಾಜನ್‌.

ಉತ್ತಮ ದರ: ‘ರೈತ ಎಷ್ಟೇ ಗುಣಮಟ್ಟದ ಬೆಳೆ ಬೆಳೆದರೂ ಅದರ ಲಾಭ ದಲ್ಲಾಳಿಗಳ ಪಾಲಾಗುತ್ತಿದೆ. ಫಾರ್ಮಿಲಿ ಯಲ್ಲಿ ಸದಸ್ಯನಾದ ಮೇಲೆ ಗ್ರಾಹಕರು ನೇರವಾಗಿ ನಮ್ಮನ್ನು ಸಂಪರ್ಕಿ ಸುತ್ತಿದ್ದಾರೆ. ಸಾವಯವ ಬೆಳೆಗೆ ಈಗ ಬೇಡಿಕೆ ಹೆಚ್ಚಾಗಿದೆ. ಜತೆಗೆ ಸ್ಥಳೀಯ ಮಾರುಕಟ್ಟೆಗಿಂತ ಉತ್ತಮ ದರವೂ ಸಿಗುತ್ತಿದೆ’ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯ ರೈತ ಅನಿಲ ಕುಮಾರ  ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಬಾರಿ ಬೆಂಗಳೂರು ಮತ್ತು ಉಡುಪಿಗೆ ಮಾವಿನ ಹಣ್ಣು ಪೂರೈಕೆ ಮಾಡಿದ್ದೇನೆ. ಮೊಬೈಲ್‌ ನಲ್ಲಿ ಫಾರ್ಮಿಲಿ  ಆ್ಯಪ್‌ ಇರುವುದರಿಂದ ನಿರ್ವಹಣೆಯೂ ಸರಳವಾಗಿದೆ. ಆಂಧ್ರಪ್ರದೇಶದ ರೀತಿಯಲ್ಲಿ ಕರ್ನಾಟಕದಲ್ಲೂ ಕೃಷಿ ಉತ್ಪನಗಳ ಸಾಗಾಟಕ್ಕೆ ಸರ್ಕಾರ ಸಬ್ಸಿಡಿ ನೀಡಿದರೆ ರೈತರಿಗೆ ಇನ್ನಷ್ಟು ನೆರವಾಗಲಿದೆ’ ಎಂದು ಅವರು ಹೇಳಿದರು. 
ದಲ್ಲಾಳಿಗಳಿಂದ ಮುಕ್ತವಾದ  ಮಾರುಕಟ್ಟೆಯಿಂದ ರೈತರಿಗೆ ನಿಜವಾ ಗಿಯೂ ಲಾಭ ಸಿಗುತ್ತದೆ.  ಸಣ್ಣ  ರೈತರೂ  ಒಳ್ಳೆಯ ಬೆಲೆ ನಿರೀಕ್ಷಿಸಬಹುದು.-ಶರಣಪ್ಪ ಮುದಗಲ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ

– ಪ್ರಮೋದ ಹರಿಕಾಂತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT