ADVERTISEMENT

ಕೈಸೇರದ ತೊಗರಿ ಮಾರಿದ ಹಣ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 19:30 IST
Last Updated 15 ಡಿಸೆಂಬರ್ 2017, 19:30 IST
ಕೈಸೇರದ ತೊಗರಿ ಮಾರಿದ ಹಣ
ಕೈಸೇರದ ತೊಗರಿ ಮಾರಿದ ಹಣ   

ವಿಜಯಪುರ: ಬರೋಬ್ಬರಿ ಆರು ತಿಂಗಳ ಹಿಂದೆ ಬೆಂಬಲ ಬೆಲೆಯಡಿ ತೊಗರಿ ಖರೀದಿಸಿದ್ದರೂ, ವಿಜಯಪುರ ಜಿಲ್ಲೆಯ 250ಕ್ಕೂ ಹೆಚ್ಚು ರೈತರಿಗೆ ಇದುವರೆಗೂ ಹಣ ಪಾವತಿಯಾಗಿಲ್ಲ.

ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳಿಯ ವಿಜಯಪುರ ಶಾಖೆಯ ಅಧಿಕಾರಿಗಳ ಎಡವಟ್ಟಿನಿಂದ ₹ 70 ಲಕ್ಷ ನಗದು ಒಮ್ಮೆ ಪಾವತಿಯಾದ ರೈತರ ಖಾತೆಗೆ ಮತ್ತೆ ಜಮೆಯಾಗಿದ್ದು, ಇವರ ಮನವೊಲಿಸಿ ಹಣ ವಾಪಸ್‌ ಪಡೆದು, ಪಾವತಿಯಾಗದ ರೈತರ ಖಾತೆಗೆ ಜಮೆ ಮಾಡಲು ಅಧಿಕಾರಿಗಳು ಕಸರತ್ತು ಆರಂಭಿಸಿದ್ದಾರೆ.

ಮತ್ತೊಮ್ಮೆ ತೊಗರಿ ರಾಶಿ ಸಮೀಪಿಸಿದರೂ, 6 ತಿಂಗಳ ಹಿಂದೆ ಮಾರಾಟ ಮಾಡಿದ ಉತ್ಪನ್ನದ ದರ ಕೈಗೆ ದೊರಕದಿರುವುದು ರೈತರನ್ನು ಹೈರಾಣಾಗಿಸಿದೆ. ನಮ್ಮ ಖಾತೆಗೆ ಯಾವಾಗ ಹಣ ಜಮೆಯಾಗುತ್ತದೆ ಎಂದು ಈ ರೈತರು ಕಚೇರಿಗೆ ನಿತ್ಯವೂ ಎಡತಾಕಿ ಪ್ರಶ್ನಿಸಿದರೂ, ಶೀಘ್ರದಲ್ಲೇ ಎಂಬ ಸಿದ್ಧ ಉತ್ತರ ದೊರೆಯುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸತತ ಬರಕ್ಕೆ ಸಿಲುಕಿ ಸಂಕಷ್ಟಕ್ಕೀಡಾಗಿದ್ದೇವೆ. ಹಿಂದಿನ ವರ್ಷ ಬೆಳೆದ ತೊಗರಿಯನ್ನು ಸರ್ಕಾರಕ್ಕೆ ಮಾರಾಟ ಮಾಡಿದ್ದೆವು. ಕೊಂಚ ಕಾಸು ಕೈ ಸೇರುತ್ತದೆ ಎಂಬ ನಿರೀಕ್ಷೆ ನಮ್ಮದಾಗಿತ್ತು. ಸಾಲ ತೀರಿಸಿ, ಜೀವನ ನಡೆಸಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ, ಇದುವರೆಗೂ ಹಣ ನಮ್ಮ ಕೈ ಸೇರಿಲ್ಲ’ ಎಂದು ಸಿಂದಗಿ ತಾಲ್ಲೂಕು ಚಾಂದಕವಠೆ ಗ್ರಾಮದ ರೈತ ಜಟ್ಟೆಪ್ಪ ಕಂಟಿಗೊಂಡ, ದುಂಡಪ್ಪ ನಣದಿ ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

‘ಆರಂಭದಲ್ಲಿ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಇಲ್ಲ ಎಂದು ದಿನ ದೂಡಿದರು. ಆಧಾರ್‌ ಲಿಂಕ್‌ ಮಾಡಿದರೂ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗದೆ, ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ಗೆ ಜಮೆಯಾದವು. ಅದನ್ನು ಪಡೆಯಲು ಹರಸಾಹಸ ಪಟ್ಟೆವು. ಉಳಿದ ಹಣ ಕೇಳಿದರೆ, ಬೇರೆಯವರ ಖಾತೆಗೆ ಜಮೆಯಾಗಿವೆ. ಅದನ್ನು ಮರು ಪಾವತಿಸಿಕೊಂಡು ನಿಮ್ಮ ಖಾತೆಗೆ ಹಾಕುತ್ತೇವೆ ಎಂದು ಮಾರಾಟ ಮಹಾ ಮಂಡಲದ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದರು.

‘ಸರ್ಕಾರ ಈಗಾಗಲೇ ಬೆಂಬಲ ಬೆಲೆಯಡಿ ಖರೀದಿಸಿದ ತೊಗರಿಯ ಹಣ ಬಿಡುಗಡೆ ಮಾಡಿದೆ. ಅಧಿಕಾರಿಗಳು ಎಸಗಿರುವ ತಾಂತ್ರಿಕ ಲೋಪದಿಂದ ರೈತರಿಗೆ ಪಾವತಿಯಾಗಿಲ್ಲ. ನಮ್ಮಿಂದ ಈಗಾಗಲೇ ಹಣ ಬಿಡುಗಡೆಯಾಗಿದೆ. ನೀವೇ ಸರಿಪಡಿಸಿಕೊಳ್ಳಿ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

‘ವಿಧಿಯಿಲ್ಲದೆ ಖಾತೆಗೆ ಜಮೆಯಾದ ರೈತರ ಬಳಿಯೇ ಮನವೊಲಿಸುವ ಕಾಯಕ ನಡೆಸಿದ್ದೇವೆ. ಮರಳಿಸುತ್ತಿದ್ದಂತೆ ಪಾವತಿಯಾಗದ 250ಕ್ಕೂ ಹೆಚ್ಚು ರೈತರ ಖಾತೆಗಳಿಗೆ ಹಣ ಜಮೆ ಮಾಡುತ್ತೇವೆ’ ಎಂದು ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳಿಯ ವಿಜಯಪುರ ಶಾಖಾ ವ್ಯವಸ್ಥಾಪಕ ಆರ್.ಆರ್.ಜುಂಜರವಾಡ ‘ಪ್ರಜಾವಾಣಿ’ಗೆ ತಿಳಿಸಿದರು.
–ಬಾಬುಗೌಡ ರೋಡಗಿ

*
60ರಿಂದ 70 ರೈತರ ಖಾತೆಗೆ ₹ 70 ಲಕ್ಷ ನಗದು ಹೆಚ್ಚುವರಿಯಾಗಿ ಜಮೆಯಾಗಿದೆ. ಇವರ ಮನವೊಲಿಸಿ ಕೊಡಬೇಕಾದ ರೈತರಿಗೆ ಹಣ ಪಾವತಿಸುತ್ತೇವೆ.
–ಆರ್.ಆರ್.ಜುಂಜರವಾಡ, ಶಾಖಾ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.