ADVERTISEMENT

ಕೊಬ್ಬರಿಗೆ ಸಿಗದ ಆನ್‌ಲೈನ್‌ ಟ್ರೇಡಿಂಗ್ ಭಾಗ್ಯ

ಕಾರ್ಯಗತಗೊಳ್ಳದ ಸರ್ಕಾರಿ ಯೋಜನೆ: ಹೆಚ್ಚಿದ ಅನಧಿಕೃತ ವಹಿವಾಟು

ಸಿ.ಕೆ.ಮಹೇಂದ್ರ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಕೊಬ್ಬರಿಗೆ ಸಿಗದ ಆನ್‌ಲೈನ್‌ ಟ್ರೇಡಿಂಗ್ ಭಾಗ್ಯ
ಕೊಬ್ಬರಿಗೆ ಸಿಗದ ಆನ್‌ಲೈನ್‌ ಟ್ರೇಡಿಂಗ್ ಭಾಗ್ಯ   

ತುಮಕೂರು: ತೆಂಗು ಬೆಳೆಗಾರರ ಹೋರಾಟ, ಸರ್ಕಾರದ  ಭರವಸೆಗಳ ನಡುವೆಯೂ ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಆನ್‌ಲೈನ್‌ ಟ್ರೇಡಿಂಗ್ ವಹಿವಾಟು ಕನಸಾಗಿಯೇ ಉಳಿಯತೊಡಗಿದೆ.

ಮಾರುಕಟ್ಟೆ ಸುಧಾರಣೆಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ಆನ್‌ಲೈನ್ ಮಾರಾಟ ವ್ಯವಸ್ಥೆ ದೇಶವ್ಯಾಪಿ ಗಮನ ಸೆಳೆದಿತ್ತು. ಇದೇ ಮಾದರಿಯ ವ್ಯವಸ್ಥೆಯನ್ನು ದೇಶದ ಎಲ್ಲ ಎಪಿಎಂಸಿಗಳಲ್ಲಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ಕೂಡ ನಡೆಸಿದೆ.

ಆರಂಭದಲ್ಲಿ ಆನ್‌ಲೈನ್‌ ವಹಿವಾಟಿನ ಮೂಲಕ ಕೊಬ್ಬರಿ ಬೆಲೆಯಲ್ಲಿ ಏರಿಕೆಯಾಗಿತ್ತು. ಕ್ವಿಂಟಲ್‌ಗೆ ₹5–6 ಸಾವಿರ ಇದ್ದ ಕೊಬ್ಬರಿ ಬೆಲೆ ₹ 20 ಸಾವಿರ ಮುಟ್ಟಿತ್ತು. ನಿಧಾನವಾಗಿ ಈ ವ್ಯವಸ್ಥೆ ಹಾಳುಗೆಡವಿದ ಪರಿಣಾಮ ಕೊಬ್ಬರಿ ಬೆಲೆಯೂ ಇಳಿಕೆಯಾಗಿ ಈಗ ಕ್ವಿಂಟಲ್‌ಗೆ ₹ 7,600 ರಿಂದ
₹ 8,000ಕ್ಕೆ ಬಂದು ನಿಂತಿದೆ.

‘ಆನ್‌ಲೈನ್‌ ಮೂಲಕ ಹರಾಜು ನಡೆಸಿ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಿಸಬೇಕು’ ಎಂದು ಕೃಷಿ ಮಾರಾಟ ಇಲಾಖೆ ಕಳೆದ ಐದು ತಿಂಗಳಿಂದೀಚೆಗೆ ಎರಡು ಸಲ ಎಪಿಎಂಸಿಗೆ ಪತ್ರ ಬರೆದು ಎಚ್ಚರಿಸಿದರೂ ಪ್ರಯೋಜನವಾಗಿಲ್ಲ.

‘ಕನಿಷ್ಠಶೇ25ರಷ್ಟು ವಹಿವಾಟನ್ನಾದರೂ ಆನ್‌ಲೈನ್‌ ಟ್ರೇಡಿಂಗ್‌ ಮೂಲಕ ಮಾಡಬೇಕು’ ಎಂದು ಮಾರ್ಚ್‌ನಲ್ಲಿ ಮತ್ತೊಮ್ಮೆ ಕೃಷಿ ಮಾರಾಟ ಇಲಾಖೆ ಎಪಿಎಂಸಿಗೆ ಸುತ್ತೋಲೆ ಕಳುಹಿಸಿದೆ. ಎರಡನೇ ಸುತ್ತೋಲೆಯೂ ಕಸದ  ಬುಟ್ಟಿ ಸೇರಿದೆ.

ಕೃಷಿ ಮಾರಾಟ ಇಲಾಖೆಯ ಎರಡನೇ ಸುತ್ತೋಲೆ ಬಂದ ನಂತರ 2,456 ಲಾಟ್‌ ಕೊಬ್ಬರಿ ಮಾರಾಟವಾಗಿದೆ. ಇದರಲ್ಲಿ ಎಂ.ಬಿ.ಲೋಕೇಶ್‌ ಎಂಬುವರ 5 ಚೀಲ ಕೊಬ್ಬರಿ ಮಾತ್ರ ಆನ್‌ಲೈನ್‌ ವಹಿವಾಟು ಮೂಲಕ ಖರೀದಿ ನಡೆದಿದೆ. ಇದೂ ಕೂಡ ಬಲವಂತದ ಖರೀದಿಯಾಗಿದೆ.

‘ಮೊದಲ ದಿನ ಯಾವೊಬ್ಬವರ್ತಕರು ದರ ಕೋಟ್‌ ಮಾಡಲಿಲ್ಲ. ಎರಡು, ಮೂರನೇ  ದಿನ  ಉದ್ದೇಶಪೂರ್ವಕವಾಗಿ ಕಡಿಮೆ ದರ  ಕೋಟ್‌ ಮಾಡಿದರು.  ನಾಲ್ಕನೇ ಸಲ ರಾಜೀ ಸೂತ್ರದಲ್ಲಿ ಮಾರಾಟ ಮಾಡಬೇಕಾಗಿ ಬಂತು. ಕೊನೆಗೂ ಕ್ವಿಂಟಲ್‌ಗೆ ₹ 1500 ನಷ್ಟವಾಯಿತು’ ಎಂ.ಬಿ.ಲೋಕೇಶ್‌ ತಿಳಿಸಿದರು.

‘ಶನಿವಾರ 16 ಚೀಲ ಕೊಬ್ಬರಿಯನ್ನು ಇ–ಪೇಮೆಂಟ್‌ಗೆ ಇಡಲಾಗಿದೆ. ಯಾವ ವರ್ತಕರೂ ಕೋಟ್‌ ಮಾಡಿಲ್ಲ. ಮಾರುಕಟ್ಟೆಯಲ್ಲಿ ಕೋಟ್ ಮಾಡದ ವರ್ತಕರ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವಿದೆ. ಆದರೆ ಯಾರ ವಿರುದ್ಧವೂ ಕ್ರಮಕೈಗೊಂಡಿಲ್ಲ. ಬುಧವಾರ (ಮೇ 25ರಂದು) ವಹಿವಾಟು ಆಗುತ್ತದೆಯೇ, ಇಲ್ಲವೋ ನೋಡಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಅಧ್ಕಕ್ಷ ದೇವರಾಜಯ್ಯ ತಿಳಿಸಿದರು.

‘ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ಹತಾಶೆ ಸ್ಥಿತಿಗೆ ತಲುಪಿದ್ದಾರೆ. ಬರಪೀಡಿತ ಜಿಲ್ಲೆಯ ರೈತರೊಂದಿಗೆ ಸರ್ಕಾರ ಚೆಲ್ಲಾಟವಾಡುವುದನ್ನು ಬಿಡಬೇಕು. ಆನ್‌ಲೈನ್‌ ವಹಿವಾಟು ಆರಂಭವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಮಧ್ಯವರ್ತಿಗಳ ಹಾವಳಿ, ಅನಧಿಕೃತ ವಹಿವಾಟಿಗೆ ಕಡಿವಾಣ ಹಾಕಬೇಕು’ ಎಂದು ಕೃಷಿ ಬೆಲೆ ಕಾವಲು ಸಮಿತಿ ಸಂಚಾಲಕ ಶ್ರೀಕಾಂತ್‌ ಒತ್ತಾಯಿಸಿದ್ದಾರೆ.

* ಆನ್‌ಲೈನ್‌ ಟ್ರೇಡಿಂಗ್‌ನಿಂದಾಗಿವರ್ತಕರು ಎಪಿಎಂಸಿಯಿಂದ ಹೊರ ಹೋಗುತ್ತಿದ್ದಾರೆ. ಎಪಿಎಂಸಿ ಹೊರಗೆ ಅನಧಿಕೃತ ವಹಿವಾಟು ಹೆಚ್ಚಾಗಿದೆ. ಇದನ್ನು ಸಚಿವರ ಗಮನಕ್ಕೆ ತರಲಾಗಿದೆ.
-ಮಂಜುನಾಥ್‌, 
ತಿಪಟೂರು ಎಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.