ADVERTISEMENT

ಕ್ಯಾಷ್‌ ಬಿಲ್‌ ಸ್ವರೂಪ ಬದಲಿಸಲು ಮನವಿ

ಪಿಟಿಐ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಕ್ಯಾಷ್‌ ಬಿಲ್‌ ಸ್ವರೂಪ ಬದಲಿಸಲು ಮನವಿ
ಕ್ಯಾಷ್‌ ಬಿಲ್‌ ಸ್ವರೂಪ ಬದಲಿಸಲು ಮನವಿ   

ಮುಂಬೈ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ, ಗ್ರಾಹಕರಿಗೆ ನೀಡುವ ಕ್ಯಾಷ್‌ ಬಿಲ್‌ನಲ್ಲಿ ಇರುವ ಮಾರಾಟ ದರಪಟ್ಟಿ ಗೊಂದಲಕಾರಿಯಾಗಿದ್ದು ಅದನ್ನು ಸರಳಗೊಳಿಸಬೇಕು ಎಂದು ಚಿಲ್ಲರೆ ವರ್ತಕರ ಸಂಘ (ಆರ್‌ಎಐ) ಮನವಿ ಮಾಡಿಕೊಂಡಿದೆ.

ಚಿಲ್ಲರೆ ಮಾರಾಟ ಸಂದರ್ಭದಲ್ಲಿ (ಬಿಟುಸಿ) ಹಲವಾರು ಸವಾಲುಗಳು ಎದುರಾಗುತ್ತಿವೆ.  ಜಿಎಸ್‌ಟಿ ದರ, ಸರಕುಗಳ ವರ್ಗೀಕರಣದ ವಿವರ ಮತ್ತು ಮಾರಾಟವಾದ ಪ್ರತಿಯೊಂದು ಸರಕಿನ ತೆರಿಗೆ ವಿವರಗಳನ್ನು ಒದಗಿಸಬೇಕೆಂಬ ಜಿಎಸ್‌ಟಿ ನಿಯಮಗಳು ಗೊಂದಲಕ್ಕೆ ಎಡೆ ಮಾಡಿಕೊಟ್ಟಿವೆ. ಅವುಗಳನ್ನು ಪರಿಹರಿಸಬೇಕು ಎಂದು  ಒತ್ತಾಯಿಸಿ ಸಂಘವು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಪತ್ರ ಬರೆದಿದೆ.

ಆಂತರರಾಜ್ಯ ರಿಟೇಲ್‌ ಮಾರಾಟದ ಮೇಲೆ ತೆರಿಗೆ ದರ ವಿವರ ಮತ್ತು ಎಚ್ಎಸ್‌ ಕೋಡ್‌ನಿಂದ ವಿನಾಯ್ತಿ ನೀಡಲಾಗಿದೆ. ಮಾರಾಟ ವಹಿವಾಟಿನ ಮೇಲೆ ಯಾವುದೇ ಮಿತಿ ವಿಧಿಸದೆ ಈ ವಿನಾಯ್ತಿಯನ್ನು ಎಲ್ಲ ಚಿಲ್ಲರೆ ವರ್ತಕರಿಗೂ ವಿಸ್ತರಿಸಬೇಕು ಎಂದು ಸಂಘ ಮನವಿ ಮಾಡಿಕೊಂಡಿದೆ.
ಇಂತಹ ವಿನಾಯ್ತಿ ನೀಡುವುದರಿಂದ ಬಿಲ್ಲಿಂಗ್‌ ಪ್ರಕ್ರಿಯೆ ಸರಳಗೊಳ್ಳಲಿದ್ದು, ಗ್ರಾಹಕರಲ್ಲಿ ಮೂಡುವ ಅನುಮಾನಗಳನ್ನೂ ದೂರ ಮಾಡಲಿದೆ.

ADVERTISEMENT

ರಿಟೇಲ್‌ ದರಗಳು ಎಲ್ಲ ತೆರಿಗೆಗಳನ್ನು ಒಳಗೊಂಡ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಆಗಿರುತ್ತದೆ. ತೆರಿಗೆಗಳನ್ನು ವಿಂಗಡಿಸುವುದರಿಂದ  ಗ್ರಾಹಕರಲ್ಲಿ ಗೊಂದಲ ಮೂಡಿಸಿದೆ. ನಿಗದಿತ ದರಕ್ಕಿಂತ ಹೆಚ್ಚಿನ ತೆರಿಗೆ ಪಾವತಿಸಿದ ಭಾವನೆಗೆ ಎಡೆ ಮಾಡಿಕೊಡುತ್ತಿದೆ.

ಜಿಎಸ್‌ಟಿ ಬಿಲ್‌ ಮಾದರಿಯು ವಿಶ್ವದ ಎಲ್ಲೆಡೆ ಬಳಕೆಯಲ್ಲಿ ಇರುವ ಕ್ಯಾಷ್‌ ಮೆಮೊ ಮಾದರಿ ಅನುಸರಿಸಬೇಕು. ಅದರಲ್ಲಿ ಎಲ್ಲ ತೆರಿಗೆಗಳ ವಿವರ ಇರಲಿದೆ. ಆದರೆ, ತೆರಿಗೆ ವಿಂಗಡನೆಯ ಮಾಹಿತಿ ಇರುವುದಿಲ್ಲ.

ತೆರಿಗೆ ವಿಂಗಡನೆಯ ವಿವರ ಒಳಗೊಂಡಿರುವ ಕಾರಣಕ್ಕೆ ಕ್ಯಾಷ್‌ ಮೆಮೊದ ಗಾತ್ರವೂ ಈ ಮೊದಲಿನಕ್ಕಿಂತ ಮೂರು ಪಟ್ಟು ಉದ್ದವಾಗಿದೆ.  ಇದರಿಂದ ಕಾಗದದ ಬಳಕೆ ಹೆಚ್ಚಿದೆ ಎಂದೂ ಸಂಘ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.