ADVERTISEMENT

ಖಾಸಗಿ ಎಫ್‌.ಎಂ ಜಾಲಕ್ಕೆ ಮತ್ತೆ 66 ಕೇಂದ್ರಗಳು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2017, 19:30 IST
Last Updated 4 ಏಪ್ರಿಲ್ 2017, 19:30 IST
ಖಾಸಗಿ ಎಫ್‌.ಎಂ ಜಾಲಕ್ಕೆ ಮತ್ತೆ 66 ಕೇಂದ್ರಗಳು
ಖಾಸಗಿ ಎಫ್‌.ಎಂ ಜಾಲಕ್ಕೆ ಮತ್ತೆ 66 ಕೇಂದ್ರಗಳು   
ಸಿ ಯು ಬೆಳ್ಳಕ್ಕಿ
ಈಗ ದೇಶದ ಎಲ್ಲೆಡೆ ಎಫ್‌ಎಂ ಕಲರವ ಕೇಳಿ ಬರುತ್ತಿದೆ. ಎಫ್‌ಎಂ ಕ್ರಾಂತಿಯ ಹಿನ್ನೆಲೆಯಲ್ಲಿ ರೇಡಿಯೊಕ್ಕೆ ಮತ್ತೆ ಜನಪ್ರಿಯತೆ ದೊರೆತಿರುವುದು ನಿರ್ವಿವಾದ.  ರೇಡಿಯೊ ಪ್ರಸಾರ ಈಗ ‘ಎಫ್‌ಎಂ’ಮಯವಾಗಿದೆ. ಖಾಸಗಿ ಎಫ್‌ಎಂ ಚಾನೆಲ್‌ಗಳನ್ನು (ಕೇಂದ್ರಗಳನ್ನು) ಹರಾಜು ಪ್ರಕ್ರಿಯೆ  ಮೂಲಕ  ಹಂಚಲಾಗುತ್ತಿದೆ.
 
ಇತ್ತೀಚೆಗೆ ಮೂರನೆ ಹಂತದ ಎರಡನೆ ಸುತ್ತಿನ ಹರಾಜು ಪ್ರಕ್ರಿಯೆ ನಡೆಯಿತು. 48 ನಗರಗಳ ಒಟ್ಟು 66 ಚಾನೆಲ್‌ಗಳು ಮಾರಾಟವಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ₹ 200 ಕೋಟಿ  ಸಂದಾಯವಾಗಿದೆ. ಹರಾಜಿಗಿಟ್ಟಿದ್ದ 266 ಚಾನೆಲ್‌ಗಳಲ್ಲಿ ಕೇವಲ 66 ಚಾನೆಲ್‌ಗಳು ಮಾರಾಟವಾದವು.
 
ಹೈದರಾಬಾದ್, ವಿಜಯವಾಡಾದಂತಹ ಪ್ರಮುಖ ನಗರಗಳನ್ನು ಹೊರತುಪಡಿಸಿ ಈಶಾನ್ಯ ಭಾರತ ಹಾಗೂ ದೇಶದ ಗಡಿ ಪ್ರದೇಶಗಳಲ್ಲಿರುವ, ಅಲ್ಲದೆ ಸಿ ಹಾಗೂ ಡಿ ವಿಭಾಗಕ್ಕೆ ಸೇರಿದ ನಗರಗಳಿಗೆ ಈ ಹರಾಜಿನಲ್ಲಿ ಆದ್ಯತೆ ನೀಡಲಾಗಿತ್ತು. ಹೈದ್ರರಾಬಾದ್‌ನ ಒಂದು ಚಾನೆಲ್ ₹ 23.43 ಕೋಟಿಗೆ ಹಾಗೂ ಡೆಹ್ರಾಡೂನ್‌ ಒಂದು ಚಾನೆಲ್  ₹ 15. 65 ಕೋಟಿಗೆ ಹರಾಜಾದವು.  
 
ಗಡಿಭಾಗದಲ್ಲಿರುವ ಕಾರ್ಗಿಲ್ ಕಥುವಾ,ಪೂಂಚ್‌  ತಲಾ 2 ಚಾನೆಲ್, ಲೇಹ್‌ 3 ಹಾಗೂ ಇನ್ನಿತರ 4 ಪುಟ್ಟ ನಗರಗಳ ಕೇಂದ್ರಗಳು ತಲಾ ₹ 5 ಲಕ್ಷಕ್ಕೆ ಮಾರಾಟವಾದವು. ಈ ಸುತ್ತಿನ ಹರಾಜಿನಲ್ಲಿ 21 ಕೇಂದ್ರಗಳು   ರೇಡಿಯೊ ಮಿರ್ಚಿ ಪಾಲಾದರೆ, ರೆಡ್ ಎಫ್‌ಎಂ ಹಾಗೂ  ಸನ್ ಗ್ರೂಪ್ ಕಂಪನಿ 76 ಚಾನೆಲ್ಗಳನ್ನು ಪಡೆದುಕೊಂಡಿದೆ.

ಇದರಿಂದಾಗಿ ದೇಶದಾದ್ಯಂತ ಸನ್‌ಗ್ರೂಪ್ ನೆಟ್‌ವರ್ಕ್ 70 ಹಾಗೂ ರೇಡಿಯೊ ಮಿರ್ಚಿ 64 ಕೇಂದ್ರಗಳನ್ನು ಹೊಂದಲಿವೆ. ರಿಲಯನ್ಸ್, ಎಚ್ ಟಿ ಮೀಡಿಯಾ, ದೈನಿಕ ಜಾಗರಣ  ಗ್ರೂಪ್ ಇಂತಹ ಪ್ರಮುಖ ಕಂಪನಿಗಳು ಹರಾಜಿನಲ್ಲಿ ಭಾಗವಹಿಸಿದ್ದವು. ಕಳೆದ ಸಲವೂ ಈ ಕಂಪನಿಗಳು ತೀವ್ರ  ಸ್ಪರ್ಧೆ ಒಡ್ಡಿ ಬಹಳಷ್ಟು ಚಾನೆಲ್‌ಗಳನ್ನು ಖರೀದಿಸಿದ್ದವು.
 
ಎಫ್‌ಎಂ ಖಾಸಗಿ ಚಾನೆಲ್‌ಗಳನ್ನು ಬಿತ್ತರಿಸಲು ಇದುವರೆಗೆ 2 ಹಂತದ ಹರಾಜು ನಡೆದು 248 ಖಾಸಗಿ ಕೇಂದ್ರಗಳು ಅಸ್ತಿತ್ವಕ್ಕೆ ಬಂದಿವೆ. 3ನೆ ಹಂತದ ಮೊದಲನೆ ಸುತ್ತಿನಲ್ಲಿ 97 ಚಾನೆಲ್‌ಗಳು ಹರಾಜಾಗಿದ್ದವು. ಇದೀಗ ನಡೆದ 2ನೆ ಸುತ್ತಿನಲ್ಲಿ ಮತ್ತೆ 66 ಚಾನೆಲ್‌ಗಳು ಮಾರಾಟವಾಗಿವೆ. ಅಲ್ಲಿಗೆ ದೇಶದಾದ್ಯಂತ 400ಕ್ಕೂ ಹೆಚ್ಚು ಖಾಸಗಿ ಎಫ್‌ಎಂ ರೇಡಿಯೊ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ.
 
ಮೂರನೇ ಹಂತದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 227 ನಗರಗಳಲ್ಲಿ 839 ಖಾಸಗಿ ವಾಣಿಜ್ಯ ರೇಡಿಯೊ ಕೇಂದ್ರಗಳಿಗೆ ಲೈಸನ್ಸ್ ನೀಡಲು ಉದ್ದೇಶಿಸಲಾಗಿದೆ. ದೇಶದಲ್ಲಿ 2001ರಿಂದ ಎಫ್‌ಎಂ ಪ್ರಸಾರ ಪ್ರಾರಂಭವಾಯಿತು. ಅಲ್ಲಿಯವರೆಗೆ ಭಾರತದಲ್ಲಿ ರೇಡಿಯೊ ಪ್ರಸಾರದ ಇತಿಹಾಸವೆಂದರೆ ಅದು ಆಕಾಶವಾಣಿ ಇತಿಹಾಸವೇ ಆಗಿತ್ತು. ಈಗ ಆಕಾಶವಾಈ ಪ್ರಸಾರ ಎಫ್‌ಎಂ ಮಯವಾಗಿದೆ.

ದೇಶದಲ್ಲಿ ಈಗ 100 ಕೋಟಿಗೂ ಹೆಚ್ಚು ಮೊಬೈಲ್‌ಗಳಿವೆ. ಶೇಕಡಾ  45ರಷ್ಟು ಮೊಬೈಲ್‌ಗಳು ಎಫ್‌ಎಂ ರೇಡಿಯೊ ಸಂಪರ್ಕ ಹೊಂದಿವೆ. ಅಂದರೆ 40 ರಿಂದ 45 ಕೋಟಿ ಜನ ತಮ್ಮ ಮೊಬೈಲ್‌ಗಳಿಂದಲೇ ಎಫ್‌ಎಂ ಪ್ರಸಾರ ಆಲಿಸಬಹುದಾಗಿದೆ.  ಮೊಬೈಲ್ ರೇಡಿಯೊ ಕೇಳುವವರ ಮೊದಲ ಆಯ್ಕೆ ಖಾಸಗಿ ಎಫ್‌ಎಂ ಖಾಸಗಿ ಚಾನೆಲ್‌ಗಳಾಗಿವೆ. ಕೇಳುಗರ ಈ ಪ್ರವೃತ್ತಿಯು ಚಾನೆಲ್‌ಗಳಿಗೆ  ವರದಾನವಾಗಿ ಪರಿಣಮಿಸಿದೆ. ಹೊಸ ಪ್ರಸಾರ ಸಾಧ್ಯತೆಗಳನ್ನು ಸೃಷ್ಟಿಸಿ, ಜನಪ್ರಿಯತೆ ಉಳಿಸಿಕೊಳ್ಳುವುದು ಖಾಸಗಿ ಎಫ್‌ಎಂ ಚಾನೆಲ್‌ಗಳಿಗೆ  ಸವಾಲಾಗಿ ಪರಿಣಮಿಸಿದೆ.
 
ಎಲ್ಲ ಎಫ್‌ಎಂ ಮಿರ್ಚಿಯಲ್ಲ . . .
ಅತಿ ಹೆಚ್ಚಿನ ಚಾನೆಲ್‌ಗಳನ್ನು ಹೊಂದಿರುವ ಜನಪ್ರಿಯ ಮಿರ್ಚಿ ನೆಟ್‌ವರ್ಕ್‌  ಮನರಂಜನೆಗೆ ಮೀಸಲಾದ ಖಾಸಗಿ ಎಫ್‌ಎಂ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಎಫ್‌ಎಂ ತರಂಗಾಂತರಗಳಲ್ಲಿಯೇ ಬಿತ್ತರಿಸುವ ಆಕಾಶವಾಣಿ ಇಲ್ಲವೆ ಸಮುದಾಯ ಬಾನುಲಿ ಕೇಂದ್ರಗಳೆಲ್ಲ ಮನರಂಜನೆಗೆ ಮೀಸಲಾದ ಮಿರ್ಚಿಯಂತಹ ವಾಣಿಜ್ಯ ಕೇಂದ್ರಗಳಲ್ಲ.

ಇವು ಮೂಲಭೂತವಾಗಿ ಜನರಿಗೆ ಮಾಹಿತಿ, ರಂಜನೆ ನೀಡಲು   ಮೀಸಲಾದ ಕೇಂದ್ರಗಳು. ಕಾಲೇಜ್‌, ವಿಶ್ವವಿದ್ಯಾಲಯ  ಹಾಗೂ ಸ್ವಯಂ ಸೇವಾ ಸಂಘಗಳ ಒಡೆತನದ ಸಮುದಾಯ ಕೇಂದ್ರಗಳು   ಸಮುದಾಯಗಳ  ಪ್ರಯೋಜನಕ್ಕೆ ನಡೆಸುವ ಅಲ್ಪ ಶಕ್ತಿಯ ಕೇಂದ್ರಗಳು. ಸಮುದಾಯ ಬಾನುಲಿ ಕೇಂದ್ರದ ಪ್ರಸಾರ ಶಕ್ತಿ 50ರಿಂದ 100 ವಾಟ್ಸ್. 
 
ನಗರಗಳ ವ್ಯಾಪ್ತಿಗೆ ಅನುಗುಣವಾಗಿ ಖಾಸಗಿ ಎಫ್‌ಎಂ ಕೇಂದ್ರಗಳ ಪ್ರಸಾರ ಶಕ್ತಿ 5 ರಿಂದ 20ಕಿಲೊ ವಾಟ್‌. ಒಂದು ಕಿಲೊ ವಾಟ್‌ ಎಂದರೆ ಒಂದು ಸಾವಿರ ವಾಟ್ಸ್ ಎಂದರ್ಥ. ರಾಜ್ಯದಲ್ಲಿ ಈಗ ಇಂತಹ ಹದಿನಾರು ಸಮುದಾಯ ಬಾನುಲಿ ಕೇಂದ್ರಗಳಿವೆ. ನಿಗದಿತ ಅರ್ಹತೆಗಳನ್ನು ಹೊಂದಿದ ವಿದ್ಯಾ ಸಂಸ್ಥೆಗಳು, ಸ್ವಯಂ ಸೇವಾ ಸಂಘಗಳು ಸರ್ಜಿ ಸಲ್ಲಿಸಿ  25 ಸಾವಿರ ರೂಪಾಯಿಗಳ ಬ್ಯಾಂಕ್ ಗ್ಯಾರಂಟಿ ನೀಡಿ ಸಮುದಾಯ ಬಾನುಲಿ ಕೇಂದ್ರಕ್ಕಾಗಿ ಲೈಸನ್ಸ್ ಪಡೆಯಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.