ADVERTISEMENT

ಜಿಎಸ್‌ಟಿಎನ್‌ ಕೇಂದ್ರಕ್ಕೆ ಕರೆಗಳ ಸುರಿಮಳೆ

ಪಿಟಿಐ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಬೆನ್ನೆಲುಬು ಆಗಿರುವ ಜಿಎಸ್‌ಟಿ ನೆಟ್‌ವರ್ಕ್‌  ಸಹಾಯ ಕೇಂದ್ರಕ್ಕೆ ಉದ್ಯಮಿಗಳಿಂದ ಪ್ರತಿ ದಿನ 10 ಸಾವಿರದಷ್ಟು ದೂರವಾಣಿ ಕರೆಗಳು ಬರುತ್ತಿವೆ.

ಬಹುತೇಕ ಪ್ರಶ್ನೆಗಳು – ಜಿಎಸ್‌ಟಿಗೆ ನೋಂದಾವಣೆ, ಲಾಗಿನ್ ಆಗುವುದು,  ಮರೆತು ಹೋದ ರಹಸ್ಯ ಸಂಖ್ಯೆ (ಪಾಸ್‌ವರ್ಡ್‌), ದಾಖಲೆಗಳನ್ನು ಅಪ್‌ಲೋಡ್‌ ಮಾಡುವುದಕ್ಕೆ ಸಂಬಂಧಿಸಿರುತ್ತವೆ.

‘ವರ್ತಕರು, ಉದ್ಯಮಿಗಳಿಂದ ಕೇಳಿ ಬರುತ್ತಿರುವ ಅನುಮಾನಗಳನ್ನು ಪರಿಹರಿಸಲು ಸಹಾಯ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು (400ಕ್ಕೆ ಏರಿಸಲು) ನಿರ್ಧರಿಸಲಾಗಿದೆ. ಸೆಪ್ಟೆಂಬರ್‌ ತಿಂಗಳಿನಿಂದ ಆರಂಭಗೊಳ್ಳಲಿರುವ ರಿಟರ್ನ್ಸ್‌ ಸಲ್ಲಿಕೆ ಕುರಿತ ಸಂದೇಹಗಳನ್ನು ಸಮರ್ಥವಾಗಿ ನಿರ್ವಹಿಸಲು ಇದರಿಂದ ಸಾಧ್ಯವಾಗಲಿದೆ’ ಎಂದು ಜಿಎಸ್‌ಟಿಎನ್‌  ಅಧ್ಯಕ್ಷ ನವೀನ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

‘ಪ್ರತಿ ಕರೆಗೂ ಕೇಂದ್ರದ ಸಿಬ್ಬಂದಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಸಂಕೀರ್ಣ ಸ್ವರೂಪದ ಸಂದೇಹಗಳಿಗೆ ಪರಿಣತರು ಉತ್ತರ ನೀಡುತ್ತಿದ್ದಾರೆ. ಕೆಲವೊಮ್ಮೆ ಬಳಕೆದಾರರ ಕಂಪ್ಯೂಟರ್‌ ಕುರಿತೂ ಪ್ರಶ್ನೆಗಳನ್ನು ಕೇಳಲಾಗುತ್ತಿದೆ’ ಎಂದು ಹೇಳಿದ್ದಾರೆ.

ನೋಂದಣಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲು ಜೂನ್‌ 25 ರಂದು 0120-4888999 ಉಚಿತ ಕರೆ ಸಂಖ್ಯೆಗೆ ಚಾಲನೆ ನೀಡಲಾಗಿತ್ತು.
ಅಬಕಾರಿ, ವ್ಯಾಟ್‌ ಮತ್ತು ಸೇವಾ ತೆರಿಗೆ ಪಾವತಿಸುವ 69 ಲಕ್ಷದಷ್ಟು ಉದ್ಯಮಿಗಳು ಜಿಎಸ್‌ಟಿಎನ್‌ಗೆ ಈ ಮೊದಲೇ ವರ್ಗಾವಣೆಗೊಂಡಿದ್ದರು.  ನಂತರದ ದಿನಗಳಲ್ಲಿ 4.5 ಲಕ್ಷದಷ್ಟು ತೆರಿಗೆದಾರರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಸಾಕಷ್ಟು ಸಂಖ್ಯೆಯ ವರ್ತಕರು ಜಿಎಸ್‌ಟಿಎನ್‌ಗೆ ವರ್ಗಾವಣೆಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಕೊಡುಗೆಗೆ ವಿನಾಯ್ತಿ: ಮಾಲೀಕರು ಉದ್ಯೋಗಿಗಳಿಗೆ ನೀಡುವ  ₹ 50 ಸಾವಿರವರೆಗಿನ ಕೊಡುಗೆಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ. ಉದ್ಯೋಗದಾತರು ತಮ್ಮ  ಸಿಬ್ಬಂದಿಗೆ ನೀಡುವ ಕ್ಲಬ್‌, ಆರೋಗ್ಯ ಮತ್ತು ವ್ಯಾಯಾಮ ಕೇಂದ್ರಗಳ ಸದಸ್ಯತ್ವಕ್ಕೂ ಜಿಎಸ್‌ಟಿ ವಿಧಿಸುವುದಿಲ್ಲ ಎಂದು  ಹಣಕಾಸು ಸಚಿವಾಲಯ ತಿಳಿಸಿದೆ.

ಸೋಪ್‌ ಬೆಲೆ ತಗ್ಗಿಸಿದ ಗೋದ್ರೇಜ್‌

ತೆರಿಗೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು, ಗೋದ್ರೇಜ್‌ ಕನ್‌ಸ್ಯೂಮರ್ ಪ್ರಾಡಕ್ಟ್‌ (ಜಿಸಿಪಿಎಲ್‌),  ತನ್ನ ಸೋಪ್‌ಗಳ ಬೆಲೆಯನ್ನು ಶೇ 6 ರಿಂದ 8ರಷ್ಟು ತಗ್ಗಿಸಿರುವುದಾಗಿ ಪ್ರಕಟಿಸಿದೆ.

ಸಿಂಥಾಲ್‌ ಮತ್ತು ಗೋದ್ರೇಜ್‌ ನಂ 1 ಬ್ರ್ಯಾಂಡ್‌ನ ಸೋಪ್‌ ಬೆಲೆ ತಗ್ಗಿಸಿದೆ. ಕೇಶ ಬಣ್ಣಕ್ಕೆ ಗರಿಷ್ಠ ಮಟ್ಟದ ತೆರಿಗೆ ವಿಧಿಸಿದ್ದರೂ, ಈ ಉತ್ಪನ್ನಗಳ ಬೆಲೆ ಹೆಚ್ಚಿಸುವುದಿಲ್ಲ ಎಂದೂ ಸಂಸ್ಥೆ ತಿಳಿಸಿದೆ.

ಬಾಡಿಗೆ ವರಮಾನಕ್ಕೆ ತೆರಿಗೆ
‘ಮನೆ ಬಾಡಿಗೆಯಿಂದ ಬರುವ ವರಮಾನಕ್ಕೆ ಜಿಎಸ್‌ಟಿಯಿಂದ ವಿನಾಯ್ತಿ ನೀಡಲಾಗಿದೆ.  ಆದರೆ, ವಾಣಿಜ್ಯ ಉದ್ದೇಶಕ್ಕೆ ನೀಡುವ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡುವುದರಿಂದ ಒಂದು ವರ್ಷದಲ್ಲಿ ₹ 20 ಲಕ್ಷದಷ್ಟು ವರಮಾನ   ಪಡೆಯುತ್ತಿದ್ದರೆ ಅದಕ್ಕೆ ಜಿಎಸ್‌ಟಿ ವಿಧಿಸಲಾಗುವುದು’ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.