ADVERTISEMENT

ಜಿಎಸ್‌ಟಿ ದರ ಪರಾಮರ್ಶೆ ಭರವಸೆ

ಅಬಕಾರಿ ಮತ್ತು ಸೀಮಾಸುಂಕ ಕೇಂದ್ರೀಯ ಮಂಡಳಿ ಅಧ್ಯಕ್ಷೆ ಹೇಳಿಕೆ

ಪಿಟಿಐ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ವನಜಾ ಸರ್ನಾ
ವನಜಾ ಸರ್ನಾ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗಳು (ಜಿಎಸ್‌ಟಿ) ಅಸಮರ್ಪಕ ಮತ್ತು  ಸಮರ್ಥನೀಯವಾಗಿರದ್ದರೆ ಮಾತ್ರ ಅವುಗಳನ್ನು  ಪರಾಮರ್ಶಿಸಲಾಗುವುದು ಎಂದು ಆಬಕಾರಿ ಮತ್ತು ಸೀಮಾಸುಂಕ ಕೇಂದ್ರೀಯ ಮಂಡಳಿಯು  (ಸಿಬಿಇಸಿ) ತಿಳಿಸಿದೆ.

‘ತೆರಿಗೆ ದರ ಸರಿಪಡಿಸಬೇಕಾದ ಅನಿವಾರ್ಯತೆ ಎದುರಾಗಿದ್ದರೆ ಮತ್ತು ಯಾವುದಾದರೂ ಸಂಗತಿಯನ್ನು ಕೈಬಿಟ್ಟಿದ್ದರೆ ಮಾತ್ರ ದರಗಳನ್ನು ಪರಿಷ್ಕರಿಸುವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ‘ಸಿಬಿಇಸಿ’ ಅಧ್ಯಕ್ಷೆ ವನಜಾ ಸರ್ನಾ ಹೇಳಿದ್ದಾರೆ.

ಶೇ 5ರಷ್ಟು ತೆರಿಗೆ ರದ್ದುಪಡಿಸಲು ಗುಜರಾತ್‌ನ ಜವಳಿ ವರ್ತಕರು ಪ್ರತಿಭಟನೆ ನಡೆಸಿದ್ದರಿಂದ ವನಜಾ ಅವರು ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಜವಳಿ ವಲಯದ ಮೇಲೆ ಇದೇ ಮೊದಲ ಬಾರಿಗೆ ತೆರಿಗೆ ವಿಧಿಸಲಾಗಿದೆ. ಹೀಗಾಗಿ ತೆರಿಗೆ ವ್ಯಾಪ್ತಿಗೆ ಒಳಪಟ್ಟವರಿಗೆ ಹೊಸ ಹೊರೆಯ ಅನುಭವವಾಗುತ್ತಿದೆ.’ ಎಂದು ಹೇಳಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘ಜಿಎಸ್‌ಟಿ ದರ, ಕಾಯ್ದೆ, ನಿಯಮಗಳಿಗೆ ಸಂಬಂಧಿಸಿದಂತೆ ಉದ್ಯಮ ವಲಯದ ಬೇಡಿಕೆ ಪಟ್ಟಿ ಇನ್ನೂ ಕೊನೆಗೊಂಡಿಲ್ಲ. ಸರಿಪಡಿಸಲೇಬೇಕಾದ ಅನಿವಾರ್ಯತೆ ಇದ್ದರೆ ಮಾತ್ರ ದರಗಳನ್ನು  ಇಳಿಸಬಹುದು. ತೆರಿಗೆ ದರ ನಿಗದಿಪಡಿಸುವಲ್ಲಿ ಇರಬಹುದಾದ ಲೋಪಗಳನ್ನು ಸರಿಪಡಿಸಬಹುದಾಗಿದೆ.

‘ವಿವಿಧ ಸರಕು ಮತ್ತು ಸೇವೆಗಳನ್ನು ನಾಲ್ಕು  ಹಂತದ ತೆರಿಗೆ ದರದ ವ್ಯಾಪ್ತಿಗೆ ತರುವುದು ಐದು ಬಜೆಟ್‌ಗಳನ್ನು ಮಂಡಿಸುವುದಕ್ಕೆ ಸಮನಾದ ಭಾರಿ ಸವಾಲಿನ ಕೆಲಸವಾಗಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ವರ್ತಕರ ಪ್ರತಿಭಟನೆ ಅಂತ್ಯ: ಸೂರತ್‌ನ ಜವಳಿ ವರ್ತಕರು ತಮ್ಮ ಎರಡು ವಾರಗಳ  ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಏ 5ರಷ್ಟು ತೆರಿಗೆ ರದ್ದು ಮಾಡಬೇಕೆಂಬ ಬೇಡಿಕೆ ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದರಿಂದ ವರ್ತಕರು ಪ್ರತಿಭಟನೆ ಕೈಬಿಟ್ಟಿದ್ದಾರೆ.

ಸಮಯಾವಕಾಶ ನೀಡಲು ನಿರ್ಧಾರ
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ತರುವ ಕುರಿತು  ಮೊದಲ 6 ತಿಂಗಳ ಕಾಲ ಅವಸರ ಮಾಡದಿರಲು ರೆವಿನ್ಯೂ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಗೆ ಉದ್ಯಮ ವಲಯವು ಹೊಂದಿಕೊಳ್ಳಲು ಸಮಯಾವಕಾಶ ನೀಡಬೇಕು ಎನ್ನುವುದು ಇಲಾಖೆಯ ನಿಲುವಾಗಿದೆ.
ಆರಂಭದ ದಿನಗಳಲ್ಲಿ ಹೊಸ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಾರದು. ಹೀಗಾಗಿ ಜಿಎಸ್‌ಟಿ ನಿಯಮಗಳ ಪಾಲನೆ ವಿಷಯದಲ್ಲಿ ರೆವಿನ್ಯೂ ಇಲಾಖೆಯು 3 ರಿಂದ 6 ತಿಂಗಳ ಕಾಲ ನಿಧಾನ ಧೋರಣೆ ಅನುಸರಿಸಲಿದೆ.

ಆರಂಭದಲ್ಲಿಯೇ ಕಠಿಣ ಧೋರಣೆ ಅನುಸರಿಸುವ ಉದ್ದೇಶ ಇಲಾಖೆಗೆ ಇಲ್ಲ. ಇನ್‌ಪುಟ್‌ ಕ್ರೆಡಿಟ್‌ ಟ್ಯಾಕ್ಸ್‌ನಿಂದಾಗಿ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.