ADVERTISEMENT

ನಳಂದಾ ವಿಶ್ವವಿದ್ಯಾನಿಲಯ ಪುನರಾರಂಭ

ಸುದ್ದಿ ಹಿನ್ನೆಲೆ...

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2014, 19:30 IST
Last Updated 7 ಸೆಪ್ಟೆಂಬರ್ 2014, 19:30 IST
ನಳಂದಾ ವಿಶ್ವವಿದ್ಯಾನಿಲಯ ಪುನರಾರಂಭ
ನಳಂದಾ ವಿಶ್ವವಿದ್ಯಾನಿಲಯ ಪುನರಾರಂಭ   

ಬಿಹಾರದಲ್ಲಿನ  ಉನ್ನತ ವ್ಯಾಸಂಗದ ಅಂತರರಾಷ್ಟ್ರೀಯ ಖ್ಯಾತಿಯ ನಳಂದಾ ವಿಶ್ವವಿದ್ಯಾನಿಲಯವು 800 ವರ್ಷಗಳ ನಂತರ ಮತ್ತೆ ಪುನರಾರಂಭಗೊಂಡಿದೆ.

ಪಟ್ನಾದಿಂದ  88 ಕಿ ಮೀ ದೂರದಲ್ಲಿದ್ದ ನಳಂದಾ ವಿವಿ, 5ನೇ ಶತ­ಮಾನದಿಂದ 12ನೆ ಶತಮಾನ­ದ­ವರೆಗೆ (ಕ್ರಿ. ಶ 1197) ಅಂತರ­ರಾಷ್ಟ್ರೀಯ ಮಟ್ಟದ ಉನ್ನತ ವ್ಯಾಸಂಗದ   ಕೇಂದ್ರ­ವಾಗಿತ್ತು.  ವಿಶ್ವದ ಮೊಟ್ಟ ಮೊದಲ ಅಂತರರಾಷ್ಟ್ರೀಯ ವಸತಿ ಸೌಲಭ್ಯ ಇರುವ ವಿಶ್ವವಿದ್ಯಾಲಯವೂ ಇದಾ­ಗಿತ್ತು.

ಬೌದ್ಧಧರ್ಮ, ತತ್ವಜ್ಞಾನ ಅಧ್ಯಯ­ನದ ಶ್ರೇಷ್ಠ ಕೇಂದ್ರವಾಗಿರುವುದರ ಜತೆಗೆ ಔಷಧ ಮತ್ತು ಗಣಿತ ಅಧ್ಯಯನಕ್ಕೂ ಹೆಸರಾಗಿತ್ತು. ವಾಸ್ತುಶಿಲ್ಪಕ್ಕೂ ಹೆಸ­ರಾಗಿದ್ದ ವಿವಿಯ ­ಭವ್ಯ ಕಟ್ಟಡದಲ್ಲಿ ಧ್ಯಾನ ಮತ್ತು ಕಲಿಕೆಗೆ ಪ್ರತ್ಯೇಕ ಕೋಣೆಗಳಿದ್ದವು. ಇಲ್ಲಿನ ಗ್ರಂಥಾಲ­ಯವು 9 ಅಂತಸ್ತಿನವರೆಗೆ ವ್ಯಾಪಿಸಿತ್ತು.

ಗುಪ್ತ ರಾಜವಂಶಸ್ಥರು ಕ್ರಿ. ಶ 450 ರಿಂದ 470ರ ಅವಧಿಯಲ್ಲಿ ಈ ವಿವಿ ಸ್ಥಾಪಿಸಿದ್ದರು. ದೊರೆ ಕುಮಾರಗುಪ್ತ  ಮತ್ತು ಆತನ ಉತ್ತರಾಧಿಕಾರಿಗಳೂ ನಂತರದ ವರ್ಷಗಳಲ್ಲಿ ಈ ವಿವಿ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದರು.

ಈ ಪ್ರಾಚೀನ ವಿವಿ ಉತ್ತುಂಗ ಸ್ಥಿತಿ­ಯಲ್ಲಿ ಇದ್ದಾಗ ಇಲ್ಲಿನ ವಿದ್ಯಾರ್ಥಿ­ಗಳ ಸಂಖ್ಯೆ ಗರಿಷ್ಠ 10 ಸಾವಿರ ಮತ್ತು ಬೋಧಕರ ಸಂಖ್ಯೆ ಎರಡು

ಸಾವಿರ­ದಷ್ಟಿತ್ತು ಎನ್ನುವ ಅಂದಾಜಿದೆ.

ವಿದೇಶಿ ಶಿಕ್ಷಣಾರ್ಥಿಗಳು
ವಸತಿ ಸೌಲಭ್ಯದ ಉನ್ನತ ಶಿಕ್ಷಣ ಸಂಸ್ಥೆಯಾಗಿದ್ದರಿಂದ ಚೀನಾ, ಟಿಬೆಟ್, ಗ್ರೀಸ್, ಇರಾನ್ ಮತ್ತಿತರ ದೇಶ­ಗಳಿಂದಲೂ ಶಿಕ್ಷಣಾರ್ಥಿಗಳು ಇಲ್ಲಿಗೆ ಅಧ್ಯಯನಕ್ಕೆ ಬರುತ್ತಿದ್ದರು.

ಚೀನದ ಯಾತ್ರಾರ್ಥಿ ಕ್ಸುಯಾಜಂಗ್‌ ಎಂಬಾತ 7ನೆ ಶತಮಾನದಲ್ಲಿ ಇಲ್ಲಿ 15 ವರ್ಷಗಳ ಕಾಲ ಇಲ್ಲಿದ್ದು ಬೌದ್ಧ ಧರ್ಮದ ಪವಿತ್ರ ಗ್ರಂಥವನ್ನು    ಸಂಸ್ಕೃತ­ದಿಂದ ಚೀನಿ ಭಾಷೆಗೆ ಅನುವಾದಿಸಿದ್ದ.

ಆಕ್ರಮಣ
ಈ ವಿವಿ ಮೇಲೆ ವಿದೇಶಿಯರಿಂದ ಮೂರು ಬಾರಿ ಆಕ್ರಮಣ ನಡೆದಿತ್ತು. ಎರಡು ಬಾರಿ ಪುನರ್‌ ನಿರ್ಮಾಣ ನಡೆದಿತ್ತು. ಭಕ್ತಿ­ಯಾರ್‌ ಖಿಲ್ಜಿ ನೇತೃತ್ವದಲ್ಲಿ ತುರ್ಕರು ನಡೆಸಿದ ಭೀಕರ ದಾಳಿಯಲ್ಲಿ ವಿಶ್ವವಿದ್ಯಾಲ­ಯವು ಸಂಪೂರ್ಣವಾಗಿ ನಾಶಗೊಂಡಿತು. ಖಿಲ್ಜಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಾವಿರಾರು ಬೌದ್ಧ ಬಿಕ್ಕುಗಳನ್ನು ಜೀವಂತ ಸುಡಲಾಯಿತು.

ಅಮಾನುಷ ಸ್ವರೂಪದ ಈ ದಾಳಿಯಿಂದಾಗಿ ವಿವಿ ತನ್ನೆಲ್ಲ ವೈಭವ ಕಳೆ­ದುಕೊಂಡಿತು. ದೇಶದಲ್ಲಿ ಬೌದ್ಧ ಧರ್ಮದ ಅವನ­ತಿಗೂ ಕಾರಣವಾ­ಯಿತು ಎಂದು ವಿದ್ವಾಂಸರು ಅಂದಾ­ಜಿ­­ಸಿದ್ದಾರೆ.

ಪುನರುಜ್ಜೀವನ
2006ರಲ್ಲಿ ರಾಷ್ಟ್ರಪತಿಗಳಾಗಿದ್ದ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಬಿಹಾರ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತ­ನಾಡಿ, ಈ ವಿವಿಯ ಪುನರು­ಜ್ಜೀವನದ ಕನಸುಗಳನ್ನು ಬಿತ್ತಿದ್ದರು. ಇದಕ್ಕೆ ಪೂರಕ­ವಾಗಿ ಕೇಂದ್ರ ಸರ್ಕಾರವು ₨ 2,700 ಕೋಟಿಗಳ ನೆರವು ಘೋಷಿಸಿತ್ತು.

ರಾಜ್‌ಗೀರ್‌ನಲ್ಲಿ ಅಸ್ತಿತ್ವಕ್ಕೆ
ಹೊಸ ವಿವಿ, ಈ ಹಿಂದಿನ ವಿವಿ ಇದ್ದ ಸ್ಥಳದಿಂದ 12 ಕಿ. ಮೀ ದೂರದ ರಾಜ್‌ಗೀರ್‌ ಎಂಬಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ. ಈ ಪ್ರದೇಶ ಬೌದ್ಧ ಧರ್ಮದ ಜನ್ಮ ಸ್ಥಳ ಎಂದೂ ಪರಿಗಣಿಸಲಾಗಿದೆ. ಬುದ್ಧ ಗಯಾ ಹೊರತುಪಡಿಸಿದರೆ ಪ್ರತಿ ವರ್ಷ ಅತಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು   ರಾಜ್‌ಗೀರ್‌ಗೆ ಭೇಟಿ ನೀಡುತ್ತಾರೆ.

ಸಂಪೂರ್ಣ ಸುಸಜ್ಜಿತ ಮತ್ತು ವಸತಿ ಸೌಲಭ್ಯದ ವಿವಿ ನಿರ್ಮಾಣ ಕಾರ್ಯವು 2020ರಷ್ಟೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇಲ್ಲಿ ವಿಜ್ಞಾನ, ತತ್ವಜ್ಞಾನ, ಧಾರ್ಮಿಕತೆ ಮತ್ತು ಸಾಮಾಜಿಕ ವಿಜ್ಞಾನ ವಿಷಯಗಳಲ್ಲಿ ಉನ್ನತ ಅಧ್ಯಯನ ನಡೆಯಲಿದೆ. ವಿವಿಯ ಅಂತರ್ಜಾಲ

ತಾಣದ ವಿಳಾಸ:
http://nalandauniv.edu.in/
ವಿವಾದ: ವಿಶ್ವವಿದ್ಯಾನಿಲಯ ಕಾಯ್ದೆ ಅಂಗೀಕಾ­ರ­ವಾಗುವ ಮುನ್ನವೇ ಕುಲಪತಿ ನೇಮಕ ಮಾಡಲಾಗಿತ್ತು ಎನ್ನುವುದೂ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

2007ರಲ್ಲಿ ನಳಂದಾ ಸಲಹೆಗಾರರ ತಂಡವೊಂದನ್ನು ಅಮರ್ತ್ಯ ಸೇನ್‌ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ಇದನ್ನು ಆನಂತರ ವಿವಿಯ ಆಡಳಿತ ಮಂಡಳಿ ಎಂದು ಪುನರ್‌ ನಾಮಕರಣ ಮಾಡ­ಲಾಗಿದೆ.

ಈ ತಂಡದ ಸದಸ್ಯರ ವೇತನ, ಭತ್ಯೆ, ಖರ್ಚು ವೆಚ್ಚಗಳಿಗೆ ಸಂಬಂಧಿ­ಸಿದಂತೆ ವಿವಾದವೂ ಸೃಷ್ಟಿಯಾಗಿತ್ತು. ವಿವಿಯ ಪುನರಾರಂಭ ಯೋಜನೆಗೆ ಕೈಜೋಡಿಸಲು ಕಲಾಂ ಅವರೂ ಆರಂಭದಲ್ಲಿ ಆಸಕ್ತರಾಗಿದ್ದರು. ಆದರೆ ಆನಂತರ ಅವರೂ ಈ ಯೋಜನೆಯಿಂದ ದೂರ ಸರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT