ADVERTISEMENT

ಪಂಚಾಯಿತಿ ಅಧ್ಯಕ್ಷೆ ಪ್ರೇಮಾಗೆ ಅತ್ಯುತ್ತಮ ನಾಯಕಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 19:34 IST
Last Updated 23 ಏಪ್ರಿಲ್ 2018, 19:34 IST
ಪಂಚಾಯಿತಿ ಅಧ್ಯಕ್ಷೆ ಪ್ರೇಮಾಗೆ ಅತ್ಯುತ್ತಮ ನಾಯಕಿ ಪ್ರಶಸ್ತಿ
ಪಂಚಾಯಿತಿ ಅಧ್ಯಕ್ಷೆ ಪ್ರೇಮಾಗೆ ಅತ್ಯುತ್ತಮ ನಾಯಕಿ ಪ್ರಶಸ್ತಿ   

ನವದೆಹಲಿ: ಗದಗ ಜಿಲ್ಲೆಯ ರಡ್ಡೇರ್ ನಾಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಎಂ. ತಿಮ್ಮನಗೌಡರ್‌ ಅವರು ಸೇರಿ ಮೂವರು ಮಹಿಳೆಯರು ಅತ್ಯುತ್ತಮ ಮಹಿಳಾ ಪಂಚಾಯಿತಿ ನಾಯಕಿ–2018 ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರೇಮಾ ಅವರು 2015ರಲ್ಲಿ ಪಂಚಾಯಿತಿ ಅಧ್ಯಕ್ಷೆಯಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಯುವ ಮಹಿಳೆಯರಿಗೆ, ಅದರಲ್ಲೂ ದುರ್ಬಲ ವರ್ಗದವವರಿಗೆ ಇವರು ಮಾದರಿ ವ್ಯಕ್ತಿ. ನಾಳೆಯ ನಾಯಕರಾಗಲು ಸ್ಫೂರ್ತಿದಾಯಕ ವ್ಯಕ್ತಿತ್ವ ಹೊಂದಿರುವ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸ್ವಚ್ಛ ಭಾರತ ಕಾರ್ಯಕ್ರಮದ ನಾಯಕತ್ವ ವಹಿಸಿದ್ದ ಇವರು, ತಮ್ಮ ಗ್ರಾಮ ಪಂಚಾಯಿತಿಯು ಬಯಲು ಬಹಿರ್ದೆಸೆ ಮುಕ್ತಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ADVERTISEMENT

100 ಸ್ವಸಹಾಯ ಸಂಘಗಳ ರಚನೆ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ಜನರಿಂದ ಹಣ ಸಂಗ್ರಹಿಸುವ ‘ವಿವೇಚನ ನಿಧಿ’ ಸ್ಥಾಪನೆಯಂತಹ ಹಲವು ಕಾರ್ಯಕ್ರಮಗಳನ್ನು ಪ್ರೇಮಾ ಹಮ್ಮಿಕೊಂಡಿದ್ದರು.

ಬಿಹಾರದ ಡಾ. ಮಧು ಉಪಾಧ್ಯ ಹಾಗೂ ಛತ್ತೀಸಗಡದ ಮುಕ್ತಿ ದೇವಿ ಅವರು ಪ್ರಶಸ್ತಿ ಪಡೆದ ಮತ್ತಿಬ್ಬರು. ಪ್ರಶಸ್ತಿಯು ನಗದು ಹಾಗೂ ಫಲಕ ಒಳಗೊಂಡಿದೆ. ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ದೆಹಲಿಯ ಸಮಾಜ ವಿಜ್ಞಾನಗಳ ಸಂಸ್ಥೆಯು (ಐಎಸ್‌ಎಸ್‌) ಈ ಪ್ರಶಸ್ತಿಯನ್ನು ನೀಡಿದೆ.

ಸಂಸ್ಥೆಯ 25ನೇ ವರ್ಷಾಚರಣೆ ಹಾಗೂ ಮಹಿಳಾ ಸಬಲೀಕರಣ ದಿನಾಚರಣೆ ಅಂಗವಾಗಿ ಪ್ರಶಸ್ತಿ ನೀಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಾರ್ಜ್ ಮ್ಯಾಥ್ಯೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.