ADVERTISEMENT

ಪಿಎಫ್‌ ನೋಂದಣಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ವಿಜಯಕುಮಾರ್ ಅವರು ಸಹಾಯವಾಣಿ ಉದ್ಘಾಟಿಸಿದರು. ಮನೀಷ್‌ ಅಗ್ನಿಹೋತ್ರಿ ಇದ್ದಾರೆ –ಪ್ರಜಾವಾಣಿ ಚಿತ್ರ
ವಿಜಯಕುಮಾರ್ ಅವರು ಸಹಾಯವಾಣಿ ಉದ್ಘಾಟಿಸಿದರು. ಮನೀಷ್‌ ಅಗ್ನಿಹೋತ್ರಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ) ಉದ್ಯೋಗಿಗಳ ನೋಂದಣಿ ಅಭಿಯಾನ ಆರಂಭಿಸಿದೆ. ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ  ವಿಚಾರಸಂಕಿರಣದಲ್ಲಿ ಹೆಚ್ಚುವರಿ ಕೇಂದ್ರೀಯ ಭವಿಷ್ಯನಿಧಿ ಆಯುಕ್ತ ವಿಜಯಕುಮಾರ್‌ ಈ ವಿಷಯ ತಿಳಿಸಿದರು. ಅಭಿಯಾನ ಮಾರ್ಚ್‌ 31ರ ವರೆಗೆ ನಡೆಯಲಿದೆ.

‘2009ರ ಏಪ್ರಿಲ್‌ 1ರಿಂದ 2016ರ ಡಿಸೆಂಬರ್‌ ನಡುವಣ ಅವಧಿಯಲ್ಲಿ ಭವಿಷ್ಯನಿಧಿ ಸದಸ್ಯತ್ವ ಪಡೆಯದ ನೌಕರರನ್ನು ಈಗ ಪಿಎಫ್‌ ವ್ಯಾಪ್ತಿಗೆ ಒಳಪಡಿಸಬಹುದು.ಅಂತರರಾಷ್ಟ್ರೀಯ ನೌಕರರನ್ನು ಸೇರಿಸಲು ಅವಕಾಶ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ನೋಂದಣಿ ವೇಳೆ ಉದ್ಯೋಗದಾತರು ಯಾವುದೇ ರೀತಿಯ ಆಡಳಿತಾತ್ಮಕ ವೆಚ್ಚ ಭರಿಸುವ ಅಗತ್ಯ ಇಲ್ಲ. ಉದ್ಯೋಗದಾತರು ಘೋಷಿಸಿದ ಕಾರ್ಮಿಕರಿಗಾಗಿ ಪ್ರತಿವರ್ಷಕ್ಕೆ ₹1 ರಂತೆ ದಂಡ ಕಟ್ಟಬೇಕಾಗುತ್ತದೆ. ಭವಿಷ್ಯನಿಧಿ ವಂತಿಗೆಯ ಕಾರ್ಮಿಕರ ಪಾಲನ್ನು ಅವರ ಸಂಬಳದಲ್ಲಿ ಕಡಿತ ಮಾಡದೆ ಇದ್ದಲ್ಲಿ ಅದನ್ನು ಕಟ್ಟಬೇಕಾಗಿಲ್ಲ. ತಮ್ಮ ಪಾಲನ್ನು  (ಮೂಲ ವೇತನದ ಶೇ 12) ಮಾತ್ರ ಉದ್ಯೋಗದಾತರು ಕಟ್ಟಿದರೆ ಸಾಕು’ ಎಂದು ಅವರು ಹೇಳಿದರು.

‘ಸಂಘಟನೆ ನೀಡಿರುವ ನಿರ್ದಿಷ್ಟ ನಮೂನೆಯಲ್ಲಿಯೇ ಉದ್ಯೋಗದಾತರು ಘೋಷಣೆ ಸಲ್ಲಿಸಬೇಕು. ಈಗಿರುವ ಹಾಗೂ ಜೀವಂತವಾಗಿರುವ ನೌಕರರಿಗೆ ಮಾತ್ರ ಈ ಘೋಷಣೆ ಅನ್ವಯವಾಗುತ್ತದೆ’ ಎಂದು ಅವರು ತಿಳಿಸಿದರು.

‘ನೌಕರರ ಠೇವಣಿಗೆ ಸಂಪರ್ಕಿಸಿದ ‘ಇಡಿಎಲ್‌ಐ’ ವಿಮಾ ಯೋಜನೆ ಅಡಿ ಚಂದಾದಾರರ ವಿಮೆ ರಕ್ಷಣೆಯನ್ನು ₹3.6 ಲಕ್ಷದಿಂದ ₹6 ಲಕ್ಷಕ್ಕೆ ಏರಿಸಲಾಗಿದೆ. 10 ವರ್ಷ ಸೇವೆ ಸಲ್ಲಿಸಿದವರು ಪಿಂಚಣಿ ಪಡೆಯಲು ಅರ್ಹರು. ಕನಿಷ್ಠ ಪಿಂಚಣಿ ಮೊತ್ತವನ್ನು ₹1 ಸಾವಿರಕ್ಕೆ ಹೆಚ್ಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಜನರು ಉದ್ಯೋಗ ಬದಲಾಯಿಸಿದಾಗ ಭವಿಷ್ಯನಿಧಿ ಖಾತೆಯನ್ನು ವರ್ಗಾಯಿಸುವ ಸಮಸ್ಯೆಯನ್ನೂ ಯುಎಎನ್‌ ವ್ಯವಸ್ಥೆ ನಿವಾರಿಸಿದೆ. ಇನ್ನು ಮುಂದೆ ಖಾತೆ ವರ್ಗಾಯಿಸಲು ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ’ ಎಂದು ಅವರು ಹೇಳಿದರು.

ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಮನೀಷ್‌ ಅಗ್ನಿಹೋತ್ರಿ ಮಾತನಾಡಿ, ‘ಭವಿಷ್ಯನಿಧಿ ಸಾಮಾಜಿಕ ಭದ್ರತಾ ಯೋಜನೆ. ಇದನ್ನು ಬೇರೆ ಯೋಜನೆಗಳಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಭವಿಷ್ಯನಿಧಿ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

***
ಭವಿಷ್ಯನಿಧಿ ಸಂಘಟನೆ ತಾಂತ್ರಿಕವಾಗಿ ಪ್ರಗತಿ ಸಾಧಿಸಲು ಉದ್ಯೋಗದಾತ ಕಂಪೆನಿಗಳು, ಉದ್ಯೋಗಿಗಳು ಹಾಗೂ ಪಿಂಚಣಿದಾರರು ಸಹಕಾರ ನೀಡಬೇಕು.
–ವಿಜಯ ಕುಮಾರ್‌
ಹೆಚ್ಚುವರಿ ಕೇಂದ್ರೀಯ ಭವಿಷ್ಯನಿಧಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.