ADVERTISEMENT

ಪ್ರತಿ ದಿನ ಸರಾಸರಿ ನೂರು ಕೋಟಿ ಗಂಟೆ ಯುಟ್ಯೂಬ್‌ ವಿಡಿಯೊ ವೀಕ್ಷಣೆ

ಏಜೆನ್ಸೀಸ್
Published 28 ಫೆಬ್ರುವರಿ 2017, 16:22 IST
Last Updated 28 ಫೆಬ್ರುವರಿ 2017, 16:22 IST
ಪ್ರತಿ ದಿನ ಸರಾಸರಿ ನೂರು ಕೋಟಿ ಗಂಟೆ ಯುಟ್ಯೂಬ್‌ ವಿಡಿಯೊ ವೀಕ್ಷಣೆ
ಪ್ರತಿ ದಿನ ಸರಾಸರಿ ನೂರು ಕೋಟಿ ಗಂಟೆ ಯುಟ್ಯೂಬ್‌ ವಿಡಿಯೊ ವೀಕ್ಷಣೆ   
ಸ್ಯಾನ್‌ಫ್ರಾನ್ಸಿಸ್ಕೋ: ‘ಗೂಗಲ್‌ ಒಡೆತನದ ಆನ್‌ಲೈನ್‌ ವಿಡಿಯೊ ವೀಕ್ಷಣೆ ತಾಣ ಯುಟ್ಯೂಬ್‌ನಲ್ಲಿ ಪ್ರತಿ ನಿತ್ಯ ನೂರು ಕೋಟಿ ಗಂಟೆಗಳ ಕಾಲ ವಿಡಿಯೊ ವೀಕ್ಷಣೆಯಾಗುತ್ತಿದೆ. ಇದು ಸಂಸ್ಥೆಯ ದೊಡ್ಡ ಮೈಲುಗಲ್ಲು’ ಎಂದು ಯುಟ್ಯೂಬ್‌ ಹೇಳಿಕೊಂಡಿದೆ.
 
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಯುಟ್ಯೂಬ್‌ನ ಇಂಜಿನಿಯರಿಂಗ್‌ ವಿಭಾಗದ ಉಪಾಧ್ಯಕ್ಷ ಕ್ರಿಸ್ಟೋಸ್‌ ಗೋದ್ರೋವ್‌ ಮಾಹಿತಿ ಬಿತ್ತರಿಸಿದ್ದು, ‘ನೀವು ಈಗ ಕುಳಿತು ಅಷ್ಟು ಸಮಯ ಯುಟ್ಯೂಬ್‌ ವಿಡಿಯೋ ವೀಕ್ಷಿಸಲು ಶುರುಮಾಡಿದರೆ, ನಿಮಗೆ 1ಲಕ್ಷ ವರ್ಷಗಳ ಸಮಯ ಬೇಕಾಗುತ್ತದೆ’ ಎಂದು ಅವರು ಹೇಳಿಕೊಂಡಿದ್ದಾರೆ.
 
ಟೀವಿ ಮೂಲಕ ವಿಡಿಯೊ ನೋಡುವವರು ಜಾಹೀರಾತುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಆ ಕಾರಣದಿಂದ ಗೂಗಲ್‌, ಫೇಸ್‌ಬುಕ್‌, ಟ್ವಿಟರ್‌ ಹಾಗೂ ಮತ್ತಿತರೆ ಸಾಮಾಜಿಕ ಜಾಲ ತಾಣಗಳು ನೋಡುಗರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿವೆ ಎನ್ನಲಾಗಿದೆ. 
 
ಯುಟ್ಯೂಬ್‌ ಕಳೆದ ಫೆಬ್ರುವರಿಯಲ್ಲಿ ಮೊಬೈಲ್‌ ಮೂಲಕ ವಿಡಿಯೊ ವೀಕ್ಷಣೆಯಲ್ಲಿ ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡುವ ಮೂಲಕ ಫೇಸ್‌ಬುಕ್‌ ಹಾಗೂ ಟ್ವಿಟರ್‌ನೊಂದಿಗೆ ವಿಡಿಯೊ ನೇರ ಪ್ರಸಾರದಲ್ಲಿ ಅನೌಪಚಾರಿಕ ಸ್ಪರ್ಧೆಗೆ ಇಳಿದಿತ್ತು.
 
ಕಳೆದ ಆರು ವರ್ಷಗಳಿಂದ ಯುಟ್ಯೂಬ್‌ನಲ್ಲಿ ವಿಡಿಯೋ ನೇರ ಪ್ರಸಾಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯ ಚರ್ಚಾ ಕೂಟಗಳನ್ನೂ ನೇರ ಪ್ರಸಾರ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣಗಳಾಗಿ ಮಂಚೂಣಿಯಲ್ಲಿರುವ ಫೇಸ್‌ಬುಕ್‌ ಹಾಗೂ ಟ್ವಿಟರ್‌ಗಳು ಈಗಾಗಲೆ ಈ ಅವಕಾಶಗಳನ್ನು ಒದಗಿಸಿವೆ.
 
ಗೂಗಲ್‌ನ ಅಂಗ ಸಂಸ್ಥೆ ಆಲ್ಪಬೆಟ್‌ ಜನವರಿಯಲ್ಲಿ, 2016ರ ಕೊನೆಯ ಮೂರು ತಿಂಗಳಲ್ಲಿ ಯುಟ್ಯೂಬ್‌ ಮೊಬೈಲ್‌ ಮೂಲಕ ಅಂತರ್ಜಾಲದಲ್ಲಿ ಹುಡುಕಾಟ, ವಿಡಿಯೊ ವೀಕ್ಷಣೆ ಹಾಗೂ ಹಂಚಿಕೆಯಿಂದ ಗಳಿಸಿದ ಆದಾಯದ ಕುರಿತು ವರದಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.