ADVERTISEMENT

ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 15 ಆಗಸ್ಟ್ 2017, 19:30 IST
Last Updated 15 ಆಗಸ್ಟ್ 2017, 19:30 IST
ಪ್ರಶ್ನೋತ್ತರ
ಪ್ರಶ್ನೋತ್ತರ   

–ಗಂಗಾಧರ, ಸಾಗರ

ಗೃಹ ಸಾಲದ ಕಂತು ಹಾಗೂ ಬಡ್ಡಿಗೆ, ಆದಾಯ ತೆರಿಗೆ ವಿನಾಯ್ತಿ ಇದೆ. ಅದೇ ರೀತಿ ಬೇರೆ ಸಾಲಗಳ ಕಂತು ಬಡ್ಡಿಗೆ ವಿನಾಯತಿ ಇಲ್ಲ. ಸರ್ಕಾರ ಎಲ್ಲಾ ಸಾಲಗಳಿಗೂ ಒಂದೇ ರೀತಿಯ ಕಾನೂನು ಏಕೆ ವಿಧಿಸಿಲ್ಲ. ಎಲ್‌.ಐ.ಸಿ. ತುಂಬಿದರೆ, ಆದಾಯ ತೆರಿಗೆ ವಿನಾಯತಿ ಇದೆ. ಅದೇ ಆರ್‌.ಡಿ. ತುಂಬಿದರೆ ವಿನಾಯ್ತಿ ಇಲ್ಲ. ನಮ್ಮ ಹಣ ಬ್ಯಾಂಕ್‌ ಅಥವಾ ಸರ್ಕಾರ ಉಪಯೋಗಿಸುವುದಿಲ್ಲವೇ? ದೊಡ್ಡ ಮೊತ್ತದ ಆರ್‌.ಡಿ. ಕಟ್ಟುವವರಿಗೆ ಅನ್ಯಾಯವಾಗುತ್ತದೆ. ನಿಮ್ಮ ಸಲಹೆ ಸೂಚನೆ ಹಾಗೂ ಸಮರ್ಪಕ ಉತ್ತರಕ್ಕಾಗಿ ಕಾಯುತ್ತಿದ್ದೇನೆ.

ಉತ್ತರ: ಗೃಹ ಸಾಲ, ಆದ್ಯತಾ ರಂಗದ ಸಾಲದೊಳಗೆ ಬರುತ್ತದೆ. ಮನುಷ್ಯನಿಗೆ ಉಳಿಯಲು ಸೂರು ಅಗತ್ಯ. ಈ ಕಾರಣದಿಂದ ಇಲ್ಲಿ ಕಟ್ಟುವ ಕಂತು (ಸೆಕ್ಷನ್‌ 80ಸಿ) ಹಾಗೂ ತುಂಬುವ ಬಡ್ಡಿ (ಸೆಕ್ಷನ್‌ 24ಬಿ) ಆದಾಯ ತೆರಿಗೆಯ ವಿನಾಯ್ತಿಯಲ್ಲಿ ಬರುತ್ತದೆ. ಉಳಿದ ಸಾಲಗಳು ಮನುಷ್ಯನ ಇತರೆ ವ್ಯವಸ್ಥೆಗಳಿಗೆ ಮಾತ್ರ ಅಗತ್ಯವಿದ್ದು, ಇವುಗಳನ್ನು ಆದ್ಯತಾರಂಗದೊಳಗೆ ತರಲು ಸಾಧ್ಯವಿಲ್ಲ ಎನ್ನುವುದು ಸರ್ಕಾರದ ಅಂಬೋಣ.

ADVERTISEMENT

ಎಲ್‌.ಐ.ಸಿ. ಒಂದು ಜೀವವಿಮೆ, ವ್ಯಕ್ತಿ ಅಕಾಲಿಕ ಮರಣ ಹೊಂದಿದಾಗ ವಿಮಾ ಸಂಪೂರ್ಣ ಮೊತ್ತ ವಿಮಾ ಕಂಪೆನಿ ವಿಮೆ ಇಳಿಸಿದ ವ್ಯಕ್ತಿಯ ನಾಮ ನಿರ್ದೇಶಕರಿಗೆ ಕೊಡುತ್ತದೆ. ಈ ಕಾರಣದಿಂದಾಗಿ ಇಲ್ಲಿ ಕಟ್ಟುವ ಹಣ (ಸೆಕ್ಷನ್‌ 80ಸಿ)ಕ್ಕೆ ಆದಾಯ ತೆರಿಗೆ ವಿನಾಯ್ತಿ ಇದೆ.

ಇದೇ ವೇಳೆ ಆರ್‌.ಡಿ. ಕಟ್ಟುವ ವ್ಯಕ್ತಿ ಅಕಾಲ ಮರಣಕ್ಕೀಡಾದರೆ, ಕಟ್ಟಿದಷ್ಟು ಹಣ ಮಾತ್ರ, ನಾಮನಿರ್ದೇಶನ ಹೊಂದಿದವರಿಗೆ ಕೊಡುತ್ತಾರೆ. ಕಳೆದೆರಡು ವರ್ಷಗಳಿಂದ ಸೆಕ್ಷನ್‌ 194ಎ ತಿದ್ದುಪಡಿ ಮಾಡಿ, ಬ್ಯಾಂಕ್‌ ಹಾಗೂ ಅಂಚೆ ಕಚೇರಿ ಆರ್‌.ಡಿ.ಯಿಂದ ಬರುವ ಬಡ್ಡಿಗೆ ವಿನಾಯ್ತಿ ತೆಗೆದು ಹಾಕಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ಭಾರತದ ಪ್ರಜೆಗಳಾದ ನಾವು ಸರ್ಕಾರದ ಆದೇಶ ಪಾಲಿಸುವುದು ನಮ್ಮ ಧರ್ಮ.

**

ವಿನೋದ್‌. ಎನ್‌., ಧಾರವಾಡ

ನನ್ನ ವಯಸ್ಸು 72. ನಿವೃತ್ತ ಉಪನ್ಯಾಸಕ. ತಿಂಗಳ ಪಿಂಚಣಿ ₹ 27,000. ಕುಟುಂಬ: ಹೆಂಡತಿ (58) ಇಬ್ಬರು ಹೆಣ್ಣು ಮಕ್ಕಳು. ಒಬ್ಬ ಗಂಡು ಮಗ. ನಾನು ಶ್ರೀರಾಮ್‌ ಫೈನಾನ್ಸ್‌ನಲ್ಲಿ ₹ 15 ಲಕ್ಷ, ಎಸ್‌.ಬಿ.ಐ.ನಲ್ಲಿ ₹ 17.7 ಲಕ್ಷ ಎಫ್‌.ಡಿ. ಮಾಡಿದ್ದೇನೆ ಹಾಗೂ ವಾರ್ಷಿಕ 15ಎಚ್‌ ನಮೂನೆ ಫಾರಂ ಸಲ್ಲಿಸುತ್ತಿದ್ದೇನೆ. ₹ 2 ಲಕ್ಷದಂತೆ ಎರಡು (one time investment) ಶ್ರೀರಾಮ್‌ ಜೀವವಿಮೆ ಮಾಡಿದ್ದೇನೆ. ನನಗೆ ಪಿತ್ರಾರ್ಜಿತ 30 ಎಕರೆ ಜಮೀನು ಹಾಗೂ ಒಂದು ಮನೆ ಇದೆ. ನನಗೆ ತೆರಿಗೆ ಬರುತ್ತಿದೆಯೇ?

ಉತ್ತರ: ನೀವು ಹಿರಿಯ ನಾಗರಿಕರಾದ್ದರಿಂದ ನಿಮ್ಮ ಒಟ್ಟು ಆದಾಯ ಪಿಂಚಣಿ ಹಣ ಹಾಗೂ ಬ್ಯಾಂಕ್‌ ಬಡ್ಡಿ ಸೇರಿ ವಾರ್ಷಿಕವಾಗಿ ₹ 3 ಲಕ್ಷ ದಾಟಿದಲ್ಲಿ ಮಾತ್ರ, ಹೆಚ್ಚಿನ ಆದಾಯಕ್ಕೆ ತೆರಿಗೆ ಸಲ್ಲಿಸಬೇಕಾಗುತ್ತದೆ. ಕೃಷಿ ಆದಾಯ ಎಷ್ಟಿದ್ದರೂ ಅದು ಸೆಕ್ಷನ್‌ 10(1) ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ  ಹೊಂದಿದೆ.

ನಿಮ್ಮ ವಾರ್ಷಿಕ ಪಿಂಚಣಿ ಆದಾಯ ₹ 3.24 ಲಕ್ಷ. ನೀವು ಠೇವಣಿ ಮೇಲಿನ ಬಡ್ಡಿ ದರ ತಿಳಿಸಿಲ್ಲ. ನಿಮ್ಮ ಒಟ್ಟು ಠೇವಣಿ ಹಣ ₹ 32.70 ಲಕ್ಷ. ಈ ಮೊತ್ತಕ್ಕೆ ವಾರ್ಷಿಕ ಬರುವ ಬಡ್ಡಿ, ಪಿಂಚಣಿ ಹಣ ಸೇರಿಸಿ, ಅದರಲ್ಲಿ ₹ 3 ಲಕ್ಷ ಕಳೆದು ಉಳಿದ ಹಣಕ್ಕೆ ತೆರಿಗೆ ಕೊಡಬೇಕಾಗುತ್ತದೆ, ಜೊತೆಗೆ ತೆರಿಗೆ ರಿಟರ್ನ್‌ ತುಂಬಬೇಕು.  ತೆರಿಗೆ ರಿಟರ್ನ್‌ ಸಲ್ಲಿಸಿರಿ. ನೀವು ಹತ್ತಿರದ ಚಾರ್ಟರ್ಡ್‌ ಅಕೌಂಟೆಂಟ್‌ ಭೇಟಿಯಾಗಿ ಎಲ್ಲವನ್ನೂ ಸರಿಪಡಿಸಿ, ನಿಶ್ಚಿಂತೆಯಿಂದ ಇರಿ.

**

ಈಶ್ವರ ಆಚಾರಿ, ಮೈಸೂರು

ನಾನು ಸರ್ಕಾರಿ ನೌಕರ. ಈ ಆರ್ಥಿಕ ವರ್ಷದಲ್ಲಿ ನಾನು ಕಟ್ಟಿರುವ ಆದಾಯ ತೆರಿಗೆ ₹ 1000. ನಾವು ಸರ್ಕಾರಿ ನೌಕರರಾಗಿದ್ದು ಫಾರಂ ನಂ. 16ಎ ನಮ್ಮ ಡಿಡಿಒಗೆ ಕಳಿಸುತ್ತೇವೆ. ಟ್ರೆಜರಿಯಲ್ಲಿ ತೆರಿಗೆ ಮುರಿಯುತ್ತಾರೆ (ಟಿಡಿಎಸ್‌) ಮುಂದೇನು ಮಾಡಬೇಕು, ಪ್ಯಾನ್‌ ಕಾರ್ಡು ಉಪಯೋಗಿಸಿ, ಇದುವರೆಗೆ ಮುರಿದ ತೆರಿಗೆ ತಿಳಿಯಲು ಬರುವುದೇ?

ಉತ್ತರ: ನಿಮ್ಮ ಪ್ರಶ್ನೆಯಲ್ಲಿ ನಿಮ್ಮ ವಾರ್ಷಿಕ ಆದಾಯದ ವಿಚಾರ ತಿಳಿಸಿಲ್ಲ. ಉದ್ಯೋಗದಾತರು, ನೌಕರರ ಸಂಬಳದಲ್ಲಿ ಮುರಿಯಬೇಕಾದ ತೆರಿಗೆ ಮುರಿದು ಸರ್ಕಾರಕ್ಕೆ ರವಾನಿಸುವುದು ಅವರ ಕರ್ತವ್ಯ. ಪ್ಯಾನ್‌ ಕಾರ್ಡಿನಿಂದ (TDS-TRACES (TDS Reconciliation Analysis and Correction enabling Systion) ಮುರಿದಿರುವ ತೆರಿಗೆ ತಿಳಿಯಲು ಬರುತ್ತದೆ. ನಿಮಗೆ ಕಷ್ಟವಾದೀತು. ಚಾರ್ಟರ್ಡ್‌ ಅಕೌಂಟೆಂಟ್‌  ಅವರನ್ನು ವಿಚಾರಿಸಿರಿ.  ತೆರಿಗೆ ರಿಟರ್ನ್‌ ತುಂಬಿರಿ. ನೀವು ಕಟ್ಟಿರುವ ತೆರಿಗೆ ಕಡಿಮೆ ಆದಲ್ಲಿ ಅಡಿಟರ್‌ ನಿಮಗೆ ಹಣಕಟ್ಟಲು ಸಹಾಯ ಮಾಡುತ್ತಾರೆ.

ಚಂದ್ರಮೋಹನ್‌, ವಿಜಯಪುರ

ನಾನು ಹಾಗೂ ನನ್ನ ಹೆಂಡತಿ ಕೇಂದ್ರ ಸರ್ಕಾರದ ನೌಕರರು. ನಾನು ಎಸ್‌.ಬಿ.ಐ.ನಿಂದ ₹ 40 ಲಕ್ಷ ಗೃಹಸಾಲ ಪಡೆದಿದ್ದೆ. ತಿಂಗಳ ಸಮಾನ ಕಂತನ್ನು, ನನ್ನ ಉಳಿತಾಯ ಖಾತೆಯಿಂದ ಪಡೆಯಲು ಬ್ಯಾಂಕಿಗೆ ಸ್ಟ್ಯಾಂಡಿಂಗ್‌ ಇನ್ಸ್‌ಟ್ರಕ್ಷನ್‌ ಕೊಟ್ಟಿದ್ದೆ. ಈ ಕಂತು ತುಂಬುವ ಸಲುವಾಗಿ ನನ್ನ ಹೆಂಡತಿ ಪ್ರತೀ ತಿಂಗಳೂ ₹ 20,000 ನನ್ನ ಉಳಿತಾಯ ಖಾತೆಗೆ ಜಮಾ ಮಾಡುತ್ತಾಳೆ. ಇದರಿಂದ ಮುಂದೆ ನನಗೆ ಏನಾದರೂ ತೊಂದರೆ ಇದೆಯೇ?

ಉತ್ತರ: ಈ ವ್ಯವಹಾರದಲ್ಲಿ ಮುಂದೆ ತೊಂದರೆ ಬರುವ ಸಾಧ್ಯತೆಯೇ ಇಲ್ಲ. ಉದ್ದೇಶ ಸರಿ ಇದ್ದು, ತುಂಬಿದ ಹಣ ನೇರವಾಗಿ ಗೃಹ ಸಾಲದ ಇಎಂಐಗೆ ಪಾವತಿಯಾಗುವುದಕ್ಕೆ ರೆಕಾರ್ಡ್‌ ಇದ್ದೇ ಇರುತ್ತದೆ. ಇದು ಬೇಡವಾದಲ್ಲಿ, ನಿಮ್ಮ ಹೆಂಡತಿ ಖಾತೆಯಿಂದ ನಿಮ್ಮ ಸಾಲಕ್ಕೆ ನೇರವಾಗಿ ಜಮಾ ಮಾಡಲು, ಅವರು ಬ್ಯಾಂಕಿಗೆ ಸ್ಟ್ಯಾಂಡಿಂಗ್‌ ಇನ್ಸ್‌ಟ್ರಕ್ಷನ್‌ ಕೂಡಾ ಕೊಡಬಹುದು. ಉದಾಹರಣೆಗೆ, ಇಎಂಐ ₹ 40,000 ಇರುವಲ್ಲಿ, ನೀವು ₹ 20,000, ನಿಮ್ಮ ಹೆಂಡತಿ ₹ 20,000 ಬೇರೆ ಬೇರೆಯಾಗಿ, ಸ್ಟ್ಯಾಂಡಿಂಗ್‌ ಇನ್ಸ್‌ಟ್ರಕ್ಷನ್‌ ಕೊಟ್ಟು, ತಿಂಗಳ ಕಂತು ಭರಿಸಬಹುದು.

**

ತೇಜಸ್‌, ಬೆಂಗಳೂರು

ನನ್ನ ಸಂಬಳ ₹35,000. ತೆರಿಗೆ ಉಳಿಸಲು ಬೇರೆ ಬೇರೆ ಮಾರ್ಗ ಯಾವುದು?

ಉತ್ತರ: ಸೆಕ್ಷನ್‌ 80ಸಿ ಅಡಿಯಲ್ಲಿ ವಾರ್ಷಿಕವಾಗಿ ₹ 1.50 ಲಕ್ಷ ಉಳಿಸಿರಿ. ಹೀಗೆ ಉಳಿಸುವಾಗ ಪಿಪಿಎಫ್‌ ₹ 75,000, ಎಲ್‌ಐಸಿ ₹ 30,000 ಬ್ಯಾಂಕ್‌ ಎಫ್‌ಡಿ ₹ 45,000 (5 ವರ್ಷಗಳ ಅವಧಿಗೆ) ಇದೇ ವೇಳೆ ಸೆಕ್ಷನ್‌ 80 ಸಿಸಿಡಿ(1ಬಿ) ಆಧಾರದ ಮೇಲೆ ₹ 50,000, ವಾರ್ಷಿಕವಾಗಿ ಉಳಿಸಿ, ₹ 1.50 ಲಕ್ಷದ ಜೊತೆಗೆ ಈ ಮೊತ್ತ ಸೇರಿಸಿ ಒಟ್ಟಿನಲ್ಲಿ ₹ 2 ಲಕ್ಷಗಳ ತನಕ, ವಾರ್ಷಿಕ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಈ ಎರಡು ಯೋಜನೆಗಳು ಹೊರತುಪಡಿಸಿ, ಬೇರೆ ಲಾಭದಾಯಕ ತೆರಿಗೆ ಉಳಿಸುವ ಪ್ಲ್ಯಾನ್‌ ಇರುವುದಿಲ್ಲ. ನಿಮ್ಮ ಸಂಬಳವೇ ₹ 35000 ಇದ್ದು, ಕಡಿತ ಮನೆ ಖರ್ಚು ಹೋಗಿ ಬಹಳ ಹಣ ಉಳಿಯುವುದಿಲ್ಲ. ನೀವು ಗೃಹಸಾಲ ಪಡೆದರೆ, ಬಡ್ಡಿಯಲ್ಲಿ ಸೆಕ್ಷನ್‌ 24(ಬಿ) ಆಧಾರದ ಮೇಲೆ ವಿನಾಯ್ತಿ ಪಡೆಯಬಹುದಾದರೂ, ನಿಮ್ಮ ಆದಾಯಕ್ಕೆ ಗೃಹಸಾಲ ಪಡೆಯುವುದು ಸೂಕ್ತವಲ್ಲ.

**

ಹೆಸರು ಬೇಡ, ಉತ್ತರ ಕನ್ನಡ ಜಿಲ್ಲೆ

ನಾನು NKDCC ಬ್ಯಾಂಕಿನಲ್ಲಿ ಎರಡು ವರ್ಷಗಳಿಂದ ಕ್ಲಾರ್ಕ್ ಆಗಿ ಕೆಲಸ ಮಾಡುತ್ತಿದ್ದೇನೆ. ಸಂಬಳ ₹ 23,000, EPF-LIC  ಸೇರಿ ಕಡಿತದ ನಂತರ ₹ 19,000 ಕೈಗೆ ಸಿಗುತ್ತದೆ. ಮನೆ ಖರ್ಚು ₹ 5,000 ಕಡಿತದ ನಂತರ ₹ 7,000 ಆರ್.ಡಿ. ಹಾಗೂ ನನ್ನ ಹೆಸರಿನಲ್ಲಿ ₹ 1,200 ಆರ್.ಡಿ. ನನ್ನ ಉಳಿತಾಯದ ವಿಚಾರ–ತೆರಿಗೆ ವಿಚಾರ– ದಯಮಾಡಿ ತಿಳಿಸಿರಿ. ನಾನು ಕಾರು ಕೊಳ್ಳಬೇಕೆಂದಿದ್ದೇನೆ ನಿಮ್ಮ ಅಭಿಪ್ರಾಯ ಏನು?

ಉತ್ತರ: NKDCC ಬ್ಯಾಂಕ್ ಉತ್ತರ ಕನ್ನಡದ ಪ್ರತಿಷ್ಠಿತ ಜಿಲ್ಲಾ ಸಹಕಾರಿ ಬ್ಯಾಂಕ್. ನೀವು ಇಲ್ಲಿ ಕೆಲಸಕ್ಕೆ ಸೇರಿರುವುದು ನಿಜವಾಗಿ ಸಂತಸ ತಂದಿದೆ. ನೀವು  ಅವಿವಾಹಿತರೆಂದು ಭಾವಿಸುವೆ. ಇಂದು ನೀವು ಗುಮಾಸ್ತರಾಗಿದ್ದರೂ, ಮುಂದೊಂದು ದಿವಸ ಬಹು ಉನ್ನತ ಮಟ್ಟಕ್ಕೆ ನೀವು ಏರಬಹುದು. ಇದು ನಿಮ್ಮ ಗುರಿಯಾಗಿರಿಸಿ, Indian Institution Of Banking & Finance Mumbai,  ಇವರು ನಡೆಸುವ C.A.I.I.B. ಎನ್ನುವ ಬ್ಯಾಂಕಿಂಗ್ ಪರೀಕ್ಷೆಗೆ ಕುಳಿತು ಆದಷ್ಟು ಬೇಗ ಮುಗಿಸಿರಿ. ಇದರಲ್ಲಿ ಎರಡು ಭಾಗಗಳಿದ್ದು (Part 1&2). ಈ ಎರಡೂ ಪರೀಕ್ಷೆ ಪಾಸಾದಲ್ಲಿ, ಅಲ್ಲಿಯೇ ಮೇಲಿನ ಹುದ್ದೆಗೆ ತಕ್ಷಣ ಹೋಗಬಹುದು ಹಾಗೂ SBI ಹಾಗೂ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳಲ್ಲಿಯೂ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಲು ಅವಕಾಶವಿದೆ. ನೀವು ಅನುಸರಿಸಿದ ಉಳಿತಾಯದ ಯೋಜನೆ ಚೆನ್ನಾಗಿದ್ದು ಅವುಗಳನ್ನು ಮುಂದುವರಿಸಿರಿ. ತೆರಿಗೆ ಉಳಿಸಲು PPF ಖಾತೆ ಮಾಡಿರಿ. ಪ್ರಾಯಶಃ ನಿಮಗೆ ಪಿಂಚಣಿ ಇರಲಾರದು.NPS ನಲ್ಲಿ ಎಷ್ಟಾದರಷ್ಟು ತೊಡಗಿಸಿರಿ. ಸದ್ಯ ಕಾರು ಕೊಳ್ಳುವ ವಿಚಾರ ಮುಂದೂಡಿರಿ.

**

ಸೋಮಶೇಖರ, ಊರು ಬೇಡ

ನಾನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕ. ನನ್ನ ಸಂಬಳ ₹ 57,000, ಎಲ್ಲಾ ಕಡಿತದ ನಂತರ ₹  46,000 ಬರುತ್ತದೆ. ವಾರ್ಷಿಕ ಆದಾಯ ತೆರಿಗೆ ₹ 28,000. ನಾನು ಹೇಗೆ ಉಳಿತಾಯ ಮಾಡಲಿ ಹಾಗೂ ತೆರಿಗೆ ಉಳಿಸಲಿ?

ಉತ್ತರ: ಸಂಬಳದಲ್ಲಿ ಕಡಿತವನ್ನು ಪ್ರಶ್ನೆಯಲ್ಲಿ ನೀವು ವಿವರಿಸಿಲ್ಲ. ಆದಾಯ ತೆರಿಗೆ ಉಳಿಸಲು ಸೆಕ್ಷನ್ 80C  ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಉಳಿಸಬಹುದಾದ್ದರಿಂದ PPF, LIC, PF, ಬ್ಯಾಂಕ್ 5 ವರ್ಷಗಳ ಠೇವಣಿಯಲ್ಲಿ ಹಣ ಉಳಿಸಿರಿ. ಇದೇ ವೇಳೆ ಸೆಕ್ಷನ್ 80 CCD (IB) ಆಧಾರದ ಮೇಲೆ ಎನ್.ಪಿ.ಎಸ್. ಯೋಜನೆಯಲ್ಲಿ ವಾರ್ಷಿಕವಾಗಿ ಗರಿಷ್ಠ ₹ 50,000 ಉಳಿಸಿರಿ.

ಇದರಿಂದ ತೆರಿಗೆ ಉಳಿಸುವುದರ ಜೊತೆಗೆ, ನಿವೃತ್ತಿಯಲ್ಲಿ ಪಿಂಚಣಿ ಕೂಡಾ ಪಡೆದಂತಾಗುತ್ತದೆ. ನಿವೇಶನ ಕೊಳ್ಳಲು ಸಾಧ್ಯವಾದರೆ, ಸಾಲ ಮಾಡಿಯಾದರೂ ಆದಷ್ಟು ಬೇಗ ಕೊಳ್ಳಿರಿ. ಸಾಲಕ್ಕೆ ಮಾಸಿಕ ಕಂತು ಕಟ್ಟ ಬೇಕಾದ್ದರಿಂದ, ಬೇಡವಾದ ಖರ್ಚಿಗೆ ಕಡಿವಾಣವಾಗುತ್ತದೆ. ಜೊತೆಗೆ ಉತ್ತಮ ಹೂಡಿಕೆಯಾಗುತ್ತದೆ. ಇದು ಸಾಧ್ಯವಾಗದಿರುವಲ್ಲಿ 5 ವರ್ಷಗಳ ಅವಧಿಗೆ ₹ 10,000 ಆರ್.ಡಿ. ಮಾಡಿರಿ.

**

ವಿರೇಶ.ಕೆ., ಹುಬ್ಬಳ್ಳಿ

ನಾನು ಸರ್ಕಾರಿ ನೌಕರ. ನಾನು ಅಟಲ್ ಪೆನ್ಷನ್ ಯೋಜನೆಗೆ ಹಣ ತೊಡಗಿಸಲು ಅರ್ಹನೇ? ಹಾಗೂ ಆದಾಯ ತೆರಿಗೆ ವಿನಾಯಿತಿ ಈ ಯೋಜನೆಗೆ ಒಳಪಡುವುದೇ?

ಉತ್ತರ: ಹಾಲಿ ಚಾಲ್ತಿಯಲ್ಲಿರುವ ಪಿ.ಎಫ್. ಪಿಂಚಣಿ ಯೋಜನೆಯಲ್ಲಿನ ಇ.ಪಿ.ಎಫ್.– ಪಿ.ಪಿ.ಎಫ್. ಹಾಗೂ ಸರ್ಕಾರಿ ಪಿಂಚಣಿ ಯೋಜನೆಯ ಸದಸ್ಯರು ಸಹ ಎ.ಪಿ.ವೈ. ಯೋಜನೆಗೆ ಸೇರಬಹುದು. ಆದಾಯ ತೆರಿಗೆ ಪಾವತಿದಾರರಾಗಿದ್ದರೂ ಸಹ ಈ ಯೋಜನೆಗೆ ಸೇರಬಹುದು. ಒಟ್ಟಿನಲ್ಲಿ ಸರ್ಕಾರಿ ನೌಕರರಾಗಲಿ ಇತರ ಯಾವ ವ್ಯಕ್ತಿಗಳಾದರೂ 18–40 ವಯೋಮಿತಿಯೊಳಗೆ ಈ ಯೋಜನೆಗೆ ಸೇರಬಹುದು. ಮಾಸಿಕ ₹ 1,000–5,000 ವರೆಗೆ ನಿಮ್ಮ ಪಿಂಚಣಿ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳಬಹುದು.

ನಿಮ್ಮ ವಯಸ್ಸು ಹಾಗೂ ನೀವು ಆಯ್ಕೆ ಮಾಡುವ ಪಿಂಚಣಿ ಪ್ಲ್ಯಾನ್‌ ಆಧರಿಸಿ ನೀವು ಭರಿಸ ಬೇಕಾದ ಮಾಸಿಕ ಕಂತು ನಿಗದಿಯಾಗುತ್ತದೆ. ಸೆಕ್ಷನ್ 80C, 80CCC,  ಹಾಗೂ CCD ಆಧಾರದ ಮೇಲೆ ಗರಿಷ್ಠ ₹ 1.50 ಉಳಿಸಿ ತೆರಿಗೆ ವಿನಾಯ್ತಿ ಪಡೆಯಬಹುದು. ಅದೇ ರೀತಿ ಎ.ಪಿ.ವೈ.ಯಲ್ಲಿ ಈ ಮೊತ್ತದೊಳಗೆ ತೆರಿಗೆ ವಿನಾಯಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.