ADVERTISEMENT

ಬಡ್ಡಿದರ ಕಡಿತ ಅನುಮಾನ

ಬ್ಯಾಂಕ್‌ ಆಫ್‌ ಅಮೆರಿಕ-ಮೆರಿಲ್‌ ಲಿಂಚ್‌ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ನವದೆಹಲಿ (ಪಿಟಿಐ): ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ಆಗಸ್ಟ್‌ 4ರಂದು ನಡೆಯುವ ಮೂರನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ. ಆದರೆ 2016 ವರ್ಷಾರಂಭಕ್ಕೂ ಮುನ್ನವೇ ಬಡ್ಡಿ ದರದಲ್ಲಿ ಕಡಿತ ಮಾಡಲಿದೆ ಎಂದು ಬ್ಯಾಂಕ್  ಆಫ್‌ ಅಮೆರಿಕ-ಮೆರಿಲ್‌ ಲಿಂಚ್‌ (ಬಿಒಎಫ್‌–ಎಂಎಲ್‌) ಭವಿಷ್ಯ ನುಡಿದಿದೆ.

ಕಡಿಮೆ ಮಳೆಯಾಗಿರುವುದರಿಂದ ಹಣದುಬ್ಬರದ ಆತಂಕ ಎದುರಾಗಿದೆ. ಹೀಗಾಗಿ ಆರ್‌ಬಿಐನಿಂದ ಬ್ಯಾಂಕುಗಳಿಗೆ ನೀಡಲಾಗುವ ಸಾಲದ ಬಡ್ಡಿದರವನ್ನು (ರೆಪೊ) ತಗ್ಗಿಸುವ ಸಾಧ್ಯತೆ ಕಡಿಮೆ ಇದೆ ಎಂದು ಬಿಒಎಫ್‌–ಎಂಎಲ್‌ ಸೋಮವಾರ ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ.

ತಕ್ಕಮಟ್ಟಿಗೆ ಮಳೆ ಸುರಿಯುತ್ತಿದ್ದರೂ ಸಹ ಎಣ್ಣೆಕಾಳು, ದ್ವಿದಳ ಧಾನ್ಯ ಮತ್ತು ಹತ್ತಿ ಬೆಳೆಯುವ ಪಶ್ಚಿಮ ಮತ್ತು ದಕ್ಷಿಣ ಭಾರತದ ಪ್ರಮುಖ ಪ್ರದೇಶಗಳಲ್ಲಿ ಬರಗಾಲ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಎರಡು ವಾರಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಬೆಳೆದು ನಿಂತಿರುವ ಫಸಲಿಗೂ ಹಾನಿಯಾಗುತ್ತದೆ ಎಂದು ವರದಿ ಅಂದಾಜು ಮಾಡಿದೆ.

ಆಹಾರ ಪದಾರ್ಥಗಳು, ಇಂಧನ, ಬಟ್ಟೆ, ಪಾದರಕ್ಷೆ ತುಟ್ಟಿಯಾಗಿರುವುದರಿಂದ ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ 8 ತಿಂಗಳ ಗರಿಷ್ಠ ಮಟ್ಟವಾದ ಶೇ 5.4ಕ್ಕೆ ಏರಿಕೆಯಾಗಿದೆ. ಚಿಲ್ಲರೆ ಹಣದುಬ್ಬರ ಆಧರಿಸಿಯೇ ಬಡ್ಡಿದರ ನಿರ್ಧರಿಸುವ ಆರ್‌ಬಿಐ, ಆಗಸ್ಟ್‌ 4ರಂದು ಬಡ್ಡಿದರ ತಗ್ಗಿಸುವುದು ಅನುಮಾನ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ಡಿಬಿಎಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.