ADVERTISEMENT

ಬ್ಯಾಂಕ್‌ ಸಿಬ್ಬಂದಿ ವೇತನ ಏರಿಕೆಗೆ ಸಹಿ

​ಪ್ರಜಾವಾಣಿ ವಾರ್ತೆ
Published 25 ಮೇ 2015, 19:30 IST
Last Updated 25 ಮೇ 2015, 19:30 IST

ಮುಂಬೈ: ಬ್ಯಾಂಕ್‌ ಕಾರ್ಮಿಕ ಸಂಘಟನೆ ಗಳ ಬಹುದಿನದ ಬೇಡಿಕೆಯಾದ ವೇತನ ಏರಿಕೆಗೆ ಕೊನೆಗೂ ಭಾರತೀಯ ಬ್ಯಾಂಕು ಗಳ ಒಕ್ಕೂಟ (ಐಬಿಎ) ಹಸಿರು ನಿಶಾನೆ ತೋರಿದೆ.  ಇದರಿಂದ  2012ರ ನವೆಂಬರ್‌ 1ರಿಂದಲೇ ಪೂರ್ವಾನ್ವಯ ವಾಗುವಂತೆ ಬ್ಯಾಂಕ್‌ ನೌಕರರ ವೇತನ ದಲ್ಲಿ ಶೇ 15ರಷ್ಟು ಹೆಚ್ಚಳವಾಗಿದೆ. ಈ ಪರಿಷ್ಕರಣೆಯು ಮುಂದಿನ 5 ವರ್ಷಗಳ ಕಾಲ ಜಾರಿಯಲ್ಲಿರಲಿದೆ. ಸರ್ಕಾರಿ ಸ್ವಾಮ್ಯದ, ಖಾಸಗಿ ವಲಯದ ಮತ್ತು ವಿದೇಶಿ ಬ್ಯಾಂಕುಗಳು ಸೇರಿ ದೇಶದಲ್ಲಿನ ಒಟ್ಟು 43 ಬ್ಯಾಂಕುಗಳ 10 ಲಕ್ಷದಷ್ಟು ಸಿಬ್ಬಂದಿ ವೇತನ ಪರಿಷ್ಕ ರಣೆಯ ಪ್ರಯೋಜನ ಪಡೆಯಲಿದ್ದಾರೆ. 

ಬ್ಯಾಂಕ್‌ ನೌಕರರ ಕುಟುಂಬ ವರ್ಗದವರಿಗಾಗಿ ವೈದ್ಯಕೀಯ ವಿಮಾ ಯೋಜನೆಯನ್ನೂ ಪರಿಚಯಿಸಲಾಗಿದೆ. ವೇತನ ಪರಿಷ್ಕರಣೆಯಿಂದ ಬ್ಯಾಂಕು ಗಳಿಗೆ ವಾರ್ಷಿಕ ₨4,725 ಕೋಟಿಯಷ್ಟು ಹೆಚ್ಚುವರಿ ಹೊರೆ ಬೀಳಲಿದೆ.ಅಧಿಕಾರಿಗಳ ವಿಶೇಷ ಭತ್ಯೆಯನ್ನು ಮೂಲವೇತನದ ಶೇ 7.75ರಿಂದ ಶೇ 11ಕ್ಕೆ ಹೆಚ್ಚಿಸಲಾಗಿದೆ. ಅಟೆಂಡರ್‌ಗಳಿಗೆ  ಮೂಲವೇತನದ ಶೇ 7.75ರಷ್ಟು ವಿಶೇಷ ಭತ್ಯೆಯನ್ನೂ ನಿಗದಿಪಡಿಸಲಾಗಿದೆ.

ಬ್ಯಾಂಕ್‌ ಸಿಬ್ಬಂದಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜಾ ನೀಡುವ ಕುರಿತು ಕೇಂದ್ರ ಸರ್ಕಾರದ ಒಪ್ಪಿಗೆ ಕೇಳಲಾಗಿದೆ. ಶೀಘ್ರವೇ ಒಪ್ಪಿಗೆ ಪಡೆಯುವ ವಿಶ್ವಾಸವಿದ್ದು, ಮೂರರಿಂದ ನಾಲ್ಕು ವಾರಗಳ ಒಳಗಾಗಿ ಜಾರಿಗೆ ತರಲಿದ್ದೇವೆ ಎಂದು ಭಾರತೀಯ ಬ್ಯಾಂಕುಗಳ ಒಕ್ಕೂಟದ (ಐಬಿಎ) ಅಧ್ಯಕ್ಷ ಟಿ.ಎಂ. ಬಾಸಿನ್‌ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ನಡೆಯುತ್ತಿತ್ತು. ಆದರೆ, 2007ರಲ್ಲಿ ವೇತನ ಪರಿಷ್ಕರಣೆ ಗೊಂಡಿದ್ದೇ ಕೊನೆಯ ಬಾರಿಯಾಗಿತ್ತು. ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಬ್ಯಾಂಕ್‌ ನೌಕರರು ದೇಶದಾದ್ಯಂತ ಸರಣಿ ಪ್ರತಿಭಟನೆ, ಮುಷ್ಕರ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.