ADVERTISEMENT

ಮನೆ ಬಾಡಿಗೆ ಪಾವತಿ ನಕಲಿ ರಸೀದಿಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ಮನೆ ಬಾಡಿಗೆ ಪಾವತಿ ನಕಲಿ ರಸೀದಿಗೆ ಕಡಿವಾಣ
ಮನೆ ಬಾಡಿಗೆ ಪಾವತಿ ನಕಲಿ ರಸೀದಿಗೆ ಕಡಿವಾಣ   
ಆದಾಯ ತೆರಿಗೆಯ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಮನೆ ಬಾಡಿಗೆ ಪಾವತಿಯ ನಕಲಿ ರಸೀದಿಗಳನ್ನು ನೀಡುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.

ಆದರೆ, ಆದಾಯ ತೆರಿಗೆ ಇಲಾಖೆ ಈಗ ನಿಯಮಗಳನ್ನು ಬಿಗಿಗೊಳಿಸಿದ್ದು, ಮನೆ ಬಾಡಿಗೆ ಪಾವತಿಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಮನೆ ಮಾಲೀಕರೊಂದಿಗೆ ಮಾಡಿಕೊಂಡಿರುವ ಒಪ್ಪಂದ, ಬಾಡಿಗೆ ಪಾವತಿ ಮಾಡಿರುವುದಕ್ಕೆ ಆಧಾರವಾಗಿ ಬ್ಯಾಂಕ್ ವಹಿವಾಟಿನ ಪ್ರತಿ ಇತ್ಯಾದಿಗಳನ್ನು ಸಲ್ಲಿಸಬೇಕು.
 
ಆದಾಯ ತೆರಿಗೆ ಇಲಾಖೆಯು ಈಗ ನಿಯಮಗಳನ್ನು ಬಿಗಿಗೊಳಿಸಿದ್ದು, ನಕಲಿ ರಸೀದಿಗಳನ್ನು ನೀಡಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವುದು ಇನ್ನು ಮುಂದೆ ಕಷ್ಟವಾಗಲಿದೆ. ಖಾಸಗಿ ವಲಯದ ಬಹುತೇಕ ನೌಕರರು ಮನೆ ಬಾಡಿಗೆ ಭತ್ಯೆಯನ್ನು ಪಡೆಯುತ್ತಿದ್ದು, ಉದ್ಯೋಗಿಯು ಕಾರ್ಯನಿರ್ವಹಿಸುತ್ತಿರುವ ಸ್ಥಳವನ್ನು ಆಧರಿಸಿ ಭತ್ಯೆ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ.
 
ಸಾಮಾನ್ಯವಾಗಿ ವೆಚ್ಚವನ್ನು ಸರಿದೂಗಿಸಿಕೊಂಡು ಹೋಗಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುತ್ತದೆ. ಮನೆಯನ್ನು ಬಾಡಿಗೆಗೆ ಪಡೆದಿರಬೇಕು, ಅದರಲ್ಲಿ ವಾಸ ಇರಬೇಕು ಎಂಬುದು ಸೇರಿದಂತೆ ಆದಾಯ ತೆರಿಗೆ ಕಾಯ್ದೆ ಪ್ರಕಾರ ಕೆಲವೊಂದು ಷರತ್ತುಗಳನ್ನು ಪೂರೈಸಿದರೆ ಮನೆ ಬಾಡಿಗೆ ಭತ್ಯೆಗೆ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆಯಬಹುದು. ನೀವು ವಾಸ ಇರುವ ಮನೆ ಸ್ವಂತದ್ದಾಗಿದ್ದರೆ, ನಿಜವಾಗಿಯೂ ಬಾಡಿಗೆಯನ್ನು ಪಾವತಿಸದೆ ಇದ್ದರೆ ವಿನಾಯಿತಿ ಸೌಲಭ್ಯ ಸಿಗುವುದಿಲ್ಲ. 
 
 ಇನ್ನು ಮನೆ ನಿರ್ಮಾಣಕ್ಕಾಗಿ ವಸತಿ ಸಾಲ ಪಡೆದಿದ್ದರೆ, ವಾರ್ಷಿಕ ಎರಡು ಲಕ್ಷ ರೂಪಾಯಿವರೆಗಿನ ಬಡ್ಡಿ ಪಾವತಿಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಸಿಗಲಿದೆ. ಈ ರೀತಿ ಸಾಲ ಪಡೆದು ನಿರ್ಮಾಣ ಮಾಡಿದ ಮನೆಯಲ್ಲಿ ಸ್ವತಃ ನೀವು ವಾಸ ಇದ್ದರೆ ಮಾತ್ರ ವಿನಾಯಿತಿಗೆ ಅರ್ಹರು ಎಂಬುದನ್ನು ಮರೆಯುವಂತಿಲ್ಲ.
 
ತೆರಿಗೆಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ತೆರಿಗೆಯನ್ನು ಉಳಿಸಬೇಕು ಎಂಬ ಉದ್ದೇಶದಿಂದ ಉದ್ಯೋಗಿಗಳು ಮನೆ ಬಾಡಿಗೆ ಪಾವತಿಯ ಸೌಲಭ್ಯದಡಿ ವಿನಾಯಿತಿ ಪಡೆಯಲು ಮುಂದಾಗುತ್ತಾರೆ. ಆದರೆ, ತಾವು ಇದಕ್ಕೆ ಅರ್ಹರೇ ಎಂಬುದನ್ನು ಬಹುತೇಕ ಸಂದರ್ಭಗಳಲ್ಲಿ ಅವರು ಯೋಚಿಸುವುದಿಲ್ಲ.
 
ತೆರಿಗೆ ಪಾವತಿಯಿಂದ ಪಾರಾಗಬೇಕು ಎಂಬ ಉದ್ದೇಶದಿಂದ ಬಾಡಿಗೆ ನೀಡದೆ ಇರುವವರು ಕೂಡ, ಮನೆ ಬಾಡಿಗೆ ಭತ್ಯೆಯ ಸೌಲಭ್ಯ ಪಡೆಯಲು ಮುಂದಾಗುತ್ತಿದ್ದು, ಇದಕ್ಕಾಗಿ ನಕಲಿ ರಸೀದಿಗಳನ್ನು ನೀಡುತ್ತಿರುವುದು ಕಂಡುಬಂದಿದೆ.
 
ಸ್ವಂತ ಮನೆ ಅಥವಾ ಹತ್ತಿರದ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿರುವವರು ಕೂಡ ಇದಕ್ಕೆ ಹೊರತಾಗಿಲ್ಲ. ಇಂತಹವರು ವಾಸ್ತವವಾಗಿ ಬಾಡಿಗೆ ನೀಡದೆ ಇದ್ದರೂ, ಮನೆ ಸಾಲದ ಮೇಲಿನ ಬಡ್ಡಿ ಮತ್ತು ತೆರಿಗೆ ಪಾವತಿಯಿಂದ ವಿನಾಯಿತಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ.
 
ಆದರೆ, ಇನ್ನು ಮುಂದೆ ಇದಕ್ಕೆ ಅವಕಾಶ ಇರುವುದಿಲ್ಲ. ಸ್ವಂತ ಅಥವಾ ಸಂಬಂಧಿಕರ ಮನೆಯಲ್ಲಿದ್ದು, ಬಾಡಿಗೆ ನೀಡದೆ ಇದ್ದರೂ ಎಚ್ಆರ್ಎ ಸೌಲಭ್ಯದಡಿ ತೆರಿಗೆ ವಿನಾಯಿತಿ ಪಡೆಯುವುದಕ್ಕೆ ಕಡಿವಾಣ ಹಾಕಲಾಗಿದೆ. ನೀವು ನೀಡಿರುವ ದಾಖಲೆ ನಕಲಿ ಎಂಬುದು ಗೊತ್ತಾದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. 
 
ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಉದ್ದೇಶದಿಂದ ಅವರೊಂದಿಗೆ ವಾಸ ಮಾಡುತ್ತಿದ್ದೇನೆ. ಇದು ಅವರ ಸ್ವಂತ ಮನೆಯಾಗಿದ್ದು, ಪ್ರತಿ ತಿಂಗಳು ಬಾಡಿಗೆ ಕಟ್ಟುತ್ತಿದ್ದೇನೆ. ಹೀಗಾಗಿ ಎಚ್ಆರ್ಎ ಸೌಲಭ್ಯದಡಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಬೇಕು ಎಂಬುದು ಚಾರ್ಟಡ್ ಅಕೌಂಟೆಂಟ್ ಅವರ ಅವರ ವಾದವಾಗಿತ್ತು.
 
ಆದರೆ, ತೆರಿಗೆ ಪಾವತಿಸುತ್ತಿರುವುದಕ್ಕೆ ಅವರ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಮನೆಯನ್ನು ಬಾಡಿಗೆಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಕರಾರು ಪತ್ರವೂ ಇರಲಿಲ್ಲ.  ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ) ಮುಂಬೈ ಪೀಠದ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಿತ್ತು. 
 
ಈ ವಿಷಯದಲ್ಲಿ ವಾಸ್ತವಾಂಶವನ್ನು ನೋಡಿದಾಗ ಆಕೆ ಮತ್ತು ಆಕೆಯ ಪತಿ ಹೆಸರಿನಲ್ಲಿ ಸ್ವಂತ ಮನೆ ಇದ್ದು, ಅದರಲ್ಲಿಯೇ ವಾಸ ಮಾಡುತ್ತಿದ್ದಾರೆ. ಅಲ್ಲಿಂದ ಐದು ನಿಮಿಷದಲ್ಲಿ ಹೋಗಿ ಬರಬಹುದಾದ ಅಂತರದಲ್ಲಿ ಅವರ ತಾಯಿಯ ಮನೆ ಇದೆ.
 
ಈ ಪ್ರಕರಣವನ್ನು ಗಂಭೀರವಾಗಿ ವಿಚಾರಣೆಗೆ ಒಳಪಡಿಸಿದಾಗ ತಾಯಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ಇದ್ದೇನೆ ಎಂಬುದನ್ನು ಸಾಬೀತುಪಡಿಸಲು ಚಾರ್ಟಡ್‌ ಅಕೌಂಟೆಂಟ್ ವಿಫಲವಾದರು. ಅಲ್ಲದೆ ಬಾಡಿಗೆ ಪಾವತಿಸಿರುವುದಕ್ಕೆ ಹಾಗೂ ಬ್ಯಾಂಕಿನಿಂದ ಹಣ ಡ್ರಾ ಮಾಡಿರುವುದಕ್ಕೆ ಯವುದೇ ದಾಖಲೆಗಳು ಇರಲಿಲ್ಲ. 
 
ದಾಖಲೆ ಸಲ್ಲಿಕೆ
ಈ ಪ್ರಕರಣದ ಹಿನ್ನೆಲೆಯಲ್ಲಿ ಮನೆ ಬಾಡಿಗೆ ಪಾವತಿಯ ನಕಲಿ ಬಿಲ್‌ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ನಿಯಮಗಳನ್ನು ಬಿಗಿಗೊಳಿಸಿದ್ದು, ಎಚ್ಆರ್ಎ ಸೌಲಭ್ಯದಡಿ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆಯಬೇಕಾದರೆ ನಿಗದಿತ ನಮೂನೆಯಲ್ಲಿ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. 
 
ಮನೆ ಮಾಲೀಕರೊಂದಿಗೆ ಮಾಡಿಕೊಂಡಿರುವ ಕರಾರು ಪತ್ರ, ಬಾಡಿಗೆ ಪಾವತಿಗೆ ದಾಖಲೆ (ಚೆಕ್ ಪಾವತಿ ಅಥವಾ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿರುವುದಕ್ಕೆ ಸಂಬಂಧಿಸಿದ ವಹಿವಾಟಿನ ಹಾಳೆ) ನೀಡಬೇಕಾಗುತ್ತದೆ.
 
ಒಂದು ವೇಳೆ ನೀವು ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಬಾಡಿಗೆ ಪಾವತಿ ಮಾಡುತ್ತಿದ್ದರೆ, ಆದಾಯ ತೆರಿಗೆ ಪಾವತಿಯ ರಿರ್ಟನ್ಸ್ ಸಲ್ಲಿಕೆ ಸಂದರ್ಭದಲ್ಲಿ ಸಂಬಂಧಿಕರು ಆ ಮಾಹಿತಿಯನ್ನು ನೀಡಬೇಕಾಗುತ್ತದೆ. ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಬದಲಾವಣೆಗಳನ್ನು ಮಾಡಿದ್ದು, ಎಚ್ಆರ್ಎ ಸೌಲಭ್ಯದಡಿ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆಯಲು ಬಯಸುವ ಉದ್ಯೋಗಿಗಳಿಗೆ ಇದರಿಂದ ಯಾವುದೇ ತೊಂದರೆ ಆಗಲಾರದು. 
ಚೇತನ್ ಸಿ.
 (ಎಚ್‌ಆ್ಯಂಡ್‌ಆರ್‌ ಬ್ಲಾಕ್‌ ಇಂಡಿಯಾದ ತೆರಿಗೆ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.