ADVERTISEMENT

ರೂಪಾಯಿ ಚೇತರಿಕೆ, ಸೂಚ್ಯಂಕ ಇಳಿಕೆ

ಪಿಟಿಐ
Published 27 ಮಾರ್ಚ್ 2017, 20:05 IST
Last Updated 27 ಮಾರ್ಚ್ 2017, 20:05 IST
ರೂಪಾಯಿ ಚೇತರಿಕೆ, ಸೂಚ್ಯಂಕ ಇಳಿಕೆ
ರೂಪಾಯಿ ಚೇತರಿಕೆ, ಸೂಚ್ಯಂಕ ಇಳಿಕೆ   

ಮುಂಬೈ : ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ  ರೂಪಾಯಿ ಒಂದೂವರೆ ವರ್ಷದ ಹಿಂದಿನ ಗರಿಷ್ಠ ಮಟ್ಟಕ್ಕೆ ಚೇತರಿಕೆ ಕಂಡರೆ, ಷೇರುಪೇಟೆಗಳ ವಹಿವಾಟು ಕುಸಿತ ಕಂಡ ವಿದ್ಯಮಾನ ಸೋಮವಾರ ನಡೆಯಿತು.

ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಷೇರುಪೇಟೆಗಳಲ್ಲಿ  ನಕಾರಾತ್ಮಕ ವಹಿವಾಟು ನಡೆಯಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 184 ಅಂಶ ಇಳಿಕೆ ಕಂಡು, 29,237 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 63 ಅಂಶ ಇಳಿಕೆಯಾಗಿ 9,25 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ರಿಲಯನ್ಸ್‌ಗೆ ನಷ್ಟ:ವಾಯಿದಾ ವಹಿವಾಟಿಗೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ರಿಲಯನ್ಸ್‌ ಇಂಡಸ್ಟ್ರೀಸ್‌ಗೆ  ಒಂದು ವರ್ಷದ ನಿಷೇಧ ಹೇರಿದೆ. ಇದರಿಂದ ಕಂಪೆನಿ ಷೇರುಗಳು  ನಷ್ಟ ಅನುಭವಿಸುವಂತಾಗಿದೆ.

ADVERTISEMENT

ದಿನದ ವಹಿವಾಟಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಷೇರುಗಳು ಶೇ 3 ರಷ್ಟು ಕುಸಿತ ಕಂಡಿವೆ.
ಪರಿಣಾಮ ಮಾರುಕಟ್ಟೆ ಮೌಲ್ಯದಲ್ಲಿ ₹12,488 ಕೋಟಿಗಳಷ್ಟು ನಷ್ಟವಾಗಿದ್ದು, ಒಟ್ಟು ಮಾರುಕಟ್ಟೆ ಮೌಲ್ಯ ₹4.04 ಲಕ್ಷ ಕೋಟಿಗಳಿಗೆ ಇಳಿಕೆ ಕಂಡಿದೆ.
ರೂಪಾಯಿ 17 ತಿಂಗಳ ಗರಿಷ್ಠ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಒಂದೂವರೆ ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ದಿನದ ವಹಿವಾಟಿನಲ್ಲಿ 37 ಪೈಸೆಗಳಷ್ಟು ಹೆಚ್ಚಾಗಿ, ಒಂದು ಡಾಲರ್‌ಗೆ ₹65.04 ರಂತೆ ವಿನಿಮಯಗೊಂಡಿತು. ಈ ವರ್ಷದಲ್ಲಿ ಎರಡನೇ ಗರಿಷ್ಠ ಮಟ್ಟದ ಏರಿಕೆ ಇದಾಗಿದೆ. 2015ರ ಅಕ್ಟೋಬರ್‌ 28 ರಂದು ಒಂದು ಡಾಲರ್‌ಗೆ ₹64.93 ರಕ್ಕೆ ತಲುಪಿತ್ತು.

ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ವರ್ತಕರು ಮತ್ತು ರಫ್ತುದಾರರು ಭಾರಿ ಪ್ರಮಾಣದಲ್ಲಿ ಡಾಲರ್ ಮಾರಾಟ ಮಾಡಿದರು.
ಈ ಕಾರಣಗಳಿಂದ ಬೇರೆ ಕರೆನ್ಸಿಗಳ ಎದುರು ಡಾಲರ್‌ ದರ್ಬಲವಾಗಿ ರೂಪಾಯಿ ಮೌಲ್ಯ ಹೆಚ್ಚಾಯಿತು ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.