ADVERTISEMENT

ಲಾಭ ಗಳಿಕೆಗೆ ಕುಸಿದ ಷೇರುಪೇಟೆ

ಪಿಟಿಐ
Published 23 ಸೆಪ್ಟೆಂಬರ್ 2017, 19:30 IST
Last Updated 23 ಸೆಪ್ಟೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ದೇಶದ ಷೇರುಪೇಟೆಗಳಲ್ಲಿ ಈ ವಾರ ಪೂರ್ತಿ, ಲಾಭ ಗಳಿಕೆ ವಹಿವಾಟು ನಡೆಯಿತು. ಇದರಿಂದ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 350 ಅಂಶ ಇಳಿಕೆ ಕಂಡು 9 ತಿಂಗಳ ಕನಿಷ್ಠ ಮಟ್ಟವಾದ 31,922 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ. ಹಿಂದಿನ ವಾರದ ವಹಿವಾಟಿನಲ್ಲಿ ಸೂಚ್ಯಂಕ 585 ಅಂಶ ಏರಿಕೆ ಕಂಡುಕೊಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 10 ಸಾವಿರಕ್ಕಿಂತ ಕೆಳಕ್ಕೆ ಇಳಿದಿದೆ. ಐದು ದಿನಗಳ ವಹಿವಾಟಿನಲ್ಲಿ ಒಟ್ಟು 121 ಅಂಶ ಇಳಿಕೆ ಕಂಡು, 9,964 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ವಾರದ ವಹಿವಾಟಿನಲ್ಲಿ 10,178 ಅಂಶಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು.

ADVERTISEMENT

ಹಲವು ಸಂಗತಿಗಳ ಪರಿಣಾಮ: ಅಮೆರಿಕ ಮತ್ತು ಉತ್ತರ ಕೊರಿಯಾ ಮಧ್ಯೆ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದೆ. ಉತ್ತರ ಕೊರಿಯಾ ಮತ್ತೊಂದು ಜಲಜನಕ ಬಾಂಬ್‌ ಪರೀಕ್ಷೆ ನಡೆಸಲು ಮುಂದಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಷೇರುಪೇಟೆಗಳಲ್ಲಿ ಲಾಭ ಗಳಿಕೆಯ ವಹಿವಾಟು ನಡೆಯುವಂತೆ ಮಾಡಿವೆ.

ಇನ್ನು ಅಮೆರಿಕದ ಫೆಡರಲ್‌ ರಿಸರ್ವ್‌ ಈ ಬಾರಿ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಬಡ್ಡಿದರ ಏರಿಕೆ ಆದರೆ, ಹೂಡಿಕೆದಾರರಿಗೆ ಬಂಡವಾಳ ಲಭ್ಯತೆ ಪ್ರಮಾಣ ತಗ್ಗಲಿದೆ. ಇದರಿಂದ ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ವಿದೇಶಿ ಹೂಡಿಕೆಯಲ್ಲಿ ಇಳಿಕೆಯಾಗಲಿದೆ. ಈ ಆತಂಕವೂ ಷೇರುಪೇಟೆಗಳ‌ಲ್ಲಿ ಮಾರಾಟದ ಒತ್ತಡ ಹೆಚ್ಚಾಗಲು ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ₹4,838 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಅಂತೆಯೇ ಎಚ್‌ಡಿಎಫ್‌ಸಿ ಶೇ 4.54, ಸಿಪ್ಲಾ ಶೇ 3.96, ವಿಪ್ರೊ ಶೇ 2.90, ಟಾಟಾ ಮೋಟಾರ್ಸ್ ಶೇ 2.48 ಮತ್ತು ಕೋಟಕ್ ಬ್ಯಾಂಕ್‌‌ ಷೇರುಗಳು  ಶೇ 1.57 ರಷ್ಟು ಏರಿಕೆ ದಾಖಲಿಸಿವೆ.

ಐಸಿಐಸಿಐ ಬ್ಯಾಂಕ್ ಷೇರು‌ ಶೇ 5.09, ಎಸ್‌ಬಿಐ ಶೇ 3.73, ಟಾಟಾ ಸ್ಟೀಲ್‌ ಶೇ 3.64, ರಿಲಯನ್ಸ್ ಶೇ 3.07, ಹೀರೊ ಮೋಟೊ ಶೇ 2.82 ರಷ್ಟು ಗರಿಷ್ಠ ಕುಸಿತ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.