ADVERTISEMENT

ವರ್ಷದ ಕಾಫಿ ರಫ್ತು 2.75 ಲಕ್ಷ ಟನ್‌

ಶೇ 4ರಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಧಾರಣೆ ಸ್ಥಿರವಾಗಿಲ್ಲದ ಪರಿಣಾಮ ದೇಶದ ಕಾಫಿ ರಫ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 4ರಷ್ಟು ಇಳಿಕೆ ಆಗಿದ್ದು, ಒಟ್ಟು 2.75 ಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಕಾಫಿ ಮಂಡಳಿ ಹೇಳಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 2.88 ಲಕ್ಷ ಟನ್‌ ಕಾಫಿ ರಫ್ತು ಮಾಡಲಾಗಿತ್ತು. ಒಟ್ಟಾರೆ ರಫ್ತು 3.12 ಲಕ್ಷ ಟನ್‌ಗಳಷ್ಟಿತ್ತು.
ಬ್ರೆಜಿಲ್‌ನಲ್ಲಿ ಕಾಫಿ ಇಳುವರಿ ತಗ್ಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಧಾರಣೆ ಸಾಕಷ್ಟು ಏರಿಳಿತ ಕಾಣುತ್ತಿದೆ. ಹೀಗಾಗಿ ದೇಶದ ಕಾಫಿ ರಫ್ತು ಅಲ್ಪ ಕುಸಿತ ಕಂಡಿದೆ ಎಂದು ಕಾಫಿ ಮಂಡಳಿ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಒಟ್ಟು ರೂ4,549 ಕೋಟಿ ಮೌಲ್ಯದ ಕಾಫಿ ರಫ್ತಾಗಿದೆ. ಕಳೆದ ವರ್ಷ ಇದೇ ಅವಧಿಗೆ ರೂ4,317 ಕೋಟಿ ಮೌಲ್ಯದ ರಫ್ತು ಮಾಡಲಾಗಿತ್ತು ಎಂದು ಅವರು ವಿವರಿಸಿದರು.

ಒಂದು ಟನ್‌ಗೆ ರೂ1,64,827ರಂತೆ ಉತ್ತಮ ಬೆಲೆ ಸಿಗುತ್ತಿದೆ.  ಕಳೆದ ವರ್ಷ ರೂ1,49,895ರಷ್ಟಿತ್ತು ಎಂದು ಕಾಫಿ ಮಂಡಳಿ ತಿಳಿಸಿದೆ.
ಈ ವರ್ಷ ಗರಿಷ್ಠ 3.44 ಲಕ್ಷ ಟನ್‌ ಕಾಫಿ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT