ADVERTISEMENT

ವಾಣಿಜ್ಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2016, 19:30 IST
Last Updated 23 ಆಗಸ್ಟ್ 2016, 19:30 IST
ವಾಣಿಜ್ಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು
ವಾಣಿಜ್ಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು   

ಗಿರಿಯಪ್ಪ ಜಿ. ಶಿವಮೊಗ್ಗ
* ನನ್ನ ಪ್ಯಾನ್‌ಕಾರ್ಡ್‌ ಬೇರೊಬ್ಬರ ವ್ಯವಹಾರದಲ್ಲಿ ಕಂಡುಬಂದು ನಾನು ಬ್ಯಾಂಕಿನಲ್ಲಿ ಸಾಲಕೇಳುವಾಗ TDS Trace ನೋಡಿ ವಿಷಯ ತಿಳಿಸಿದರು. ಆ ವ್ಯಕ್ತಿಗೂ ನನಗೂ ಯಾವ ಸಂಬಂಧವೂ ಇಲ್ಲ. ನನ್ನ ಪ್ರಶ್ನೆ, ತಪ್ಪಾಗಿರುವ ಮಾಹಿತಿ ಸರಿಪಡಿಸುವುದು ಹೇಗೆ? ಮುಂದೆ ನಾನು ಗೃಹ ಸಾಲ ಪಡೆಯುವಾಗ ತೊಂದರೆ ಆಗಬಹುದೇ?

ಉತ್ತರ: ವ್ಯಕ್ತಿಯ TDS Trace ಮಾಡಿದಾಗ TAN ನಂಬರ್‌ ಸಿಗುತ್ತದೆ. TAN ನಂಬರ್‌ ಆದಾಯ ತೆರಿಗೆ ಆಫೀಸಿನವರು ಸಂಸ್ಥೆಗೆ ಒದಗಿಸುವ ಗುರುತಿನ ಸಂಖ್ಯೆ. ಇದರಿಂದ ಯಾವ ಆಫೀಸಿನಿಂದ ಈ ವ್ಯವಹಾರ ನಡೆದಿದೆ ಎನ್ನುವುದನ್ನು ಕಂಡುಹಿಡಿಯಬಹುದು.

ಹಾಗೆ ಗುರುತಿಸಿದ ನಂತರ, ತಪ್ಪು ಮಾಡಿದ ಆಫೀಸಿನವರು ಇದನ್ನು ಸರಿಪಡಿಸಬೇಕಾಗುತ್ತದೆ. ಯಾವ ಸಂಸ್ಥೆಯಲ್ಲಿ ತಪ್ಪಾಗಿದೆ ಎಂದು ತಿಳಿದು ಅವರನ್ನು ಲಿಖಿತ ಮುಖಾಂತರ ಸಂಪರ್ಕಿಸಿರಿ. ಅಲ್ಲಿಯೂ ಆಗದಿರುವಲ್ಲಿ ಆ ಸಂಸ್ಥೆಯ ಮುಖ್ಯ ಕಚೇರಿ ಹಾಗೂ ಆದಾಯ ತೆರಿಗೆ ಕಚೇರಿಗೆ ದೂರು ನೀಡಿರಿ.

***
ರಾಘವೇಂದ್ರ. ಎಚ್‌. ಎಂ., ಬೆಂಗಳೂರು 
* ಕೆಂಪೇಗೌಡ ಲೇ ಔಟ್‌ನಲ್ಲಿ 60’X40’ ಬಿ.ಡಿ.ಎ. ನಿವೇಶನ ಮಂಜೂರಾಗಿದೆ. ಇದಕ್ಕೆ ₹ 58 ಲಕ್ಷ ಕಟ್ಟ ಬೇಕಾಗಿದೆ. ಇದರ ಖರೀದಿ ಲಾಭದಾಯಕವಲ್ಲವೆಂದು ನನ್ನ ಗೆಳೆಯರು ಹೇಳುತ್ತಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು? ಒಂದು ವೇಳೆ ನಾನು ಖರೀದಿಸುವುದಾದಲ್ಲಿ ನನ್ನ ವೇತನ ಉಳಿತಾಯದೊಂದಿಗೆ, ತಂದೆಯವರ ಕೊಡುಗೆ ಮತ್ತು ಸಹೋದರರಿಂದ ಸಾಲ ಪಡೆಯಬೇಕೆಂದಿರುವೆ. ಉಳಿಕೆ ಸುಮಾರು ₹ 25–30 ಲಕ್ಷದಷ್ಟು ಸಾಲ ಪಡೆಯಬೇಕಾಗುತ್ತದೆ. ಬಿ.ಡಿ.ಎ. ನಿವೇಶನ ಕೊಳ್ಳಲು ಯಾವ ಬ್ಯಾಂಕ್‌ ಸಾಲ ಕೊಡುತ್ತದೆ, ಬಡ್ಡಿ ದರ ಎಷ್ಟು, ಇಂತಹ ಸಾಲಕ್ಕೆ ತೆರಿಗೆ ವಿನಾಯಿತಿ ಇದೆಯೇ, ದಯಮಾಡಿ ತಿಳಿಸಿರಿ. ನಾನು ಸರ್ಕಾರಿ ನೌಕರನಾಗಿದ್ದು, ವಾರ್ಷಿಕ ವೇತನ ₹ 7.20 ಲಕ್ಷ ಇದೆ. ನನಗೆ 20 ವರ್ಷ 9 ತಿಂಗಳು ಸೇವಾವಧಿ ಇದೆ.


ಉತ್ತರ: ಕೆಂಪೇಗೌಡ ಬಡಾವಣೆಯಲ್ಲಿ ನಿಮಗೆ ಬಿ.ಡಿ.ಎ. ನಿವೇಶನ  ಮಂಜೂರಾಗಿರುವುದರಿಂದ, ಬಿ.ಡಿ.ಎ. ದವರು ನಿವೇಶನ ಮಂಜೂರಾತಿ ಮಾಡಿ ಕ್ರಯ ಪತ್ರ ಮಾಡಿಕೊಡುವುದರಿಂದ, ನಿವೇಶನದ ಕಾಗದ ಪತ್ರಗಳಲ್ಲಿ ಕಾನೂನಿನ ಅಥವಾ ಬೇರಾವ ತೊಡಕುಗಳು ಇರುವುದಿಲ್ಲ.

(C*EAR TIT*E DEED) ಈ ವಿಚಾರದಲ್ಲಿ ಕಾನೂನು ಸಲಹೆಗಾರರನ್ನು ಅಥವಾ ಪರಿಣತರನ್ನು ವಿಚಾರಿಸುವ ಅವಶ್ಯವಿರುವುದಿಲ್ಲ. ಇದು ಬಿ.ಡಿ.ಎ. ನಿವೇಶನದ ವಿಶೇಷತೆ. ಬಿ.ಡಿ.ಎ. ನಿವೇಶನಗಳಲ್ಲಿ, ರಸ್ತೆ, ವಿದ್ಯುಚ್ಛಕ್ತಿ, ಒಳಚರಂಡಿ, ನೀರು ಹೀಗೆ ಮೂಲ  ಸೌಕರ್ಯಗಳನ್ನೆಲ್ಲ ಒದಗಿಸುತ್ತಾರೆ.

ಒದಗಿಸುವುದು ಅವರ ಕರ್ತವ್ಯ ಕೂಡಾ. ಖಾಸಗಿ ನಿವೇಶನಗಳಲ್ಲಿ, ಹಕ್ಕು ಪತ್ರ ಹಾಗೂ ಮೂಲ  ಸೌಕರ್ಯಗಳಲ್ಲಿ ವಂಚಿತರಾಗುವ ಸಂದರ್ಭ ಕೂಡಾ ಇದೆ. ಸ್ಥಿರ ಆಸ್ತಿ ಹೂಡಿಕೆ ಒಂದು ದೀರ್ಘಾವಧಿ ಹೂಡಿಕೆಯಾಗಿದ್ದು, ತಕ್ಷಣ ಅಥವಾ ಕೆಲವೇ ವರ್ಷಗಳಲ್ಲಿ ಉತ್ತಮ ವರಮಾನ (good Returns) ಬಯಸಲು ಸಾಧ್ಯವಿಲ್ಲ.

ನಿಮಗೆ ಇನ್ನೂ 21 ವರ್ಷಗಳ ಸೇವಾವಧಿ ಇರುವುದರಿಂದ, ಈ ಅವಧಿಯಲ್ಲಿ ಬೆಂಗಳೂರು ಇನ್ನೂ ಬೃಹದಾಕಾರವಾಗಿ ಬೆಳೆಯುವುದರಲ್ಲಿ ಯಾವ ಸಂಶಯವೂ ಇಲ್ಲ ಹಾಗೂ ಉತ್ತಮ ಭವಿಷ್ಯ ಬಂದೇ ಬರುತ್ತದೆ. ಸ್ಥಿರ ಆಸ್ತಿ ಹೂಡಿಕೆ, ತೆಂಗಿನ ಗಿಡ ನೆಟ್ಟಂತೆ.

ಇದರ ಫಲ ಪಡೆಯಲು ಹೆಚ್ಚು ಕಾಲ ಕಾಯಬೇಕಾಗುತ್ತದೆ. ಆದರೆ ಒಮ್ಮೆ ಫಲ ಬರಲು ಪ್ರಾರಂಭಿಸಿದರೆ, ಅದು ನಿರಂತರ. ಸ್ಥಿರ ಆಸ್ತಿ ಹಾಗೂ ಬಂಗಾರ ಎಲ್ಲಾ ಹೂಡಿಕೆಗಳಿಗಿಂತ ಮಿಗಿಲಾದ ಹೂಡಿಕೆ ಎನ್ನುವುದಕ್ಕೆ ಎರಡು ಮಾತಿಲ್ಲ. ಇದೊಂದು ಉತ್ತಮ ಹೂಡಿಕೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

ನಿಮ್ಮ ವಾರ್ಷಿಕ ವರಮಾನ ₹ 7.20 ಲಕ್ಷ ಇರುವುದರಿಂದ ನಿಮಗೆ ₹ 25–30 ಲಕ್ಷ ಬ್ಯಾಂಕುಗಳಲ್ಲಿ ಸಾಲ ದೊರೆಯಬಹುದು. ನಿವೇಶನ ಕೊಳ್ಳಲು ಬಹಳಷ್ಟು ಬ್ಯಾಂಕುಗಳು ಸಾಲ ನೀಡುವುದಿಲ್ಲವಾದರೂ ಎಚ್‌.ಡಿ.ಎಫ್‌.ಸಿ., ಐ.ಸಿ.ಐ.ಸಿ.ಐ. ಹಾಗೂ ಕೆಲವು ಸಹಕಾರಿ ಬ್ಯಾಂಕುಗಳಲ್ಲಿ ವಿಚಾರಿಸಿರಿ. ನಿವೇಶನ ಸಾಲ ಆದ್ಯತಾ ರಂಗದ ಸಾಲದಲ್ಲಿ ಬಾರದಿರುವುದರಿಂದ ಶೇ 13–14 ಬಡ್ಡಿ ವಿಧಿಸಬಹುದು.

ಗೃಹ ಸಾಲದ ಕಂತು ಬಡ್ಡಿ ಹಾಗೂ ಶಿಕ್ಷಣ ಸಾಲದ ಬಡ್ಡಿ ಹೀಗೆ ಇವೆರಡೇ ಸಾಲಗಳಲ್ಲಿ ತೆರಿಗೆ ವಿನಾಯತಿ ಇರುತ್ತದೆ. ನಿವೇಶನ ಸಾಲಕ್ಕೆ ತೆರಿಗೆ ವಿನಾಯತಿ ಇರುವುದಿಲ್ಲ. ಸಾಲ ಮರುಪಾವತಿಸುವ ಸಾಮರ್ಥ್ಯ, ನಿಮ್ಮ ಮುಂದಿನ ಅವಶ್ಯಕತೆಗಳು (commitments) ವಿಚಾರದಲ್ಲಿ ನೀವು ನಿಮ್ಮ ಕುಟುಂಬದವರು ಸಮಾಲೋಚನೆ ಮಾಡಿ ನಿವೇಶನ ಕೊಂಡುಕೊಳ್ಳಿ

***
ಹೆಸರು ಬೇಡ, ವಿಜಯಪುರ
* ಪ್ರಶ್ನೆ: ನನ್ನ ವಯಸ್ಸು 69. ಕೇಂದ್ರ ಸರ್ಕಾರದ ನಿವೃತ್ತಿ ನೌಕರ. ಮಾಸಿಕ ಪಿಂಚಣಿ ₹ 35,000. ನನಗೆ ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬ ಮಗಳು. ಗಂಡು ಮಕ್ಕಳಿಗೆ ಉದ್ಯೋಗವಿದೆ.  ಹೆಣ್ಣು ಮಗಳಿಗೆ 45 ವರ್ಷ ಹಾಗೂ ಅವಿವಾಹಿತೆ. ನನಗೆ 40X80 ಹಾಗೂ 30’X40’ ಎರಡು ನಿವೇಶನಗಳಿವೆ ಹಾಗೂ ಸ್ವಂತ ಮನೆ ಇದೆ. ಹೊಲ 5 ಎಕರೆ ಇದೆ. ಮಕ್ಕಳ ಹೆಸರಿನಲ್ಲಿ ₹ 25000, 5 ವರ್ಷಗಳ ಆರ್.ಡಿ. ಮಾಡಿದ್ದೇನೆ. ತೆರಿಗೆಗಾಗಿ ₹ 1.50 ಲಕ್ಷ  ಉಳಿತಾಯ ಮಾಡಿದ್ದೇನೆ. ನನಗೆ ತೆರಿಗೆ ಬರುವುದಿಲ್ಲ. ಮಕ್ಕಳಿಗೆ ಆಸ್ತಿ ಹೇಗೆ ಹಂಚಬೇಕು, ಉಯಿಲು ಮಾಡಲು ಸಲಹೆ ನೀಡಿ.

ADVERTISEMENT


ಉತ್ತರ: ಸ್ಥಿರ ಆಸ್ತಿಯ ವಿಚಾರದಲ್ಲಿ, ‘ಲಾ ಆಫ್‌ ಸಕ್ಷೇಷನ್‌’ (*aw of succession)ನಲ್ಲಿ ತಿಳಿಸಿದಂತೆ ನೀವು ಉಯಿಲು ಬರೆಯುವುದೇ ಸೂಕ್ತವಾಗಿದೆ. ಉಯಿಲಿಗೆ ಮರಣ ಪತ್ರ ಎಂಬುದಾಗಿಯೂ ಕರೆಯುತ್ತಾರೆ.

ಉಯಿಲೆಗೆ ಸ್ಟ್ಯಾಂಪ್‌ ಆ್ಯಕ್ಟ್ ಹಾಗೂ ನೋಂದಾಯಿಸುವ ಕ್ರಮ ಎರಡೂ ಅನ್ವಯಿಸುವುದಿಲ್ಲ. ಇದೇ ವೇಳೆ ಉಯಿಲನ್ನು ನೋಂದಾಯಿಸುವ ಸೌಲತ್ತು ಕೂಡಾ ಇದೆ. ಬರೇ ಬಿಳಿ ಹಾಳೆಯ ಮೇಲೆ ಉಯಿಲಾದರೆ ತನ್ನ ಕೈ ಬರಹದಿಂದಲೂ ಉಯಿಲು ಬರೆಯಬಹುದು. ಉಯಿಲಿಗೆ ಇಬ್ಬರ ಸಾಕ್ಷಿ  ಬೇಕಾಗುತ್ತದೆ. ಉಯಿಲು ಬರೆಯುವಾಗ ಸ್ಥಿರ ಆಸ್ತಿಯ ಸಂಪೂರ್ಣ ವಿವರ ಹಾಗೂ ಯಾವ ವ್ಯಕ್ತಿಗೆ ಏನು ಸಿಗಬೇಕು ಎನ್ನುವುದನ್ನು ಸ್ಪಷ್ಟವಾಗಿ ಬರೆಯಬೇಕು.

ಒಮ್ಮೆ ಉಯಿಲು ಬರೆದು ಮುಂದೆ ಅದೇ ಉಯಿಲನ್ನು ರದ್ದುಗೊಳಿಸಿ ಮತ್ತೊಂದು ಉಯಿಲು ಕೂಡ ಬರೆಯಬಹುದು. ಒಟ್ಟಿನಲ್ಲಿ ವ್ಯಕ್ತಿಯು ಮರಣ ಹೊಂದುವ ಮೊದಲು ಕೊನೆಯದಾಗಿ ಬರೆದಿರುವ ಉಯಿಲು ಕಾರ್ಯರೂಪಕ್ಕೆ ಬರುತ್ತದೆ. ನೀವು ಆದಷ್ಟು ಬೇಗ ನಿಮ್ಮ ಊರಿನ ಕಾನೂನು ಪರಿಣತರನ್ನು ವಿಚಾರಿಸಿ ಉಯಿಲು ಬರೆದಿಡಿ

***
ವೆಂಕಟೇಶ, ಬಾತಿ
* ಸರ್ಕಾರಿ ನೌಕರಿ. ಸಂಬಳ ₹ 15,000 ಮನೆ ಖರ್ಚು ₹ 5,000. ನನಗೆ 15 ಹಾಗೂ 17 ವರ್ಷಗಳ ಇಬ್ಬರು ತಂಗಿಯರಿದ್ದಾರೆ. ಅವರ ಮದುವೆಗಾಗಿ ತಲಾ  ₹ 5 ಲಕ್ಷ ಖರ್ಚು ಮಾಡಬೇಕೆಂದಿದ್ದೇನೆ. ₹ 10000ಗಳನ್ನು, 5 ವರ್ಷ ಉಳಿಸಿದರೆ ₹ 10 ಲಕ್ಷ ಬಡ್ಡಿ ಸೇರಿಸಿ ಬರಬಹುದೇ. ನನ್ನ ಖಾತೆ ಕೆನರಾ ಬ್ಯಾಂಕಿನಲ್ಲಿದೆ.  ನನ್ನ ಗೊಂದಲ ಪರಿಹರಿಸಬೇಕಾಗಿ ವಿನಂತಿ.


ಉತ್ತರ: ₹ 10000. ಆರ್‌. ಡಿ.  ಶೇ 8 ಬಡ್ಡಿ ದರದಲ್ಲಿ 5 ವರ್ಷಗಳ ನಂತರ ₹ 7.39 ಲಕ್ಷ ಆಗಿ ನಿಮ್ಮ ಕೈ ಸೇರುತ್ತದೆ. ಯಾವುದೇ ಕಾರಣಕ್ಕೂ ತಂಗಿಯಂದಿರ  ಮದುವೆಗೆ ತಲಾ ₹ 2 ಲಕ್ಷಕ್ಕಿಂತ ಹೆಚ್ಚಿನ ಖರ್ಚು ಮಾಡಬೇಡಿ. ಮದುವೆ ಒಂದು ದಿವಸದ ಒಂದು ಕಾರ್ಯಕ್ರಮ ಮದುವೆ ನಂತರ ಇಲ್ಲಿ ಮಾಡಿದ ಅದ್ದೂರಿ ವೈಭವ, ಜನರು ಮರೆಯುತ್ತಾರೆ. ಹಣ ಉಳಿಸಿಕೊಳ್ಳಿ.

ಹೀಗೆ ಉಳಿಸಿದ ಹಣ ನಿಮ್ಮ ಆಪತ್ತಿನಲ್ಲಿ ನಿಮ್ಮನ್ನು ಕಾಯುತ್ತದೆ. ಖರ್ಚು ಮಾಡಿದ ಹಣ ಎಂದಿಗೂ ವಾಪಸು ಬರುವುದಿಲ್ಲ ತಿಳಿದಿರಲಿ. ತಂಗಿಯರ ಮದುವೆ ನಂತರ ನೀವೂ ಕೂಡಾ ಮದುವೆ ಯಾಗಬೇಕಾದ್ದರಿಂದ ಮಧ್ಯಮ ರೀತಿಯಲ್ಲಿ ತಂಗಿಯರ ಮದುವೆ ಮಾಡಿರಿ. ಮದುವೆಗೆಂದು ಎಂದಿಗೂ ಸಾಲ ಮಾಡಬೇಡಿ.

***
ಆನಂದಮೂರ್ತಿ, ಊರು ಬೇಡ
* ನಾನು ಖಾಸಗಿ  ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ನನಗೆ ಕಡಿತದ ನಂತರ ₹ 16880, ನನ್ನ ಹೆಂಡತಿ ಸರ್ಕಾರಿ ನೌಕರಿಯಲ್ಲಿದ್ದು, ಕಡಿತದ ನಂತರ ₹ 16000  ಬರುತ್ತದೆ. ನಮ್ಮ ಮನೆ ಖರ್ಚು  ₹ 10000. ನಾವು ₹ 23000 ಉಳಿಸಬಹುದು.  ಇನ್ನೂ ಮಕ್ಕಳಾಗಲಿಲ್ಲ. ನಾವು ಆರ್‌.ಡಿ. ಮಾಡುವುದಾದರೆ ಯಾವ ಬ್ಯಾಂಕಿನಲ್ಲಿ ಮಾಡಬಹುದು?


ಉತ್ತರ: ನೀವು ಉಳಿಸಬಹುದಾದ ₹ 23,000ಗಳಲ್ಲಿ ₹ 3000 ಒಂದು ವರ್ಷದ ಆರ್‌.ಡಿ. ಮಾಡಿ ವರ್ಷಾಂತ್ಯಕ್ಕೆ ಇಲ್ಲಿ ಬರುವ ಹಣದಿಂದ ಬಂಗಾರದ ನಾಣ್ಯ ಕೊಂಡು ಬ್ಯಾಂಕ್‌ ಲಾಕರಿನಲ್ಲಿ ಇರಿಸಿರಿ. ಈ ಪ್ರಕ್ರಿಯೆ ನಿರಂತರವಾಗಿರಲಿ. ಆರ್‌.ಡಿ. ಮಾಡಲು, ನೀವು ಸಂಬಳ ಪಡೆಯುವ ಬ್ಯಾಂಕಿನಲ್ಲಿಯೇ ಮಾಡಿರಿ.

₹  10000 ದಂತೆ, ಎರಡು ಆರ್‌.ಡಿ. ಮಾಡಿರಿ. ಉಳಿತಾಯ ಖಾತೆಯಿಂದ ಆರ್‌.ಡಿ. ಕಂತಿಗೆ ವರ್ಗಾಯಿಸಲು ಸ್ಟ್ಯಾಂಡಿಂಗ್‌ ಇನ್ಸ್‌ಟ್ರಕ್ಷನ್‌ ಕೊಡಿರಿ. ಆರ್‌.ಡಿ. 3 ವರ್ಷಗಳ ಅವಧಿಗಿರಲಿ. ಅಷ್ಟರಲ್ಲಿ ನಿಮಗೆ ಒಂದು ಮಗು ಆಗಬಹುದು. ಹಾಗೂ ಸ್ವಲ್ಪ ಖರ್ಚು ಹೆಚ್ಚಾಗಬಹುದು. ಮುಂದೆ ನಿಮ್ಮ ಅನುಕೂಲಕ್ಕನುಗುಣವಾಗಿ ಆರ್‌.ಡಿ. ಮೊತ್ತ ಬದಲಾಯಿಸಿ, 5 ವರ್ಷಗಳ ಅವಧಿಗೆ ಮಾಡಿರಿ. ಹೀಗೆ ಹಣ ಉಳಿಸುತ್ತಾ, ಕನಿಷ್ಠ 30’X40’ ಅಳತೆಯ ನಿವೇಶನ ಕೊಳ್ಳಿರಿ.

ನೀವು ಜೀವನದ ಪ್ರಾರಂಭದ ಹಂತದಲ್ಲಿದ್ದು ಈಗಿನಿಂದಲೇ ಆರ್ಥಿಕ ಶಿಸ್ತು ಪರಿಪಾಲಿಸಿದಲ್ಲಿ ಬೇಡವಾದ ಖರ್ಚಿಗೆ ಕಡಿವಾಣ ಹಾಕಿದಂತಾಗುತ್ತದೆ. ಹಾಗೂ ಜೀವನದ ಸಂಜೆ ಸುಖ ಸಮೃದ್ಧಿಯಿಂದ ಕೂಡಿರುತ್ತದೆ.

***
ಮಂಜುನಾಥ ಹೆಬ್ಬಾರ, ಬೆಂಗಳೂರು

* ನನ್ನ ವಯಸ್ಸು 26. ಖಾಸಗಿ ಕಂಪೆನಿಯಲ್ಲಿ ಕೆಲಸ. ನನ್ನ ಸಂಬಳ ₹ 13,500. ಸಂಬಳ ನಗದಾಗಿ ಕೊಡುತ್ತಾರೆ.  ಸ್ವಂತ ಮನೆ ಇದೆ. ನಾನು ವಾರ್ಷಿಕ ಆದಾಯ ತೆರಿಗೆ ಸಲ್ಲಿಸಬೇಕೇ, ₹ 15,000ಕ್ಕೂ ಹೆಚ್ಚಿನ ಸಂಬಳ ಪಡೆಯುವವರು ಆದಾಯ ತೆರಿಗೆ ಸಲ್ಲಿಸಬೇಕು ಎಂದು ಕೇಳಿದ್ದೇನೆ. ತೆರಿಗೆ ರಿಟರ್ನ್‌ ತುಂಬಬೇಕೇ?


ಉತ್ತರ: 60 ವರ್ಷದೊಳಗಿರುವ ವ್ಯಕ್ತಿಗಳು, ವಾರ್ಷಿಕ ಒಟ್ಟು ಆದಾಯ ₹ 2.50 ಲಕ್ಷ ದಾಟಿದಲ್ಲಿ ಮಾತ್ರ ಆದಾಯ ತೆರಿಗೆಗೆ ಒಳಗಾಗುತ್ತಾರೆ. ಹಾಗೂ 31 ಜುಲೈ ಒಳಗೆ ತೆರಿಗೆ ರಿಟರ್ನ್ ಫೈಲ್‌ ಮಾಡಬೇಕಾಗುತ್ತದೆ. ನಿಮ್ಮ ಇಂದಿನ ಆದಾಯಕ್ಕೆ ತೆರಿಗೆ ಬರುವುದಿಲ್ಲ. ಹಾಗೂ ರಿಟರ್ನ್ ತುಂಬುವ ಅವಶ್ಯವೂ ಇಲ್ಲ. ನಿಮಗೆ ಸ್ವಂತ ಮನೆ ಇರುವುದರಿಂದ ಹಾಗೂ ನೀವು ಸಣ್ಣ ವಯಸ್ಸಿನವರಾದ್ದರಿಂದ, ಈಗಲೇ ಎಷ್ಟಾದರಷ್ಟು ಉಳಿತಾಯ ಕಡ್ಡಾಯವಾಗಿ ಮಾಡಲು ಪ್ರಾರಂಭಿಸಿರಿ.

ಅಂಚೆ ಕಚೇರಿ, ಪಿ.ಪಿ.ಎಫ್‌. ಖಾತೆ ಪ್ರಾರಂಭಿಸಿ ಕನಿಷ್ಠ ₹ 5000 ತಿಂಗಳಿಗೆ ತುಂಬಿರಿ. ಇದು 15 ವರ್ಷಗಳ ಯೋಜನೆ. ಇಲ್ಲಿ ಕನಿಷ್ಠ ₹ 500, ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ತುಂಬಬಹುದು. ಇಲ್ಲಿ ಬರುವ ಬಡ್ಡಿಗೆ ಮೂಡಾ ಸೆಕ್ಷನ್‌ 10 (11) ಆಧಾರದ ಮೇಲೆ ತೆರಿಗೆ ವಿನಾಯಿತಿ ಇದೆ.

***
ಹೆಸರು ಬೇಡ, ಬಳ್ಳಾರಿ
* ಖಾಸಗಿ ಕಂಪೆನಿಯಲ್ಲಿ ಕೆಲಸ. ತಿಂಗಳ ಸಂಬಳ ₹ 25000. ವಯಸ್ಸು  24. ಅವಿವಾಹಿತ. ಎಲ್ಲಾ ಖರ್ಚು ಕಳೆದು  ₹ 12,000 ಉಳಿಯುತ್ತದೆ. ನಾನು ವಾರ್ಷಿಕ ತೆರಿಗೆಯಿಂದ ಪಾರಾಗಲು ಹಾಗೂ ಉತ್ತಮ ಹೂಡಿಕೆಗೆ ತಿಳಿಸಿರಿ. ನನಗೆ ಜೀವ ವಿಮೆ ಅಗತ್ಯ ಇದೆಯೇ, ಸೂಕ್ತ ಸಲಹೆ ನೀಡಿ.


ಉತ್ತರ: ನಿಮ್ಮ ವಾರ್ಷಿಕ ಆದಾಯ ₹ 3 ಲಕ್ಷ. ತೆರಿಗೆ ಆದಾಯದ ಮಿತಿ ₹ 2.50 ಲಕ್ಷ. ಸೆಕ್ಷನ್‌ 80 ಸಿ ಆಧಾರದ ಮೇಲೆ ಪಿ.ಎಫ್‌., ಅಥವಾ ಪಿ.ಪಿ.ಎಫ್‌. ತಿಂಗಳಿಗೆ  ₹ 2000 ತುಂಬಿರಿ. ನಿಮಗೆ ನಿಜವಾಗಿ ಜೀವವಿಮೆ ಅಗತ್ಯವಿದೆ. ಎಲ್‌.ಐ.ಸಿ.ಯವರ ಜೀವನ ಆನಂದ ಪಾಲಿಸಿ ಮಾಡಿಸಿ. ವಾರ್ಷಿಕವಾಗಿ  ₹ 15000 ಹಾಗೂ ಎನ್‌.ಸಿ.ಎಸ್‌. ಯೋಜನೆಯಲ್ಲಿ ವಾರ್ಷಿಕವಾಗಿ ₹ 11000 ತುಂಬಿರಿ.

ಇದರಿಂದ ನೀವು ತೆರಿಗೆಯಿಂದ ಮುಕ್ತರಾಗುವಿರಿ. ಜೊತೆಗೆ ಉತ್ತಮ ಹೂಡಿಕೆ ಮಾಡಿದಂತಾಗುತ್ತದೆ. ಹೀಗೆ ಮಾಡಿದ ನಂತರವೂ ನಿಮ್ಮೊಡನೆ ₹ 8000 ಉಳಿಯುತ್ತದೆ. ಈ ಮೊತ್ತ 3 ವರ್ಷಗಳ ಅವಧಿಗೆ, ಸಂಬಳ ಪಡೆಯುವ ಬ್ಯಾಂಕಿನಲ್ಲಿ ಆರ್‌.ಡಿ. ಮಾಡಿರಿ. ಇಷ್ಟರಲ್ಲಿ ನಿಮ್ಮ ಮದುವೆಯೂ ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.