ADVERTISEMENT

ವಿಪ್ರೊ: ₹ 1,800 ಕೋಟಿ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ವಿಪ್ರೊ: ₹ 1,800 ಕೋಟಿ ನಿವ್ವಳ ಲಾಭ
ವಿಪ್ರೊ: ₹ 1,800 ಕೋಟಿ ನಿವ್ವಳ ಲಾಭ   

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತು ಸಂಸ್ಥೆಯಾಗಿರುವ ವಿಪ್ರೊ, ಮಾರ್ಚ್‌ ತ್ರೈಮಾಸಿಕದಲ್ಲಿ ₹ 1,800 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಇದು ಮಾರುಕಟ್ಟೆಯ ನಿರೀಕ್ಷೆಗಿಂತ ಕಡಿಮೆ ಇದೆ. ವರ್ಷದ ಹಿಂದಿನ ₹ 2,267 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 21ರಷ್ಟು ಕಡಿಮೆಯಾಗಿದೆ. ಸಂಸ್ಥೆಯ ಎರಡು ಗ್ರಾಹಕ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಇದರಿಂದ ಎದುರಾಗಬಹುದಾದ ಸವಾಲು ಎದುರಿಸಲು ಹೆಚ್ಚುವರಿ ಹಣ ತೆಗೆದು ಇರಿಸಲಾಗಿದೆ. ಹೀಗಾಗಿ ನಿವ್ವಳ ಲಾಭ ಕುಸಿದಿದೆ.

ದೂರಸಂಪರ್ಕ ಗ್ರಾಹಕ ಸಂಸ್ಥೆಯೊಂದು ನಷ್ಟಕ್ಕೆ ಗುರಿಯಾಗಿ ಸಾಲ ವಸೂಲಾತಿ ‍ಪ್ರಕ್ರಿಯೆಗೆ ಒಳಪಟ್ಟಿದೆ. ಇದರಿಂದ ಈ ಬಾರಿ ಲಾಭವು ಕಡಿಮೆಯಾಗುವ ಸಾಧ್ಯತೆ ಇರುವುದನ್ನು ಸಂಸ್ಥೆಯು ಈ ಮೊದಲೇ ಷೇರುಪೇಟೆಯ ಗಮನಕ್ಕೆ ತಂದಿತ್ತು.

ADVERTISEMENT

‘ಸೆಪ್ಟೆಂಬರ್‌ ತ್ರೈಮಾಸಿಕದ ₹ 1,930 ಕೋಟಿ ಲಾಭಕ್ಕೆ ಹೋಲಿಸಿದರೆ, ಮಾರ್ಚ್‌ ತ್ರೈಮಾಸಿಕದಲ್ಲಿನ ಲಾಭದ ಕುಸಿತವು ಶೇ 7ರಷ್ಟಿದೆ’ ಎಂದು ಸಂಸ್ಥೆಯ ಸಿಇಒ ಅಬಿದಾಲಿ ನೀಮೂಚವಾಲಾ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ತ್ರೈಮಾಸಿಕದಲ್ಲಿನ ಒಟ್ಟು ವರಮಾನವು ₹ 14,304 ಕೋಟಿಗಳಷ್ಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 15,045 ಕೋಟಿಗೆ ಹೋಲಿಸಿದರೆ ಶೇ 5ರಷ್ಟು ಕಡಿಮೆಯಾಗಿದೆ.  ಹಣಕಾಸು ವರ್ಷದ ಒಟ್ಟಾರೆ ವರಮಾನವು ₹ 57,035 ಕೋಟಿಗಳಿಗೆ ತಲುಪಿ ಶೇ 1.7ರಷ್ಟು ಕುಸಿತ ಕಂಡಿದೆ. ಸಂಸ್ಥೆಯ ವರಮಾನದಲ್ಲಿ ಬ್ಯಾಂಕಿಂಗ್‌, ಹಣಕಾಸು ಸೇವೆ ಮತ್ತು ವಿಮೆ ಕ್ಷೇತ್ರಗಳ ಕೊಡುಗೆ ಗರಿಷ್ಠ ಮಟ್ಟದಲ್ಲಿ (ಶೇ 29) ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.