ADVERTISEMENT

ಶಿಫಾರಸು ಪತ್ರ ಹರಿದು ಹಾಕಿದ ಗೆಲುವಿನ ಹಾದಿ ತೋರಿಸಿದ...

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 19:30 IST
Last Updated 10 ಜನವರಿ 2017, 19:30 IST
ಮುಧೋಳ ಹೊರವಲಯದಲ್ಲಿರುವ ನಿರಾಣಿ ಶುಗರ್ಸ್‌ ಕಾರ್ಖಾನೆ
ಮುಧೋಳ ಹೊರವಲಯದಲ್ಲಿರುವ ನಿರಾಣಿ ಶುಗರ್ಸ್‌ ಕಾರ್ಖಾನೆ   

-ನಿರೂಪಣೆ: ಮಲ್ಲಿಕಾರ್ಜುನ ಹೆಗ್ಗಳಗಿ

20 ವರ್ಷಗಳ ಹಿಂದೆ ಕಬ್ಬು ಬೆಳೆದು ಅದನ್ನು ಮಾರಾಟ ಮಾಡಲು ಹೊರಟಾಗ ಎದುರಾದ ಸಂಕಷ್ಟಗಳ ಸರಮಾಲೆಯನ್ನೇ ಸವಾಲಾಗಿ ಸ್ವೀಕರಿಸಿ ಸ್ವತಃ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ ಹೆಗ್ಗಳಿಕೆ ಮುರುಗೇಶ  ನಿರಾಣಿ ಅವರದ್ದು.  ತಾವು ಕೂಡ ಒಬ್ಬ ಯಶಸ್ವಿ ಉದ್ಯಮಿಯಾಗಿ ಬೆಳೆದು ಬಂದ ಯಶೋಗಾಥೆಯನ್ನು  ನಿರಾಣಿ ಉದ್ಯಮ ಸಮೂಹದ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಮುರುಗೇಶ ನಿರಾಣಿ ಅವರೇ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

‘ಇದನ್ನೆಲ್ಲ ಹೇಳುವುದಕ್ಕೆ ನಿಜಕ್ಕೂ ನನಗೆ ಹೆಮ್ಮೆ ಎನಿಸುತ್ತದೆ. ನಾನು ಹುಬ್ಬಳ್ಳಿ ಬಿ.ವಿ.ಬಿ ಎಂಜಿನಿಯಿರಿಂಗ್ ಕಾಲೇಜಿನಲ್ಲಿ ಓದಿ ಬಿ.ಇ ಪಾಸಾಗಿ ನೌಕರಿಗೆ ಹೋಗದೆ ಕೃಷಿ ಕೆಲಸದಲ್ಲಿ ತೊಡಗಿದೆ. ಬಿ.ಇ. ಕೊನೆಯ ವರ್ಷದಲ್ಲಿ ಓದುವಾಗಲೇ ಬೇಡ ಬೇಡ ಎಂದರೂ ಕೇಳದೆ ಹಿರಿಯರು ಮದುವೆ ಮಾಡಿದರು. ನಮ್ಮದು ಅವಿಭಕ್ತ ಕೃಷಿ ಸಂಸ್ಕೃತಿ ಕುಟುಂಬ. ಹೊಲದಲ್ಲಿ ಚೆನ್ನಾಗಿ ದುಡಿಯುವುದು, ಉತ್ತಮ ಬೆಳೆ ತೆಗೆಯುವುದು, ನಮ್ಮ ಕುಟುಂಬದವರ ಬಹು ಸಂತೋಷದ ಕೆಲಸ.

‘ಓದು ಮುಗಿಯುತ್ತಿದ್ದಂತೆ ಕೃಷಿ ಚಟುವಟಿಕೆಗೆ ಮರಳಿದ ನಾನು, ಹಳೆಯ ಕೃಷಿ ಪದ್ಧತಿ ಸಾಕು, ರೊಕ್ಕದ ಬೆಳೆ ಕಬ್ಬು ಬೆಳೆಯಬೇಕು ಎಂದು   ಪ್ಲ್ಯಾನ್ ಮಾಡಿದೆ. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಸವ ಹಂಚಿನಾಳ ನನ್ನ ಊರು. ಕೃಷ್ಣಾ ನದಿಯ ಬದಿಯಲ್ಲಿದೆ.   ಕಷ್ಟಪಟ್ಟು 100 ಎಕರೆ ಭೂಮಿಯಲ್ಲಿ ಕಬ್ಬು ಬೆಳೆದೆ. ಕಬ್ಬು  ಮಾರಾಟದಿಂದ ನನಗೆ ಸುಮಾರು ₹ 10 ಲಕ್ಷ ಆದಾಯ ಬರುವ ಅಂದಾಜು ಮಾಡಿದೆ. ಟ್ರ್ಯಾಕ್ಟರ, ಮೋಟಾರ್ ಸೈಕಲ್ ಕೊಳ್ಳುವ ಕನಸು ಕಾಣತೊಡಗಿದೆ. ಕಬ್ಬು ನಳನಳಿಸುತ್ತ ಬೆಳೆಯಿತು.

‘ಆದರೆ, ಬೆಳೆದು ನಿಂತ ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗೆ ಮಾರಲು ಮುಂದಾದಾಗ ಸಮಸ್ಯೆ ಎದುರಾಯಿತು. ಯಾವುದೇ ಕಾರ್ಖಾನೆ ನಮ್ಮ ಕಬ್ಬು ಖರೀದಿಸಲು ಒಪ್ಪಲಿಲ್ಲ. ನಾನು ಗೆಳೆಯರೊಬ್ಬರ ಪ್ರಭಾವ ಬಳಸಿ ಸಚಿವರೊಬ್ಬರಿಂದ ನಮ್ಮ ಕಬ್ಬು ಖರೀದಿಸಲು ಶಿಫಾರಸು ಪತ್ರ ಪಡೆದುಕೊಂಡೆ.

ಇನ್ನೇನು ಕೆಲಸ ಆಗಿಯೇ ಹೋಯಿತು ಎಂದು  ಹಿರಿ ಹಿರಿ ಹಿಗ್ಗಿದೆ. ಸಚಿವರ ಶಿಫಾರಸ್ಸು ಪತ್ರಕ್ಕೆ ಖಂಡಿತ ಕೆಲಸ ಆಗುತ್ತದೆ ಆಗ ಎಂಬುದು ನನ್ನ ಗಟ್ಟಿಯಾದ ನಂಬಿಕೆಯಾಗಿತ್ತು. (ನಾನೇ ಸಚಿವನಾದ ಮೇಲೆ ಇಂತಹ ಶಿಫಾರಸು ಪತ್ರಗಳ ಬೆಲೆ ಚೆನ್ನಾಗಿ ತಿಳಿಯಿತು). 

‘ಮರುದಿನ ಸಕ್ಕರೆ ಕಾರ್ಖಾನೆಗೆ ಹೋದೆ. ಕಾರ್ಖಾನೆಯವರು ನಿಗದಿ ಪಡಿಸಿದ ಅರ್ಜಿ ಫಾರ್ಮ್‌ ಪಡೆದುಕೊಂಡು ಅದರಲ್ಲಿ ಕಬ್ಬಿನ ತಳಿಯ ವಿವರ, ಭೂಮಿಯ ಸರ್ವೆ ನಂಬರ, ಕಬ್ಬು ಚೆನ್ನಾಗಿ ಬೆಳೆದು 12 ತಿಂಗಳು ಪೂರ್ಣಗೊಂಡ ವಿವರ ಎಲ್ಲ ದಾಖಲು ಮಾಡಿ ಅದಕ್ಕೆ ಸಚಿವರ ಪತ್ರ ಲಗತ್ತಿಸಿದೆ. ಅರ್ಜಿಯನ್ನು  ಹಿರಿಯ ಅಧಿಕಾರಿಗೆ ಕೊಟ್ಟೆ. ಆತ ಅರ್ಜಿ ಹಾಗೂ ಶಿಫಾರಸು ಪತ್ರ ನೋಡಿದ. ‘ಕಬ್ಬು ತೆಗೆದುಕೊಳ್ಳುವುದು ಆಗುವುದಿಲ್ಲ.  ಮಂತ್ರಿಯಲ್ಲ ನೀನು ಪ್ರಧಾನಮಂತ್ರಿಯ ಪತ್ರ ತಂದರೂ ನಿನ್ನ ಕಬ್ಬು ಖರೀದಿ ಮಾಡುವುದು ಆಗುವುದಿಲ್ಲ’ ಎಂದು ಕಡ್ಡೀ ಮುರಿದಂತೆ ಹೇಳಿ ಶಿಫಾರಸು ಪತ್ರವನ್ನು ಸರ ಸರನೇ ಪತ್ರ ಹರಿದು ಕಸದ ಬುಟ್ಟಿಗೆ ಹಾಕಿದ !

‘ಅಧಿಕಾರಿಯ ಉದ್ಧಟತನಕ್ಕೆ ನನ್ನ ರಕ್ತ ಕುದಿಯಿತು. ಅಧಿಕಾರಿಗೆ ತಕ್ಕಪಾಠ ಕಲಿಸಲೇಬೇಕೆಂದು  ಮನಸ್ಸು ಹೇಳಿತು. ಆದರೆ, ಎಲ್ಲ ಅಪಮಾನ ಮೌನವಾಗಿ ನುಂಗಿಕೊಂಡು ಮನೆಗೆ ಬಂದೆ. ‘ಗೋಧಿ ಅಥವಾ ಜೋಳ ಬೆಳೆಯುವದು ಬಿಟ್ಟು ಕಾರ್‌ಬಾರ್‌ ಮಾಡಿ ರೊಕ್ಕಾ ಮಾಡ್ತೇನೆ ಎಂದು ಕಬ್ಬು ಬೆಳೆದಿದ್ದಾನೆ. ಈಗ ಕೊಳ್ಳುವವರಿಲ್ಲದೆ ಕಬ್ಬು ಹಾಳಾಗತೊಡಗಿದೆ” ಎಂದು  ನನ್ನ ಹೆಂಡತಿ ಸಹಿತ ಎಲ್ಲರೂ ನನ್ನನ್ನು ಟೀಕಿಸತೊಡಗಿದರು. ಅದರಿಂದ ನಾನು ಇನ್ನಷ್ಟು ಕುಗ್ಗಿಹೋದೆ.

‘ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ನಾನೇ ಒಂದು ಮಿನಿ ಸಕ್ಕರೆ ಕಾರ್ಖಾನೆ ಕಟ್ಟಿದರೆ ಹೇಗೆ? ಎಂಬ ಆಲೋಚನೆ ನನಗೆ ಹೊಳೆಯಿತು.  ಅದನ್ನು ಕಾರ್ಯರೂಪಕ್ಕೆ ತರಲೂ ಮುಂದಾದೆ.  ಮುಧೋಳ ಹೊರವಲಯದ ನಮ್ಮ 10 ಎಕರೆ ಭೂಮಿಯಲ್ಲಿ ನನಗೆ ಗೊತ್ತಿರುವ ಎಲ್ಲ ಎಂಜಿನಿಯರಿಗ್ ಜ್ಞಾನ ಬಳಸಿ ಕಾರ್ಖಾನೆ ಕಟ್ಟಿದೆ. ಮೈದೂರ ಆನಂದ ಎಂಬ ಶ್ರೇಷ್ಠ ಸಕ್ಕರೆ ತಂತ್ರಜ್ಞರಿದ್ದರು. ಈಚೆಗೆ ವೃದ್ಧಾಪ್ಯದಿಂದ ನಿಧನರಾದರು. ಅವರನ್ನು ನಾನು ಸದಾ ನೆನೆಯುತ್ತೆನೆ. ಅವರ ಮಾರ್ಗದರ್ಶನದಲ್ಲಿ ಮಿನಿ ಸಕ್ಕರೆ ಕಾರ್ಖಾನೆ ಕಟ್ಟಿದೆ. ಇದನ್ನು ಕಟ್ಟುವಾಗಲೂ ಅನೇಕರು  ಅಪಹಾಸ್ಯ ಮಾಡಿ ನಕ್ಕರು.

‘ಇದೆಲ್ಲ ನಿಂಗೇ ಬೇಡ. ‘ಎಂಜಿಯರಿಂಗ್ ನೌಕರಿ ಹಿಡಿದು ಚೆನ್ನಾಗಿ ಜೀವನ ಮಾಡು’ ಎಂದೂ ಕೆಲವರು ಪುಕ್ಕಟ್ಟೆ ಉಪದೇಶ ನೀಡಿದರು. ‘ಎಲ್ಲರೂ ಹೇಳಿದ್ದನ್ನು ಎದುರು ಉತ್ತರ ನೀಡದೆ ಮೌನವಾಗಿ ಕೇಳಿದೆ. ಆದರೆ, ನನ್ನ ಮನಸ್ಸು ಹೇಳಿದಂತೆ ಕೆಲಸ ಮಾಡಿದೆ. ಕಾರ್ಖಾನೆ ಸಿದ್ಧವಾಯಿತು. ನಮ್ಮ ಎಲ್ಲ ಕಬ್ಬು ಅರೆದು ಸಕ್ಕರೆ ಮಾಡಿದೆ. ನನ್ನಂತೆ ತೊಂದರೆಗೆ ಸಿಲುಕಿದ ಕೆಲವು ಸಣ್ಣ ರೈತರ ಕಬ್ಬು ಕೂಡಾ ಖರೀದಿ ಮಾಡಿ ಸಕ್ಕರೆ ಮಾಡಿದೆ. ಕ್ರಮೇಣ ಸಕ್ಕರೆ ತಂತ್ರಜ್ಞಾನ, ವ್ಯವಹಾರ ಕಲೆ ಕೈವಶವಾಗತೊಡಗಿತು ನನ್ನಲ್ಲಿ ಸುಮಾರು 100 ಜನ ದುಡಿಯ ತೊಡಗಿದರು. ಈ ಸಣ್ಣ ಗೆಲುವಿನಿಂದ ಸ್ನೇಹಿತರ ಮಧ್ಯೆ ಹಿರೋ ಆಗಿ ಬಿಟ್ಟೆ.

‘ನಮ್ಮ ಮಿನಿ ಸಕ್ಕರೆ ಕಾರ್ಖಾನೆಯನ್ನು ಕ್ರಮೇಣ ದೊಡ್ಡದಾಗಿ ಬೆಳೆಸತೊಡಗಿದೆ.  19 ವರ್ಷಗಳ ಅವಧಿಯಲ್ಲಿ ನಮ್ಮ ನಿರಾಣಿ ಉದ್ಯಮ ಸಮೂಹ ತುಂಬ ದೊಡ್ಡದಾಗಿ ಬೆಳೆದಿದೆ. ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ಏಷ್ಯಾ ಖಂಡದಲ್ಲಿಯೇ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಿನಕ್ಕೆ 20 ಸಾವಿರ ಟನ್ ಕಬ್ಬು ಅರೆಯಲಾಗುತ್ತಿದೆ.

ಹೋದ ವರ್ಷ 22.50 ಲಕ್ಷ ಟನ್‌ ಕಬ್ಬು ಅರೆದು ಪ್ರಥಮ ಸ್ಥಾನ ಪಡೆದಿದೆ. ವಿದ್ಯುತ್‌ ಹಾಗೂ ಡಿಸ್ಟಿಲರಿ ಘಟಕಗಳೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ನಿರಾಣಿ ಸಕ್ಕರೆ ಕಾರ್ಖಾನೆ, ನಿರಾಣಿ ಉದ್ಯಮ ಸಮೂಹವಾಗಿ ವಿಕಾಸಗೊಂಡಿದೆ. ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಮತ್ತು ಬಾದಾಮಿ ತಾಲ್ಲೂಕಿನ ಕಲ್ಲಾಪೂರ ಗ್ರಾಮದ ಬಳಿ ಎರಡು ಹೊಸ ಸಕ್ಕರೆ ಕಾರ್ಖಾನೆಗಳನ್ನು ಕಟ್ಟುತ್ತಿದ್ದೇನೆ. 

ಸಕ್ಕರೆ ಕಾರ್ಖಾನೆ ನನ್ನ ಕೈಹಿಡಿದ ನಂತರ, ಸಿಮೆಂಟ್ ಉದ್ಯಮದಲ್ಲಿಯೂ ಪ್ರವೇಶ ಮಾಡಿರುವೆ. ಬಾಗಿಲು ಮುಚ್ಚಿದ ಮೂರು ಮಿನಿ ಸಿಮೆಂಟ್‌ ಕಾರ್ಖಾನೆಗಳನ್ನು ಖರೀದಿಸಿ ಅವುಗಳಿಗೆ ಮರುಜೀವ ನೀಡಿ ಚೆನ್ನಾಗಿ ನಡೆಯುವಂತೆ ಮಾಡಿರುವೆ. ಇವುಗಳಲ್ಲಿ ಎರಡು ಕಾರ್ಖಾನೆಗಳನ್ನು ಆಸಕ್ತಿ ಹೊಂದಿದ ಯುವಕರಿಗೆ ಮಾರಿದ್ದೇನೆ. ಈಗ ಬೆಳೆಗಾವಿ ಜಿಲ್ಲೆಯ ಯಾದವಾಡದ ರತ್ನಾ ಸಿಮೆಂಟ್ ನಮ್ಮ ಸಮೂಹಕ್ಕೆ ಸೇರಿದೆ. ಶಿಕ್ಷಣ ಸಂಸ್ಥೆ ಮತ್ತು ಸಹಕಾರಿ ಬ್ಯಾಂಕ್‌ ಕೂಡ ಆರಂಭಿಸಿದ್ದೇನೆ.

ಬಾಗಲಕೋಟೆಯಲ್ಲಿ ಡೀಮ್ಡ್ ವಿಶ್ವವಿದ್ಯಾಲಯ ಕಟ್ಟುತ್ತಿದ್ದೇವೆ. ನಾವು ಆರಂಭಿಸಿದ ಸಹಕಾರಿ ಬ್ಯಾಂಕ್‌ ವಾರ್ಷಿಕ  ₹ 6,000 ಕೋಟಿ ವ್ಯವಹಾರ ನಡೆಸುತ್ತಿದೆ. ಈಗ ನಮ್ಮ ಸಂಸ್ಥೆಯಲ್ಲಿ 6,000 ಜನರಿಗೆ ಉದ್ಯೋಗ ದೊರೆತಿದೆ. ಅವರಿಗೆ ಉತ್ತಮ ಸಂಬಳ, ವಾಸಕ್ಕೆ ಮನೆ, ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದೇನೆ.  ಎಲ್ಲಕ್ಕೂ ಹೆಚ್ಚು ಸಂತೋಷದ ಸಂಗತಿಯಂದರೆ ನಮಗೆ ನಿಯಮಿತವಾಗಿ ಕಬ್ಬು ಪೂರೈಸುವ 35 ಸಾವಿರ ರೈತರ ಕುಟುಂಬಗಳಿವೆ. ಇವರೆಲ್ಲರೊಂದಿಗೆ ನನಗೆ ಆತ್ಮೀಯ ಸಂಬಂಧವಿದೆ. ಇದು ನನ್ನ ಬದುಕಿನ ಬಹು ದೊಡ್ಡ ಭಾಗ್ಯ.

‘ನನ್ನ ಜನಸಂಪರ್ಕವನ್ನು ಗುರುತಿಸಿ ಬಿ.ಜೆ.ಪಿ ಹಿರಿಯರು ನನ್ನನ್ನು ರಾಜಕೀಯ ರಂಗಕ್ಕೆ ಕರೆತಂದರು. ಬಾಗಲಕೋಟ ಜಿಲ್ಲೆಯ ಬೀಳಗಿ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. 5 ವರ್ಷ ಕರ್ನಾಟಕ ಸರಕಾರದ ಬೃಹತ್ ಕೈಗಾರಿಕಾ ಮಂತ್ರಿಯಾಗಿ ಸೇವೆ ಮಾಡುವ ಭಾಗ್ಯವೂ ನನಗೆ ದೊರೆಯಿತು.

‘ಸುಮಾರು 20 ವರ್ಷದ ಹಿಂದೆ ಸಕ್ಕರೆ ಕಾರ್ಖಾನೆಯೊಂದರ ಅಧಿಕಾರಿ ನನ್ನ ಅರ್ಜಿ ಹಿರಿದು ಕಸದ ಬುಟ್ಟಿಗೆ ಹಾಕಿದ. ಅಲ್ಲಿಯೇ ನನ್ನ ಬದುಕಿಗೆ ಹೊಸ ತಿರುವು ಸಿಕ್ಕಿತು. ಆಗ ಹುಟ್ಟಿದ ಸಿಟ್ಟು ನನ್ನನ್ನು ಉದ್ದಿಮೆದಾರನನ್ನಾಗಿ ಬೆಳೆಸಿತು. ರಾಜಕೀಯ ರಂಗದಲ್ಲಿಯೂ ಕ್ರಿಯಾಶೀಲನಾಗಲು, ಸಮಾಜಮುಖಿಯಾಗಲು ನೆರವಾಯಿತು. ನನಗೆ ದೇಶದ ತುಂಬ  ಗಣ್ಯರ, ಹಿರಿಯ ಉದ್ಯಮಿಗಳ ಸ್ನೇಹ ಭಾಗ್ಯವೂ ಲಭಿಸಿತು.

‘ಬಡವರಿಗೆ, ಸಣ್ಣ ರೈತರಿಗೆ, ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗಳ ಕುಟುಂಬಗಳಿಗೆ ನೆರವಾಗಲು ನಮ್ಮ ಉದ್ಯಮ ಸಮೂಹದ ಆಶ್ರಯದಲ್ಲಿ ಗ್ರಾಮೀಣ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿದ್ದೇನೆ. ಕೃಷಿ ಸಂಶೋಧನೆ ಕೇಂದ್ರ ಸ್ಥಾಪಿಸಿದ್ದೇನೆ. ಹೆಚ್ಚು ಹೆಚ್ಚು ಜನಪರ ಜೀವಪರ ಕೆಲಸ ಮಾಡುವುದು ನನ್ನ ಗುರಿಯಾಗಿದೆ. ನನ್ನ ಪತ್ರ ಹರಿದು ಹಾಕಿದ ಸಕ್ಕರೆ ಕಾರ್ಖಾನೆಯ ಅಧಿಕಾರಿಗೆ ದೊಡ್ಡ ಶೆಲ್ಯೂಟ್ ಹೇಳಬಯಸುತ್ತೇನೆ’. ಮಾಹಿತಿಗೆ ಸಂರ್ಪಕಿಸಿ – 70905 50000.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT