ADVERTISEMENT

ಷೇರುಪೇಟೆಯಲ್ಲಿ ಕರಡಿ ಕುಣಿತ

ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಹೆಚ್ಚಿದ ಮಾರಾಟ ಒತ್ತಡ

ಪಿಟಿಐ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಷೇರುಪೇಟೆಯಲ್ಲಿ ಕರಡಿ ಕುಣಿತ
ಷೇರುಪೇಟೆಯಲ್ಲಿ ಕರಡಿ ಕುಣಿತ   

ಮುಂಬೈ: ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆಗಳ ಶುಕ್ರವಾರದ ವಹಿವಾಟಿನಲ್ಲಿ ಮಾರಾಟದ ತೀವ್ರ ಒತ್ತಡ ಕಂಡುಬಂದಿತು. ಇದರಿಂದ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 447 ಅಂಶ ಕುಸಿತ ಕಂಡು 31, 922 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು. 9 ತಿಂಗಳ ಬಳಿಕ ಸೂಚ್ಯಂಕದ ಗರಿಷ್ಠ ಕುಸಿತ ಇದಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 157 ಅಂಶ ಇಳಿಕೆ ಕಂಡು, 9,964 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ADVERTISEMENT

ಉತ್ತರ ಕೊರಿಯಾ ಮತ್ತು ಅಮೆರಿಕದ ಮಧ್ಯೆ ಮೂಡಿರುವ ರಾಜಕೀಯ ಬಿಕ್ಕಟ್ಟು ಹೂಡಿಕೆದಾರರನ್ನು ಆತಂಕಕ್ಕೆ ದೂಡಿದೆ. ಇದರಿಂದ ಷೇರುಪೇಟೆಗಳಲ್ಲಿ ಹೂಡಿಕೆ ತಗ್ಗಿದ್ದು, ಸೂಚ್ಯಂಕಗಳು ಇಳಿಕೆ ಕಾಣುವಂತಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮತ್ತೊಂದು ಜಲಜನಕ ಬಾಂಬ್‌ ಪರೀಕ್ಷೆ ನಡೆಸುವುದಾಗಿ ಉತ್ತರ ಕೊರಿಯಾ ಹೇಳಿಕೆ ನೀಡಿರುವುದು ಯುರೋಪ್‌ ಮತ್ತು ಏಷ್ಯಾದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು. ಅದರ ಪ್ರಭಾವಕ್ಕೆ ಸಿಲುಕಿ ದೇಶದ ಷೇರುಪೇಟೆಗಳಲ್ಲಿಯೂ ಇಳಿಮುಖ ವಹಿವಾಟು ನಡೆಯಿತು.

ಆರ್ಥವ್ಯವಸ್ಥೆಯ ಚೇತರಿಕೆಗೆ ಸೂಕ್ತ ಯೋಜನೆ ರೂಪಿಸುವುದಾಗಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ಷೇರುಪೇಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಲ್ಲಿ ವಿಫಲವಾಗಿದೆ.

ಬಿಎಸ್‌ಇನಲ್ಲಿ ರಿಯಲ್‌ ಎಸ್ಟೇಟ್‌ ಷೇರುಗಳು ಶೇ 4.29ರಷ್ಟು ಗರಿಷ್ಠ ನಷ್ಟ ಅನುಭವಿಸಿವೆ. ಲೋಹ, ಬಂಡವಾಳ ಸರಕುಗಳು ಮತ್ತು ಇಂಧನ ಕಂಪೆನಿಗಳ ಷೇರುಗಳೂ ಇಳಿಕೆ ಕಂಡಿವೆ.

₹2.68 ಲಕ್ಷ ಕೋಟಿ ನಷ್ಟ
ಬಿಎಸ್ಇ ಸಂವೇದಿ ಸೂಚ್ಯಂಕ 447 ಅಂಶ ಇಳಿಕೆ ಕಂಡಿದೆ. ಇದರಿಂದ ಒಂದೇ ದಿನ ಮಾರುಕಟ್ಟೆ ಮೌಲ್ಯದಲ್ಲಿ ‌ಹೂಡಿಕೆದಾರರ ಸಂಪತ್ತು ₹2.68 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದ ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹ 133 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಟಾಟಾ ಸ್ಟೀಲ್‌ ಶೇ 4.70 ರಷ್ಟು ಗರಿಷ್ಠ ನಷ್ಟ ಕಂಡಿದ್ದು, ಪ್ರತಿ ಷೇರಿನ ಬೆಲೆ ₹654.55ಕ್ಕೆ ಇಳಿಕೆ ಕಂಡಿದೆ. ಎಲ್‌ ಆ್ಯಂಡ್ ಟಿ ಶೇ 3.49ರಷ್ಟು ನಷ್ಟ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್‌ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳೂ ನಷ್ಟ ಕಂಡಿವೆ.

ರೂಪಾಯಿ ಬೆಲೆ ಏರಿಳಿತ
ದೇಶದ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಶುಕ್ರವಾರ 2 ಪೈಸೆಗಳಷ್ಟು ಹೆಚ್ಚಾಗಿ ₹64.79 ರಂತೆ ವಿನಿಮಯಗೊಂಡಿತು. ದಿನದ ವಹಿವಾಟಿನ ಆರಂಭದಲ್ಲಿ 6 ತಿಂಗಳ ಕನಿಷ್ಠ ಮಟ್ಟವಾದ ಒಂದು ಡಾಲರ್‌ಗೆ ₹65.16ಕ್ಕೆ ಕುಸಿತ ಕಂಡಿತ್ತು.

ಆಮದುದಾರರಿಂದ ಡಾಲರ್‌ಗೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು.ಕರೆನ್ಸಿ ವರ್ತಕರು ತಳೆದ ಕಠಿಣ ನಿಲುವು ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ ಬಡ್ಡಿದರ ಏರಿಕೆ ಮಾಡಿದರೆ ಬಂಡವಾಳ ಹೊರಹರಿವು ಹೆಚ್ಚಾಗುತ್ತದೆ ಎನ್ನುವ ಆತಂಕವೂ ರೂ‍ಪಾಯಿ ಮೇಲೆ ಒತ್ತಡ ಹೇರಿತ್ತು. ಆದರೆ, ಕೇಂದ್ರ ಬ್ಯಾಂಕ್‌ನ ಮಧ್ಯಪ್ರವೇಶದಿಂದ ಚೇತರಿಕೆ ಹಾದಿಗೆ ಮರಳಿತು.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.