ADVERTISEMENT

ಸಿಐಎಲ್‌: ರೂ22,557 ಕೋಟಿ ಸಂಗ್ರಹ

ಶೇ 10ರಷ್ಟು ಷೇರು ವಿಕ್ರಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 19:30 IST
Last Updated 30 ಜನವರಿ 2015, 19:30 IST

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ತನ್ನ ಒಡೆತನದಲ್ಲಿರುವ ಕೋಲ್‌ ಇಂಡಿಯಾ­ದ  (ಸಿಐಎಲ್‌)  ಶೇ 10­ರಷ್ಟು ಷೇರುಗಳನ್ನು ಶುಕ್ರವಾರ ಮುಕ್ತ ಮಾರುಕಟ್ಟೆಯಲ್ಲಿ ವಿಕ್ರಯಿಸುವ ಮೂಲಕ ರೂ22,557 ಕೋಟಿ ಸಂಗ್ರಹಿಸಿದೆ.

ಸರ್ಕಾರ ರೂ22,600 ಕೋಟಿ ಸಂಗ್ರಹಿಸುವ ಅಂದಾಜು ಮಾಡಿತ್ತು. ಆಫರ್‌ ಫಾರ್ ಸೇಲ್‌ (ಒಎಫ್‌­ಎಸ್‌) ಮೂಲಕ 50.53 ಕೋಟಿ ಷೇರುಗಳನ್ನು ಪ್ರತಿ ಷೇರಿನ ಕನಿಷ್ಠ ಬೆಲೆ ರೂ358ರಂತೆ ಮಾರಾಟ ಮಾಡಲಾಗಿದೆ.

ಸರ್ಕಾರ ನಿಗದಿಪಡಿಸಿದ್ದಕ್ಕಿಂತಲೂ 1.07ರಷ್ಟು ಹೆಚ್ಚು, ರೂ24,210 ಕೋಟಿ ಮೌಲ್ಯದ ಷೇರುಗಳ ಖರೀದಿಗೆ ಬೇಡಿಕೆ ಬಂದಿದೆ.
ಈ ಪ್ರಮಾಣದಲ್ಲಿ ಷೇರುಗಳ ವಿಕ್ರಯ ನಡೆಯುತ್ತಿರುವುದು ದೇಶದಲ್ಲಿ ಇದೇ ಮೊದಲ ಬಾರಿಯಾಗಿದೆ. ಈ ಹಿಂದೆ 2010ರಲ್ಲಿ ಸಿಐಎಲ್‌ ರೂ15 ಸಾವಿರ ಕೋಟಿ ಮೌಲ್ಯದ ಷೇರುಗಳ ವಿಕ್ರಯ ಮಾಡಿತ್ತು.

ಸಿಐಎಲ್‌ ಷೇರು ವಿಕ್ರಯ ಯಶಸ್ವಿಯಾಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದ ಮಾರ್ಚ್‌ 31ರ ಅಂತ್ಯದ ವೇಳೆಗೆ ಷೇರು ವಿಕ್ರಯದಿಂದ ಒಟ್ಟಾರೆ ರೂ43,425 ಕೋಟಿ ಸಂಗ್ರಹಿಸುವ ಗುರಿ ಇನ್ನಷ್ಟು ಸುಲಭವಾದಂತಾಗಿದೆ ಷೇರು ವಿಕ್ರಯ ಕಾರ್ಯದರ್ಶಿ ಆರಾಧನಾ ಜೊಹರಿ ಹೇಳಿದರು.

ಒಎಫ್‌ಎಸ್‌ ಮೂಲಕ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ ) ಅತಿ ಹೆಚ್ಚಿನ ರೂ7 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದೆ. ಇನ್ಶುರೆನ್ಸ್‌ ಕಂಪೆನಿಗಳು ಒಟ್ಟಾರೆ ರೂ11,360 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ. ಆದರೆ, ಸರ್ಕಾರ ನಿರೀಕ್ಷಿಸಿದ ಮಟ್ಟದಲ್ಲಿ ಚಿಲ್ಲರೆ ಹೂಡಿಕೆದಾರರಿಂದ ಷೇರುಗಳ ಖರೀದಿಗೆ ಬೇಡಿಕೆ ಬಂದಿಲ್ಲ.

ಚಿಲ್ಲರೆ ಹೂಡಿಕೆದಾರರಿಗೆ ರೂ12.63 ಕೋಟಿ ಷೇರುಗಳನ್ನು ಮೀಸಲಿ­ಡ­ಲಾಗಿತ್ತು. ಆದರೆ ಕೇವಲ ರೂ5.37 ಕೋಟಿ ಷೇರುಗಳನ್ನು ಅಂದರೆ ಅರ್ಧಕ್ಕಿಂತಲೂ ಕಡಿಮೆ ಷೇರುಗಳನ್ನು ಖರೀದಿ ಮಾಡಿದರು. ಒಟ್ಟಾರೆ ಖರೀದಿ ಮೊತ್ತವು ರೂ1,852 ಕೋಟಿಯಷ್ಟಾಗಿದೆ.
ವಿದೇಶಿ ಹೂಡಿಕೆದಾರು, ಮ್ಯೂಚುವಲ್‌ ಫಂಡ್‌, ಬ್ಯಾಂಕಿಂಗ್‌ ಮತ್ತು ಇನ್ಶುರೆನ್ಸ್‌ ಕಂಪೆನಿಗಳು ತಮಗೆ ಮೀಸಲಿಟ್ಟಿದ್ದ ಷೇರುಗಳಿಗಿಂತ 1.2ರಷ್ಟು ಹೆಚ್ಚಿನ ಖರೀದಿ ನಡೆಸಿದವು.

ಸಚಿವ ಗೋಯಲ್‌ ಹರ್ಷ
‘ಸರ್ಕಾರ ತೆಗದುಕೊಳ್ಳುತ್ತಿರುವ  ಆರ್ಥಿಕ ಸುಧಾರಣಾ ಕ್ರಮಗಳ ಬಗ್ಗೆ ಹೂಡಿಕೆದಾರರಿಗೆ ವಿಶ್ವಾಸ ಮೂಡಿದೆ. ಸಿಐಎಲ್‌ ಷೇರು ವಿಕ್ರಯ ಯಶಸ್ವಿ­ಯಾಗಿರುವುದೇ ಇದಕ್ಕೆ ಉದಾಹರಣೆ’ ಎಂದು ಕೇಂದ್ರ ಕಲ್ಲಿದ್ದಲು ಮತ್ತು ವಿದ್ಯುತ್‌ ಖಾತೆ ರಾಜ್ಯ  ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT