ADVERTISEMENT

ಸಿಕ್ಕಾ ರಾಜೀನಾಮೆ ಹಿಂದಿರುವ ಕಾರಣ...

ಸಹ ಅಧ್ಯಕ್ಷ ವೆಂಕಟೇಷನ್‌ ನೇಮಕಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ಸಿಕ್ಕಾ ರಾಜೀನಾಮೆ ಹಿಂದಿರುವ ಕಾರಣ...
ಸಿಕ್ಕಾ ರಾಜೀನಾಮೆ ಹಿಂದಿರುವ ಕಾರಣ...   

ನವದೆಹಲಿ: ಇನ್ಫೊಸಿಸ್‌ನ ಸಿಇಒ ವಿಶಾಲ್ ಸಿಕ್ಕಾ ಅವರು ಹುದ್ದೆ ತೊರೆಯುವುದಕ್ಕೆ ಕಾರಣಗಳೇನು ಎನ್ನುವುದು ಕಾರ್ಪೊರೇಟ್ ವಲಯದಲ್ಲಿ ಬಹುಚರ್ಚಿತ ವಿಷಯವಾಗಿದ್ದು, ವಿಭಿನ್ನ ನೆಲೆಯಲ್ಲಿ ವಿಶ್ಲೇಷಿಸಲಾಗುತ್ತಿದೆ.

ಏಪ್ರಿಲ್‌ನಲ್ಲಿ ರವಿ ವೆಂಕಟೇಶನ್‌ ಅವರನ್ನು ‘ಸಹ ಅಧ್ಯಕ್ಷ’ರನ್ನಾಗಿ ನೇಮಕ ಮಾಡಿದ್ದು ಸಿಕ್ಕಾ ಅವರಿಗೆ ಇಷ್ಟವಾಗಿರಲಿಲ್ಲ. ಈ ನೇಮಕದ ಜತೆಗೆ, ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ತಮಗೆ ಸಲಹೆ ನೀಡಲು ಮೂವರು ಸದಸ್ಯರ ಸಮಿತಿ ರಚಿಸಿದ್ದು ಕೂಡ  ಅವರಿಗೆ ರುಚಿಸಿರಲಿಲ್ಲ. ವೆಂಕಟೇಶನ್‌ ನೇಮಕವು ಅವರಲ್ಲಿ  ತೀವ್ರ ಅಸಮಾಧಾನ ಮೂಡಿಸಿತ್ತು. ನಿರ್ದೇಶಕ ಮಂಡಳಿಯಲ್ಲಿ ವೆಂಕಟೇಶನ್‌ ಅವರ ಜತೆ ಕೆಲಸ ಮಾಡುವುದು ತಮಗೆ ಕಠಿಣವಾಗಲಿದೆ ಎಂದು ಅವರು ಸಂಸ್ಥೆಯ ಕೆಲ ಹಿರಿಯ ಅಧಿಕಾರಿಗಳ ಜತೆ ಅಸಮಾಧಾನ ತೋಡಿಕೊಂಡಿದ್ದರು.

‘ವೆಂಕಟೇಶನ್‌ ಅವರ ನೇಮಕ ಮಾಡಿದ ದಿನವೇ, ಸಿಕ್ಕಾ ಸಂಸ್ಥೆ ತೊರೆಯಲು ಉದ್ದೇಶಿಸಿದ್ದರು’ ಎಂದು ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

2015ರ ಫೆಬ್ರುವರಿಯಲ್ಲಿ ನಡೆದ ಇಸ್ರೇಲ್‌ನ ಪನಯಾ ಸಂಸ್ಥೆಯ ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಯಾರೊಬ್ಬರೂ ಲಾಭ ಮಾಡಿಕೊಂಡಿಲ್ಲ ಎಂದು ತನಿಖಾ ಸಂಸ್ಥೆಯು ವರದಿ ನೀಡಿದಾಗ ಸಿಕ್ಕಾ ಅವರ ಅಸಮಾಧಾನ ಕೆಲ ಮಟ್ಟಿಗೆ ತಣ್ಣಗಾಗಿತ್ತು.  ಈ ವರದಿಯ ಬೆನ್ನಲ್ಲೆ ಕೆಲ ಷೇರುದಾರರಿಂದ  ಬೆಂಬಲ ವ್ಯಕ್ತವಾಗಿದ್ದರಿಂದ ಸಿಕ್ಕಾ ಖುಷಿ ಪಟ್ಟಿದ್ದರು.

ವರದಿ ಪ್ರಕಟವಾಗುತ್ತಿದ್ದಂತೆ, ‘ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ನನಗೆ ಅಪಾರ ಸಂತೋಷವಾಗುತ್ತಿದೆ. ಸಂಸ್ಥೆಯಲ್ಲಿ ದೀರ್ಘ ಸಮಯದವರೆಗೆ ಇರಬಹುದೆಂದು ನನಗೆ ಅನಿಸುತ್ತದೆ’ ಎಂದು ಸಿಕ್ಕಾ ಪ್ರತಿಕ್ರಿಯಿಸಿದ್ದರು.  ಆದರೆ, ಅವರ ಪಾಲಿಗೆ ಈ ಸಂತಸ ಬಹಳ ದಿನಗಳವರೆಗೆ ಇರಲಿಲ್ಲ. ತನಿಖಾ ವರದಿಯನ್ನು ಸಂಪೂರ್ಣವಾಗಿ ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು ಎಂದು ಸಹ ಸ್ಥಾಪಕ ನಾರಾಯಣಮೂರ್ತಿ ಒತ್ತಾಯಿಸಿದ್ದರು.  ಜುಲೈ 8ರಂದು ನಿರ್ದೇಶಕ ಮಂಡಳಿಗೆ ಇ–ಮೇಲ್‌ ಪತ್ರ ಬರೆದಿದ್ದ ಮೂರ್ತಿ,  ‘ಸಂಸ್ಥೆಯ ಯಾವುದೇ ಸಿಬ್ಬಂದಿ ಅಥವಾ ಉದ್ಯೋಗಿಯ ಸಂಬಂಧಿಯು ಪ್ರಯೋಜನ ‍ಪಡೆದಿಲ್ಲವೆಂದು ಸಂಸ್ಥೆಯು ಸ್ಪಷ್ಟವಾಗಿ ಹೇಳುವುದೇ’ ಎಂದು ಪ್ರಶ್ನಿಸಿದ್ದರು. ಈ ಪತ್ರ ತಮ್ಮ ವಿರುದ್ಧ ಮಾಡಿದ ನೇರ ದಾಳಿ ಎಂದೇ ಸಿಕ್ಕಾ ಭಾವಿಸಿದ್ದರು.  ‘ಕೆಲವರನ್ನು ನೇಣಿಗೆ ಹಾಕುವುದೇ ಹಲವರ ಉದ್ದೇಶವಾಗಿರುವಾಗ ನೀವು ಏನನ್ನು ತಾನೆ ಮಾಡಲು ಸಾಧ್ಯ’ ಎಂದು ಸಿಕ್ಕಾ ಪ್ರಶ್ನಿಸಿದ್ದರಂತೆ.

ವೆಂಕಟೇಶನ್‌ ಅವರು ಟೆಲಿವಿಷನ್‌ ಚಾನೆಲ್‌ ಮತ್ತು ಮನಿ ಕಂಟ್ರೋಲ್‌ ಅಂತರ್ಜಾಲ ತಾಣಕ್ಕೆ ನೀಡಿದ ಸಂದರ್ಶನ ಕೂಡ ಸಿಕ್ಕಾ ಅವರಲ್ಲಿ ಅಸಮಾಧಾನ ಮೂಡಿಸಿತ್ತು. ಈ ಬಗ್ಗೆ ಸಿಕ್ಕಾ, ತಮ್ಮ ಅತೃಪ್ತಿಯನ್ನು ಸಂಸ್ಥೆಯ ಕೆಲ ಉನ್ನತ ಅಧಿಕಾರಿಗಳ ಬಳಿ ತೋಡಿಕೊಂಡಿದ್ದರು. ‘ಯಾರೊಬ್ಬರೂ ತಮ್ಮನ್ನು ಪ್ರಶ್ನಿಸಬಾರದು ಎನ್ನುವುದು ಅವರ ಧೋರಣೆಯಾಗಿದೆ. ಸಹ ಅಧ್ಯಕ್ಷರು ತಮ್ಮನ್ನು ಪ್ರಶ್ನಿಸುವುದು ಮತ್ತು ಉಪದೇಶ ನೀಡುವುದು ಅವರಿಗೆ ಇಷ್ಟವಾಗಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮೈಕ್ರೊಸಾಫ್ಟ್‌ನಿಂದ ಇನ್ಫೊಸಿಸ್‌ ಕಲಿಯುವುದು ಸಾಕಷ್ಟಿದೆ’ ಎಂದು ವೆಂಕಟೇಶನ್‌  ಹೇಳಿದ್ದು ಕೂಡ ಸಿಕ್ಕಾ ಅವರಿಗೆ ಪಥ್ಯವಾಗಿರಲಿಲ್ಲ. ಮೈಕ್ರೊಸಾಫ್ಟ್‌ನ ಮುಖ್ಯಸ್ಥ ಸತ್ಯ ನಾದೆಲ್ಲ ಅವರನ್ನು ಉಲ್ಲೇಖಿಸಿರುವುದನ್ನೂ ಅವರು ಇಷ್ಟಪಟ್ಟಿರಲಿಲ್ಲ. ‘ಸತ್ಯ ನಾದೆಲ್ಲ ಅವರು ಮೈಕ್ರೊಸಾಫ್ಟ್‌ ಸಂಸ್ಥೆಯನ್ನು ಲಾಭದ ಹಾದಿಗೆ ತರುವುದರ ಜತೆಗೆ ಸಂಸ್ಥೆಯ ಸಹ ಸ್ಥಾಪಕರ ವಿಶ್ವಾಸವನ್ನೂ ಉಳಿಸಿಕೊಂಡಿದ್ದಾರೆ’ ಎಂದು ವೆಂಕಟೇಶನ್‌ ಸಂದರ್ಶನದಲ್ಲಿ ವಿಶ್ಲೇಷಿಸಿದ್ದರು.

ಸಿಕ್ಕಾ ಅವರು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಲು ಲಾಯಕ್ ಆಗಿರುವವರೇ ಹೊರತು, ಸಿಇಒ ಆಗಲು ಅಲ್ಲ ಎಂದು ಮೂವರು ನಿರ್ದೇಶಕರು ತಮ್ಮ ಬಳಿ ಹೇಳಿಕೊಂಡಿದ್ದನ್ನು ಮೂರ್ತಿ ಅವರು ಆಗಸ್ಟ್‌ 9ರಂದು ಬರೆದ ಇ–ಮೇಲ್‌ನಲ್ಲಿ ಉಲ್ಲೇಖಿಸಿದ್ದರು. ಆಗಸ್ಟ್‌ 14ರ ಇ–ಮೇಲ್‌ನಲ್ಲಿ ನಿರ್ದೇಶಕರ ಹೆಸರು ಪ್ರಸ್ತಾಪಿಸದೆ ಅದೇ ಅನಿಸಿಕೆಯನ್ನು ಮತ್ತೊಮ್ಮೆ ಉಲ್ಲೇಖಿಸಿದ್ದರು.

ಇದರ ಮಧ್ಯೆ, ಆಗಸ್ಟ್‌ 9ರಂದೇ ಸಿಕ್ಕಾ ಅವರು ತಾವು ಸಂಸ್ಥೆ ತೊರೆಯುವುದನ್ನು ಅಧ್ಯಕ್ಷ ಶೇಷಸಾಯಿ ಅವರ ಗಮನಕ್ಕೆ ತಂದಿದ್ದರು. ಸಿಕ್ಕಾ ಅವರ ರಾಜೀನಾಮೆ ಪ್ರಕಟವಾಗುತ್ತಿದ್ದಂತೆ, ನಿರ್ದೇಶಕ ಮಂಡಳಿ ನೀಡಿದ ಹೇಳಿಕೆಯಲ್ಲಿ , ಮೂರ್ತಿ ಅವರ ಇ–ಮೇಲ್‌ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆಗಸ್ಟ್‌ 9ರ ಅಥವಾ 14ರ ಇ–ಮೇಲ್‌ ಪೈಕಿ ಯಾವ ಪತ್ರ ಎನ್ನುವುದನ್ನು ಮಾತ್ರ ಸ್ಪಷ್ಟಪಡಿಸಿರಲಿಲ್ಲ. ‘ಇತ್ತೀಚೆಗೆ ಬರೆದ ಪತ್ರವೂ ಸೇರಿದಂತೆ ಮೂರ್ತಿ ಅವರ ನಿರಂತರ ವಾಗ್ದಾಳಿಯೇ ಸಿಕ್ಕಾ ಅವರು ಪದತ್ಯಾಗ ಮಾಡಲು ಮುಖ್ಯ ಕಾರಣ’ ಎಂದು ಮಂಡಳಿಯು ಮೂರ್ತಿ ವಿರುದ್ಧ ಆರೋಪ ಮಾಡಿತ್ತು. ಮಂಡಳಿಯು ಸಿಕ್ಕಾ ಅವರಲ್ಲಿ ವಿಶ್ವಾಸ ಕಳೆದುಕೊಂಡಿದೆ ಎನ್ನುವ ಗಾಳಿಸುದ್ದಿಳನ್ನೂ  ತಳ್ಳಿ ಹಾಕಿದ್ದ ಮಂಡಳಿಯು ಸಿಕ್ಕಾ  ಬೆಂಬಲಕ್ಕೆ ನಿಂತಿದೆ ಎಂದೂ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.