ADVERTISEMENT

ಸೂಚ್ಯಂಕ 216 ಅಂಶ ಏರಿಕೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ಮುಂಬೈ (ಪಿಟಿಐ): ಕೇಂದ್ರ ಸರ್ಕಾರ 7ನೇ ವೇತನ ಆಯೋಗ ಜಾರಿಗೆ ಒಪ್ಪಿಗೆ ನೀಡಿರುವುದು ಮತ್ತು ಮುಂಬರುವ ಮುಂಗಾರು ಅಧಿವೇಶನದಲ್ಲಿ ಜಿಎಸ್‌ಟಿ ಮಸೂದೆಗೆ ಒಪ್ಪಿಗೆ ಸಿಗಲಿರುವ ಸಕಾರಾತ್ಮಕ ಸಂಗತಿಗಳಿಂದಾಗಿ ಬುಧವಾರ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್ಇ)  216 ಅಂಶಗಳಷ್ಟು ಏರಿಕೆ ಕಂಡು, 26,740 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಕಂಡಿತು.ವಾಹನ ಮತ್ತು ಚಿಲ್ಲರೆ ವಲಯದ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡಿವೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ, 76 ಅಂಶಗಳ ಏರಿಕೆಯೊಂದಿಗೆ 8,200 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಇದು ಜೂನ್‌ 15ರ ನಂತರ ದಿನದ ವಹಿವಾಟಿನಲ್ಲಿ ಸೂಚ್ಯಂಕದ ಗರಿಷ್ಠ ಏರಿಕೆಯಾಗಿದೆ.

₹ ಮೌಲ್ಯ ಏರಿಕೆ: ಡಾಲರ್‌ ಎದುರು ರೂಪಾಯಿ ಮೌಲ್ಯವು ಬುಧವಾರ 27 ಪೈಸೆಗಳಷ್ಟು ಏರಿಕೆ ಕಂಡಿದ್ದು, ಒಂದು ಡಾಲರ್‌ಗೆ ₹67.68 ರಷ್ಟರಲ್ಲಿ ವಿನಿಮಯಗೊಂಡಿತು. ಜಾಗತಿಕ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ, ಬೇರೆ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ (ಶೇ 0.25ರಷ್ಟು ಇಳಿಕೆ) ಇಳಿಮುಖವಾಗಿತ್ತು. ಇದೂ ಸಹ ರೂಪಾಯಿ ಮೌಲ್ಯ ಏರಿಕೆಗೆ ನೆರವಾಯಿತು. ‘ಬ್ರೆಕ್ಸಿಟ್‌’ ಪ್ರಭಾವದಿಂದ ಹೊರಬರಲು ಮತ್ತು ಜಾಗತಿಕ ಆರ್ಥವ್ಯವಸ್ಥೆಯ  ಚೇತರಿಕೆಗಾಗಿ ಜಾಗತಿಕ ಮಟ್ಟದಲ್ಲಿ ನೀತಿ  ರೂಪಿಸುವವರು ಉತ್ತಮ ಕ್ರಮಗಳನ್ನು ಕೈಗೊಳ್ಳುವ ಆಶಾವಾದವೂ ಮೂಡಿದೆ. ಇದು ಷೇರುಪೇಟೆಗಳ ಸಕಾರಾತ್ಮಕ ವಹಿವಾಟಿಗೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.