ADVERTISEMENT

ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆ ಆಗದಿದ್ದರೆ ಇಳುವರಿ ಇಳಿಮುಖ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ನವದೆಹಲಿ (ಪಿಟಿಐ): ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾಗದಿದ್ದರೆ ಮುಂಗಾರು ಹಂಗಾಮಿನ ಆಹಾರ ಧಾನ್ಯ ಉತ್ಪಾದನೆ ಕಳೆದ ವರ್ಷಕ್ಕಿಂತ ಕಡಿಮೆಯಾಗಲಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ಹೇಳಿದೆ.

ಮುಂಗಾರು ಫಸಲು ಉತ್ತಮವಾಗಿ ಬರಲು ಸೆಪ್ಟೆಂಬರ್‌ ತಿಂಗಳಿನಲ್ಲಿ ದೇಶ ದಾದ್ಯಂತ ಒಂದೇ ಪ್ರಮಾಣದಲ್ಲಿ ಮಳೆ ಸುರಿಯಬೇಕು. ಹೀಗಾದರೆ ಮಾತ್ರ ಈ ವರ್ಷ ಕನಿಷ್ಠ ಪಕ್ಷ ಕಳೆದ ವರ್ಷದಷ್ಟೇ ಅಥವಾ ಅದಕ್ಕಿಂತಲೂ ಸ್ವಲ್ಪ ಹೆಚ್ಚೇ ಉತ್ಪಾದನೆಯಾಗುವ ನಿರೀಕ್ಷೆ ಮಾಡಬ ಹುದು ಎಂದು ಐಎಆರ್‌ಐ ನಿರ್ದೇಶಕ ತ್ರಿಲೋಚನ್‌ ಮಹಾಪತ್ರ ಹೇಳಿದ್ದಾರೆ.

ಕಳೆದ ವರ್ಷ ಒಟ್ಟು 1,263 ಲಕ್ಷ ಟನ್‌ಗಳಷ್ಟು ಉತ್ಪಾದನೆಯಾಗಿತ್ತು. ಈವರೆಗೂ ದೇಶದಲ್ಲಿ ವಾಡಿಕೆಗಿಂತ ಶೇ 12ರಷ್ಟು ಕಡಿಮೆ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಡಿಮೆ ಮಳೆ ಅಗಿರುವುದರಿಂದ ಮಹಾ ರಾಷ್ಟ್ರ, ಕರ್ನಾಟಕದ ಉತ್ತರ ಭಾಗ, ಬಿಹಾರ, ಒಡಿಶಾ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ.

ವಾಡಿಕೆಗಿಂತ ಕಂಡಿಮೆ ಮಳೆ ಸುರಿ ದಿರುವುದರಿಂದ 2014–15ರ ಮುಂಗಾರು ಅವಧಿಯಲ್ಲಿ ಆಹಾರ ಧಾನ್ಯ ಉತ್ಪಾದನೆ  1,286 ಲಕ್ಷ ಟನ್‌ಗಳಿಂದ 1,263 ಲಕ್ಷ ಟನ್‌ಗಳಿಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಸಚಿವಾಲಯ  ಹೇಳಿದೆ. ಈ ಮುಂಗಾರು ಹಂಗಾಮಿನ ಸ್ಥಿತಿ ಉತ್ತೇಜನಕಾರಿಯಾಗಿಲ್ಲ. ಹೀಗಾಗಿ  ಆಹಾರ ಧಾನ್ಯಗಳ ಉತ್ಪಾದನೆ 2013–14ಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಮುಂಗಾರು ಬೆಳೆಯಾದ ಭತ್ತ ಬಿತ್ತನೆ ಕಾರ್ಯ ಬಿಹಾರ, ಒಡಿಶಾ ಸೇರಿದಂತೆ ಇನ್ನೂ  ನಡೆಯುತ್ತಿದೆ. ಸೆಪ್ಟೆಂಬರ್‌ ಅಂತ್ಯದವರೆಗೂ ಮುಂದುವರಿಯಲಿದೆ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯ ಅಗತ್ಯವಿದೆ ಎಂದರು. ಕೃಷಿ ಸಚಿವಾಲಯದ ಮಾಹಿತಿಯಂತೆ, ಆಗಸ್ಟ್‌ 28ರವರೆಗೆ ಒಟ್ಟು 967 ಲಕ್ಷ ಹೆಕ್ಟೇರ್‌ಗಳಲ್ಲಿ ಮುಂಗಾರು ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 956 ಲಕ್ಷ ಟನ್‌ಗಳಲ್ಲಿ ಬಿತ್ತನೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.