ADVERTISEMENT

ಹಣಕಾಸು ನೆರವಿಗೆ ಕೇಂದ್ರ ನಕಾರ

ಸಿಬ್ಬಂದಿ ಬಾಕಿ ವೇತನ ಸಮಸ್ಯೆ

ಪಿಟಿಐ
Published 23 ಮಾರ್ಚ್ 2017, 19:39 IST
Last Updated 23 ಮಾರ್ಚ್ 2017, 19:39 IST
ಹಣಕಾಸು ನೆರವಿಗೆ ಕೇಂದ್ರ ನಕಾರ
ಹಣಕಾಸು ನೆರವಿಗೆ ಕೇಂದ್ರ ನಕಾರ   

ನವದೆಹಲಿ: ನಷ್ಟದಿಂದ ಬಾಗಿಲು ಮುಚ್ಚಿರುವ ಎಚ್ಎಂಟಿ ಕೈಗಡಿಯಾರ ಕಂಪೆನಿಯ ಸಿಬ್ಬಂದಿಗೆ ಬಾಕಿ ವೇತನ ನೀಡಲು ಅಗತ್ಯವಿರುವ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.

ಕಂಪೆನಿಗೆ ಸೇರಿದ ಆಸ್ತಿ ಮಾರಾಟ ಮಾಡಿ ಸಿಬ್ಬಂದಿಯ ಬಾಕಿ ವೇತನ  ನೀಡುವಂತೆ ಎಚ್‌ಎಂಟಿಗೆ ಸೂಚನೆ ನೀಡಿರುವುದಾಗಿ ಬೃಹತ್‌ ಕೈಗಾರಿಕಾ ಸಚಿವ ಅನಂತ್‌ ಗೀತೆ ತಿಳಿಸಿದ್ದಾರೆ.

ವೇತನಕ್ಕೆ ಅಗತ್ಯವಿರುವ ಹಣ ಹೊಂದಿಸಿಕೊಳ್ಳಲು ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳುವಂತೆ ಎಚ್‌ಎಂಟಿ ಕೈಗಡಿಯಾರ ಕಂಪೆನಿಗೆ ಸೂಚಿಸಿರುವುದಾಗಿ ಸಚಿವರು ಪ್ರಶ್ನೋತ್ತರ ವೇಳೆ ಲೋಕಸಭೆಗೆ ಮಾಹಿತಿ ನೀಡಿದರು.

ಎಚ್‌ಎಂಟಿ ಕೈಗಡಿಯಾರ ಕಂಪೆನಿ ಸೇರಿದಂತೆ ಬೃಹತ್‌ ಕೈಗಾರಿಕಾ ಇಲಾಖೆ ವ್ಯಾಪ್ತಿಗೆ ಬರುವ ಸರ್ಕಾರಿ ಸ್ವಾಮ್ಯದ ಎಂಟು ಸಂಸ್ಥೆಗಳು ನಷ್ಟದಿಂದ ಬಾಗಿಲು ಮುಚ್ಚಿವೆ.ಎಚ್ಎಂಟಿ ಬಿಯರಿಂಗ್ಸ್‌, ಎಚ್‌ಎಂಟಿ ವಾಚಸ್‌ ಮತ್ತು ಚಿನಾರ್‌ ವಾಚಸ್‌ ಸಿಬ್ಬಂದಿಗೆ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಸೂಚಿಸಲಾಗಿತ್ತು. 

ಆದರೆ, ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ನಿರಾಕರಿಸಿದ ರಾಣಿಬಾಗ್‌ ಎಚ್‌ಎಂಟಿ ಕೈಗಡಿಯಾರ ಘಟಕದ 146 ಸಿಬ್ಬಂದಿ  ಕಂಪೆನಿಯ  ನಿರ್ಧಾರದ ವಿರುದ್ಧ  ತಡೆಯಾಜ್ಞೆ ತಂದಿದ್ದರು.

ಇದರಿಂದ  ಕಾರ್ಮಿಕರ ಬಾಕಿ ವೇತನ ನೀಡಲು ಅಗತ್ಯವಿರುವ ಆರ್ಥಿಕ ನೆರವು ನೀಡುವಂತೆ  ಎಚ್‌ಎಂಟಿ ಕಂಪೆನಿಯು  ಕೇಂದ್ರ ಸರ್ಕಾರದ ಮೊರೆ ಹೋಗಿತ್ತು.

ನಷ್ಟದಲ್ಲಿರುವ ಮತ್ತೊಂದು ಸಂಸ್ಥೆ ತುಂಗಭದ್ರಾ ಸ್ಟೀಲ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ನ ಎಲ್ಲ ಸಿಬ್ಬಂದಿಗೂ ಸ್ವಯಂ ನಿವೃತ್ತಿ  ನೀಡುವ ಪ್ರಕ್ರಿಯೆ ಪೂರ್ಣಗೊಂಡಿದೆ.
-ಅನಂತ್‌ ಗೀತೆ,
ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ

ಬಾಕಿ ವೇತನ ಎಷ್ಟು?
₹19 ಕೋಟಿ
ಜನವರಿ 2016ರಿಂದ ಮಾರ್ಚ್‌ 2017ರವರೆಗೆ 815 ಸಿಬ್ಬಂದಿಗೆ ನೀಡಬೇಕಾದ ಬಾಕಿ ಮೊತ್ತ
₹8.30 ಕೋಟಿ ರಾಣಿಬಾಗ್‌ ಘಟಕದ 146 ನೌಕರರಿಗೆ ನೀಡಬೇಕಾದ ಬಾಕಿ ವೇತನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.