ADVERTISEMENT

ಹಾಲ್‌ಮಾರ್ಕ್‌ ಬಂಗಾರ ಪರಿಶುದ್ಧತೆ ಅನುಮಾನ!

ಚಿನ್ನದ ಗುಣಮಟ್ಟ ಸುಧಾರಣೆಗೆ ವಿಶ್ವ ಚಿನ್ನ ಸಮಿತಿ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ನವದೆಹಲಿ (ಪಿಟಿಐ): ಭಾರತದಲ್ಲಿ ಚಿನ್ನಾಭರಣಗಳ ಶುದ್ಧತೆ ಗುರುತಿಸುವ ಹಾಲ್‌ಮಾರ್ಕ್‌ ಬಗ್ಗೆ ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಅನುಮಾನ ವ್ಯಕ್ತಪಡಿಸಿದೆ.

ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳಲ್ಲಿಯೂ ಪರಿಶುದ್ಧತೆಯಲ್ಲಿ ವ್ಯತ್ಯಯ ಇರುತ್ತದೆ ಎಂಬ ಆಘಾತಕಾರಿ ಅಂಶವನ್ನು ಹೊರಹಾಕಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಬಂಗಾರ ಬಳಕೆ ಮಾಡುವಂತಹ ದೇಶವಾದ ಭಾರತದಲ್ಲಿ ಚಿನ್ನದ ಗುಣಮಟ್ಟ ಸುಧಾರಿಸಲು ಶೀಘ್ರವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದೆ.

ಹಾಲ್‌ಮಾರ್ಕ್‌ ವ್ಯವಸ್ಥೆಯಲ್ಲಿ ಸುಧಾರಣೆ ತರುವುದರಿಂದ ಚಿನ್ನದ ನಗದೀಕರಣ ಯೋಜನೆಗೆ ಉತ್ತೇಜನ ಸಿಗಲಿದೆ. ಇಷ್ಟೇ ಅಲ್ಲದೆ, ಚಿನ್ನಾಭರಣ ರಫ್ತು ವಹಿವಾಟು ವೃದ್ಧಿಸಲು ನೆರವಾಗಲಿದೆ ಎಂದು ಡಬ್ಲ್ಯುಜಿಸಿ ಹೇಳಿದೆ.

ಶೇ 30ರಷ್ಟು ಚಿನ್ನಾಭರಣಗಳಿಗೆ ಮಾತ್ರ ಹಾಲ್‌ಮಾರ್ಕ್‌ ಇದೆ. ಹೀಗಾಗಿ ಕೆಲವು ಹಾಲ್‌ಮಾರ್ಕ್‌ ಕೇಂದ್ರಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದಿದೆ.

ಹಾಲ್‌ಮಾರ್ಕ್‌ಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ  ಜಾರಿಗೆ ತರಲು ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್ (ಬಿಐಎಸ್)  ವಿಫಲವಾಗಿದೆ. ಹೀಗಾಗಿ ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳಲ್ಲಿಯೂ ಪರಿಶುದ್ಧತೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.

ಹಾಲ್‌ಮಾರ್ಕ್‌ ಇರುವ ಮತ್ತು ಇಲ್ಲದೇ ಇರುವ ಚಿನ್ನಾಭರಣಗಳನ್ನು ಒಂದೇ ಮಳಿಗೆಯಲ್ಲಿ ಮಾರಲಾಗುತ್ತಿದೆ. ದೇಶದಲ್ಲಿರುವ ಬಹಳಷ್ಟು ಹಾಲ್‌ ಮಾರ್ಕ್‌ ಕೇಂದ್ರಗಳು ನಷ್ಟದಲ್ಲಿವೆ. ಹೀಗಾಗಿ ನಿಯಮ ಉಲ್ಲಂಘನೆ ಮಾಡು ತ್ತಿವೆ. ಈ ಕುರಿತು ಬಿಐಎಸ್‌ ಕಟ್ಟುನಿಟ್ಟಾಗಿ ಮೇಲ್ವಿಚಾರಣೆಯನ್ನೂ ನಡೆಸುತ್ತಿಲ್ಲ.  ಚಿನ್ನದ ಪರಿಶುದ್ಧತೆ ಗುರುತಿಸಲು ಬಿಐಎಸ್‌ನಲ್ಲಿ ಉತ್ತಮ ಪ್ರಯೋಗಾಲಯ ಇಲ್ಲ ಎಂದೂ ಡಬ್ಲ್ಯುಜಿಸಿ ತಿಳಿಸಿದೆ.

220 ಹಾಲ್‌ಮಾರ್ಕ್‌ ಕೇಂದ್ರಗಳು: ಬಿಐಎಸ್‌ ಗುರುತಿಸಿರುವಂತೆ ಭಾರತದಲ್ಲಿ ಒಟ್ಟು 220 ಹಾಲ್‌ಮಾರ್ಕ್‌  ಕೇಂದ್ರ ಗಳಿವೆ.  ದಕ್ಷಿಣದಲ್ಲಿ 153, ಉತ್ತರದಲ್ಲಿ 111 ಮತ್ತು ಪಶ್ಚಿಮದಲ್ಲಿ 65 ಕೇಂದ್ರಗಳಿವೆ. ತಮಿಳು ನಾಡಿನಲ್ಲಿ 57, ಕೇರಳದಲ್ಲಿ 39 ಕೇಂದ್ರಗಳಿವೆ. 

ಜಾಗೃತಿ ಕಾರ್ಯಕ್ರಮ: ಹಾಲ್‌ಮಾರ್ಕ್‌ ಬಗ್ಗೆ ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮ ಗಳನ್ನು ನಡೆಸುವಂತೆ   ವಿಶ್ವ ಚಿನ್ನ ಸಮಿತಿ ಸಲಹೆ ನೀಡಿದೆ.

ಭಾರತದಲ್ಲಿ ಬಹಳಷ್ಟು ಗ್ರಾಹಕರಿಗೆ ಬಿಐಎಸ್‌ ಹಾಲ್‌ಮಾರ್ಕ್‌ ಬಗ್ಗೆ ತಿಳಿದಿಲ್ಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇರುವವರಿಗೆ ಇದರ ಅರಿವು ಮೂಡಿಸುವ ಅಗತ್ಯವಿದೆ. ಶಿಕ್ಷಣ ಪಡೆದಿರುವ ಗ್ರಾಹಕರಲ್ಲಿ ಅರ್ಧದಷ್ಟು ಗ್ರಾಹಕರು ಮಾತ್ರವೇ ಬಿಐಎಸ್‌ ಹಾಲ್‌ಮಾರ್ಕ್‌ ಇರುವ ಚಿನ್ನ ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ ಎಂದು ಸಮಿತಿ ತಿಳಿಸಿದೆ.

ಹಾಲ್‌ಮಾರ್ಕ್ ಕಡ್ಡಾಯಕ್ಕೆ ಸಲಹೆ: ಭಾರತದಲ್ಲಿ ಹಾಲ್‌ಮಾರ್ಕ್‌ ಬಳಕೆ ಕಡ್ಡಾಯ ಮಾಡುವಂತೆ ಡಬ್ಲ್ಯುಜಿಸಿ ಸಲಹೆ ನೀಡಿದೆ. ಅಲ್ಲದೆ, ಅಂತರರಾಷ್ಟ್ರೀಯ ಹಾಲ್‌ಮಾರ್ಕ್‌ ಸಂಸ್ಥೆಯ ಸದಸ್ಯತ್ವ ಪಡೆದುಕೊಳ್ಳಲೂ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.